ವಿದ್ಯುತ್ ವಿತರಣಾ ಕೇಂದ್ರದ ಯೋಜನೆ ಬಗ್ಗೆ ತಕರಾರಿಲ್ಲ ,ಆದರೆ ಡಿಂಕನಹಳ್ಳಿಯ ಯೋಜಿತ ಸ್ಥಳದಲ್ಲಿ ಮಾತ್ರ ಬೇಡ : ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಆಗ್ರಹ
ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು |
ಹುಳಿಯಾರು: ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಂಕನಹಳ್ಳಿಯಲ್ಲಿ ಉದ್ದೇಶಿತ 400 ಕೆವಿ ವಿದ್ಯುತ್ ಸ್ವಿಚ್ಚಿಂಗ್ ಸ್ಟೇಷನ್ ಸ್ಥಾಪಿಸುವುದರ ಬಗ್ಗೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಸುಮಾರು 300ರಷ್ಟು ರೈತರು ತಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಶಾಸಕ ಸಿ.ಬಿ ಸುರೇಶ್ ಬಾಬು ಅವರ ಬಳಿ ತಮ್ಮ ಅಹವಾಲು ಸಲ್ಲಿಸಿ, ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಘಟನೆ ಡಿಂಕನಹಳ್ಳಿ ತೋಟದ ಆವರಣದಲ್ಲಿ ಮಂಗಳವಾರ ಜರುಗಿತು.
ಸಮಸ್ಯೆ ಏನು:ಡಿಂಕನಹಳ್ಳಿಯಲ್ಲಿ 400 ಕೆವಿ ಸ್ವಿಚಿಂಗ್ ಸ್ಟೇಷನ್ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಸದರಿ ಯೋಜನೆಗೆ ಅಗತ್ಯವಿರುವ ಜಮೀನು ನೀಡಲು ಗ್ರಾಮಸ್ಥರು ತಕರಾರು ತೆಗೆದಿದ್ದು, ಹಾಲಿ ಯೋಜನೆಗೆ ಉದ್ದೇಶಿಸಲಾಗಿರುವ ಭೂಮಿ ಕೃಷಿ ಯೋಗ್ಯವಾಗಿದ್ದು,ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಲ್ಲಿ ರೈತರುಗಳ ಜೀವನಕ್ಕೆ ತೊಂದರೆಯಾಗಲಿದ್ದು,ಇದರ ಬದಲು ಇಲ್ಲಿಯೇ ಆಗಲಿ ಅಥವಾ ತಾಲೂಕಿನ ಬೇರೆ ಎಲ್ಲಿಯಾದರೂ ಆಗಲೇ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯನ್ನು ಆಯ್ಕೆ ಮಾಡಿಕೊಂಡು ಯೋಜನೆ ಅನುಷ್ಠಾನಗೊಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು ಇದಕ್ಕಾಗಿ ಮಾಜಿ ಶಾಸಕರು ತಮ್ಮ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಹಲವರು ರೈತರ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಯೋಜನೆಗೆ ಭೂಮಿ ನೀಡಲು ರೈತರು ವಿರೋಧ ವ್ಯಕ್ತಪಡಿಸಿದ್ದು ಈಗಾಗಲೇ ಹಲವು ರೈತರು ಜಿಲ್ಲಾಧಿಕಾರಿಗಳಿಗೆ ನಾನು ಭೂಮಿಯನ್ನು ನೀಡಲು ಒಪ್ಪಿರುವುದಿಲ್ಲ ಎಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಡಿಂಕನಹಳ್ಳಿ ಗ್ರಾಮದ ಶಾಲೆಯ ಮುಂಭಾಗದ ಸರ್ವೇ ನಂಬರ್ 45, 46, 47 ರಲ್ಲಿ 400ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಕಚೇರಿಯಲ್ಲಿ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭೂಮಾಲಿಕರ ರೈತರ ಸಭೆ ಕರೆದಿದ್ದು ಸಭೆಗೆ ಹಾಜರಾದ ರೈತರ ಸಹಿಯನ್ನು ತೋರಿಸಿ ರೈತರುಗಳು ಭೂಮಿ ನೀಡಲು ಒಪ್ಪಿರುತ್ತಾರೆ ಎಂದು ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಸದರಿ ಭೂಮಿಯು ಫಲವತ್ತಾದ, ಸಂಪದ್ಭರಿತವಾದ ಕೃಷಿಯೋಗ್ಯ ಭೂಮಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 234ಕ್ಕೆ ಹೊಂದಿಕೊಂಡಿದ್ದು ಬೆಲೆಬಾಳುವ ಆಸ್ತಿ ಆಗಿರುತ್ತದೆ. ಸದರಿ ಸದರಿ ಭೂಮಿಯ ಪಕ್ಕ ಶಾಲೆ, ಡೈರಿ ಹಾಗೂ ವಾಸದ ಮನೆಗಳಿದ್ದು ಸುತ್ತಾ ಎಂಟು ಹಳ್ಳಿಗಳು ಇದರ ವ್ಯಾಪ್ತಿಗೆ ಒಳಪಡುತ್ತದೆ.ಸ್ಥಳದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿದಲ್ಲಿ ಇಲ್ಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಸಮಸ್ಯೆ ಬಿಚ್ಚಿಟ್ಟರು.
ಸ್ವಿಚ್ಚಿಂಗ್ ಸ್ಟೇಷನ್ ಸ್ಥಾಪಿಸಲು ಭೂಸ್ವಾಧೀನಕ್ಕೆ ಮುಂದಾಗಿದ್ದು, 2019 ರಿಂದಲೂ ಇದಕ್ಕೆ ಗ್ರಾಮಸ್ಥರ ವಿರೋಧವಿದ್ದು ಸದರಿ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಕೋರಿ ಈಗಾಗಲೇ 17 ಮಂದಿ ತಿಪಟೂರಿನ ಭೂಸ್ವಾಧೀನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಪ್ರತಿವಾದಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.ಸ್ಥಾವರ ಸ್ಥಾಪಿಸುವ ಸ್ಥಳದಿಂದ 400ರಿಂದ 800 ಮೀಟರ್ ಅಂತರದಲ್ಲಿ ಡಿಂಕನಹಳ್ಳಿ,ಅರಳಿಕೆರೆ,ಸಾಲಾಪುರ, ಅಜ್ಜನ ಪಾಳ್ಯ, ಮೋಟಿಹಳ್ಳಿ, ಚಿಕ್ಕ ಎಣ್ಣೆಗೆರೆ, ದೊಡ್ಡ ಎಣ್ಣೆಗೆರೆ, ಉಪ್ಪಿನ ಕಟ್ಟೆ, ಕೋರಗೆರೆ, ಹನುಮಂತಪುರ, ಎಮ್ಮೆಹಟ್ಟಿ,ಅರಳಿಕೆರೆ ಕಾಲೋನಿ ಹೀಗೆ ಹತ್ತು-ಹನ್ನೆರಡು ಹಳ್ಳಿಗಳಿದ್ದು ಸ್ಥಾವರ ಇಲ್ಲಿಯೇ ಸ್ಥಾಪಿಸಿದಲ್ಲಿ ಸುಮಾರು ಐದು ಸಾವಿರ ಕುಟುಂಬಗಳಿಗೆ ತೊಂದರೆ ಉಂಟಾಗಲಿದೆ. ಹತ್ತಿರದಲ್ಲಿಯೇ ಇರುವ ಶಾಲೆಗೆ, ಕೆಎಂಎಫ್ ಹಾಲಿನ ಡೈರಿಗೆ, ಕೃಷಿಗೆ ಜೀವನಾಧಾರವಾಗಿರುವ ತೆಂಗು ಅಡಿಕೆಗೆ ತೊಂದರೆಯಾಗಲಿದೆ ಎಂದು ಸುಮಾರು ರೈತರು ದೂರಿದರು.
ಇದಕ್ಕೆ ಸ್ಪಂದಿಸಿದ ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ಕ್ಷೇತ್ರದ ಜನತೆಗೆ ಸಮಸ್ಯೆ ಆದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ತಾವಿಲ್ಲಿಗೆ ಬಂದಿದ್ದು,ಡಿಂಕನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 400ಕೆವಿ ಸ್ವಿಚಿಂಗ್ ಸ್ಟೇಷನ್‌ಗೆ ನಮ್ಮದಾಗಲಿ,ಇಲ್ಲಿನ ರೈತರದ್ದಾಗಲಿ ಯಾವುದೇ ವಿರೋಧವಿಲ್ಲ, ಆದರೆ ಉದ್ದೇಶಿತ ಸ್ಥಳದ ಮೊದಲು ಬೇರೆಡೆ ಸ್ಥಾಪಿಸಿ ಎನ್ನುವುದಷ್ಟೆ ನಮ್ಮ ಕೋರಿಕೆ.ಯೋಜನೆಯ ಉದ್ದೇಶಿತ ಸ್ಥಳದ ಬಗ್ಗೆ ಮಾತ್ರವೇ ನಮ್ಮದು ತಕರಾರಿದ್ದು ಇಲ್ಲಿಯೇ ಆಗಲಿ ಅಥವಾ ತಾಲೂಕಿನ ಯಾವುದೇ ಸ್ಥಳದಲ್ಲಿಯೇ ಆಗಲಿ ಬಯಲು ಪ್ರದೇಶದಲ್ಲಿನ ಬರಡು ಭೂಮಿಯಲ್ಲಿ ಮಾಡಿ ಎನ್ನುವುದು ನಮ್ಮ ಅಹವಾಲಾಗಿದೆ. ಇಲ್ಲಿನ ರೈತರಿಗೆ ತಾತ ಮುತ್ತಾತನ ಕಾಲದಿಂದಲೂ ಅಂಗೈಯಷ್ಟು ಜಮೀನಿದ್ದು ಇಲ್ಲಿನ ಜನರು ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಇವರನ್ನು ಇಲ್ಲಿಂದ ಒಕ್ಕಲೆಬ್ಬಿಸ ಬೇಡಿ ಎನ್ನುವುದಷ್ಟೇ ನಮ್ಮ ಬೇಡಿಕೆ.
ಹಾಗಾಗಿ ಸಚಿವರು ತಮ್ಮ ವೈಯಕ್ತಿಕ ನಿಲುವನ್ನು ಬದಲಿಸಿ ಇಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಸದರಿ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಬೇಕು ಎಂದರು.
ಯೋಜನೆಗೆ ಅನೇಕ ರೈತರು ಭೂಮಿ ನೀಡಿಲ್ಲ, ಭೂಮಿ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಿಗೆ ಸಹಿ ಸಹ ಹಾಕಿಲ್ಲ. ಹಾಗಾಗಿ ಅವರವರ ಜಮೀನನ್ನು ಆಬದ್ದು ಮಾಡಿಕೊಳ್ಳಿ ಇದಕ್ಕೆ ಪೊಲೀಸರು ಯಾಕೆ ತಕರಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಸದರಿ ಸಭೆಯಲ್ಲಿ ಅರಳಿಕೆರೆ ಗಂಗಾಧರಪ್ಪ,ಡಿಂಕನಹಳ್ಳಿ ಮಾಸ್ಟರ್ ರಾಜಣ್ಣ,ಅರಳಿಕೆರೆ ಪ್ರಕಾಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಹೇಮಕ್ಕ ಮಾತನಾಡಿದರು.ಈ ಸಂದರ್ಭದಲ್ಲಿ ಹಂದನಕೆರೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ, ದೊಡ್ಡ ಎಣ್ಣೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ಮಂಜುನಾಥ್, ಉಪಾಧ್ಯಕ್ಷೆ ಅನುಸೂಯಮ್ಮ,ಸದಸ್ಯರಾದ ಕಾವ್ಯ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಯ ನೂರಾರು ರೈತರು ಪಾಲ್ಗೊಂಡಿದ್ದರು
-----------------------------
ಇಲ್ಲಿನ ರೈತರ ಸಮಸ್ಯೆಗೆ ನಾವು ಸ್ಪಂದಿಸಿದ್ದು ಕಾನೂನು ರೀತಿಯ ಹೋರಾಟಕ್ಕೆ ನಾವು ಸಿದ್ಧರಿದ್ದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿಗಳಾದ ದೇವೇಗೌಡರ ಗಮನಕ್ಕೆ ಸಹ ಈ ಜನರ ಸಮಸ್ಯೆ ತಂದಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಾಳೆ ನಡೆಯಲಿರುವ ಸೆಷನ್ ನಲ್ಲಿ ಮುಖ್ಯಮಂತ್ರಿಗಳಿಗೆ ಚರ್ಚಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಿದ್ದುಅಲ್ಲಿಯವರೆಗೂ ಸಮಾಧಾನದಿಂದಿರಿ:ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು
---------------------------
ಫೋನ್ ಮುಖಾಂತರ ಕುಮಾರಸ್ವಾಮಿ ಮನವಿ: ಡಿಂಕನಹಳ್ಳಿ ರೈತರ ಸಮಸ್ಯೆ ಬಗ್ಗೆ ಮಾಜಿ ಶಾಸಕ ಸುರೇಶ್ ಬಾಬು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸುಮಾರು 300 ರಷ್ಟು ನೆರೆದಿದ್ದ ರೈತರ ಸಮ್ಮುಖದಲ್ಲಿ ಫೋನ್ ಮುಖಾಂತರ ಚರ್ಚಿಸಿದ್ದು, ಕುಮಾರಸ್ವಾಮಿಯವರು ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಬಗ್ಗೆ ತಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
--------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ