ಪರದಾಡಿದ ಪ್ರಯಾಣಿಕರು
---------------------------
ದಸರಾ ಹಬ್ಬಕ್ಕೆ ಸಾಲಾಗಿ ರಜೆ ಸಿಕ್ಕ ಹಿನ್ನಲೆಯಲ್ಲಿ ತಂತಮ್ಮ ಗ್ರಾಮಗಳಿಗೆ ಆಗಮಿಸಿದ್ದವರು ಇಂದು ವಾಪಸ್ ತೆರಳಲು ಬಸ್ ಗಳು ಸಿಗದೆ ಪರಿಪಾಟಲು ಪಡುವಂತಾಯಿತು.ದಸರಾ,ಆಯುಧಪೂಜೆ ಸಾಲು ರಜೆಗಳು ಮುಗಿದ ಹಿನ್ನಲೆಯಲ್ಲಿ ಸೋಮವಾರ ಮುಂಜಾನೆ ಬೆಂಗಳೂರಿಗೆ ತೆರಳುವವರು ಅಪಾರ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು.
ಹುಳಿಯಾರು ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಮುಗಿಬಿದ್ದಿರುವ ಪ್ರಯಾಣಿಕರು. |
ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ದು ಹಬ್ಬಕ್ಕೆಂದು ತಂತಮ್ಮ ಊರುಗಳಿಗೆ ಬಂದಿದ್ದರು. ಹಬ್ಬ ಹಾಗೂ ಭಾನುವಾರದ ರಜೆ ಮುಗಿಸಿ ಸೋಮವಾರದಂದು ವಾಪಸ್ಸ್ ಕೆಲಸಕ್ಕೆ ಹಾಜರಾಗಲು ಬಸ್ ನಲ್ಲಿ ತೆರಳಲು ಬಂದಿದ್ದರಿಂದ ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಬಸ್ ನಿಲ್ದಾಣ ಗಿಜುಗುಟ್ಟುತ್ತಿತ್ತು. ಎಲ್ಲಾ ಬಸ್ಸುಗಳು ಹೊಸದುರ್ಗದಿಂದ ಬರುತ್ತಿದ್ದವಾದ್ದರಿಂದ ಹುಳಿಯಾರಿಗೆ ಬರುವಷ್ಟರಲ್ಲೇ ಬಸ್ ಸೀಟ್ ಗಳೆಲ್ಲಾ ತುಂಬಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು. ಬರುತ್ತಿದ್ದ ಬಸ್ ಗೆ ಒಮ್ಮೆಲೆ ಎಲ್ಲಾ ಪ್ರಯಾಣಿಕರು ನುಗ್ಗುತ್ತಿದ್ದರಿಂದ ಬಸ್ ಹತ್ತುವುದೆ ತ್ರಾಸದಾಯಕವಾಗಿತ್ತು. ಸರ್ಕಾರಿ ಬಸ್ ಜೊತೆಗೆ ಇಂದು ಹೆಚ್ಚುವರಿಯಾಗಿ ಖಾಸಗಿ ಬಸ್ ಗಳು ಸಂಚರಿಸಿದ್ದರೂ ಕೂಡ ಎಲ್ಲಾ ಬಸ್ ಗಳು ಪುಲ್ ರಶ್ ಆಗಿದ್ದು ನಿಂತುಕೊಂಡು ಹೋಗಲು ಕೂಡ ಆಗದಷ್ಟು ಕಿಕ್ಕಿರಿದು ಪ್ರಯಾಣಿಕರು ತುಂಬಿದ್ದರು. ಇದರಿಂದ ಬೆಂಗಳುರಿಗೆ ಹೋಗುವುದು ಬಲು ಪ್ರಯಾಸವಾಗಿಬಿಟ್ಟಿತ್ತು.
ಬಸ್,ಲಾರಿ,ಕಾರು ಸೇರಿದಂತೆ ಯಾವುದೇ ವಾಹನ ಬಂದರೂ ಸರಿ ಜನ ಜೇನುನೋಣದಂತೆ ಅದರಬಳಿ ಮುತ್ತಿಕೊಂಡು, ಜಾಗವಿಲ್ಲದ್ದನ್ನು ಕಂಡು ನಿರಾಸೆಯಿಂದ ವಾಪಸ್ಸಾಗುತ್ತಿದ್ದರು. ಹೇಗಾದರೂ ಸರಿ ಬೆಂಗಳುರು ತಲುಪಬೇಕೆಂದು ಧಾವಂತದಲ್ಲಿದ್ದರು.
ಒಟ್ಟಾರೆ ಪ್ರತಿ ವರ್ಷ ಆಯುಧ ಪೂಜೆ ಇನ್ನಿತರೆ ಹಬ್ಬಹರಿದಿನದ ಸಮಯದಲ್ಲಿ ಪ್ರಯಾಣಿಕರ ಈ ಸಮಸ್ಯೆ ಬಗ್ಗೆ ಸಾರಿಗೆ ಇಲಾಖೆಯವರಿಗೆ ಅರಿವಿದ್ದರು ಸಹ ಹೆಚ್ಚುವರಿ ಬಸ್ ಗಳನ್ನು ಬಿಡದೆ ಇರುವ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಯಾಣಿಕರು ಹರಿಹಾಯುತ್ತಿದ್ದರು .ಗ್ರಾಮಾಂತರ ಪ್ರದೇಶದಲ್ಲಿ ಎಲ್ಲರೂ ಹೆಚ್ಚಾಗಿ ಸಾರಿಗೆ ಬಸ್ಸನ್ನೆ ಅವಲಂಬಿಸಬೇಕಿದ್ದು ಇಂತಹ ದಿನಗಳಲ್ಲಿ ಹುಳಿಯಾರಿನಿಂದ ಬೆಂಗಳೂರು ಕಡೆ ಹೋಗಲು ಕೆಲವೊಂದು ವಿಶೇಷ ಬಸ್ ಗಳನ್ನು ಬಿಡಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ..ವಿಭಾಗೀಯ ನಿಯಂತ್ರಕರು ಈ ಬಗ್ಗೆ ಗಮನ ಹರಿಸುವ ಅವಶ್ಯಕತೆಯಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ