ಬಳಸಿಕೊಂಡ ಹಣವನ್ನು ಕೂಡಲೇ ಕಟ್ಟಲು ತಾಕೀತು : ಕಾಲಾವಕಾಶಕ್ಕೆ ರೈತನ ಮೊರೆ
-----------------
ತನ್ನ ಖಾತೆಯಲ್ಲಿ ಅಧಿಕಾರಿಗಳ ಅಜಾಗರೂಕತೆಯಿಂದ ಹೆಚ್ಚುವರಿಯಾಗಿ ಬಂದಿರುವ ಹಣದ ಬಗ್ಗೆ ಅರಿಯದ ರೈತ ತನ್ನ ಖಾತೆಯಲ್ಲಿನ ಹಣವನ್ನು ಜಮೀನಿನಲ್ಲಿನ ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕಕ್ಕಾಗಿ ಟಿಸಿ ತರಲು ಬಳಸಿಕೊಂಡಿದ್ದೆ ಆತನಿಗೆ ಉರುಳಾಗಿ ಪರಿಣಮಿಸಿದ್ದು ಹಣ ಹೊಂದಿಸಲು ರೈತ ಪರದಾಡುವಂತಾಗಿದೆ.
ಹೌದು..ರಾಗಿ ಮಾರಿದ್ದ ರೈತನ ಖಾತೆಗೆ ಆತನ ಹಣವೂ ಸೇರಿ ಬೇರೊಬ್ಬರ ಹಣವೂ ಬಂದಿದ್ದು ಹೆಚ್ಚುವರಿಯಾಗಿ ಖಾತೆಗೆ ಜಮೆಯಾಗಿರುವ ಹಣವನ್ನು ಈ ಕೂಡಲೇ ಕಟ್ಟಬೇಕೆಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ರೈತನಿಗೆ ತಾಕೀತು ಮಾಡಿರುವುದಲ್ಲದೆ ರೈತನ ಬ್ಯಾಂಕ್ ಖಾತೆಯನ್ನು ವಹಿವಾಟು ನಡೆಸದಂತೆ ತಡೆಹಿಡಿದಿರುವುದು ಸಮಸ್ಯೆಗೆ ಕಾರಣವಾಗಿದೆ.
ನಡೆದಿದ್ದೇನು: ದೊಡ್ಡಬಿದರೆ ಗ್ರಾಮದ ದೇವರಾಜಪ್ಪ ಎಂಬಾತ ಹುಳಿಯಾರಿನ ರಾಗಿ ಖರೀದಿ ಕೇಂದ್ರದಲ್ಲಿ ೮ ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದು ಈ ಬಾಬ್ತು ಆತನ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗೆ ಮಾರ್ಚ್ ೨೨ ರಂದು ೧೬೮೦೦ ಹಣ ಜಮೆಯಾಗಿದೆ.ನಂತರ ಏಪ್ರಿಲ್ ೨೯ ರಂದು ಅಧಿಕಾರಿಗಳ ಅಜಾಗರೂಕತೆಯಿಂದಾಗಿ ಪುನಃ ೮ ಕ್ವಿಂಟಾಲ್ ರಾಗಿಯ ಹಣವಾಗಿ ೧೬೮೦೦ ಹಣ ಜಮೆಯಾಗಿದೆ.
ಇತ್ತೀಚೆಗಷ್ಟೆ ದೇವರಾಜಪ್ಪ ತನ್ನ ಜಮೀನಿಗೆ ಕಲ್ಲು ಕಂಬ ಹಾಕಲು ಹಾಗೂ ವಿದ್ಯುಚ್ಛಕ್ತಿಗಾಗಿ ಟಿಸಿ ತರಲು ಹಣದ ಅವಶ್ಯಕತೆ ಕಂಡು ಬಂದು ಹಿನ್ನೆಲೆಯಲ್ಲಿ ತನ್ನ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಡ್ರಾ ಮಾಡಿಕೊಂಡು ಬಳಸಿಕೊಂಡಿದ್ದಾನೆ.
ಪುನಃ ಹಣ ಬೇಕಾದ ಹಿನ್ನಲೆಯಲ್ಲಿ ಡ್ರಾ ಮಾಡಲು ಬ್ಯಾಂಕಿಗೆ ಹೋದಾಗ ಆತನ ಬ್ಯಾಂಕ್ ಖಾತೆ ಸ್ಥಗಿತಗೊಂಡಿರುವುದಾಗಿ ಹೇಳಿದ ಬ್ಯಾಂಕ್ ವ್ಯವಸ್ಥಾಪಕರು ಆತನನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಅದೇ ಸಮಯಕ್ಕೆ ಆಹಾರ ಮತ್ತು ನಾಗರೀಕ ಇಲಾಖೆಯ ಖರೀದಿ ಅಧಿಕಾರಿಗಳು ರೈತ ದೇವರಾಜಪ್ಪನಿಗೆ ಫೋನ್ ಮಾಡಿ ಎರಡು ಬಾರಿ ನಿಮ್ಮ ಖಾತೆಗೆ ಹಣ ಜಮೆಯಾಗಿದ್ದು ಸರ್ಕಾರದ ಹಣ ಬಳಸಿಕೊಂಡಿರುವ ಹಿನ್ನಲೆಯಲ್ಲಿ ನೀವೀಗ ಪೂರಾ ಹಣವನ್ನು ತತ್ ಕ್ಷಣವೇ ಜಮೆ ಮಾಡಬೇಕೆಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಏನೊಂದು ಅರಿಯದ ಮುಗ್ಧ ದೇವರಾಜಪ್ಪ ಬ್ಯಾಂಕ್ ಹಾಗೂ ಎಪಿಎಂಸಿಗೆ ಎಡೆತಾಕಿದಾಗ ಈತನ ಖಾತೆಗೆ ಎರಡು ಬಾರಿ ರಾಗಿಯ ಹಣವನ್ನು ಜಮೆಮಾಡಿರುವುದಾಗಿ ತಿಳಿಸಿದ್ದಾರೆ.ಕುಣಿಗಲ್ ನ ದೇವಿರಮ್ಮ ಎಂಬುವವರ ಹಣವನ್ನು ಸಹ ಈತನ ಖಾತೆಗೆ ಜಮೆ ಮಾಡಿರುವುದಾಗಿ ಖರೀದಿ ಅಧಿಕಾರಿಗಳಿಂದ ತಿಳಿದುಬಂದಿದೆ.
ಹಣಹೊಂದಿಸುವ ಚಿಂತೆಗೆ ಬಿದ್ದ ದೇವರಾಜಪ್ಪನಿಗೆ ಖರೀದಿ ಅಧಿಕಾರಿಗಳು ಮನೆಬಾಗಿಲಿಗೆ ಬಂದಿದ್ದು ಇನ್ನಷ್ಟು ದಿಗಿಲು ಹುಟ್ಟಿಸಿದೆ.ಹಣ ಜಮೆಮಾಡದಿದ್ದಲ್ಲಿ ಸಮಸ್ಯೆಯುಂಟಾಗುತ್ತದೆಂದು ಭಯಭೀತನಾದ ದೇವರಾಜಪ್ಪ ಹಣ ಹೊಂದಿಸಲಾಗದೆ ಕಾಲಾವಕಾಶ ಕೋರಿದ್ದಾನೆ.ಹೇಗಾದರೂ ಸರಿ ಸಾಲಾಮಾಡಿಯಾದರೂ ಹಣ ಕಟ್ಟುವುದಾಗಿ ಹೇಳಿದ್ದಾನೆ.ಈ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿಪತ್ರದ ಮೂಲಕ ಸಮಯ ಕೊಡಲು ವಿನಂತಿಸಿದರೂ ಸಹ ಒಪ್ಪದ ಅಧಿಕಾರಿಗಳ ನಿಲುವಿನಿಂದ ರೈತಸಂಘದ ಮೊರೆಹೊಕ್ಕಿದ್ದಾನೆ.
ಸಧ್ಯ ರೈತನ ಖಾತೆಗೆ ಅಧಿಕಾರಿಗಳ ಬೇಜವಬ್ದಾರಿತನದಿಂದ ಹಣ ಹೆಚ್ಚುವರಿಯಾಗಿ ಜಮೆಯಾಗಿದ್ದು ಈ ಬಗ್ಗೆ ಅಧಿಕಾರಿಗಳೆ ಹೊಣೆಹೊರಬೇಕೆಂದು ರೈತಸಂಘದವರ ನಿಲುವಾಗಿದ್ದು ಕಟ್ಟಲು ದುಡ್ಡಿಲ್ಲದ ರೈತನ ಹಣ ಮನ್ನಾವಾಗುವುದೋ ಅಥವಾ ಕಾಲವಕಾಶ ನೀಡುವರೋ ಕಾದು ನೋಡಬೇಕಿದೆ.
---------------------------------------
ನಿಮ್ಮ ಹಣ ನನಗೆ ಬೇಡ,ಸಧ್ಯ ಬರಗಾಲವಿದ್ದು ನಿತ್ಯದ ದಿನಸಿ ತರುವುದೇ ದುಸ್ತರವಾಗಿದೆ.ನೀವು ಮೂರ್ನಾಲ್ಕು ತಿಂಗಳು ಕಾಲಾವಕಾಶ ನೀಡಿದಲ್ಲಿ ಕೊಬ್ಬರಿ ಸುಲಿಸಿ ಹಣ ಪಾವತಿಸುವೆ : ರೈತ ದೇವರಾಜಪ್ಪ.
-------------------------------------
ಇಲಾಖೆಯ ಅಧಿಕಾರಿಗಳ ಬೇಜವಬ್ದಾರಿತನದಿಂದ ಸಮಸ್ಯೆ ಉಂಟಾಗಿದ್ದು ರೈತನಿಗೆ ಒತ್ತಡ ತಂದಲ್ಲಿ ಪರಿಸ್ಥಿತಿ ನೆಟ್ಟಗಿರುವುದಿಲ್ಲ.ಆಹಾರ ಮತ್ತು ನಾಗರೀಕ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರು ಬರಗಾಲ ಮುಗಿಯುವವರೆಗೂ ರೈತನಿಗೆ ಕಾಲಾವಕಾಶ ಕೊಡಬೇಕು ಹಾಗೂ ಸ್ಥಗಿತಗೊಂಡಿರುವ ಬ್ಯಾಂಕ್ ಖಾತೆಯನ್ನು ಚಾಲನೆ ನೀಡಬೇಕು.ಇಲ್ಲದಿದ್ದಲ್ಲಿ ಹೋರಾಟ ಮಾಡುವುದು ಅನಿವಾರ್ಯ.: ಕೆಂಕೆರೆ ಸತೀಶ್- ರೈತ ಸಂಘದ ರಾಜ್ಯಕಾರ್ಯದರ್ಶಿ
-----------------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ