-----------------------
ನಿರಾಶ್ರಿತರಿಗೆ ಸ್ಪಂದಿಸಿದ ತಹಸಿಲ್ದಾರ್
--------------------------
ನಿರಾಶ್ರಿತರಿಗಾಗಿ ಗಂಜಿ ಕೇಂದ್ರ ತೆರೆದ ತಾಲೂಕು ಆಡಳಿತ
ಹುಳಿಯಾರು:ಹುಳಿಯರು ಅಮಾನಿಕೆರೆ ದಡದಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದಗಳಿಂದಲೂ ವಾಸವಿರುವ ಅಲೆಮಾರಿ ನಿರ್ಗತಿಕ ನಿವಾಸಿಗಳ ಗುಡಿಸಿಲುಗಳು ಇದೀಗ ಕೆರೆ ತುಂಬುತ್ತಿರುವ ಹಿನ್ನೆಲೆಯಲ್ಲಿ ಜಲಾವೃತಗೊಳ್ಳುತ್ತಿದ್ದು 120ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಲಿದ್ದು ತಮಗೆ ಶಾಶ್ವತ ಪುನರ್ ವಸತಿ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕಳೆದ ಎರಡು ದಿನಗಳಿಂದಲೂ ಪಟ್ಟಣ ಪಂಚಾಯ್ತಿ ಕಛೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದು ,ಇಂದು ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ತಹಸಿಲ್ದಾರ್ ಅವರೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಂಕರಾಪುರ ಬಡಾವಣೆಯಲ್ಲಿನ ಅಮಾನಿಕೆರೆ ಅಂಗಳದಲ್ಲಿ ಅಲೆಮಾರಿಗಳು,ಹಕ್ಕಿಪಿಕ್ಕಿ ಜನಾಂಗದವರು,ನಿರ್ಗತಿಕರು,ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಕಡುಬಡವರು ಕಳೆದ 30-40 ವರ್ಷಗಳಿಂದಲೂ ಜೋಪಡಿ ಕಟ್ಟಿಕೊಂಡು ವಾಸಿಸುತ್ತಿದ್ದು, ಇದೀಗ ಕೆರೆ ತುಂಬುತ್ತಿರುವ ಹಿನ್ನೆಲೆಯಲ್ಲಿ ಗುಡಿಸಲಗಳು ಜಲಾವೃತಗೊಳ್ಳುತ್ತಿದ್ದು ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ, ಹಾಗೂ ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ನಿವೇಶನ ನೀಡಿ ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದ್ದನ್ನು ಈಗಲಾದರೂ ಈಡೇರಿಸುವಂತೆ ಒತ್ತಾಯಿಸಿ ಅಲ್ಲಿನ ಸುಮಾರು ನೂರಕ್ಕೂ ಹೆಚ್ಚು ನಿವಾಸಿಗಳು ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಸಂಜೆಯಿಂದಲೂ ಧರಣಿ ಕೂತಿದ್ದರು.
ತಹಸೀಲ್ದಾರ್ ತೇಜಸ್ವಿನಿ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಕಾರರ ಅಹವಾಲು ಆಲಿಸಿ,ಪರ್ಯಾಯ ಸ್ಥಳ ಪರಿಶೀಲಿಸಿ ತಾತ್ಕಾಲಿಕವಾಗಿ ಗಂಜಿ ಕೇಂದ್ರ ತೆರೆದಿದ್ದರು. ಇಂದು ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಧರಣಿನಿರತರ ಸಮಸ್ಯೆ ಆಲಿಸಿ ಶೀಘ್ರ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ತಹಸಿಲ್ದಾರ್ ಅವರಿಗೆ ಸೂಚಿಸಿದರು.
ಸಧ್ಯ 156 ಮಂದಿಯ ಪಟ್ಟೆ ಕೈಸೇರಿದ್ದು, ಈ ಹಿಂದೆ ಪಂಚಾಯಿತಿಯಲ್ಲಿ 102 ಮಂದಿ ನಿವಾಸಿಗಳ ಪಟ್ಟಿ ಇದ್ದು,ಸ್ಥಳ ಪರಿಶೀಲನೆ ನಡೆಸಿ ಮೊದಲು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ಪರಿಶೀಲಿಸುವುದಾಗಿ ಸ್ಥಳದಲ್ಲಿದ್ದ ತಹಸಿಲ್ದಾರ್ ತಿಳಿಸಿದರು. ಎಷ್ಟು ಜನಕ್ಕೆ ನಿವೇಶನದ ಅವಶ್ಯಕತೆ ಇದೆ, ಎಷ್ಟು ಜಾಗ ಬೇಕಾಗುವುದೆಂದು ತಿಳಿದು ಸೂಕ್ತ ಸರ್ಕಾರಿ ಜಾಗದ ಸ್ಥಳ ಆಯ್ಕೆ ಮಾಡಿ ಮಂಜೂರಾತಿಗಾಗಿ ಕಳಿಸಿ ಕೊಡುವುದಾಗಿ ತಿಳಿಸಿದರು. ನಂತರ ನಡೆದ ಚರ್ಚೆಯಲ್ಲಿ ಮಾಜಿ ಶಾಸಕರು ಹಾಗೂ ತಹಸಿಲ್ದಾರ್ ಅವರು ನೀಡಿದ ಭರವಸೆಯನ್ನು ಒಪ್ಪಿದ ಪ್ರತಿಭಟನೆಕಾರರು ತಮ್ಮ ಪ್ರತಿಭಟನೆ ಅಂತ್ಯಗೊಳಿಸಿದರು
ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್,ಉಪಾಧ್ಯಕ್ಷೆ ಶೃತಿ ಸನತ್, ಮುಖ್ಯಾಧಿಕಾರಿ ಭೂತಪ್ಪ, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಹಾಗೂ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ರಾಘವೇಂದ್ರ,ಪಟ್ಟಣ ಪಂಚಾಯ್ತಿ ಸದಸ್ಯರಾದ ದಯಾನಂದ್,ಮಂಜಾ ನಾಯ್ಕ,ಮಹಮ್ಮದ್ ಜುಬೇರ್,ಅಬೂಬಕರ್ ಸಿದ್ದೀಕ್,ಚಂದ್ರಶೇಖರ್,ವೇದಿಕೆಯ ಸಾದತ್,ಗಣೇಶ್,ನಾಗರಾಜು,ಶ್ರೀಧರ್ ಮೊದಲಾದವರಿದ್ದರು.
-----------
ತಾಲೂಕು ಆಡಳಿತದಿಂದ ಸೂಕ್ತ ಜಾಗ ಗುರುತಿಸಬೇಕು,ಅರ್ಹ ಫಲಾನುಭವಿಗಳ ಪಟ್ಟಿ ಮಾಡಿ,ಆಶ್ರಯ ಸಮಿತಿ ಮುಂದಿಟ್ಟು ಹಕ್ಕು ಪತ್ರ ಕೊಡಿಸಿ. ಮುಂದೆ ಪ್ರವಾಹ ನಿಧಿಯಿಂದ ಎಲ್ಲರಿಗೂ ಒಟ್ಟಿಗೆ ನಿವೇಶನ ಕಲ್ಪಿಸುವ ವ್ಯವಸ್ಥೆಯನ್ನು ಸಚಿವರು ಮಾಡುತ್ತಾರೆ :ಸಿ.ಬಿ.ಸುರೇಶ್ ಬಾಬು,ಮಾಜಿ ಶಾಸಕರು
--------------
ತಾಲೂಕು ಆಡಳಿತ ಅಲೆಮಾರಿಗಳ ನಿರಾಶ್ರಿತರ ಬಗ್ಗೆ ನಿರ್ಲಕ್ಷ ವಹಿಸದೆ ನಿವೇಶನರಹಿತರ ಪಟ್ಟಿಮಾಡಿ ಅರ್ಹ ಫಲಾನುಭವಿಗಳಿಗೆ ಅತಿ ತುರ್ತಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು : ರಾಘವೇಂದ್ರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ
------------------
ನಿರಾಶ್ರಿತರ, ವಸತಿ ರಹಿತರ ಪಟ್ಟಿಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ತಯಾರು ಮಾಡಿಸಿ, ಅರ್ಹರನ್ನು ಗುರುತಿಸಿ,ಸೂಕ್ತ ಜಾಗ ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಿ ಕೊಡುವೆ. ಈಗಾಗಲೇ ತುರ್ತಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಪ್ರತಿಭಟನೆಕಾರರು ತಮ್ಮ ಪ್ರತಿಭಟನೆ ಕೈ ಬಿಟ್ಟು ತಾಲೂಕು ಆಡಳಿತದೊಂದಿಗೆ ಸಹಕರಿಸಿ:ತೇಜಸ್ವಿನಿ,ತಹಸೀಲ್ದಾರ್
--------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ