ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಿರಬೇಕಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು, ಮೂರು ವ್ಯಕ್ತಿಗಳ ಜೀವವನ್ನು ಉಳಿಸಬಲ್ಲದು. ಆದುದರಿಂದ ಎಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವಾದ ರಕ್ತದಾನವನ್ನು ಇಂದೇ ಮಾಡಿರಿ.
ಕಾರ್ಲ್ ಲ್ಯಾಂಡ್ ಸ್ತ್ರೈನೆರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ರಕ್ತಪೂರಣದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯರು, 1901ರಲ್ಲಿ ರಕ್ತದ ಎ ಬಿ ಒ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. 1937ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ "ರೀಸಸ್ ಫ್ಯಾಕ್ಟರ್' ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಯ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣವನ್ನು ಮಾಡಲು ಕಾರಣಕರ್ತರೆನಿಸಿದ್ದರು.ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸುವ. ಮೂಲಕ ಗೌರವಿಸಲಾಗಿದೆ.
ವಿಶ್ವ ರಕ್ತದಾನಿಗಳ ದಿನವನ್ನು ಜೂನ್ 14, 2004ರಂದು ಮೊತ್ತ ಮೊದಲ ಬಾರಿಗೆ ಆಚರಿಸಲಾಗಿತ್ತು. ಇಂದಿಗೆ ಹತ್ತು ವರ್ಷಗಳಾಗಿದ್ದು ವಿಶ್ವ ರಕ್ತದಾನಿಗಳ ದಿನದ ದಶಮಾನೋತ್ಸವವನ್ನು ಇಂದೇ ರಕ್ತದಾನ ಮಾಡುವ ಮೂಲಕ ಆಚರಿಸಿ. "ಜೀವ'ದ ಕೊಡುಗೆಯನ್ನು ನೀಡಿ, ರಕ್ತದಾನ ಮಾಡಿ ಎನ್ನುವ ಘೋಷಣೆ _ಯನ್ನು ಸಾಕಾರಗೊಳಿಸಿ.
ದಾನಿಗಳ-ರಕ್ತದ ಕೊರತೆ: ವಿಶ್ವಾದ್ಯಂತ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಗಾಧ ಪ್ರಮಾಣದ ಅಂತರವಿದೆ. ನಮ್ಮ ದೇಶದಲ್ಲಿ ವರ್ಷಂಪ್ರತಿ ಸುಮಾರು ನಾಲ್ಕು ಕೋಟಿ ಯೂನಿಟ್ ರಕ್ತದ ಬೇಡಿಕೆಯಿದ್ದರೂ, ಪೂರೈಕೆಯ ಪ್ರಮಾಣವು ಕೇವಲ 40 ಲಕ್ಷ ಯೂನಿಟ್‌ಗಳಾಗಿವೆ. ತತ್ಪರಿಣಾಮವಾಗಿ ತುರ್ತು ಪರಿಸ್ಥಿತಿಯಲ್ಲಿ ಆವಶ್ಯಕ ಪ್ರಮಾಣದ ರಕ್ತ ಪೂರಣವಾಗದೇ, ಲಕ್ಷಾಂತರ ಜನರು ಅಕಾಲಿಕ ಮರಣಕ್ಕೆ ಈಡಾಗುತ್ತಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಅಂತಾರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ, ಸ್ವಯಂಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವ ರಕ್ತ ದಾನಿಗಳ ದಿನವನ್ನು ವರ್ಷಂಪ್ರತಿ ಆಚರಿಸುತ್ತಿದೆ.
ನಿಮಗಿದು ತಿಳಿದಿರಲಿ: ನಿಮಗೆ 18 ವರ್ಷ ವಯಸ್ಸಾದಂದಿನಿಂದ 60ನೇ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡುತ್ತಿದ್ದಲ್ಲಿ, 500ಕ್ಕೂ ಅಧಿಕ ಜನರ ಪ್ರಾಣಗಳನ್ನು ಉಳಿಸಬಹುದಾಗಿದೆ. ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ