ಸಂಕಷ್ಟದಲ್ಲಿದ್ದ ತೆಂಗುಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಸದನದಲ್ಲಿ ಚರ್ಚೆ ನಡೆದು ಜೂನ್ ಹನ್ನೆರಡರಿಂದಲೇ ಕೊಬ್ಬರಿ ಉತ್ಪಾದನಾ ಪ್ರದೇಶಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ (ನಾಫೆಡ್) ತೆರೆದು ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಸಹಾಯಧನ ಸೇರಿದಂತೆ 6500ರೂಗೆ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶಹೊರಡಿಸಿದ್ದರೂ ಸಹ ಎಲ್ಲಿಯೂ ಖರೀದಿ ಕೇಂದ್ರಗಳು ನಿಗಧಿತವಾಗಿ ಪ್ರಾರಂಭವಾಗದೇ ತೆಂಗುಬೆಳೆಗಾರು ಗೊಂದಲಕ್ಕಿಡಾಗಿದ್ದಾರೆ.
ಅಂತೆಯೇ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದುವರೆಗೂ ನಾಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭವಾಗದೆ ಈ ಭಾಗದ ತೆಂಗು ಬೆಳೆಗಾರರು ಮಾರುಕಟ್ಟೆಗೆ ನಿತ್ಯವೂ ಅಲೆಯುವಂತಾಗಿದೆ.
ತೆಂಗು ಹಾಗೂ ಕೊಬ್ಬರಿ ಬೆಲೆಯಲ್ಲಿ ಬಾರಿ ಇಳಿಕೆಯಿಂದಾಗಿ ಮಾರುಕಟ್ಟೆಯಲ್ಲಿನ ನಿಂಬೆಹಣ್ಣಿನ ಬೆಲೆಗಿಂತ ಕಡಿಮೆಯಿದೆ ಎಂದು ವಿಧಾನಸಭೆಯಲ್ಲಿ ಕೂಡ ಚರ್ಚೆನಡೆಯುವಂತಾದ ಹಿನ್ನಲೆಯಲ್ಲಿ ತೆಂಗುಬೆಳೆಗಾರ ಸಂಕಷ್ಟ ಅರಿತ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಸಾವಿರ ರೂ ಸಹಾಯಧನ ನೀಡಿ ಖರೀದಿಗೆ ಒಪ್ಪಿಗೆ ನೀಡಿತ್ತು. ತೆಂಗಿನ ಇಳುವರಿಯಲ್ಲಿ ಕುಂಟಿತ ಹಾಗೂ ಕೊಬ್ಬರಿಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗಿದ್ದ ತೆಂಗುಬೆಳೆಗಾರಿಗೆ ಇಂತಹ ಸಮಯದಲ್ಲಿ ರಾಜ್ಯ ಸರ್ಕಾರದ ಈ ಆದೇಶ ಸಂತಸ ತಂದಿತ್ತು. ಸರ್ಕಾರದ ಆದೇಶದಂತೆ ಹನ್ನೆರಡರಿಂದಲೇ ನಾಫೆಡ್ ಕೇಂದ್ರಗಳು ಪ್ರಾರಂಭವಾಗಿರುತ್ತವೆ ಎಂದು ತಿಳಿದು ಕೊಬ್ಬರಿ ಮಾರಲು ಮಾರುಕಟ್ಟೆಗೆ ಬಂದರೆ ಅಲ್ಲಿ ಕೊಬ್ಬರಿ ಖರೀದಿ ಕೇಂದ್ರ ಇನ್ನೂ ಪ್ರಾರಂಭವಾಗಿಲ್ಲ ಎಂಬ ವಿಷಯ ಕೇಳಿದ ಬೆಳೆಗಾರರು ನಿರಾಸೆಯಿಂದ ತಾವು ತಂದಿದ್ದ ಕೊಬ್ಬರಿಯನ್ನು ವಾಪಸ್ಸು ಮನೆಗೆ ತೆಗೆದುಕೊಂಡು ಹೋಗಲಾರದೇ ವರ್ತಕರಿಗೆ ಇರುವಷ್ಟು ಬೆಲೆಗೆ ಮಾರುವಂತ ಪರಿಸ್ಥಿತಿ ಎದುರಾಗಿದೆ.
ವರ್ತಕರಿಗೆ ಅನುಕೂಲ: ನಾಫೆಡ್ ಬಗ್ಗೆ ಪ್ರಚಾರದ ಕೊರತೆ ಹಾಗೂ ನಿಗದಿತ ಸಮಯದಲ್ಲಿ ಕೇಂದ್ರ ಆರಂಭಿಸದಿದ್ದಲ್ಲಿ ವರ್ತಕರುಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ.ಕಾಲಾವಕಾಶ ದೊರೆಯುವುದರಿಂದ ರೈತರ ಕೊಬ್ಬರಿಯನ್ನು ಕೊಂಡು ದಾಸ್ತಾನು ಮಾಡಿಕೊಂಡು ಕೇಂದ್ರ ಆರಂಭವಾಗುತ್ತಿದ್ದಂತೆಯೇ ಮಾರಾಟಕ್ಕೆ ಮುಂದಾಗುತ್ತಾರೆ, ಕ್ವಿಂಟಾಲ್ ಗೆ ಸಾವಿರಕ್ಕೂ ಹೆಚ್ಚಿನ ಲಾಭಗಳಿಸುತ್ತಾರೆ. ಇದಕ್ಕೆ ನಿದರ್ಶನವಾಗಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ಆದೇಶವನ್ನು ಸರ್ಕಾರ ಹೊರಡಿಸುವುದಕ್ಕಿಂತ ಮುಂಚೆ ಹುಳಿಯಾರಿನ ಮಾರುಕಟ್ಟೆಯಲ್ಲಿ ಕೆಲ ತಿಂಗಳುಗಳಿಂದ 4400ರ ಅಜುಬಾಜಿನಲ್ಲಿದ್ದ ಕೊಬ್ಬರಿ ಬೆಲೆ ಇದೀಗ ಧಿಡೀರನೆ 5 ಸಾವಿರಕ್ಕೆ ಹೆಚ್ಚಳ ಮಾಡುವ ಮೂಲಕ ರೈತರನ್ನು ತಮ್ಮತ್ತ ಸೆಳೆಯುತ್ತಿದ್ದು,ಹೆಚ್ಚಿನ ಸಂಗ್ರಹಕ್ಕೆ ಮುಂದಾಗಿದ್ದಾರೆ.
ತಾ.20ರಿಂದ ಖರೀದಿ ಪ್ರಾರಂಭ : ಮಾರುಕಟ್ಟೆ ಆವರಣದಲ್ಲಿ ಖರೀದಿಕೇಂದ್ರದ ಬಗ್ಗೆ ಯಾವೊಂದು ಪ್ರಚಾರ ವಿಲ್ಲದಿರುವುದರ ಬಗ್ಗೆ ಮಾರುಕಟ್ತೆ ಸಮಿತಿಯನ್ನು ವಿಚಾರಿಸಲಾಗಿ 12ಕ್ಕೆ ಪ್ರಾರಂಭ ಎಂದು ಪತ್ರಿಕೆಯಲ್ಲಿ ಬಂದಿದ್ದೆ ವಿನ: ತಮಗೆ ಯಾವುದೇ ರೀತಿಯ ಆದೇಶ ಬಂದಿಲ್ಲ. ಕೇಂದ್ರ ಪ್ರಾರಂಭಿಸಲು ನಾಫೆಡ್ ಅಧಿಕಾರಿಗಳು ಯಾರೊಬ್ಬರೂ ಇದುವರೆವಿಗೂ ಬಂದಿಲ್ಲ. ಹಾಗಾಗಿ ಇನ್ನೂ ನಾಫೆಡ್ ಕೇಂದ್ರ ಪ್ರಾರಂಭವಾಗಿಲ್ಲ. ತಾ.19ರಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯವರು ಖರೀದಿ ಕೇಂದ್ರದ ಉದ್ಘಾಟನೆ ಮಾಡಲಿದ್ದು, ತಾ.20 ರಿಂದ ಕೊಬ್ಬರಿ ಖರೀದಿ ಪ್ರಾರಂಬಗೊಳ್ಳಲಿದ್ದು, ಪ್ರತಿ ಕ್ವಿಂಟಾಲ್ ಗೆ 5500ರೂ ಮತ್ತು ಸಹಾಯಧನ 1000ರೂ ನಂತೆ ಖರೀದಿ ನಡೆಯಲಿದೆ,ಪ್ರತಿ ಹತ್ತು ಕ್ವಿಂಟಾಲ್ ಗೆ ಮಾತ್ರ ಸಹಾಯಧನ ಸೀಮಿತವಾಗಿದ್ದು ಬೆಳೆಗಾರರ ಪಹಣಿ ಆಧಾರದ ಮೇಲೆ ಕೊಬ್ಬರಿ ನಡೆಯಲಿದೆ ಎಂದು ಕಾರ್ಯದರ್ಶಿ ಜಯರಾಮ್ ತಿಳಿಸಿದರು.
ಪ್ರತಿ ಬಾರಿಯೂ ಖರೀದಿಕೇಂದ್ರ ಪ್ರಾರಂಭಿಸುವಾಗ ಗೋಡನ್,ದಾರ,ಚೀಲ ಇಲ್ಲ ಅನ್ನುವ ಸಮಸ್ಯೆಗಳೆಲ್ಲಾ ಮುಂದಿಟ್ಟುಕೊಂಡು ಖರೀದಿ ತಡವಾಗುತ್ತಿತ್ತು,ಈ ಬಾರಿ ಅದರ ಪುನರಾವರ್ತನೆಗೆ ಅವಕಾಶ ನೀಡದಂತೆ ಖರೀದಿ ಕೇಂದ್ರ ಶೀಘ್ರ ಪ್ರಾರಂಭಿಸಿದಲ್ಲಿ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ