ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಬ್ಬರು ಕನ್ನಡ ನಮ್ಮ ಮಾತೃಭಾಷೆ,ಅದನ್ನು ಪೋಷಿಸಿ,ಬೆಳೆಸಬೇಕು ಹಾಗೂ ನಮ್ಮಲ್ಲಿಯೇ ಸ್ಥಳೀಯ ಸಮಸ್ಯೆಗಳನ್ನೇ ದೊಡ್ಡದು ಮಾಡಿ ನೆರೆಹೊರೆ ರಾಜ್ಯದವರು ಬೆರಳಿಟ್ಟು ತೋರಿಸುವಂತೆ ಮಾಡದೇ ಕನ್ನಡ ನಾಡಿನ ಪ್ರಜೆಗಳೆಲ್ಲಾ ಒಂದೇ ಭಾವನೆ ನಮ್ಮಲ್ಲಿ ಮೂಡಲಿ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಹಿಳಾ ಕರವೇ ಘಟಕ,ಹೋಬಳಿಯ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಸಂಜೆ ಎಂಪಿಎಸ್ ಶಾಲಾ ಮೈದಾನದಲ್ಲಿ ನಡೆದ 57ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯೋತ್ಸವವನ್ನು ನವಂಬರ್ ಒಂದರಿಂದ ತಿಂಗಳಾಂತ್ಯದವರೆಗೆ ಅನೇಕ ಕನ್ನಡಪರ ಸಂಘಟನೆಯವರು ಆಚರಿಸುತ್ತಾರೆ ಇದರಿಂದ ಕನ್ನಡಭಾಷೆಯ ಸ್ಥಾನ ಎಂತಹದ್ದು ಎಂಬುದು ತಿಳಿಯುತ್ತದೆ.ಕರ್ನಾಟಕಕ್ಕೆ ಇಂದು ನೆರಹೊರೆಯ ರಾಜ್ಯಗಳ ಹಾವಳಿ ಹೆಚ್ಚಿ, ಗಡಿ ಭಾಗಗಳಲ್ಲಿ ಅನೇಕ ಸಮಸ್ಯೆ ಉಲ್ಭಣವಾಗುತ್ತಿವೆ,ಇದನ್ನು ನಾವು ಮಾಧ್ಯಮಗಳ ಮೂಲಕ ತಿಳಿಯುತ್ತೇವೆ .ಆದರೆ ಅಲ್ಲಿನ ಜನ ಅನುಭವಿಸುವಂತಹ ತೊಂದರೆಗಳ ಕಾವು ನಮಗಾಗದಿದ್ದರೂ ಸಹ, ಅವರ ನೋವುಗಳಿಗೆ ಸ್ಪಂದಿಸಿ ಕರ್ನಾಟಕ ನಮ್ಮದು ಅದನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂಬ ಧ್ಯೇಯವನ್ನು ಹೊಂದಬೇಕಿದೆ ಎಂದರು.
ಪ್ರಸ್ತುತದಲ್ಲಿ ಅಭಿವೃದ್ದಿಯ ನೆಪದಲ್ಲಿ ಅನೇಕ ಸಾಫ್ಟ್ ವೇರ್ ಕಂಪನಿಗಳು ಕರ್ನಾಟಕದ ಹೃದಯ ಭಾಗವಾದ ಬೆಂಗಳೂರಿಗೆ ಲಗ್ಗೆಯಿಟ್ಟು,ಇತರೆ ರಾಜ್ಯದವರಿಗೆ ಹೆಚ್ಚಿನ ಉದ್ಯೋಗ ಕೊಡುವ ಮೂಲಕ ಕನ್ನಡಿಗರನ್ನೇ ಮೂಲೆ ಗುಂಪು ಮಾಡಿದೆಯೆಂದು ವಿಷಾಧಿಸಿದರು.
ಚಿಕ್ಕನಾಯಕನಹಳ್ಳಿ ಭಾಗಕ್ಕೆ ಹೇಮಾವತಿ ನೀರನ್ನು ಹರಿಸುವಲ್ಲಿ ಹೋಬಳಿಯ ಎಲ್ಲಾ ಸಂಘಟನೆಗಳು ಸಕ್ರೀಯವಾಗಿ ಪಾಲ್ಗೊಂಡಿದ್ದರ ಫಲವಾಗಿ ಕೆಲ ದಿನಗಳಲ್ಲೇ ಹೇಮಾವತಿ ನೀರು ಈ ಭಾಗಕ್ಕೆ ಹರಿಯುತ್ತದೆ.ನ.23ರಂದು ಅಡಿಗಲ್ಲು ಹಾಕುವ ಕಾರ್ಯ ನೆಡೆಯಬೇಕಿತ್ತು ಆದರೆ ಕಾರಣಾಂತರದಿಂದ ಮುಂದೂಡಲ್ಪಟ್ಟಿದೆ,ಇದರಲ್ಲಿ ಯಾವುದೇ ರೀತಿಯ ರಾಜಕೀಯ ದುರುದ್ದೇಶವಿಲ್ಲ ಕೇಂದ್ರದಿಂದಲ್ಲೇ ಈ ಯೋಜನೆಗೆ ಅನುಮತಿ ಇರುವುದರಿಂದ ಯಾರೇ ಏನೇ ಮಾಡಿದರು ಸಹ ಈಭಾಗಕ್ಕೆ ಹೇಮಾವತಿ ನೀರು ಬರುವುದನ್ನು ನಿಲ್ಲಿಸಲು ಆಗದು ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ರೈತಸಂಘದ ಕೆಂಕೆರೆ ಸತೀಶ್ ಮಾತನಾಡಿ, ನೀರಾವರಿ ಹೋರಾಟದಲ್ಲಿ ಹೋಬಳಿಯ ಎಲ್ಲಾ ಸಂಘಟನೆಗಳು ನಮ್ಮೊಂದಿಗೆ ಸಹಕರಿಸಿದ್ದು ಸ್ಮರಣೀಯ. ಇಂದು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕಾದರೆ ಸರ್ಕಾರವನ್ನು ಕೂಗಿ ಕೇಳಬೇಕಿದ್ದು,ಸಂಘಟನೆಗಳು ಬರಿ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸದೆ ಹೋರಾಟಕ್ಕೆ ಮುಂದಾಗಿ ಸರ್ಕಾರದ ತಪ್ಪುಗಳನ್ನು ಗುರ್ತಿಸಿ ಅದರಿಂದಾಗುವ ಅನಾನುಕೂಲತೆಯನ್ನು ತಿಳಿಯುವಂತೆ ಮಾಡುವ ಕಾರ್ಯ ಮಾಡಬೇಕಿದೆ. ಕನ್ನಡ ನಾಡಿನ ಹಿತಕ್ಕಾಗಿ ನಡೆಯುವ ಹೋರಾಟಗಳಿಗೆ ರೈತಸಂಘ ಸದಾಸಿದ್ದ ಎಂದರು.
ಉಪನ್ಯಾಸಕ ಕಣ್ಣಯ್ಯ ಪ್ರಾಸ್ತಾವಿಕ ನುಡಿ ನುಡಿದರು.ಪಿಎಸೈ ರಾಜು,ಜಿ.ಪಂ.ಸದಸ್ಯೆ ಮಂಜುಳಾ,ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ,ತಾ.ಪಂ.ಸದಸ್ಯ ಕೆಂಕೆರೆ ನವೀನ್,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ಉಪಾಧ್ಯಕ್ಷೆ ವೆಂಕಟಮ್ಮ,ಜೆಡಿಎಸ್ ಮುಂಖಂಡರಾದ ಲಲಿತಾಪ್ರಕಾಶ್,ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಹುಳಿಯಾರು ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್,ಗೌರವಾಧ್ಯಕ್ಷ ರಂಗಸ್ವಾಮಿ,ಬೀರಪ್ಪ,ಮಹಿಳಾ ಕರವೇ ಘಟಕ ಅಧ್ಯಕ್ಷೆ ರತ್ನರಂಜನಿ,ಹಂದನಕೆರೆ ಕರವೇ ಅಧ್ಯಕ್ಷ ರಂಗನಾಥ್,ಜಯಕರ್ನಾಟಕ ಸಂಘದ ಸುರೇಶ್ ರೈ,ವೆಂಕಟೇಶ್,ನಂದಿಹಳ್ಳಿ ಶಿವಣ್ಣ,ಗ್ರಾ.ಪಂ ಸದಸ್ಯರು ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭದಲ್ಲಿ ಶಿಕ್ಷಕ ದಯಾನಂದ್ ನಿರೂಪಿಸಿ, ಕಿರಣ್ ಸ್ವಾಗತಿಸಿ,ಶಿಕ್ಷಕ ಗಂಗಾಧರಯ್ಯ ವಂದಿಸಿದರು.ಇದೇ ವೇಳೆ
ಪಂಡಿತ್ ಬಸವರಾಜು ಹಾಗೂ ಕರವೇ ಪೋಷಕ ಮತ್ತು ಸಂಚಾಲಕ ಕೆ.ಕುಮಾರ್ ಅವರನ್ನು ಸನ್ಮಾನಿಸಲಾಯಿತು.
.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ