ಭಾವೈಕ್ಯತೆಗೆ ಸಾಕ್ಷಿಯಾದ ಹುಳಿಯಾರಿನ ಗಣಪತಿ ವಿಸರ್ಜನಾ ಮಹೋತ್ಸವ ಹುಳಿಯಾರು : ಹುಳಿಯಾರಿನಲ್ಲಿ ಇತ್ತೀಚೆಗೆ ನಡೆದ ಗಣಪತಿ ವಿಸರ್ಜನಾ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗದೆ, ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಯಿತು . ಪ್ರಸನ್ನ ಗಣಪತಿಯ 25ನೇ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಬಾಲಾಜಿ ಥಿಯೇಟರ್ ಹಿಂಭಾಗದ 'ಬೆಂಕಿ ಗಣಪತಿ'ಯ ವಿಸರ್ಜನಾ ಮಹೋತ್ಸವವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಪಟ್ಟಣದಾದ್ಯಂತ ಉತ್ಸವದ ವಾತಾವರಣ ಮನೆ ಮಾಡಿತ್ತು. ಈ ಧಾರ್ಮಿಕ ಮೆರವಣಿಗೆಗೆ ಪೂರಕವಾಗಿ ಮುಸ್ಲಿಂ ಯುವ ಸಮುದಾಯವು ಪ್ರದರ್ಶಿಸಿದ ಸೌಹಾರ್ದಯುತ ನಡೆ, ಎಲ್ಲರ ಗಮನ ಸೆಳೆಯಿತು. ಮುಸ್ಲಿಂ ಸಮುದಾಯದಿಂದ ಪಾನಕದ ವ್ಯವಸ್ಥೆ : ಭಾವೈಕ್ಯತೆಯ ಸಂದೇಶ ಸಾರಿದ ಈ ಕಾರ್ಯಕ್ರಮದಲ್ಲಿ, ಮುಸ್ಲಿಂ ಸಮುದಾಯದ ಯುವಕರು ಅಬ್ದುಲ್ ಕಲಾಂ ಸರ್ಕಲ್‌ನಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದರು. ಗಣಪತಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲ ಭಕ್ತಾದಿಗಳಿಗಾಗಿ ಶಾಮಿಯಾನ ಹಾಕಿ, ಬಿಸಿಲಿನ ಝಳದಿಂದ ದಣಿವಾದವರಿಗೆ ತಂಪು ನೀಡಲು ನೀರು, ಮಜ್ಜಿಗೆ ಮತ್ತು ಪಾನಕದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಜಾತಿ-ಮತವನ್ನು ಮೀರಿ ಆಯೋಜಿಸಲಾದ ಈ ಉಪಚಾರವು ಸಾಮರಸ್ಯದ ಸಂದೇಶವನ್ನು ಸಾರಿತು. ಇದಲ್ಲದೆ, ಎರಡೂ ಗಣಪತಿ ವಿಗ್ರಹಗಳಿಗೆ ಗುಲಾಬಿ ಹಾರಗಳನ್ನು ಸಿದ್ಧಪಡಿಸಿ ತಂದ ಮುಸ್ಲಿಂ ಯುವಕರು, ಮೆರವಣಿಗೆಯ ಸಮಯದಲ್ಲಿ ಜೈಕಾರದ ಘೋಷ...