ಹುಳಿಯಾರು : ಡೆಂಗ್ಯೂ ನಿಯಂತ್ರಣದ ಭಾಗವಾಗಿ, ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಚಿಕ್ಕನಾಯಕನಹಳ್ಳಿಯ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಹಾಸ್ಟೆಲ್‌ಗಳ ವಾರ್ಡನ್‌ಗಳು ಮತ್ತು ಸಿಬ್ಬಂದಿಗಳಿಗೆ ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಚೇತನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಡೆಂಗ್ಯೂ ರೋಗದ ಬಗ್ಗೆ ಕಿರುಹೊತ್ತಿಗೆಗಳು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತ ಪೋಸ್ಟರ್‌ಗಳನ್ನು ಎಲ್ಲರಿಗೂ ವಿತರಿಸಲಾಯಿತು.
ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ.ವಿ. ವೆಂಕಟರಾಮಯ್ಯ ಅವರು ಡೆಂಗ್ಯೂ ರೋಗ ಹರಡುವ ಈಡೀಸ್ ಈಜಿಪ್ಟೈ ಸೊಳ್ಳೆಯ ಸಂತಾನೋತ್ಪತ್ತಿ ತಾಣಗಳು, ಅವುಗಳ ಬೆಳವಣಿಗೆಯ ವಿಧಾನಗಳನ್ನು ವಿಸ್ತಾರವಾಗಿ ವಿವರಿಸಿದರು. ಸೊಳ್ಳೆ ನಿಯಂತ್ರಣ ಕ್ರಮಗಳು, ಸೊಳ್ಳೆಯ ಬೆಳವಣಿಗೆಯ ವಿವಿಧ ಹಂತಗಳು, ವಾರಕ್ಕೊಂದು ದಿನ ಒಣದಿನ ಆಚರಣೆಯ ಮಹತ್ವ, ಸ್ವಯಂ ರಕ್ಷಣಾ ವಿಧಾನಗಳು, ಹಾಗೂ ಜೈವಿಕ ವಿಧಾನದಲ್ಲಿ ಗಪ್ಪಿ ಮತ್ತು ಗ್ಯಾಂಬೂಸಿಯಾ ಮೀನುಗಳ ಸಾಕಾಣಿಕೆ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಲಾರ್ವಾ ಸಮೀಕ್ಷೆ ನಡೆಸಿ ಹಾಸ್ಟೆಲ್‌ಗಳನ್ನು ಲಾರ್ವಾ ಮುಕ್ತಗೊಳಿಸುವುದು, ಪರಿಸರ ನೈರ್ಮಲ್ಯ ಕಾಪಾಡುವುದು ಮತ್ತು ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಬಗ್ಗೆಯೂ ಅರಿವು ಮೂಡಿಸಿದರು.
ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ತಾಲೂಕು ಮೇಲ್ವಿಚಾರಕರಾದ ಮಂಜೇಗೌಡ ಮಾತನಾಡಿ ಮಕ್ಕಳಲ್ಲಿ ಡೆಂಗ್ಯೂ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿಗೆ ಕರೆತರುವಂತೆ ಮತ್ತು ರಕ್ತ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶೇಷಾದ್ರಿ ಅವರು ಸೊಳ್ಳೆಗಳ ಜೀವನ ಚರಿತ್ರೆ ಮತ್ತು ರೋಗ ಹರಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಚೇತನ್ ಮಾತನಾಡಿ, ಡೆಂಗ್ಯೂ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳಿಗೆ ಅನುಗುಣವಾಗಿ ತಕ್ಷಣವೇ ಚಿಕಿತ್ಸೆ ಕೊಡಿಸಬೇಕು. ಮಾರಣಾಂತಿಕ ಡೆಂಗ್ಯೂ ಜ್ವರವನ್ನು ನಿಯಂತ್ರಣದಲ್ಲಿಡಲು ಪೌಷ್ಟಿಕ ಆಹಾರ ಸೇವನೆ ಮತ್ತು ಆರೋಗ್ಯ ಶಿಕ್ಷಣ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಇದೇ ಸಂದರ್ಭದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಸಿದರು. ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ನವೀನ್ ,ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮುದ್ದೇಗೌಡ, ಕೃಷ್ಣೇಗೌಡ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಮೀನಾಕ್ಷಿ, ಸುಶೀಲಮ್ಮ ಮತ್ತಿತರರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಹಾಸ್ಟೆಲ್‌ಗಳ ವಾರ್ಡನ್‌ಗಳು, ಸಿಬ್ಬಂದಿಗಳು ಮತ್ತು ಅಡುಗೆಯವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ