ಇತ್ತೀಚೆಗೆ ಸುರಿದ ಮುಂಗಾರು ಮಳೆಯಿಂದ ರೈತರ ಬಾಳಲ್ಲಿ ನೆಮ್ಮದಿ ಮನೆ ಮಾಡಿದ್ದು, ಕೃಷಿ ಚಟುವಟಿಕೆಯಲ್ಲಿ ಚುರುಕುಗೊಂಡ ರೈತ ಮುಂಗಾರು ಬೆಳೆಗಳಾದ ಹೆಸರು.ಉದ್ದು ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತಿದ್ದರು ಆದರೆ ಸೊಗಸಾಗಿ ಚಿಗುರೊಡೆದು,ಹೂ ಬಿಡುವ ಹಂತದದಲ್ಲಿರುವ ಹೆಸರು ಗಿಡಕ್ಕೆ ಕೆಂಪುತಲೆ ಕಂಬಳಿಹುಳುವಿನ ಕಾಟ ತಗುಲಿ ಹೆಸರು ಗಿಡವೆಲ್ಲ ನಾಶವಾಗುತ್ತಿರುವುದು ಚಿ.ನಾ.ಹಳ್ಳಿ ತಾಲ್ಲುಕಿನಾದ್ಯಂತ ಕಂಡುಬಂದಿದ್ದು ಈ ಭಾಗದ ರೈತರು ಕಂಗಾಲಾಗಿದ್ದಾರೆ.
ಮುಂಗಾರು ಮಳೆ ತನ್ನ ಪ್ರಾರಂಭದಲ್ಲಿ ಉತ್ತಮವಾಗಿ ಬಿದ್ದುದರಿಂದ ಸಂತಸಗೊಂಡ ರೈತರು ಈಗಾಗಲೆ ಮುಂಗಾರು ಬೆಳೆಗಳನ್ನು ಬಿತ್ತಿದ್ದು ಹೆಸರು.ಉದ್ದು ಸೇರಿದಂತೆ ಇತರೆ ಬೆಳೆಗಳು ಇದೀಗ ಚೆನ್ನಾಗಿ ಬೆಳೆದು ಹೂ ಬಿಡುವ ಹಂತ ತಲುಪಿರುತ್ತವೆ.ಈ ಸಮಯದಲ್ಲಿ ಹೆಸರು ಗಿಡಗಳಲ್ಲಿ ಕೆಂಪು ತಲೆ ಕಂಬಳಿಹುಳುವಿನ ಬಾಧೆ ಕಂಡುಬರುತ್ತಿದ್ದು,ಕಂಬಳಿ ಹುಳುಗಳು ಸಣ್ಣ ಮರಿಗಳಿಂದ ಪ್ರೌಢಾವಸ್ಥೆಗೆ ಬರುವ ಹಂತದಲ್ಲಿ ಹೆಸರು ಗಿಡಗಳನ್ನು ಪೂರ್ಣವಾಗಿ ತಿನ್ನುವುದಲ್ಲದೆ,ಬದುಗಳಲ್ಲಿನ ಮೆತ್ತನೆಯ ಹುಲ್ಲನ್ನು ಭಕ್ಷಿಸುತ್ತದೆ.ಈ ಹುಳುಗಳು ಕೆಲ ದಿನಗಳಲ್ಲಿ ಇಡಿ ಬೆಳೆಯನ್ನೆ ತಿಂದು ನಾಶಮಾಡುವ ಶಕ್ತಿಯನ್ನು ಹೊಂದಿದ್ದು, ಬೆಳೆ ಸಂಪೂರ್ಣ ನಾಶಹೊಂದುವ ಸಂಕಷ್ಟದ ಪರಿಸ್ಥಿತಿ ರೈತರಿಗೆ ಎದುರಾಗಿದೆ.
ಈ ಹುಳುವಿನ ತೊಂದರೆ ಹುಳಿಯಾರು ಹೋಬಳಿಯ ಕೋರಗೆರೆ,ಯಳನಡು,ಹಂದನಕೆರೆ ಭಾಗದ ದೊಡ್ಡಎಣ್ಣೆಗೆರೆ ಗ್ರಾಮ ಪಂಚಾಯ್ತಿಯ ಊರುಗಳಲ್ಲಿ ಹೆಚ್ಚಾಗಿ ಕಂಡುಬಂದಿರುತ್ತದೆ.ರೈತರು ತಮಗೆ ತಿಳಿದ ಕೀಟನಾಶಕವನ್ನು ಸಿಂಪಡಿಸಿದರೂ ಸಹ ಯಾವುದೇ ಪ್ರಯೋಜನ ಕಂಡುಬಾರದೆ ಈ ಬಾರಿಯೂ ಹೆಸರು ಬೆಳೆ ತಮ್ಮ ಕೈತಪ್ಪಲಿದೆಯ ಎಂಬ ಆತಂಕ ವ್ಯಕ್ತವಾಗಿದೆ,
ಹುಳುವಿನ ಹತೋಟಿ ಕ್ರಮ: ಕೆಂಪುತಲೆಹುಳುವಿನ ಹತೋಟಿಗೆ ಸಂಬಂಧಿಸಿದಂತೆ ಕೃಷಿಇಲಾಖೆಯು ಗಮನ ಹರಿಸಿದ್ದು ಕೆಲವೊಂದು ಗೊಬ್ಬರ ಹಾಗೂ ಕೀಟ ನಾಶಕದ ಬಳಕೆಯನ್ನು ತಿಳಿಸಿದ್ದಾರೆ.ಶೇ.5 ರಷ್ಟು ಪೆನ್ವಿಲರೇಟ್ ಧೂಳನ್ನು ಪ್ರತಿ ಎಕರೆಗೆ ಎಂಟು ಕೆ.ಜಿ.ಯಂತೆ ಧೂಳಿಕರಿಸುವ ಮೂಲಕ ಕೀಟವನ್ನು ಅತ್ಯುತಮವಾಗಿ ಹತೋಟಿ ಮಾಡಬಹುದಾಗಿದೆ.. ಶೇ.5ರಷ್ಟು ಮೀಥೈಲ್ ಪ್ಯಾರಥೀನ್ ಧೂಳು ಎಂಟು ಕೆ.ಜಿ ಅಥವಾ ಪೆನ್ವಿಲರೇಟ್ 20% ಇಸಿಯನ್ನು ಒಂದು ಲೀಟರ್ ಗೆ ಒಂದು ಮಿ.ಲಿಯಂತೆ ಸಿಂಪರಣೆ ಮಾಡುವ ಮೂಲಕ ಹುಳುವಿನ ತೊಂದರೆ ತಡೆಗಟ್ಟಬಹುದಾಗಿದೆ.ಬೆಳೆಗಳಿಗೆ ಶಿಪಾರಸ್ಸಿನಂತೆ ಮಾತ್ರ ರಸಗೊಬ್ಬರ ಉಪಯೋಗಿಸಬೇಕಿದ್ದು, ಯೂರಿಯಾವನ್ನು ಅಗತ್ಯಕ್ಕೆ ತಕ್ಕಂತೆ ಬಳಸದೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿದಲ್ಲಿ ಕೀಟಗಳ ಮತ್ತು ರೋಗಗಳ ಹಾವಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು,ಬೆಳೆಗಳು ನಾಶಹೊಂದುತ್ತವೆ. ಈ ಭಾಗದ ಎಲ್ಲಾರೈತರು ಸಾಮೂಹಿಕವಾಗಿ ಸಸ್ಯ ಸಂರಕ್ಷಣಾ ಕ್ರಮವನ್ನು ಅನುಸರಿಸುವ ಮೂಲಕ ಬೆಳೆಯಳನ್ನು ರಕ್ಷಿಸಿ ಕೊಳ್ಳುವ ಕಾರ್ಯದಲ್ಲಿ ಕೈಜೋಡಿಸಬೇಕಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ತಿಳಿಸುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ