ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರ ಕೊರತೆಯಿದ್ದು ಕಳೆದ ಹದಿನೈದು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನು ಕೂಡಾ ಸರ್ಕಾರದ ಆದೇಶದಂತೆ ರದ್ದುಮಾಡಿರುವುದರಿಂದ ಪಾಠಪ್ರವಚನಕ್ಕೆ ತೊಂದರೆಯಾಗಿದ್ದು ಈ ಕೂಡಲೇ ಉಪನ್ಯಾಸಕರನ್ನು ನೇಮಿಸುವಂತೆ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ನಾಡಕಛೇರಿಯ ಉಪತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಉಪನ್ಯಾಸಕರನ್ನು ನೇಮಿಸುವಂತೆ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ನಾಡಕಛೇರಿಯ ಉಪತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. |
ಮನವಿ ಸಲ್ಲಿಸಿ ಮಾತನಾಡಿದ ಎಬಿವಿಪಿ ನಗರಕಾರ್ಯದರ್ಶಿ ನವೀನ್ ಕಾಲೇಜು ಪ್ರಾರಂಭವಾಗಿ ಈಗಾಗಲೇ ಒಂದೂವರೆ ತಿಂಗಳಾಗಿದ್ದು ಉಪಸ್ಯಾಸಕರ ಕೊರತೆಯಿಂದ ಕೆಲವು ತರಗತಿಗಳು ನಡೆಯುತ್ತಿರಲಿಲ್ಲ.ಈಗ್ಗೆ ಹದಿನೈದು ದಿನಗಳ ಹಿಂದೆಯಷ್ಟೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಸಮಸ್ಯೆ ಸರಿಯಾಯಿತು ಎನ್ನುವಷ್ಟರಲ್ಲೇ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದರಿಂದ ಇಂದಿನಿಂದ ಅವರುಗಳು ಕೂಡ ತರಗತಿ ತೆಗೆದುಕೊಳ್ಳುತ್ತಿಲ್ಲ.ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸರ್ಕಾರಿ ಕಾಲೇಜುಗಳೇ ಆಧಾರವಾಗಿದ್ದು ಇಲ್ಲಿ ಶಿಕ್ಷಕರ ಸಮಸ್ಯೆ ಎದುರಾದರೆ ಗುಣಮಟ್ಟದ ಶಿಕ್ಷಣ ಪಡೆಯಲು ವಿಫಲರಾಗಿ ಶೈಕ್ಷಣಿಕವಾಗಿ ಸಮಸ್ಯೆಯುಂಟಾಗುತ್ತದೆ.ಆದ್ದರಿಂದ ಸರ್ಕಾರ ತಕ್ಷಣವೇ ಪದವಿ ಕಾಲೇಜುಗಳಲ್ಲಿನ ಖಾಲಿ ಹುದ್ದೆಯನ್ನು ಭರ್ತಿ ಮಾಡುವ ಮೂಲಕ ನಮ್ಮೂರ ಕಾಲೇಜಿಗೆ ಅಗತ್ಯವಿರುವ ಉಪನ್ಯಾಸಕರ ನೇಮಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಅಲ್ಲದೆ ಈ ಹಿಂದೆ ೧೦ ಗಂಟೆಗೆ ನಡೆಯುತ್ತಿದ್ದ ತರಗತಿಗಳನ್ನು ೮ ಗಂಟೆಗೆ ಎಂದು ಮಾಡಿ ಇಂದಿನಿಂದ ಮತ್ತೆ ೯ ಗಂಟೆಯಿಂದ ಶುರುಮಾಡಲು ತಿಳಿಸಿದೆ.ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆ ಇರುವುದರಿಂದ ಬದಲಾದ ಸಮಯಕ್ಕೂ ಕೂಡ ಆಗಮಿಸಲು ತೊಂದರೆಯಾಗುತ್ತಿದೆ.ಪ್ರಯುಕ್ತ ಹಿಂದಿನಂತೆ ೧೦ ಗಂಟೆಗೆ ತರಗತಿ ಪ್ರಾರಂಭ ಮಾಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಉಪತಹಸೀಲ್ದಾರ್ ಸತ್ಯನಾರಾಯಣ ಸಮಸ್ಯೆಯನ್ನು ಸರ್ಕಾರಕ್ಕೆ ಕಳುಹಿಸಿಸಿಕೊಡುವುದಾಗಿ ಭರವಸೆಯಿತ್ತರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪ್ರದೀಪ್,ಕುಮಾರ್,ನಾಗರಾಜು,ನಾಗೇಂದ್ರ, ಮಂಜುನಾಥ್,ಕಿರಣ್, ಸೋಮು,ಯೋಗಿ,ಪ್ರಸನ್ನ, ಸಿದ್ದು ,ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ