ಹುಳಿಯಾರು:"ವಿದ್ಯಾರ್ಥಿ ಜೀವನವು ಒಂದು ಸುವರ್ಣ ಕಾಲವಾಗಿದ್ದು ಈ ಸಮಯದಲ್ಲಿ ದಕ್ಕುವ ಎಲ್ಲ ಅನುಭವಗಳು ಜೀವನವನ್ನೇ ಬದಲಾಯಿಸಬಲ್ಲವು. ಈ ನಿಟ್ಟಿನಲ್ಲಿ ಸದೃಢ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ತರ ಪ್ರಭಾವ ಬೀರುತ್ತದೆ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು " ಎಂದು ಹುಳಿಯಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು, ಕವಿ ಶಶಿಭೂಷಣ್ ಅವರು ಹೇಳಿದರು.
ಅವರು ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಒಂದು ಹಾಗೂ ಎರಡು ಆಯೋಜಿಸಿದ ರಾಷ್ಟ್ರೀಯ ಎನ್.ಎಸ್.ಎಸ್ ದಿನಾಚರಣೆಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮುಂದುವರಿದು,ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಭ್ರಾತೃತ್ವ, ಸೌಹಾರ್ದತೆ,ದೇಶ ಭಕ್ತಿ ಅಲ್ಲದೆ ಗ್ರಾಮ ಜೀವನದ ಬಗ್ಗೆ ಕಳಕಳಿ, ಕೃಷಿಯ ಬಗ್ಗೆ ಒಲವು, ಸ್ವತಂತ್ರ ಚಿಂತನೆ ಬೆಳೆಯುತ್ತವೆ. ಅಲ್ಲದೆ ಮುಂದಿನ ಜೀವನಕ್ಕೆ ಅತ್ಯಗತ್ಯವಾದ ಧೈರ್ಯ, ಪ್ರಯತ್ನ ಶೀಲತೆ,ಸಮಸ್ಯೆಗಳನ್ನು ಎದುರಿಸುವ ಮನೋಭಾವ ರೂಢಿಯಾಗುತ್ತದೆ. ವಿದ್ಯಾರ್ಥಿಗಳ ಸಮಗ್ರ ,ಸಾವಯವ ವ್ಯಕ್ತಿತ್ವ ವಿಕಸನಕ್ಕೆ ಎನ್ ಎಸ್ ಎಸ್ ಕೊಡುಗೆ ದೊಡ್ಡದು ಎಂದು ಅವರು ಹೇಳಿದರು.
ಗಿಡ ನೆಡುವುದೇ ಮೊದಲಾಗಿ ಎನ್.ಎಸ್.ಎಸ್ ಶಿಬಿರಗಳಲ್ಲಿ ಕೈಗೊಂಡ ಕಾರ್ಯಕ್ರಮಗಳ ಹಿಮ್ಮಾಹಿತಿ ಪಡೆದುಕೊಂಡು ಅವುಗಳ ಅನುಷ್ಠಾನದ ಬಗ್ಗೆಯೂ ನಿಯತವಾಗಿ ಪರಿಶೀಲುಸುತ್ತಿರಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಗ್ರಂಥಪಾಲಕರಾದ ಡಾ.ಲೋಕೇಶ್ ನಾಯಕ್ ಅವರು ಮಾತನಾಡಿ ಪರಿಸರ ಸಂರಕ್ಷಣೆ,ಗ್ರಾಮಗಳ ಉದ್ಧಾರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಬಗ್ಗೆ ವಿವರಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಯಾದ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಗಿರುವ ಪ್ರೊ. ಮಲ್ಲಿಕಾರ್ಜುನ ಬಿರಾದಾರ್ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ 1969 ನೆ ಇಸವಿಯ ಸೆಪ್ಟೆಂಬರ್ 24ರಂದು ಗಾಂಧೀಜಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ರಾಷ್ಟ್ರೀಯ ಯೋಜನಾ ದಿನವನ್ನು ಘೋಷಿಸಲಾಗಿತ್ತು. ಪ್ರತಿ ವರ್ಷವೂ ಇದೇ ದಿನ ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಗುರಿ,ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಹ ಸಂಯೋಜಕರಾದ ಡಾ.ಜಯಶ್ರೀ ಬಿ ಇವರು ಮಾತನಾಡಿ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವುದರಿಂದ ಅವರ ವ್ಯಕ್ತಿತ್ವ ವಿಕಾಸ ಹೊಂದುತ್ತದೆ.ಅಲ್ಲದೆ ಅವರಲ್ಲಿ ಸಾಮಾಜಿಕ ಪ್ರಜ್ಞೆ, ರಾಷ್ಟ್ರೀಯತೆ,ಗ್ರಾಮೀಣಾಭಿವೃದ್ಧಿಯ ಬಗ್ಗೆ ಕಾಳಜಿ ಬೆಳೆಯುತ್ತದೆ ಎಂದು ಹೇಳಿ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ಕಾರ್ಯ ಸೂಚಿಯ ಬಗ್ಗೆ ಮಾಹಿತಿ ನೀಡಿದರು.
ಅತಿಥಿಯಾಗಿ ಭಾಗವಹಿಸಿದ್ದ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಪ್ರೊ.ಸಂಗೀತ ಅವರು ಎನ್ ಎಸ್ ಎಸ್ ಹಾಗೂ ಜೀವನ ಮೌಲ್ಯಗಳ ಬಗ್ಗೆ ಮಾತನಾಡಿದರು.
ಬಿ.ಎ.ದ್ವಿತೀಯ ಸೆಮಿಸ್ಟರ್ ನ ಮಾರುತಿ ಹಾಗೂ ತಂಡದವರು ಎನ್.ಎಸ್.ಎಸ್ ಆರಂಭ ಗೀತೆ ಹಾಡಿದರು.ಪ್ರಥಮ ಬಿಎ ವಿದ್ಯಾರ್ಥಿನಿಯರಾದ ಐಶ್ವರ್ಯ ಕೆ.ಎಂ ಸ್ವಾಗತಿಸಿದರು.ದಿವ್ಯ ಬಿ.ಕಾರ್ಯಕ್ರಮ ನಿರೂಪಿಸಿದರು. ಅನುಷಾ ಎಲ್. ಜಿ ಧನ್ಯವಾದ ಸಮರ್ಪಿಸಿದರು.
ಕಾಲೇಜಿನ ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಷ್ಮಾ ಎಲ್ ಬಿರಾದಾರ್, ಕನ್ನಡ ಉಪನ್ಯಾಸಕರಾದ ಚಂದ್ರಹಾಸ ಬಿ ಕೆ ಹಾಗೂ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಸೋಮಶೇಖರಪ್ಪ ಅವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ