ಹಿಂದುಳಿದ ವರ್ಗದ ಮಕ್ಕಳಿಗೆ ಮರೀಚಿಕೆಯಾದ ಶಿಕ್ಷಣ
----------------------------------
ವರದಿ :ಡಿ.ಆರ್.ನರೇಂದ್ರಬಾಬು
ಹುಳಿಯಾರು: ಹೋಬಳಿಯ ಗಾಣಧಾಳು ಪಂಚಾಯ್ತಿಯ ಸೋಮನಹಳ್ಳಿ ಗ್ರಾಮದ ಜಿ.ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠಶಾಲೆಯು ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದು, ಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ಮರೀಚಿಕೆಯಾಗಿದೆ.
ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು ೧೫೦ ವಿದ್ಯಾರ್ಥಿಗಳಿದ್ದು ಮಂಜೂರಾಗಿರುವ ಏಳು ಶಿಕ್ಷಕ ಹುದ್ದೆಯ ಪೈಕಿ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.ಶಿಕ್ಷಕರ ವರ್ಗಾವಣೆ ಹಾಗೂ ನಿವೃತ್ತಿಯಿಂದ ಐದು ಹುದ್ದೆಗಳು ಖಾಲಿಯಿದ್ದು ಹುದ್ದೆಗಳು ಭರ್ತಿಯಾಗದ ಕಾರಣ ದೈನಂದಿನ ಪಾಠ ಪ್ರವಚನಕ್ಕೆ ಅಡಚಣೆಯಾಗಿದೆ.ಇರುವ ಇಬ್ಬರು ಶಿಕ್ಷಕರಲ್ಲಿ ರಾಜಣ್ಣ ಮುಖ್ಯಶಿಕ್ಷಕರಾಗಿದ್ದು ಕಛೇರಿಯ ಕಡತ ನಿರ್ವಹಣೆ ಜೊತೆಗೆ ಬಿಸಿಯೂಟದ ,ಕ್ಷೀರಭಾಗ್ಯ, ಸಮವಸ್ತ್ರ ವಿತರಣೆ ,ನಲಿಕಲಿಯಂತಹ ಹತ್ತಾರು ಜವಬ್ದಾರಿ ನೋಡುವುದರಲ್ಲೆ ಕಾಲ ಮುಗಿಯುವುದರಿಂದ ಶಾಲೆಯತ್ತ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ.ಇನ್ನುಳಿದ ಸಹಶಿಕ್ಷಕರೊಬ್ಬರೆ 1ರಿಂದ 7ನೇ ತರಗತಿಗಳನ್ನು ನಿಭಾಯಿಸಬೇಕಾಗಿದೆ.
ಕಳೆದ ಎರಡು ವರ್ಷಗಳಿಂದಲೂ ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳದಿರುವುದರಿಂದ ಶಾಲೆಯ ಶೈಕ್ಷಣಿಕ ಪ್ರಗತಿ ಇಳಿಮುಖವಾಗುತ್ತಿದೆ.ಶಿಕ್ಷಕರ ಕೊರತೆಯಿಂದ ಪಾಠ ಪ್ರವಚನಗಳು ,ನಲಿಕಲಿ ಕಾರ್ಯಕ್ರಮ ಸರಿಯಾಗಿ ನಡೆಯದೆ ಶಾಲೆಯಲ್ಲಿ ಮಕ್ಕಳ ಫಲಿತಾಂಶ ಕುಂಠಿತಗೊಂಡಿದೆ.ಶೈಕ್ಷಣಿಕ ವರ್ಷದ ಆರಂಭಕ್ಕೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಅತಿಥಿ ಶಿಕ್ಷಕರ ನೇಮಿಸುವ ಇಲಾಖೆ ನಂತರ ಸಂಬಳ ಕೊಡದೆ ಸತಾಯಿಸುವುದರಿಂದ ಅವರು ಕೂಡ ಬಾರದಂತಾಗಿದ್ದಾರೆ.ಕೆಲ ಪೋಷಕರು ಮಕ್ಕಳ ಭವಿಷ್ಯದ ದೃಷ್ಠಿಯಿಂದ ಈಗಾಗಲೆ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಟಿಸಿ ಕೇಳುತ್ತಿದ್ದಾರೆ.ಈಗಾಗಲೆ ಗುರುವಾರದಿಂದ ಹತ್ತುಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಿದ್ದಾರೆಂದು ಶಾಲಾ ಎಸ್ಡಿಎಂಸಿ ಸದಸ್ಯ ಹಾಗೂ ಪೋಷಕ ಮರಿಯಣ್ಣ ಆತಂಕ ವ್ಯಕ್ತ ಪಡಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಇದೇ ಸಮಸ್ಯೆ ಮುಂದುವರಿದಿದೆ.ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ.ಶಾಲೆಗೆ ಖಾಯಂ ನೇಮಕಾತಿಯಿರಲಿ ಈ ಬಾರಿ ಅತಿಥಿ ಶಿಕ್ಷಕರು ನೇಮಕಾತಿಯೂ ಆಗಿಲ್ಲ.ಶಾಲೆಯ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ವಿಜಯಮ್ಮ,ರತ್ನಮ್ಮ,ಗೀತಾಬಾಯಿ ಹಾಗೂ ಶಿವಣ್ಣ ಶಾಸಕರ ಗಮನ ಸೆಳೆದಿದ್ದಾರೆ.
ಎಸ್‌ಡಿಎಂಸಿ, ಪೋಷಕರ ನಿಯೋಗವು ಗುರುವಾರದಂದು ಜಿಲ್ಲಾ ಉಪನಿರ್ದೇಶಕರು-ಸಾರ್ವಜನಿಕ ಶಿಕ್ಷಣ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕ್ ದಂಡಾಧಿಕಾರಗಳನ್ನು ಭೇಟಿ ಮಾಡಿ ಸಮಸ್ಯೆ ಏನೆಂದು ಮನವರಿಕೆ ಮಾಡಿಕೊಟ್ಟಿದ್ದಾರೆ.ಖಾಲಿಯಿರುವ ೫ ಹುದ್ದೆಗೆ ಶಿಕ್ಷಕರನ್ನು ನೇಮಕಾತಿ ಮಾಡದಿದ್ದಲ್ಲಿ ಮುಂದಿನ ಶುಕ್ರವಾರದಿಂದ ಶಾಲೆಗೆ ಬೀಗ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಸಿ ಧನಂಜಯ ಎಚ್ಚರಿಸಿದ್ದಾರೆ.
ಶಿಕ್ಷಣ ಇಲಾಖೆ ಆದಷ್ಟು ಬೇಗ ಶಿಕ್ಷಕರನ್ನು ನೇಮಕ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
----------------
ತೀರಾ ಹಿಂದುಇಳಿದ ಪ್ರದೇಶವಾದ ಸೋಮನಹಳ್ಳಿ ಶಾಲೆಯಲ್ಲಿ ೮೦ ಮಕ್ಕಳು ಎಸ್.ಸಿ , ೬೦ ಮಕ್ಕಳು ಗೊಲ್ಲರು ಹಾಗೂ ಉಳಿದ ಹತ್ತು ಮಕ್ಕಳು ಇತರೆಯವರಾಗಿದ್ದು ಇವರೆಲ್ಲಾ ಇದೇ ಶಾಲೆಯನ್ನು ಆಶ್ರಯಿಸಬೇಕಿದೆ.ಇಲಾಖೆ ಖಾಲಿಯಿರುವ ಶಿಕ್ಷಕರ ನೇಮಕಾತಿಗಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ.ಇವರುಗಳ ಬೇಜವಬ್ದಾರಿತನದಿಂದ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುವಂತಾಗಿದೆ.ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ.ಶಿಕ್ಷಕರ ಸಮಸ್ಯೆ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ :ತಿಮ್ಮಯ್ಯ , ಶಾಲಾಭಿವೃದ್ಧಿ ಸಮಿತಿ ಸದಸ್ಯರು.
---------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ