ಭಾರತದ ಸಂವಿಧಾನವು ಕೇವಲ ಕಾನೂನುಗಳ ಸಂಗ್ರಹವಲ್ಲ, ಅದು ನಮ್ಮ ದೇಶದ ಆತ್ಮ ಮತ್ತು ದಿಕ್ಸೂಚಿ : ಪ್ರಾಧ್ಯಾಪಕ ಮಧುಸೂದನ್
ಭಾರತದ ಸಂವಿಧಾನದ ಮೂಲ ತತ್ವಗಳ ತಿಳುವಳಿಕೆ ಕುರಿತು ಬಿ.ಎಂ.ಎಸ್. ಕಾಲೇಜಿನಲ್ಲಿ ಯಶಸ್ವಿ ಉಪನ್ಯಾಸ
------------------------
ಹುಳಿಯಾರು: ಭಾರತದ ಸಂವಿಧಾನವು ಕೇವಲ ಕಾನೂನುಗಳ ಸಂಗ್ರಹವಲ್ಲ, ಅದು ನಮ್ಮ ದೇಶದ ಆತ್ಮ ಮತ್ತು ದಿಕ್ಸೂಚಿ ಎಂದು ಹೆಬ್ಬೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮಧುಸೂದನ್ ಕೆ.ಪಿ ಬಣ್ಣಿಸಿದರು.
ಹುಳಿಯಾರು ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ "ಭಾರತದ ಸಂವಿಧಾನದ ಮೂಲ ತತ್ವಗಳ ತಿಳುವಳಿಕೆ" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದ ಅವರು, ಸಂವಿಧಾನದಲ್ಲಿರುವ ಸಮಾನತೆ, ಸ್ವಾತಂತ್ರ್ಯ, ಸಮಾಜವಾದ, ಮತ್ತು ಜಾತ್ಯತೀತತೆಯಂತಹ ಮೂಲ ತತ್ವಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ಈ ತತ್ವಗಳು ರಾಷ್ಟ್ರದ ಅಭಿವೃದ್ಧಿಗೆ ಹೇಗೆ ಆಧಾರವಾಗಿವೆ ಎಂಬುದನ್ನು ಮನಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ. ಮಾತನಾಡಿ ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸಿದರು.
ಸಂವಿಧಾನದ ಅರಿವು ಪ್ರತಿಯೊಬ್ಬ ನಾಗರಿಕನ ಹಕ್ಕು : ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲಕ್ಷ್ಮಿ ಮಾತನಾಡಿ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಅರಿವು ಅತ್ಯಗತ್ಯ ,ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುತ್ತವೆ ಎಂದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಮಯ್ಯ ಮಾತನಾಡಿ, ಸಂವಿಧಾನವನ್ನು ಕೇವಲ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದನ್ನು ನಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ತರುವುದು ಹೆಚ್ಚು ಮಹತ್ವದ್ದು ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ