ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬಿಸಿಯೂಟ ಮತ್ತು ಪೂರಕ ಪೌಷ್ಟಿಕ ಆಹಾರ ವಿತರಣೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಅಡುಗೆ ಸಿಬ್ಬಂದಿಯವರ ತಾಲ್ಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಗಾರ ತಾಲ್ಲೂಕು ಪಂಚಾಯಿತಿ (ತಾ.ಪಂ.) ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಅವರು, ಅಡುಗೆ ಮಾಡುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಡುಗೆ ಸಿಬ್ಬಂದಿಗಳಿಗೆ ವಿವರವಾದ ಮಾಹಿತಿ ನೀಡಿದರು. ಸರ್ಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿವರೆಗೆ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗಣಿಬಾಧಿತ ಪ್ರದೇಶದಿಂದ ಆಗಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರ್ಕಾರ ಕೈಗೊಂಡಿರುವ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸುವಂತೆ ತಿಳಿಸಿದರು.
ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ ಅವರು ಮಾತನಾಡಿ, ಅಕ್ಷರ ದಾಸೋಹದ ಮಹತ್ವ ಹಾಗೂ ಪೂರಕ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿದರು. ಪ್ರತಿಯೊಬ್ಬರಿಗೂ ಇದರ ಪ್ರಯೋಜನ ಸಿಗುವಂತೆ ಹಾಗೂ ಇಲಾಖೆಯ ಮತ್ತು ಸರ್ಕಾರದ ಮಾರ್ಗಸೂಚಿಯಂತೆ ಶಾಲೆಗಳಲ್ಲಿ ಶಿಕ್ಷಕರು, ಸಿ.ಆರ್.ಪಿ ಯವರು, ಅಡುಗೆಯವರು ಮತ್ತು ಸಿಬ್ಬಂದಿಯವರು ಕ್ರಮವಹಿಸುವಂತೆ ಸೂಚಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಗವಿರಂಗಯ್ಯ ಅವರು ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಗಣಿಭಾದಿತ ತಾಲ್ಲೂಕಾಗಿರುವುದರಿಂದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳಿಗೆ ನೀಡಲಾಗುತ್ತಿರುವ ಪೂರಕ, ಪೌಷ್ಟಿಕ ಆಹಾರವಾಗಿ ಕಡ್ಲೆಕಾಳು, ಹೆಸರುಕಾಳು ಹುಸುಲಿ ಮಾಡುವ ವಿಧಾನ ಹಾಗೂ ಸ್ವಚ್ಛತೆಯ ಬಗ್ಗೆ ಸಿಬ್ಬಂದಿಗಳಿಗೆ ವಿವರಿಸಿದರು.
ಈ ಒಂದು ದಿನದ ತರಬೇತಿಯನ್ನು ತಾಲ್ಲೂಕಿನ ಶಾಲೆಗಳ ಮುಖ್ಯ ಶಿಕ್ಷಕರು, ಸಿ.ಆರ್.ಪಿ ಹಾಗೂ ಅಡುಗೆ ಸಿಬ್ಬಂದಿಯವರಿಗೆ ಆಯೋಜಿಸಲಾಗಿತ್ತು.
ಅಕ್ಷರ ದಾಸೋಹ ಇಲಾಖೆಯ ಎಫ್.ಡಿ.ಎ ಬಿ.ಎಸ್.ಪಂಚಾಕ್ಷರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾರಂಭದಲ್ಲಿ ಅಡುಗೆ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರು. ಶಿಕ್ಷಕರಾದ ಮಹೇಶ್ ಮತ್ತು ಕಂಪ್ಯೂಟರ್ ಆಪರೇಟರ್ ದಿಲೀಪ್ ಸಹ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ