ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು:ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ
ಹುಳಿಯಾರು: ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ ಅವರು ಸೋಮವಾರ ಬೆಳಗ್ಗೆ ಹುಳಿಯಾರಿಗೆ ಆಗಮಿಸಿದ್ದು ಅವರನ್ನು ಕಲ್ಪತರು ಆಗ್ರೋ ಕೇಂದ್ರದ ಬಳಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಚಿಕ್ಕನಾಯಕನಹಳ್ಳಿಯಿಂದ ಬೆಳಗುಲಿ,ಗೂಬೇಹಳ್ಳಿ ಮಾರ್ಗವಾಗಿ ಹುಳಿಯಾರಿಗೆ ಆಗಮಿಸಿದ ಅವರೊಂದಿಗೆ ಪಟ್ಟಣದೆಲ್ಲಡೆ ರೈತ ಸಂಘದ ಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಯವರು ನಡಿಗೆಯ ಹೆಜ್ಜೆ ಹಾಕಿದರು.
ತಾವು ಆರಂಭಿಸಿರುವ ವಾಕ್ ಆಫ್ ಜಾಯ್ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಡಿಗೆಯ ಮುಖಾಂತರವೇ ತಾವು ದೇಶ ವಿದೇಶ ಸಂಚರಿಸಿದ್ದು , ನಡಿಗೆಯಿಂದಾಗುವ ಲಾಭ ಹಾಗೂ ಸುಸ್ಥಿರಕೃಷಿ,ಸಿರಿಧಾನ್ಯದ ಬಗ್ಗೆ ತಮ್ಮ ಸಂಚಾರ ಸಮಯದಲ್ಲಿ ಕಂಡುಕೊಂಡ ಅನುಭವದ ಬಗ್ಗೆ ವಿವರಿಸಿದರು.
ಆಧುನಿಕ ಸಂಪರ್ಕ ಸಾಧನಗಳಲ್ಲಿ ಇತ್ತೀಚೆಗೆ ಮೊಬೈಲ್ ಎಲ್ಲರಿಗೂ ಸರ್ವಸ್ವವಾಗಿದ್ದು ಅವುಗಳಿಂದ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಿಲ್ಲ.ನಾವು ವೇಗವಾದ ಬೆಳವಣಿಗೆಯಿಂದಲೇ ಹಾಳಾಗುತ್ತಿದ್ದು ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.
ನಡಿಗೆ ನಮಗೆ ಸಮಾಧಾನ,ಸಾವಧಾನ ಕಲಿಸುತ್ತದೆ, ಸಂಬಂಧ ಬೆಳೆಸುತ್ತದೆ.ಸಂಚಾರ ಸಂದರ್ಭದಲ್ಲಿ ನಾನಾ ರೀತಿಯ ಜನಗಳೊಂದಿಗೆ ಬೇರೆಯುವುದರ ಮೂಲಕ ದೇಶದ ಸಮಗ್ರ ವೈವಿಧ್ಯತೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಭಾರತದಲ್ಲಿ 6000 ಕಿಲೋಮೀಟರ್ ದೂರ ಕ್ರಮಿಸುವ ಉದ್ದೇಶ ಹೊಂದಿರುವ ಅವರು ತಾವೀಗ ಪ್ರಾರಂಭಿಸಿರುವ ಮೊದಲನೇ ಹಂತದ ನಡಿಗೆ ಇದೇ ಡಿಸಂಬರ್ ಗೆ ಮುಗಿಯಲಿದ್ದು ಜನವರಿಯಿಂದ 2018ರಿಂದ ಎರಡನೇ ಹಂತದ ನಡಿಗೆಯನ್ನು ಪಶ್ಚಿಮ ಬಂಗಾಳದಿಂದ ಪ್ರಾರಂಭಿಸಿ ಜಾರ್ಖಂಡ್,ಬಿಹಾರ,ಉತ್ತರಪ್ರದೇಶ,ಹರಿಯಾಣದ ಮುಖಾಂತರ ಪಂಜಾಬಿನ ಅಮೃತಸರದಲ್ಲಿ ಭಾರತ ದೇಶದ ಸಂಚಾರ ಮುಗಿಸುವುದಾಗಿ ಹೇಳಿದರು
ಹುಳಿಯಾರಿನ ಜಸ್ಟ್ ರಿಲ್ಯಾಕ್ಸ್ ಕಾಫಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ ಅವರು ತೆಂಗಿನಿಂದ ನೀರಾ ಇಳಿಸುವ ರೀತಿಯನ್ನು ತೋಟಕ್ಕೆ ಹೋಗಿ ನೋಡಿದ್ದಲ್ಲದೆ ಗಾಂಧಿ ಪೇಟೆಯಲ್ಲಿರುವ ಎಲ್.ಆರ್.ಚಂದ್ರಶೇಖರ್ ಅವರ ನಾರಿನ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ನಾರು ತಯಾರಿಸುವ ವಿಧಾನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿಯ ನೆರಳು ಸಂಘಟನೆಯ ಗುಂಡ ಮಹಮ್ಮದ್ ಹುಸೇನ್ ,ಹುಳಿಯಾರಿನ ಕಲ್ಪತರು ಅಗ್ರೋ ಕೇಂದ್ರದ ಸತೀಶ್,ಪ್ರೋ/ ಬಿಳಿಗೆರೆ ಕೃಷ್ಣಮೂರ್ತಿ, ರಾಜು ಬಡಗಿ,ನಾಗರಾಜ ಪೂಜಾರಿ,ತೋಟದ ಮನೆ ಸೋಮಶೇಖರ್, ರಂಗನಾಥ್ ಪ್ರಸಾದ್, ಇಮ್ರಾಜ್,ರಂಗನಕೆರೆ ವಿರೂಪಾಕ್ಷ,ರೈತ ಸಂಘದ ಪಾತ್ರೆ ಸತೀಶ್,ಕಂಪನಹಳ್ಳಿ ಪ್ರಕಾಶ್,ಮಂಜಣ್ಣ,ಯೋಗಣ್ಣ,ಮರುಳಪ್ಪ,ಗಂಗಣ್ಣ ಸೇರಿದಂತೆ ಸಂಘಸಂಸ್ಥೆಗಳ ಸದಸ್ಯರು ಇದ್ದರು.
--------------------------
ನಗುವಿಗೆ ಮಾತ್ರ ಎಲ್ಲರನ್ನೂ ಒಂದು ಮಾಡುವ ಶಕ್ತಿ ಇದ್ದು ಮುಂದಿನ ಪೀಳಿಗೆಗೆ ಅದನ್ನು ಪ್ರಚಾರ ಪಡಿಸುವ ಉದ್ದೇಶದಿಂದ ತಾವು ವಾಕ್ ಆಫ್ ಜಾಯ್ ಪ್ರವಾಸ ಕೈಗೊಂಡಿದ್ದು ಇದೇ ಜುಲೈ 15ರಿಂದ ಕೇರಳದ ಕನ್ಯಾಕುಮಾರಿ ಮೂಲಕ ತಾವು ಭಾರತ ಪ್ರವಾಸವನ್ನು ಕೈಗೊಂಡಿರುವೆ..ಸದ್ಯ 900 ಕಿಲೋಮೀಟರ್ ದೂರ ಕ್ರಮಿಸಿದ್ದು ಇಲ್ಲಿಂದ ಸಾಣೇಹಳ್ಳಿ, ಕಡೂರು,ತರೀಕೆರೆ,ಶಿವಮೊಗ್ಗ,ಶಿರಸಿ,ಕಾರವಾರದ ಮೂಲಕ ಗೋವಾ,ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿರುವೆ:ಡೇವಿಡ್ ಅಥೋವಾ
--------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ