ಏಕಾಂಗಿ ಹೋರಾಟಕ್ಕೆ ತಾರ್ಕಿಕ ಅಂತ್ಯ
--------------------
ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ಅಭಿವೃದ್ಧಿ ವಿಚಾರವಾಗಿ ಸದಸ್ಯ ನಾಗರಾಜು ನಡೆಸಿದ ಧರಣಿ ಸ್ಥಳದಲ್ಲಿ ಇಓ ಕೃಷ್ಣಮೂರ್ತಿ ಆಗಮಿಸಿ ಸಮಸ್ಯೆ ಆಲಿಸಿ ಪಿಏಇಓ ಮೂಲಕ ಪಟ್ಟಿ ಮಾಡಿಸಿದರು.ರಾಜ್ಯರೈತಸಂಘದ ಸತೀಶ್,ಮೆಹಬೂಬ್ ಸಾಬ್ ಚಿತ್ರದಲ್ಲಿದ್ದಾರೆ. |
ಹುಳಿಯಾರು ಸಮೀಪದ ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ಜನರ ನಿರೀಕ್ಷೆಗೆ ತಕ್ಕ ಕೆಲಸವಾಗುತ್ತಿಲ್ಲ,ಹೊಸ ಸದಸ್ಯರು ಆಯ್ಕೆಯಾಗಿ ಆರು ತಿಂಗಳಾಗುತ್ತಾ ಬಂದಿದ್ದು ಕಳೆದ ಆರು ತಿಂಗಳ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಮೌಲ್ಯಮಾಪನ ಸಾರ್ವಜನಿಕರ ಎದುರಲ್ಲೆ ಆಗಲಿ ಎಂದು ಗ್ರಾಪಂ ಸದಸ್ಯ ಎಂ.ನಾಗರಾಜು(ಕಾಡಿನರಾಜ) ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದ ಘಟನೆ ಕೆಂಕೆರೆ ಪಂಚಾಯ್ತಿ ಆವರಣದಲ್ಲಿ ನಡೆಯಿತು.
ಈ ಬಗ್ಗೆ ಮಾತನಾಡಿದ ಅವರು ಕೆಂಕೆರೆ ಗ್ರಾಪಂನಲ್ಲಿ ಹಿರಿಯ ಪಂಚಾಯ್ತಿ ಸದಸ್ಯರಾಗಿರುವ ನಾನು ಈ ಹಿಂದೆ ಕೂಡ ಎರಡು ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೆ.ನಯಾಪೈಸೆ ಖರ್ಚಿಲ್ಲದೆ ಈ ಬಾರಿ ಕೂಡ ಗೆದ್ದು ಬಂದಿರುವ ನನಗೆ ಸಾರ್ವಜನಿಕರ ಆಶೋತ್ತರಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ,ಯಾವುದೇ ಕೆಲಸಗಳಿಗೂ ಪಂಚಾಯ್ತಿಯಲ್ಲಿ ಸಹಕಾರ ದೊರೆಯದ ಕಾರಣ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದು ಈ ಬಗ್ಗೆ ಸಾರ್ವಜನಿಕರ ಎದುರಿನಲ್ಲೆ ಸಮಸ್ಯೆ ಪರಿಹಾರಕ್ಕೆ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ತಿಳಿಸಿದರು.
ಆರೋಪ ಏನು: ಕೆಂಕೆರೆಯ ಒಂದು ಮತ್ತು ಎರಡೆನೇ ಬ್ಲಾಕ್ ಸುವರ್ಣ ಗ್ರಾಮ ಯೋಜನೆಯಡಿ ಸ್ವಲ್ಪ ಮಟ್ಟಿನ ಅಭಿವೃದ್ಧಿ ಕಂಡಿದ್ದು ಮೂರು ಮತ್ತು ನಾಲ್ಕನೆ ಬ್ಲಾಕ್ ತೀರಾ ಹಿಂದುಳಿದಿದೆ.ಮೂರನೇ ಬ್ಲಾಕಿನ ವ್ಯಾಪ್ತಿಗೆ ಬರದಲೇಪಾಳ್ಯ,ವಳಗೆರೆಹಳ್ಳಿ ಯಿಂದ ಸುಬೇದಾರ್ ಪಾಳ್ಯದವರೆಗಿನ ಜಾಗ, ದುರ್ಗದಸೀಮೆ ಪಾಳ್ಯ,ಹೊನ್ನಯ್ಯನ ಪಾಳ್ಯ,ಅಡಾಣಿಕಲ್ಲು,ಬಸವನಗುಡಿ,ಉದಯ ದಿಬ್ಬ,ಪುರದಮಠದ ಗೇಟ್,ಬಕಾಯಪ್ಪನ ಗುಡ್ಲು ವರೆಗೆ ಹತ್ತಾರು ಹಳ್ಳಿಗಳು ಸೇರಿದೆ.ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಈ ಭಾಗದ ಬಂಡೀ ಜಾಡಿನ ರಸ್ತೆಗಳೆಲ್ಲ ಕೆಸರುಮಯವಾಗಿದ್ದು ಸಂಚರಿಸುವುದೆ ದುಸ್ತರವಾಗಿದ್ದು ಈ ಬ್ಲಾಕನ್ನು ಪ್ರತಿನಿಧಿಸುವ ನಮಗೆ ಜನರಿಗೆ ಮುಖತೋರಿಸದ ಪರಿಸ್ಥಿತಿ ಬಂದೊದಗಿದೆ.ಜಾಡಿನ ಸುತ್ತಾ ಬಳ್ಳಾರಿ ಜಾಲಿ ಬೆಳೆದು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.ಈ ಬಗ್ಗೆ ಪಂಚಾಯ್ತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಮಾಸಿಕ ಸಭೆಗಳಲ್ಲು ಕೂಡ ಪಿಡಿಓ ನಮ್ಮ ಬೇಡಿಕೆ ಬಗ್ಗೆ ನಿರ್ಲಕ್ಷಿಸುತ್ತಲೆ ಬರುತ್ತಿದ್ದು ಪರೀಶೀಲನೆ ಮಾಡಿ ಎಂದರೂ ಯಾರೊಬ್ಬರು ಕಿವಿಗೊಡುತ್ತಿಲ್ಲ .ಗ್ರಾಮದ ರಸ್ತೆಗಳ ಬಗ್ಗೆ,ಸಮುದಾಯ ಭವನ ನಿರ್ಮಾಣದ ಬಗ್ಗೆ , ಸ್ಥಾಯಿ ಸಮಸ್ಯೆ ರಚಿಸುವ ಬಗ್ಗೆ ಕಾಳಜಿಯಿಲ್ಲದಂತೆ ವರ್ತಿಸುತ್ತಿದ್ದಾರೆ.ಸಭೆಗಳಲ್ಲಿ ಧ್ವನಿ ಎತ್ತಿದಾಗಲೆಲ್ಲಾ ಕೂಗಾಟದ ಮೂಲಕ ಬಾಯಿಮುಚ್ಚಿಸುತ್ತಾರೆಂದು ನಾಗರಾಜು ಆರೋಪಿಸಿದರು.
ಇಲ್ಲಿನ ಒಳ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವ ಪ್ರಯತ್ನವಾಗಿ ಮುಷ್ಕರ ಹೂಡಿದ್ದು ತಾಲ್ಲೂಕ್ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವವರೆಗೂ ಧರಣಿ ಮುಂದುವರಿಸುವುದಾಗಿ ಪಟ್ಟುಹಿಡಿದರು.ಹೆದ್ದಾರಿಯಲ್ಲಿರುವ ಗ್ರಾಮಪಂಚಾಯ್ತಿ ಕಛೇರಿ ಮುಂದೆ ಶಾಮಿಯಾನ ಹಾಕಿ ಗಾಂಧೀಜಿಗೆ ಪೂಜೆ ಸಲ್ಲಿಸಿ ಉಪವಾಸ ಕುಳಿತು ಪ್ರತಿಭಟಿಸಿದರು.
ಸುದ್ದಿ ತಿಳಿದು ಮಧ್ಯಾಹ್ನ ಸ್ಥಳಕ್ಕಾಗಮಿಸಿದ ತಾಲ್ಲೂಕ್ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸದಸ್ಯನ ಸಮಸ್ಯೆ ಆಲಿಸಿ ಪಿಡಿಓ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿಸಿದರು.ತುರ್ತಾಗಿ ಆಗಬೇಕಿರುವ ಕೆಲಸಗಳನ್ನು ಮಾಡಲು ತಿಳಿಸಿದಲ್ಲದೆ ಹದಗೆಟ್ಟ ರಸ್ತೆಯನ್ನು ಎನಾರ್ ಇಜಿ ಯಲ್ಲಿ ಸೇರಿಸಲು ತಿಳಿಸಿದರು.ಬರದಲೇಪಾಳ್ಯವನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಸೇರಿಸುವ ಬಗ್ಗೆ ಶಾಸಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.ಕೂಡಲೆ ಸ್ಥಾಯಿ ಸಮಿತಿ ರಚಿಸುವಂತೆ ತಾಕೀತು ಮಾಡಿದರು.
ಸ್ಥಳದಲ್ಲಿದ್ದ ಅಧ್ಯಕ್ಷೆ ಜಯಮ್ಮ ಹಾಗೂ ಉಪಾಧ್ಯಕ್ಷ ಪಂಚಣ್ಣ ಗ್ರಾಪಂಗೆ ಬರುವ ಅನುದಾನವೆ ತೀರಾ ಕಮ್ಮಿಯಿದ್ದು ಬರುವ ಅನುದಾನವೆಲ್ಲಾ ಈತ ಹೇಳುವ ಕೆಲಸಕ್ಕೆ ವಿನಿಯೋಗಮಾಡುವುದಾದರೆ ಮಿಕ್ಕ ಕೆಲಸಗಳಿಗೇನು ಮಾಡುವುದು.ಸಭೆಯಲ್ಲಿ ಕೋರಂ ಪಡೆದೆ ಕಾಮಗಾರಿಗಳನ್ನು ಮಾಡಿಸುತ್ತಿದ್ದು ಇದಕ್ಕೆ ಎಲ್ಲಾ ಸದಸ್ಯರುಗಳು ಸಹಕಾರ ಕೊಡಬೇಕೆಂದರು.
ಒಟ್ಟಾರೆ ಧರಣಿನಿರತ ನಾಗರಾಜುವಿನ ಸಮಸ್ಯೆ ಆಲಿಸಿದ ಇಓ ಕೃಷ್ಣಮೂರ್ತಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿ ಹಣ್ಣಿನ ರಸ ಕುಡಿಸುವುದರ ಮೂಲಕ ಉಪವಾಸ ಸತ್ಯಾಗ್ರಹ ಹಿಂಪಡೆಯುವಂತೆ ಮಾಡಲು ಸಫಲರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ