ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ ಕಸದ ಸಮಸ್ಯೆ ಬಿಕ್ಕಟ್ಟು : ವಾಹನಗಳಿದ್ದರೂ ಚಾಲಕರಿಲ್ಲ, ಸ್ಥಳ ಗುರ್ತಿಸಿದರೂ ಅರಣ್ಯ ಇಲಾಖೆಯಿಂದ ಆಕ್ಷೇಪ

ಹುಳಿಯಾರಿನಲ್ಲಿ ಕಸದ ಸಮಸ್ಯೆ ಬಿಕ್ಕಟ್ಟು : ವಾಹನಗಳಿದ್ದರೂ ಚಾಲಕರಿಲ್ಲ, ಸ್ಥಳ ಗುರ್ತಿಸಿದರೂ ಅರಣ್ಯ ಇಲಾಖೆಯಿಂದ ಆಕ್ಷೇಪ
---------------------------------------------
ಹುಳಿಯಾರು: ತಾಲ್ಲೂಕಿನ ಪ್ರಮುಖ ಪಟ್ಟಣವಾದ ಹುಳಿಯಾರಿನಲ್ಲಿ ಕಸ ವಿಲೇವಾರಿ ಸಮಸ್ಯೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಾನೂನು ತೊಡಕುಗಳಿಂದಾಗಿ ಈ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಕಸ ವಿಲೇವಾರಿಗೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ ವಾಹನಗಳು ಮೂಲೆ ಸೇರಿದ್ದರೆ, ಕಸ ವಿಲೇವಾರಿ ಘಟಕಕ್ಕೆಂದು ಗುರುತಿಸಲಾದ ಸ್ಥಳವು ಇದೀಗ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಗಳು, ಹುಳಿಯಾರು ಪಟ್ಟಣದ ಬಹುಕಾಲದ ಕಸವಿಲೇವಾರಿ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.

ವಾಹನಗಳಿದ್ದರೂ ಚಾಲಕರಿಲ್ಲ:
-----------
ಪಟ್ಟಣ ಪಂಚಾಯಿತಿ ಕಸ ವಿಲೇವಾರಿಗಾಗಿ ಹಲವು ತಿಂಗಳ ಹಿಂದೆಯೇ ಹೊಸ ವಾಹನಗಳನ್ನು ಖರೀದಿಸಿದೆ. ಇದರಲ್ಲಿ ಕಸ ಸಂಗ್ರಹದ ಆಟೋಗಳು ಮತ್ತು ತ್ಯಾಜ್ಯ ಲೋಡ್ ಮಾಡಲು ಎಕ್ಸ್‌ಕವೇಟರ್ (ಬಾಬ್‌ಕ್ಯಾಟ್) ಸಹ ಸೇರಿವೆ. ಆದರೆ, ಈ ವಾಹನಗಳನ್ನು ನಿರ್ವಹಿಸಲು ಇದುವರೆಗೆ ಚಾಲಕರನ್ನು ನೇಮಕ ಮಾಡಿಕೊಳ್ಳದಿರುವುದು ವಿಪರ್ಯಾಸ. ಪರಿಣಾಮವಾಗಿ, ಈ ದುಬಾರಿ ವಾಹನಗಳು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲೇ ಧೂಳು ಹಿಡಿದು ನಿಂತಿವೆ. ಕಸದ ಸಮಸ್ಯೆ ವಿಪರೀತವಾಗಿದ್ದರೂ, ವಾಹನಗಳಿದ್ದರೂ ಚಾಲಕರಿಲ್ಲದೆ, ನಿಗದಿತ ಅವಧಿಯೊಳಗೆ ಸರ್ವೀಸ್‌ ಮಾಡಿಸದೇ ಸುಸ್ಥಿತಿಯಲ್ಲಿದೆಯೋ ಇಲ್ಲವೋ ಎಂಬುದೂ ತಿಳಿಯದೇ ನಿಂತಲ್ಲೇ ಹಾಳಾಗುತ್ತಿರುವ ಈ ವಾಹನಗಳು ಪಂಚಾಯಿತಿಗೆ ಅನಗತ್ಯ ಆರ್ಥಿಕ ಹೊರೆಯಾಗಿ ಪರಿಣಮಿಸಿವೆ.

ಕಸ ವಿಲೇವಾರಿ ಸ್ಥಳದ ಗೊಂದಲ:
------------------
ಚಾಲಕರ ನೇಮಕಾತಿ ಸಮಸ್ಯೆ ಒಂದು ಕಡೆಯಾದರೆ, ಕಸ ವಿಲೇವಾರಿಗೆ ಶಾಶ್ವತ ಸ್ಥಳದ ಕೊರತೆ ಇನ್ನೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪಟ್ಟಣ ಪಂಚಾಯಿತಿಯಾಗಿ ಏಳು ವರ್ಷಗಳು ಕಳೆದರೂ, ಇದುವರೆಗೆ ಒಂದು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ, ಜಿಲ್ಲಾಡಳಿತ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಗಚೀಹಳ್ಳಿ ಗ್ರಾಮದ ಸರ್ವೆ ನಂ. 25 ರಲ್ಲಿರುವ 4-10 ಎಕರೆ ಸರ್ಕಾರಿ ಜಮೀನನ್ನು ಕಸ ವಿಲೇವಾರಿ ಘಟಕಕ್ಕೆ ಮೀಸಲಿಡಲು ಯೋಚಿಸಿತ್ತು. ಆದರೆ, ಈ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ಕೋರಿದಾಗ, ಬುಕ್ಕಾಪಟ್ಟಣ ಪ್ರಾದೇಶಿಕ ಅರಣ್ಯ ವಲಯವು ನೀಡಿದ ವರದಿಯು ಎಲ್ಲರನ್ನೂ ನಿರಾಸೆಗೊಳಿಸಿದೆ.

ವರದಿಯ ಪ್ರಕಾರ, ಯಗಚೇಹಳ್ಳಿ ಗ್ರಾಮದ ಸರ್ವೆ ನಂ. 25, ಒಟ್ಟಾರೆ 751.57 ಹೆಕ್ಟೇರ್ ಪ್ರದೇಶವು ಯಗಚೀಹಳ್ಳಿ ಗ್ರಾಮ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದೆ. ಈ ವರದಿಯು, ಕಸ ವಿಲೇವಾರಿ ಘಟಕಕ್ಕೆ ಗುರುತಿಸಲಾಗಿದ್ದ ಜಮೀನು ಕಾನೂನುಬದ್ಧವಾಗಿ ಅರಣ್ಯ ಇಲಾಖೆಗೆ ಸೇರಿದ್ದರಿಂದ ಅದರ ಹಸ್ತಾಂತರ ಸಾಧ್ಯವಿಲ್ಲ ಎಂಬ ಗೊಂದಲಕ್ಕೆ ಕಾರಣವಾಗಿದೆ.

ಆರ್ಥಿಕ ನಷ್ಟ ಹಾಗೂ ನಾಗರಿಕರ ಸಂಕಷ್ಟ:
------------------
ಸದ್ಯ, ಪಟ್ಟಣದ ಕಸವನ್ನು ಸುಮಾರು 25 ಕಿ.ಮೀ ದೂರದ ಚಿಕ್ಕನಾಯಕನಹಳ್ಳಿಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದೆ. ಇದು ಕೇವಲ ಇಂಧನ ಮತ್ತು ಸಮಯದ ನಷ್ಟಕ್ಕೆ ಕಾರಣವಾಗದೆ, ಪಟ್ಟಣ ಪಂಚಾಯಿತಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ಹೊರೆಯನ್ನೂ ಉಂಟುಮಾಡುತ್ತಿದೆ. ಇದೇ ರೀತಿ, ಸಮೀಪದ ದಸೂಡಿಯಲ್ಲಿ ಗುರ್ತಿಸಲಾಗಿದ್ದ ಕಸ ವಿಲೇವಾರಿಗೂ 25 ಕಿ.ಮೀ ದೂರ ಪ್ರಯಾಣಿಸಬೇಕಿದೆ. ಹೀಗಾಗಿ, ಇಂಧನ ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚುತ್ತಿವೆ.

ಕಸವಿಲೇವಾರಿ ಬಗ್ಗೆ ಪಂಚಾಯಿತಿಯು ತೀವ್ರವಾಗಿ ಗಮನ ಕೊಡದಿರುವುದು ಮತ್ತು ಸ್ಥಳದ ಕೊರತೆಯಿಂದಾಗಿ ಪಟ್ಟಣದಲ್ಲಿ ಕಸದ ಸಂಗ್ರಹ ಸಮರ್ಪಕವಾಗಿ ನಡೆಯದೆ ರಸ್ತೆ ಬದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿಗಳು ತುಂಬಿ, ವಾತಾವರಣವು ದುರ್ನಾತದಿಂದ ಕೂಡಿ ಸ್ಥಳೀಯರಿಗೆ ಅನಾರೋಗ್ಯದ ಭಯವನ್ನು ಉಂಟುಮಾಡುತ್ತಿದೆ.
ಜಿಲ್ಲಾಡಳಿತದ ತುರ್ತು ಗಮನ ಅಗತ್ಯ:
-------------------
ಈ ಎಲ್ಲಾ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕಿದೆ. ಮೊದಲಿಗೆ, ಯಾವುದೇ ಕಾನೂನು ತೊಡಕುಗಳಿಲ್ಲದ, ಜನವಸತಿ ಮತ್ತು ಅರಣ್ಯ ಪ್ರದೇಶಗಳಿಂದ ಹೊರತಾದ ಸೂಕ್ತವಾದ ಸ್ಥಳವನ್ನು ಹುಳಿಯಾರು ಪಟ್ಟಣದ ಆಸುಪಾಸಿನಲ್ಲಿಯೇ ಕಂದಾಯ ಇಲಾಖೆಯ ಸಹಕಾರದೊಂದಿಗೆ ಗುರುತಿಸಿ, ಅದನ್ನು ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಬೇಕಿದೆ. ಅಲ್ಲದೇ, ಕಸದ ವಾಹನಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯವಿರುವ ಚಾಲಕರ ನೇಮಕಾತಿ ಪ್ರಕ್ರಿಯೆಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕಿದೆ. 
ಪಟ್ಟಣ ಪಂಚಾಯಿತಿಯಾಗಿ ಏಳು ವರ್ಷಗಳು ಕಳೆದರೂ, ಇದುವರೆಗೆ ಒಂದು ಶಾಶ್ವತವಾದ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸದಿರುವುದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು,ಅಧಿಕಾರಿಗಳು ಕೇವಲ ಆಡಳಿತಾತ್ಮಕ ಪತ್ರ ವ್ಯವಹಾರಗಳಿಗೆ ಸೀಮಿತವಾಗದೆ, ನಿಜವಾದ ಪರಿಹಾರಕ್ಕಾಗಿ ವಾಸ್ತವಿಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲವಾದರೆ, "ಸ್ವಚ್ಛ ಭಾರತ"ದ ಕನಸು ಹುಳಿಯಾರಿನಲ್ಲಿ ಕಾಗದದ ಮೇಲೆ ಮಾತ್ರ ಉಳಿದು, ನಾಗರಿಕರು ಮಾತ್ರ ಕಸದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಜಿಲ್ಲಾಡಳಿತದ ದಿಟ್ಟ ಕ್ರಮಕ್ಕಾಗಿ ಪಟ್ಟಣದ ಜನರು ಕಾತರದಿಂದ ಕಾಯುತ್ತಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...