ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಬಂದ ಮಳೆಯಿಂದ ರಾಗಿ ಬೆಳೆ ಚೇತರಿಸಿಕೊಂಡಿದ್ದು ತಡ ಬಿತ್ತನೆ ಪೈರುಗಳಿಗೆ ಜೀವಕಳೆ ಬಂದಂತಾಗಿದೆ.ಕಳೆದ ೨೨ದಿನಗಳಿಂದ ಮಳೆಯಿಲ್ಲದೆ ಕಾಳುಗಟ್ಟುವ ಸ್ಥಿತಿಯಲ್ಲಿದ್ದ ರಾಗಿ ನೆಲಕಚ್ಚಿತು ಎಂದು ಹತಾಶರಾಗುತ್ತಿದ್ದಾಗಲೆ ಮೊನ್ನೆ ಬಂದ ಮಳೆಯಿಂದಾಗಿ ಪೂರ್ಣ ಫಸಲು ರೈತರ ಕೈ ಸೇರಲಿದೆ ಎಂಬಾ ಆಶಾಭಾವನೆ ವ್ಯಕ್ತವಾಗಿದೆ. ತಡವಾಗಿ ಬಿತ್ತನೆ ಮಾಡಿದ ರಾಗಿ ತಾಕುಗಳಿಗೆ ಒಂದು ಹದ ಮಳೆ ಬೇಕಾಗಿದ್ದು ಬಾರದ ಮಳೆಯಿಂದಾಗಿ ರೈತರು ಅತಂಕದಲ್ಲಿದ್ದರು.ಅಲ್ಲದೆ ನವಣೆ, ಹಿಂಗಾರು ಜೋಳ, ಹುರುಳಿ ಮತ್ತಿತ್ತರ ಬೀಜಗಳನ್ನು ಬಿತ್ತಿದ್ದ ರೈತರು ಮಳೆ ಕೈ ಕೊಟ್ಟಿದ್ದರಿಂದ ಕೈಕೈ ಹಿಸುಕಿಕೊಳ್ಳುವಂತಾಗಿತ್ತು. ಭಾನುವಾರ ತಡರಾತ್ರಿ ಹಾಗೂ ಸೋಮವಾರ ರಾತ್ರಿ ಬಂದ ತುಂತುರು ಮಳೆಯಿಂದಾಗಿ ಭೂಮಿ ಹದವಾಗಿದ್ದು ತಡವಾಗಿ ಬಿತ್ತನೆಯಾಗಿರುವ ರಾಗಿ, ನವಣೆ, ಹುರುಳಿ, ಸಜ್ಜೆ ಸೇರಿದಂತೆ ಇತರ ಬೆಳೆಗಳಿಗೆ ಅನುಕೂಲವಾಗಿದೆ.
![]() |
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಬಂದ ಮಳೆಯಿಂದಾಗಿ ನಳನಳಿಸುತ್ತಿರುವ ರಾಗಿ ತಾಕು |
ಕೆಲವರು ಜುಲೈ ಮೊದಲ ಭಾಗದಲ್ಲೆ ಬಿತ್ತನೆ ಮಾಡಿದ್ದ ನವಣೆ, ಸಾವೆ ಈಗಾಗಲೆ ಕಟಾವಿನ ಹಂತಕ್ಕೆ ಬಂದಿದ್ದು ಈಗ ಬಂದಿರುವ ಮಳೆ ಕಟಾವಿಗೆ ಅಲ್ಪಸ್ವಲ್ಪ ತೊಂದರೆಯಾಗಲಿದೆ.ಉಳಿದಂತೆ ದ್ವಿದಳ ಧಾನ್ಯಗಳಿಗೆ ಈ ಮಳೆ ಪೂರಕವಾಗಿದ್ದು ರಾಗಿ ಬಂಪರ್ ಇಳುವರಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ