ಅವರೆಕಾಯಿ,ಗೆಣಸು,ಹೂವಿನ ವ್ಯಾಪಾರ ಅಷ್ಟಕಷ್ಟೆ
-------------------------
ಹುಳಿಯಾರು : ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬದ ಸ್ವಾಗತಿಸಲು ಜನತೆ ಸಿದ್ಧರಾಗಿದ್ದು ಪಟ್ಟಣದ ಬಸ್ ನಿಲ್ದಾಣ ಹಾಗೂ ಸಂತೆ ಬೀದಿಯಲ್ಲಿ ಹೂವು ಹಣ್ಣಿನ ವ್ಯಾಪಾರಿಗಳ ಭರಾಟೆ ಕಂಡುಬಂತು.ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಅವರೆಕಾಯಿ, ಕಬ್ಬು, ಗೆಣಸು, ಕಡಲೆಕಾಯಿ, ಹೂವು,ಹಣ್ಣುಗಳ ರಾಶಿರಾಶಿ ಬಂದಿದ್ದು ಕಣ್ಸೆಳೆಯುತ್ತಿದೆ. ಕಬ್ಬು,ಅವರೆ ಕೊಳ್ಳುವವರ ಸಂಖ್ಯೆ ಜಾಸ್ತಿ ಇದ್ದರೂ ಸಹ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅರ್ಧಕರ್ಧ ಇದ್ದು ವ್ಯಾಪಾರ ಅಷ್ಟಕ್ಕಷ್ಟೆ ಎನ್ನುವ ಸ್ಥಿತಿ ಕಂಡುಬಂದಿದೆ.
ಬೆಲೆ ಏರಿಕೆ ನಡುವೆ ಸಹ ಗ್ರಾಹಕರು ಖರೀದಿ ನಡೆಸಿದ್ದು ಸಂಕ್ರಾಂತಿಗಾಗಿ ಹಿಂದಿನ ದಿನವೇ ರಾಶಿ ರಾಶಿ ಕಬ್ಬು ಬಂದಿದೆ. ಕಬ್ಬು ಪ್ರತಿ ಜಲ್ಲೆಗೆ 30-40 ರೂ.ವರೆಗಿದ್ದರೆ,ಗೆಣಸಿಗೆ ಕೆಜಿ 30 ರೂ ,ಅವರೆಕಾಯಿ ಕೆಜಿಗೆ 35-40 ರೂ ನಂತೆ ಮಾರಾಟ ನಡೆಯಿತು
ಕಡಲೆಕಾಯಿ ಒಂದು ಸೇರಿಗೆ 20 ರೂ.ನಂತೆ ಮಾರಾಟವಾದರೆ ಎಳ್ಳು-ಬೆಲ್ಲ ಹಾಗೂ ಸಕ್ಕರೆ ಅಚ್ಚು ಕೆ.ಜಿ.ಗೆ 200 ರೂ.ವರೆಗೆ ಮಾರಾಟವಾಗುತ್ತಿತ್ತು.
ಹೂವು ದುಬಾರಿ:ಎಲ್ಲ ಬಗೆಯ ಹೂವಿನ ಬೆಲೆಗಳೂ ಗಗನಕ್ಕೇರಿವೆ.ಚಳಿಗಾಲವಾದ್ದರಿಂದ ಉತ್ತಮ ಹೂವು ಬರುವುದು ಕಡಿಮೆ.ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಶಾವಂತಿಗೆ ಮಾರಿಗೆ 100 ರೂ, ಕಾಕಡ ಮಾರಿಗೆ 40ರೂ,ಚೆಂಡುಹೂವು 25 ರೂ.ನಂತೆ ಮಾರಾಟವಾಗುತ್ತಿದೆ.ಕನಕಾಂಬರ 50 ಇದ್ದು ಬೆಲೆ ದುಬಾರಿ ಎನ್ನುವಂತಾಗಿದೆ.
ಹಣ್ಣಿನ ದರ ಸಹ ಹೆಚ್ಚಾಗಿದ್ದು ಪುಟ್ಟಬಾಳೆ ಕೆಜಿಗೆ 60 ಹಾಗೂ ಪಚ್ಚಬಾಳೆ ಕೆಜಿಗೆ 30 ರೂನಂತೆ ಮಾರಾಟಮಾಡುತ್ತಿದ್ದಾರೆ. ಕಿತ್ತಳೆಹಣ್ಣು ಕೆಜಿಗೆ 50-60 ರೂಯಿದ್ದರೆ,ದಾಳಿಂಬೆ 240 ರೂ.ಬೆಲೆಯಿದೆ. ಸೇಬು 120 ರಿಂದ 140 ರೂಪಾಯಿ,ದ್ರಾಕ್ಷಿ 200ರೂಪಾಯಿ,ಸಪೋಟ 50 ರೂಪಾಯಿ ಬೆಲೆಯಿದ್ದು ವ್ಯಾಪಾರಿಗಳು ಗ್ರಾಹಕರನ್ನು ಎದುರು ನೋಡಿವ ಸ್ಥಿತಿಯಿದೆ.
ತರಕಾರಿ ಬೆಲೆ ಅಷ್ಟಾಗಿ ಏರಿಕೆಯಾಗಿಲ್ಲ.ಆದರೆ ಎಳ್ಳುಬೆಲ್ಲ ಹಂಚಲು ಖರೀದಿಸುತ್ತಿದ್ದ ಪ್ಲಾಸ್ಟಿಕ್ ಡಬ್ಬಿಗಳ ಅಂಗಡಿಯಲ್ಲೂ ಸಹ ವ್ಯಾಪಾರ ಇಳಿಮುಖವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ವ್ಯಾಪಾರ ಇಳಿಮುಖವಾಗಿದ್ದು ದರ ಏರಿಕೆಗಿಂತ ಹೆಚ್ಚಾಗಿ ಕರೋನ ಹೊಡೆತ ಕಾರಣ ಎನ್ನಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ