ಕೊಬ್ಬರಿಗೆ ಬಂಪರ್ ಬೆಲೆ: 11011 ರೂಪಾಯಿಗೆ ನಿಂತ ಹರಾಜು
ಹುಳಿಯಾರು:ಕಳೆದ ಕೆಲವು ತಿಂಗಳುಗಳಿಂದ ಇಳಿಮುಖವಾಗಿದ್ದ ಕೊಬ್ಬರಿ ಬೆಲೆ ಇದೀಗ ದಿಢೀರ್ ಏರಿಕೆ ಕಂಡು ಮಳೆ ಬೆಳೆ ಇಲ್ಲದೆ ಕಂಗೆಟ್ಟಿದ್ದ ರೈತರಿಗೆ ಹಬ್ಬದ ಸಾಲಿನಲ್ಲಿ ಹರುಷ ಮೂಡಿಸಲು ಕಾರಣವಾಗಿದೆ.
ಕಳೆದ ಒಂದು ವರ್ಷದಿಂದಲೂ ಏರಿಕೆ ಕಾಣದ ಕೊಬ್ಬರಿಗೆ , ಬೆಂಬಲ ಬೆಲೆ ನೀಡಿ ಖರೀದಿಸಿ ಎಂದು ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಲ್ಲಿ ಸುಮಾರು ನೂರ ಎಂಭತ್ತು ದಿನಗಳ ಕಾಲ ಪ್ರತಿಭಟನೆ ನಡೆದಿತ್ತು.ಕೊಬ್ಬರಿ ಬೆಲೆ ಏರಿಕೆಗಾಗಿ ಸಾಕಷ್ಟು ಹೋರಾಟ ನಡೆದು, ಬೆಲೆ ಏರಿಕೆ ಆಗುವುದೇ ಇಲ್ಲ ಎಂದು ದಿಗಿಲುಕೊಂಡಿದ್ದ ರೈತರಿಗೆ ಇದೀಗ ದಿಢೀರ್ ಬೆಲೆ ಹೆಚ್ಚಳ ಸಂತಸಕ್ಕೆ ಕಾರಣವಾಗಿದೆ.
ದಾಸ್ತಾನು ಕೊರತೆ ,ಬೇಡಿಕೆಯಲ್ಲಿ ಹೆಚ್ಚಳದ ಹಿನ್ನೆಲೆಯೇ ಬೆಲೆ ಏರಿಕೆಯಾಗಲು ಕಾರಣ ಎನ್ನುತ್ತಾರೆ ಹುಳಿಯಾರಿನ ಕೊಬ್ಬರಿ ರವಾನೆದಾರ ಸಪ್ತಗಿರಿ ಎಂಟರ್ ಪ್ರೈಸಸ್ ನ ಎಲ್.ಆರ್.ಬಾಲಾಜಿ.ಕಲ್ಪತರು ನಾಡೆಂದು ಹೆಸರಾಗಿರುವ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕೊಬ್ಬರಿ ಆವಕ ಇಳಿಮುಖವಾಗುತ್ತಿದ್ದು ಇದೇ ಸಮಯದಲ್ಲಿ ತಮಿಳುನಾಡಿನಲ್ಲಿ ಕೊಬ್ಬರಿ ಎಣ್ಣೆಗೆ ಧಾರಣೆ ಹೆಚ್ಚಳವಾದರೆ ಉತ್ತರ ಭಾರತದ ಕಡೆ ಕೊಬ್ಬರಿಗೆ ಬಲು ಬೇಡಿಕೆ ಕಂಡು ಬಂದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಏಳು ಸಾವಿರ-ಎಂಟು ಸಾವಿರದ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ ಕಳೆದ ಗುರುವಾರದ ಹರಾಜಿನಲ್ಲಿ 9500 ರೂಗೆ ಮಾರಾಟವಾಗಿದ್ದರೆ ಇಂದು ಗುರುವಾರ ಸಂಜೆ ನಡೆದ ಹರಾಜಿನಲ್ಲಿ 1511ರೂ ಏರಿಕೆ ಕಂಡು 11011ರೂಪಾಯಿಗೆ ಹರಾಜು ನಿಂತಿದೆ. ತಿಪಟೂರು ಮಾರುಕಟ್ಟೆಯಲ್ಲಿ ನಿನ್ನೆಯ ಬುಧವಾರದ ಹರಾಜಿನಲ್ಲಿ 10669ರೂಗೆ ಮಾರಾಟವಾಗಿತ್ತು .ಅರಸೀಕೆರೆ ಮಾರುಕಟ್ಟೆಯಲ್ಲೂ ಕೂಡ ದರ ಏರಿಕೆ ಕಂಡಿದ್ದು ಮುಂದಿನ ದಿನಗಳಲ್ಲಿ ಕೊಬ್ಬರಿ ದರ ಮತ್ತಷ್ಟು ಏರಿಕೆಯಾದರೂ ಅಚ್ಚರಿ ಪಡಬೇಕಿಲ್ಲ.
---------------------
ಶ್ರಾವಣ ಮಾಸ, ಗಣೇಶ ಹಬ್ಬ, ದಸರಾ ದೀಪಾವಳಿಯಲ್ಲಿ ಉತ್ತರ ಪ್ರದೇಶದ ರಾಜ್ಯಗಳಲ್ಲಿ ಸಿಹಿ ತಿನಿಸುಗಳಿಗೆ ತಿಪಟೂರಿನ ಕೊಬ್ಬರಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.ಆವಕ ಇಳಿಮುಖವಾದ ಸಂದರ್ಭದಲ್ಲೇ ಹೆಚ್ಚಿನ ಬೇಡಿಕೆ ಕಂಡು ಬಂದಿರುವುದರಿಂದ ಕೊಬ್ಬರಿ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿದೆ:ಸತೀಶ್,ಬಸವೇಶ್ವರ ಟ್ರೇಡರ್ಸ್ ಮಾಲಿಕ
-------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ