ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆ ಯಾವಾಗ ಮತ್ತು ಎಲ್ಲಿಂದ ಪ್ರಾರಂಭವಾಯಿತು ಎಂದು ನಿಮಗೆ ತಿಳಿದಿದೆಯೇ? ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಮಾತ್ರ ಏಕೆ ಆಚರಿಸಲಾಗುತ್ತದೆ..
ಮಹಿಳೆಯು ಸಮಾಜದ ಶಕ್ತಿ . ಕುಟುಂಬದ ಕಣ್ಣು. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದ್ದಾಳೆ. ಹಿಂದಿನ ಕಾಲದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮಹಿಳೆ ತಾನು ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಗಡಿ ಕಾಯುವುದ್ರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶಕ್ತಿ, ತಾಳ್ಮೆ, ಉತ್ಸಾಹ, ಧೈರ್ಯ ಮಹಿಳೆಗಿದೆ. ಪುರುಷರ ಸಮಾನವಾಗಿ ನಿಂತಿರುವ ಮಹಿಳೆಯರು ಅನೇಕ ಉನ್ನತ ಹುದ್ದೆಗಳನ್ನು ಸಂಭಾಳಿಸುತ್ತಿದ್ದಾರೆ.
ಮಹಿಳೆಯ ಹೋರಾಟ ಇಂದು-ನಿನ್ನೆಯದಲ್ಲ. ಸದಾ ತನ್ನ ಹಕ್ಕಿಗಾಗಿ ಮಹಿಳೆ ಕಾದಾಡಿದ್ದಾಳೆ. ಪ್ರಪಂಚ ಇಷ್ಟು ಮುಂದುವರೆದಿದ್ದರೂ ಮಹಿಳೆಗೆ ಸಿಗಬೇಕಾದ ಸ್ಥಾನ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ. ಪ್ರತಿ ವರ್ಷ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಇಂದು ಅದರ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ.
ನಿರಂತರವಾಗಿ ತುಳಿತಕ್ಕೊಳಗಾಗ್ತಿರುವ, ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗ್ತಿರುವ ಅನೇಕ ಮಹಿಳೆಯರು ನಮ್ಮಲ್ಲಿದ್ದಾರೆ. ಅವರಿಗೆ ಧೈರ್ಯ ನೀಡಿ, ಮಹಿಳೆಗೆ ತನ್ನ ಹಕ್ಕಿನ ಪರಿಚಯ ಮಾಡಿಸಿ, ಆಕೆಯನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ, ಆಕೆಯ ಜೀವನವನ್ನು ಸುಂದರಗೊಳಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ದಿನ (International Women's Day)ವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ವಿಶ್ವದ ಎಲ್ಲ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಆದರೆ ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆ ಯಾವಾಗ ಮತ್ತು ಎಲ್ಲಿಂದ ಪ್ರಾರಂಭವಾಯಿತು ಎಂದು ನಿಮಗೆ ತಿಳಿದಿದೆಯೇ? ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಮಾತ್ರ ಏಕೆ ಆಚರಿಸಲಾಗುತ್ತದೆ..?
ಮಹಿಳಾ ದಿನಾಚರಣೆ ಇತಿಹಾಸ : 1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಪಾಲ್ಗೊಂಡಿದ್ದರು. ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಮತ್ತು ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕ ಮಹಿಳೆಯರು ಒತ್ತಾಯಿಸಿದ್ದರು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಮಹಿಳೆಯರ ಧ್ವನಿ ಅಂದಿನ ಸರ್ಕಾರದ ಕಿವಿಗೆ ಬಿದ್ದಿತ್ತು. ನಂತರ 1909 ರಲ್ಲಿ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ ಮಹಿಳಾ ದಿನವನ್ನು ಘೋಷಿಸಿತು.
*ಭಾರತದಲ್ಲಿ ಮಹಿಳೆಯರ ರಕ್ಷಣೆ*
ನಮ್ಮ ಭವ್ಯ ಭಾರತದ ಸಂವಿಧಾನದಲ್ಲಿಯೂ ಮಹಿಳೆಯರ ರಕ್ಷಣೆಗಾಗಿ ಹಲವಾರು ಉಪಬಂಧಗಳನ್ನು ಕಲ್ಪಿಸಲಾಗಿದೆ...
ಅವುಗಳೆಂದರೆ.
ವಿಧಿ 14 ರ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು,ವಿಧಿ 15 ರ ಪ್ರಕಾರ ಧರ್ಮ ಜಾತಿ ಲಿಂಗ ಜನ್ಮಸ್ಥಳ ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡುವ ಹಾಗಿಲ್ಲ.
ವಿಧಿ 16 ರ ಪ್ರಕಾರ ಸಾರ್ವಜನಿಕ ಹುದ್ದೆಗಳನ್ನು ಹೊಂದಲು ತಾರತಮ್ಯ ಮಾಡುವ ಹಾಗಿಲ್ಲ, ವಿಧಿ 39(ಅ) ಪ್ರಕಾರ ಸ್ತ್ರೀ ಅಥವಾ ಪುರುಷರೆಂಬ ಬೇಧ ಭಾವವಿಲ್ಲದೇ ಜೀವನಕ್ಕೆ ಅವಶ್ಯಕವಾದ ಸಾಧನಗಳನ್ನು ಒದಗಿಸಲು ನೀತಿ ಜಾರಿ,1961 ರ ಪ್ರಸೂತಿ ಸೌಲಭ್ಯ ಕಾಯ್ದೆ ಜಾರಿ,1955 ರ ಹಿಂದೂ ವಿವಾಹ ಅಧಿನಿಯಮದಲ್ಲಿ ವಿಚ್ಛೇದನದ ಪರಿಕಲ್ಪನೆ ಜಾರಿ, 1971 ರಲ್ಲಿ ಸಮಾನ ವೇತನ ಕಾಯ್ದೆ ಜಾರಿ, 1961 ರ ವರದಕ್ಷಿಣೆ ನಿಷೇಧ ಕಾಯ್ದೆ, ಇನ್ನೂ ಮುಂತಾದವುಗಳು...
ಇಷ್ಟೆಲ್ಲ ಮಹಿಳೆಯರ ಪರ ರಕ್ಷಣಾ ಕಾನೂನುಗಳು ಇದ್ದರೂ ಕೂಡ ನಮ್ಮ ದೇಶದಲ್ಲಿ ನಿರಂತರವಾಗಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿಯಾದ ವಿಷಯವಾಗಿದೆ. ಬಹುತೇಕ ಹಳ್ಳಿಗಳ ದೇಶವಾದ ನಮ್ಮ ಭಾರತದಲ್ಲಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಬಲಾತ್ಕಾರಗಳು,ಅತ್ಯಾಚಾರಗಳೂ ನಡೆದರೂ ಎಷ್ಟೋ ಪ್ರಕರಣಗಳು ದಾಖಲಾಗದೇ ಇರುವುದನ್ನ ನಾವು ಕಾಣಬಹುದಾಗಿದೆ.ಆಗಾಗಿ ಪ್ರಜ್ಞಾವಂತ ನಾಗರೀಕರಾದ ನಾವು ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಮತ್ತು ಆಕೆಗೆ ಸಿಗಬೇಕಾದ ನ್ಯಾಯದ ಪರವಾಗಿ ನಿಂತು ಆಕೆಯನ್ನು ಸಶಕ್ತಳನ್ನಾಗಿ ಮಾಡುವಂತಹ ಕರ್ತವ್ಯ ನಮ್ಮ ಮೇಲಿದೆ.ಆಗ ಮಾತ್ರ ಈ ದಿನದ ಆಚರಣೆಗೂ ಸಾರ್ಥಕತೆ ಸಿಕ್ಕಂತಾಗುತ್ತದೆ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ