ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ ಕಸದ ಬಿಕ್ಕಟ್ಟು ತೀವ್ರ –ಪಪಂ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಅಸಮಾಧಾನ

ಹುಳಿಯಾರಿನಲ್ಲಿ ಕಸದ ಬಿಕ್ಕಟ್ಟು ತೀವ್ರ –ಪಪಂ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಅಸಮಾಧಾನ 

-------------

 ✍️ನರೇಂದ್ರಬಾಬು-ಹುಳಿಯಾರು- 9448760070

-------------

ಹುಳಿಯಾರು, ಸೆ. 08:

ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ, ವಾಹನಗಳ ಕೊರತೆ ಮತ್ತು ಕಾನೂನು ತೊಂದರೆಗಳಿಂದಾಗಿ ಹುಳಿಯಾರಿನಲ್ಲಿ ಕಸದ ಸಮಸ್ಯೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಜನನಿಬಿಡ ಪ್ರದೇಶಗಳು ಈಗ ಕಸದ ರಾಶಿಯಿಂದ ದುರ್ಗಂಧದಿಂದ ಕೂಡಿವೆ.

         ಹತ್ತು ದಿನಗಳಿಂದ ಕಸ ಎತ್ತದೇ ಬಿದ್ದಿದೆ : ಪಟ್ಟಣದಲ್ಲಿ ಕಳೆದ 10 ದಿನಗಳಿಂದ ಕಸ ವಿಲೇವಾರಿ ಆಗದೇ ರಸ್ತೆ ಪಕ್ಕ ಎಲ್ಲೆಡೆ ಕಸದರಾಶಿ  ಕಂಡು ಬರುತ್ತಿದೆ. ಪೌರಕಾರ್ಮಿಕರು ಮನೆಮನೆಗೆ ತೆರಳಿ ಸಂಗ್ರಹಿಸಿದ ಕಸದ ಚೀಲಗಳನ್ನು ರಸ್ತೆ ಪಕ್ಕವೇ ಬಿಟ್ಟು ಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗಡಿಗಳ ತ್ಯಾಜ್ಯವೂ ಬೀದಿಗಳಲ್ಲಿ ಸುರಿಯಲ್ಪಟ್ಟಿದ್ದು ಇಡೀ ಪಟ್ಟಣವೇ ಕಸದಿಂದ ಆವರಿಸಿಕೊಂಡಿದೆ.

ಅರಣ್ಯ ಇಲಾಖೆಯ ಕ್ರಮ – ಟ್ರ್ಯಾಕ್ಟರ್ ಸೀಜ್ : ಕಳೆದ ವಾರ ಪಟ್ಟಣ ಪಂಚಾಯಿತಿಯ ಟ್ರ್ಯಾಕ್ಟರ್ ಮೂಲಕ ಕಸವನ್ನು ಕೆಂಕೆರೆ ಮಾರ್ಗದ ಕುದುರೆಕಣಿವೆ ಅರಣ್ಯ ಪ್ರದೇಶದಲ್ಲಿ ಸುರಿಸಲಾಯಿತು. ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಇಲಾಖೆಯ ಅಧಿಕಾರಿಗಳು ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪರಿಣಾಮವಾಗಿ ಕಸ ಎತ್ತುವ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.

ಕಸ ವಿಲೇವಾರಿಗೆ ಶಾಶ್ವತ ಸ್ಥಳವಿಲ್ಲ : ಪಟ್ಟಣ ಪಂಚಾಯಿತಿ ಸ್ಥಾಪನೆಯಾಗಿ ಏಳು ವರ್ಷವಾದರೂ ಇದುವರೆಗೆ ಒಂದು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗಿಲ್ಲ. ಸರ್ಕಾರ ಕೆಲವೊಮ್ಮೆ ಜಾಗ ಗುರುತಿಸಿದರೂ,ಅಲ್ಲಿನ ನಿವಾಸಿಗಳ ಪ್ರತಿರೋಧ ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ ಭೂಮಿ ಎಂಬ ಕಾರಣದಿಂದ ಕಾನೂನು ತೊಂದರೆ ಉಂಟಾಗಿದೆ.ಈ ಗೊಂದಲದಿಂದಾಗಿ ತಾತ್ಕಾಲಿಕ ಪರಿಹಾರವಾಗಿ ಚಿಕ್ಕನಾಯಕನಹಳ್ಳಿಯ ತ್ಯಾಜ್ಯ ಘಟಕಕ್ಕೆ ಕಸವನ್ನು ಸಾಗಿಸಲು ಆದೇಶ ನೀಡಲಾಗಿದೆ. ಆದರೆ, ಅಲ್ಲಿ ನಡೆದ ಪುರಸಭಾ ಸಭೆಯಲ್ಲಿ ಹುಳಿಯಾರಿನ ಕಸವನ್ನು ಸ್ವೀಕರಿಸಲು ಅಲ್ಲಿನ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವಾಹನಗಳಿದ್ದರೂ ಚಾಲಕರಿಲ್ಲ : ಕಸ ವಿಲೇವಾರಿಗೆಂದು ಪಂಚಾಯಿತಿಯಿಂದ ಟ್ರಾಕ್ಟರ್, ಆಟೋಗಳು ಹಾಗೂ ಎಕ್ಸ್‌ಕವೇಟರ್ ಖರೀದಿಸಿದ್ದರೂ, ಚಾಲಕರನ್ನು ನೇಮಿಸದ ಕಾರಣ ವಾಹನಗಳು ಕಚೇರಿ ಆವರಣದಲ್ಲೇ ನಿಂತಿವೆ. ಈ ದುಬಾರಿ ವಾಹನಗಳು ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದ್ದು, ಪಂಚಾಯಿತಿಗೆ ಅನಗತ್ಯ ಆರ್ಥಿಕ ಹೊರೆಯಾಗುತ್ತಿದೆ.

ಹೊಸ ಅಧಿಕಾರಿಗೆ ಸವಾಲು : ಹೊಸದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಎಲ್.ವಿ. ಮಂಜುನಾಥ್ ನೇಮಕಗೊಂಡಿದ್ದು, ಅವರ ಮುಂದಿರುವ ಅತಿ ದೊಡ್ಡ ಸವಾಲು ಊರಿನ ಕಸದ ನಿರ್ವಹಣೆ. ಟ್ರ್ಯಾಕ್ಟರ್ ಬಿಡುಗಡೆ, ವಾಹನ ಚಾಲಕರ ನೇಮಕಾತಿ ಹಾಗೂ ಶಾಶ್ವತ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ – ಇವೆಲ್ಲದರ ಮೇಲೂ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಸಾರ್ವಜನಿಕರ ಬೇಸರ : ಪಟ್ಟಣದ ಎಲ್ಲೆಡೆ ಕಸದ ರಾಶಿ ಕಂಡು ಬರುತ್ತಿರುವುದರಿಂದ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಕಸದ ಗಾಡಿ ಬಾರದೇ, ಎಲ್ಲರೂ ರಸ್ತೆಗಳ ಪಕ್ಕವೇ ಕಸ ಸುರಿಯುತ್ತಿದ್ದಾರೆ. ಪಂಚಾಯಿತಿ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಹುಳಿಯಾರಿನ ಕಸ ಸಮಸ್ಯೆ ದಿನೇ ದಿನೇ ಕಗ್ಗಂಟಾಗಿ ಬಗೆಹರಿಯದಂತಾಗಿದೆ. ಆಡಳಿತದ ನಿರ್ಲಕ್ಷ್ಯ, ಶಾಶ್ವತ ವಿಲೇವಾರಿ ಘಟಕದ ಕೊರತೆ ಹಾಗೂ ಕಾನೂನು ತೊಂದರೆ ಎಲ್ಲವೂ ಸೇರಿ ಈ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯುಂಟಾಗುವ ಮುನ್ನ ತಕ್ಷಣ ಕ್ರಮ ಕೈಗೊಳ್ಳುವುದು ಆಡಳಿತದ ಹೊಣೆಗಾರಿಕೆಯಾಗಿರಬೇಕು ಎಂಬ ಮಾತು ಕೇಳಿಬರುತ್ತಿದೆ.

----------

ಇಡೀ ಊರೇ ಗಬ್ಬೆದ್ದು ನಾರುತ್ತಿದ್ದು ಗ್ರಾಹಕರೂ ಅಂಗಡಿಗಳಿಗೇ ಬರಲು ಬೇಸರಿಸುತ್ತಿದ್ದು ಇದರಿಂದ ವ್ಯವಹಾರಕ್ಕೂ ದೊಡ್ಡ ನಷ್ಟವಾಗುತ್ತಿದೆ.— ಸತೀಶ್‌, ಹುಳಿಯಾರಿನ ಅಂಗಡಿ ಮಾಲೀಕ

---------

ಶಾಶ್ವತ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೇ ಸಮಸ್ಯೆ : ಪಟ್ಟಣ ಪಂಚಾಯಿತಿ ಆಗಿ ಏಳು ವರ್ಷಗಳಲ್ಲಿಯೂ ಒಂದು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಗುರುತಿಸದೆ ಇರುವುದು ಪ್ರಮುಖ ಕಾರಣವಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತದ ಮಧ್ಯೆ ಜಾಗದ ಹಕ್ಕುಗಳ ಕುರಿತು ಗೊಂದಲವಿದ್ದು, ತ್ಯಾಜ್ಯವಿಲೇವಾರಿಗೆ ಗುರ್ತಿಸಿರುವ ಜಾಗ ಅರಣ್ಯ ವ್ಯಾಪ್ತಿಗೆ ಬರುತ್ತಿರುವುದರಿಂದ ಹಸ್ತಾಂತರ ಸಾಧ್ಯವಾಗುತ್ತಿಲ್ಲ.: ಹೇಮಂತ್‌ ಕುಮಾರ್‌,ಹುಳಿಯಾರು ಪಪಂ ಸದಸ್ಯ

-----------

ವಿಭಾಗಾಧಿಕಾರಿಗಳು ತಾತ್ಕಾಲಿಕವಾಗಿ ಚಿಕ್ಕನಾಯಕನಹಳ್ಳಿ ತ್ಯಾಜ್ಯ ಘಟಕವನ್ನು ಗುರುತಿಸಿ ಅಲ್ಲಿಗೆ ಕಸ ಸುರಿಸಲು ಆದೇಶ ನೀಡಿದರೂ, ಆ ಪ್ರದೇಶದ ಪುರಸಭಾ ಸಭೆಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.ಹುಳಿಯಾರಿನ ಕಸ ನಮ್ಮೂರಿಗೆ ತಂದುಹಾಕುವುದನ್ನು ಒಪ್ಪಲು ಸಾದ್ಯವೇಯಿಲ್ಲ. ಪುರಸಭೆಯಲ್ಲಿ ಯಾವೊಬ್ಬ ಸದಸ್ಯರನ್ನು ಕೇಳದೇ ಈ ತೀರ್ಮಾನ ಮಾಡಿರುವುದನ್ನು ನಾವು ವಿರೋಧಿಸಿದ್ದು ಕಸ ತುಂಬಿದ ಟ್ರಾಕ್ಟರ್‌ ಕಂಡು ಬಂದರೆ ಸೀಝ್‌ ಮಾಡಿಸುತ್ತೇವೆ

ಮಹ್ಮದ್‌ ಹುಸೇನ್‌ ಗುಂಡ, ಚಿಕ್ಕನಾಯಕನಹಳ್ಳಿಯ ಪುರಸಭಾ ನಾಮಿನಿ ಸದಸ್ಯ

-----------

ಪಟ್ಟಣ ಪಂಚಾಯಿತಿ ಕೆಲ ತಿಂಗಳ ಹಿಂದೆ ಕಸದ ಸಂಗ್ರಹದ ಆಟೋಗಳು ಮತ್ತು ಎಕ್ಸ್‌ಕವೇಟರ್‌ ಸೇರಿದಂತೆ ಹಲವಾರು ವಾಹನಗಳನ್ನು ಖರೀದಿಸಿದ್ದು, ಆದರೆ ಚಾಲಕರ ನೇಮಕಾತಿ ಮತ್ತು ನಿರ್ವಹಣೆಗಾಗಿ ಕ್ರಮ ತೆಗೆದುಕೊಳ್ಳದಿರುವುದರಿಂದ ಅವು ಕಚೇರಿ ಆವರಣದಲ್ಲಿ ನಿಂತಿವೆ. ಇದರಿಂದ ಅವು ಉಪಯೋಗಕ್ಕೆ ಬಾರದಂತಾಗಿದೆ : ಜಯಣ್ಣ ,ಹುಳಿಯಾರು ನಿವಾಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...