ಸಾರ್ವಜನಿಕರಿಗೆ ಸಮಸ್ಯೆಯಾಗಿರುವ ಬಾರ್ ನವೀಕರಿಸದಿರಲು ಜಿಲ್ಲಾಧಿಕಾರಿಗಳಿಗೆ ಮನವಿ
----------------
ಹುಳಿಯಾರು:ಜನನಿಬೀಡ ಪ್ರದೇಶದಲ್ಲಿರುವ ಹಾಗೂ ಅಬ್ಕಾರಿ ನಿಯಮ ಉಲ್ಲಂಘಿಸಿ ನಿಯಮಬಾಹಿರವಾಗಿ ನಡೆಯುತ್ತಿರುವ ರಂಗನಾಥ ಲಿಕ್ಕರ್ ಶಾಪ್ ಮದ್ಯದಂಗಡಿಯ ಸನ್ನದ್ದನ್ನು ರದ್ದು ಮಾಡಿ ೨೦೧೬-೧೭ನೇ ಸಾಲಿಗೆ ಪುನರ್ ನವೀಕರಣ ಮಾಡದಂತೆ ಪಟ್ಟಣದ ವಿವಿಧ ಸಂಘಸಂಸ್ಥೆಗಳು ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಪಟ್ಟಣದ ಟೌನ್ ಕೋ ಆಪರೇಟಿವ್ ಕಟ್ಟಡದಲ್ಲಿ ನಡೆಯುತ್ತಿರುವ ರಂಗನಾಥ ಲಿಕ್ಕರ್ ಶಾಪ್ ಅನ್ನು ಸದರಿ ಸ್ಥಳದಿಂದ ತೆರವು ಮಾಡಿಸುವ ಕುರಿತಂತೆ ತಾಲ್ಲೂಕ್ ರೈತಸಂಘದ ನೇತೃತ್ವದಲ್ಲಿ ಹೋಬಳಿ ರೈತಸಂಘ,ಸೃಜನಾ ಸ್ತ್ರೀಶಕ್ತಿ ಮಹಿಳಾ ಒಕ್ಕೂಟ,ಕರ್ನಾಟಕ ರಕ್ಷಣ ವೇದಿಕೆ,ಜಯಕರ್ನಾಟಕ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಗೆ ೧೧೬ ಮೀಟರ್ ಅಂತರದಲ್ಲಿ ಮಧ್ಯದಂಗಡಿಯಿದ್ದು ಸುಪ್ರೀಮ್ ಕೋರ್ಟ್ ಮಾರ್ಗಸೂಚಿಯಂತೆ ಹೆದ್ದಾರಿ ಸಮೀಪದಲ್ಲಿ ಮದ್ಯದಂಗಡಿ ನಡೆಸುವದಕ್ಕೆ ಅವಕಾಶವಿಲ್ಲದಿದ್ದರೂ ಕೂಡ ಅವಕಾಶ ಮಾಡಿರುವುದು ಸರಿಯಲ್ಲ .ಅಲ್ಲದೆ ಮುಜುರಾಯಿ ಇಲಾಖೆಯ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯಕ್ಕೂ ಕೂಡ ಅತಿ ಸಮೀಪವಿರುವುದರಿಂದ ಮುಜುರಾಯಿ ಇಲಾಖೆಯ ಮಾರ್ಗಸೂಚಿಯಂತೆ ದೇವಾಲಯಕ್ಕೆ ಸಮೀಪ ಮದ್ಯದಂಗಡಿ ನಡೆಸುವದಕ್ಕೆ ಅವಕಾಶವಿಲ್ಲ.ಇದಕ್ಕೂ ಮೀರಿ ಸಹಕಾರಿ ಸಂಘದ ನಿಯಮಾನುಸಾರ ಸಹಕಾರಿ ಕಟ್ಟಡದಲ್ಲಿ ಮದ್ಯದಂಗಡಿಗೆ ಅವಕಾಶ ಕಲ್ಪಿಸುವ ಹಾಗಿಲ್ಲ.
ಇಷ್ಟೆಲ್ಲಾ ನೀತಿ ನಿಯಮಗಳಿದ್ದರೂ ಸಹ ಅಬ್ಕಾರಿ ಇಲಾಖೆ ನಿಯಮಬಾಹಿರವಾಗಿ ಮದ್ಯದಂಗಡಿಗೆ ಲೈಸನ್ಸ್ ನೀಡುತ್ತಿದ್ದು ಪುನಃ ಈ ಸಾಲಿಗೇನಾದರೂ ಮತ್ತೆ ನವೀಕರಿಸಿದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಸಿ.ಎಲ್.೨ ಲೈಸನ್ಸ್ ಪ್ರಕಾರ ಸ್ಥಳದಲ್ಲಿ ಕೇವಲ ಮಧ್ಯ ಮಾರಾಟ ಮಾಡಲು ಅವಕಾಶವಿದ್ದು ಇದನ್ನು ಉಲ್ಲಂಘಿಸಿ ಸ್ಥಳದಲ್ಲಿ ಕುಡಿಯಲು ಅವಕಾಶ ಮಾಡಿರುವ್ದನ್ನು ಗಮನಕ್ಕೆ ತಂದರೂ ಇದುವರೆಗೂ ಕ್ರಮಕೈಗೊಳ್ಳದ ಇಲಾಖೆ ಮಧ್ಯದಂಗಡಿ ಮಾಲೀಕರ ಪರವಾಗಿ ವರ್ತಿಸುತ್ತಿದ್ದು ಮದ್ಯದಂಗಡಿಯನ್ನು ಸ್ಥಳಾಂತರಿಸದಿದ್ದರೆ ಪಟ್ಟಣದ ಎಲ್ಲಾ ಸಂಘಸಂಸ್ಥಗಳು ಬಾರ್ ಹಠಾವೋ ಚಳುವಳಿ ಮಾಡಿಯೆ ಸಿದ್ದ ಎಂದು ಎಚ್ಚರಿಸಿದರು.
ರೈತಸಂಘದ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್,ತಾಲ್ಲೂಕ್ ರೈತಸಂಘದ ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲೀಕಣ್ಣ,ಹೋಬಳಿ ರೈತ ಸಂಘದ ಅಧ್ಯಕ್ಷ ಚನ್ನಬಸವಯ್ಯ,ಗ್ರಾಪಂ ಸದಸ್ಯ ಹಾಗೂ ಕರ್ನಾಟಕ ರಕ್ಷಣ ವೇದಿಕೆಯ ಕೋಳಿ ಶ್ರೀನಿವಾಸ್,ಜಯಕರ್ನಾಟಕ ಸಂಘಟನೆಯ ಮೋಹನ್ ಕುಮಾರ್,ಜಯಲಕ್ಷಮ್ಮ, ಹೂವಿನ ರಘು,ಗಂಗಣ್ಣ,ಶಿವಣ್ಣ ಮತ್ತಿತರರಿದ್ದರು.
----------------------------
ಸಹಕಾರ ಸಂಘದ ಕೊಠಡಿಗಳನ್ನು ಬಾರ್ ಅಂಡ್ ರೆಸ್ಟೊರೆಂಟ್ ಗಾಗಿ ಬಾಡಿಗೆ ನೀಡುವುದು ಸಹಕಾರ ಸಂಘದ ತತ್ವಕ್ಕೆ ವಿರುದ್ಧವಾಗಿದ್ದು ಆಡಳಿತ ಮಂಡಳಿಯು ಸದರಿ ಬಾಡಿಗೆದರರಿಂದ ಮಳಿಗೆ ತೆರವು ಮಾಡಿಸದಿದ್ದಲ್ಲಿ ಸೊಸೈಟಿಗೆ ಬೀಗ ಜಡಿಯಲಾಗುವುದು :ಜಯಲಕ್ಷಮ್ಮ, ಸೃಜನ ಮಹಿಳಾ ಒಕ್ಕೂಟದ ಅಧ್ಯಕ್ಷೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ