ಹುಳಿಯಾರು: ದಸರಾ ಹಬ್ಬ ಬಂತೆಂದರೆ ಮನೆ-ಮನೆಗಳಲ್ಲಿ ಬೊಂಬೆಗಳ ಲೋಕವೇ ಅನಾವರಣಗೊಳ್ಳುತ್ತದೆ. ಹುಳಿಯಾರು ಸಮೀಪದ ಕೆಂಕೆರೆಯಲ್ಲಿರುವ ಶ್ರೀಮತಿ ನಿಜಗುಣಾಂಬ ಜಯಣ್ಣಾಚಾರ್ ಅವರ ಮನೆಯಲ್ಲಿ ಪ್ರತಿ ವರ್ಷವೂ ವಿಭಿನ್ನ ಪರಿಕಲ್ಪನೆಗಳೊಂದಿಗೆ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ದಶಕಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆ, ಎಷ್ಟೇ ಕಷ್ಟಗಳಿದ್ದರೂ ಕುಟುಂಬದ ಸದಸ್ಯರು ಬಿಡದೆ ಮುಂದುವರೆಸಿದ್ದಾರೆ.
ನವರಾತ್ರಿಯ ಮೊದಲ ದಿನವಾದ ಪಾಡ್ಯದಂದು ಪಟ್ಟದ ಬೊಂಬೆ, ಕಳಶ ಹಾಗೂ ದೀಪವನ್ನು ಇಟ್ಟು ಪೂಜಿಸಿದ ನಂತರವೇ ಇತರ ಬೊಂಬೆಗಳನ್ನು ಜೋಡಿಸಲಾಗುತ್ತದೆ. ಇದು ಹಬ್ಬದ ಪ್ರಮುಖ ಸಂಪ್ರದಾಯ. ಈ ಬಾರಿ ಇರಿಸಿರುವ ಬೊಂಬೆಗಳಲ್ಲಿ ವಿವಿಧ ದೇವ-ದೇವತೆಗಳು, ಸಾಧು-ಸಂತರು, ಹಳ್ಳಿ ಜೀವನದ ದೃಶ್ಯಗಳು ಮತ್ತು ಪ್ರಾಣಿ ಪಕ್ಷಿಗಳ ಆಕೃತಿಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ. ಪ್ರತಿಯೊಂದು ಬೊಂಬೆಯೂ ಒಂದು ಕಥೆ ಹೇಳುವಂತೆ ಜೋಡಿಸಲಾಗಿದೆ.
ಒಂಬತ್ತು ದಿನಗಳ ಕಾಲ ಈ ಬೊಂಬೆಗಳನ್ನು ಪೂಜಿಸಿ, ಪ್ರತಿದಿನವೂ ಒಂದೊಂದು ಬಗೆಯ ನೈವೇದ್ಯವನ್ನು ಅರ್ಪಿಸುವುದು ಈ ಮನೆಯ ರೂಢಿ. ನವರಾತ್ರಿಯ ಕೊನೆಯ ದಿನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ನಂತರ ಬೊಂಬೆಗಳನ್ನು ವಿಸರ್ಜಿಸಲಾಗುತ್ತದೆ. ಈ ಆಚರಣೆ ಕೇವಲ ಬೊಂಬೆಗಳ ಜೋಡಣೆ ಮಾತ್ರವಲ್ಲದೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಹೊಸ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನವೂ ಆಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ