ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಹಾಗೂ ಜಿಲ್ಲಾಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ಫೆಬ್ರುವರಿ 28ರಂದು) ಚುನಾವಣೆ ನಡೆಯುತ್ತಿದ್ದು, ಹುಳಿಯಾರಿನಲ್ಲೂ ಕೂಡ ಶುಕ್ರವಾರ ,ಶನಿವಾರದಂದು ಚುನಾವಣಾ ಪ್ರಚಾರ ಕಂಡುಬಂತು.
ತಾಪಂ ಜಿಪಂ ಚುನಾವಣೆಯ ಹಿನ್ನಲೆಯಲ್ಲಿ ಮಂಕಾಗಿದ್ದ ಪರಿಷತ್ ಚುನಾವಣೆ ಇದೀಗ ಗರಿಗೆದರಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ೨೩೫ ಮತದಾರರನ್ನು ಹೊಂದಿರುವ ಹುಳಿಯಾರು ಪ್ರತಿಷ್ಠೆಯ ಕಣವಾಗಿದೆ.ಹೆಚ್ಚಿನ ಚಟುವಟಿಕೆಯಿಂದ ಕೂಡಿ ಜಿಲ್ಲೆಯಲ್ಲಿ ಹೆಸರಾಗಿದ್ದ ಹುಳಿಯಾರು ಕಸಾಪ ಹೋಬಳಿ ಘಟಕ ಕೂಡ ಬಣ ರಾಜಕೀಯಕ್ಕೆ ಬಲಿಯಾಗಿರುವುದರಿಂದ ಪರಿಷತ್ ಕಾರ್ಯಚಟುವಟಿಕೆಗೆ ಹಿನ್ನಡೆಯಾಗಿದೆ.
![]() |
ಭಾನುವಾರದಂದು ನಡೆಯಲಿರುವ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಹುಳಿಯಾರಿನಲ್ಲಿ ಅಭ್ಯರ್ಥಿಪರ ಕಂಡುಬಂದ ಪ್ರಚಾರ. |
ಕಳೆದ ಚುನಾವಣೆಯಲ್ಲಿ ಬಸವಮೂರ್ತಿಯವರು ಈ ಭಾಗದಲ್ಲಿ ಹೆಚ್ಚಿನ ಅಸ್ಥೆವಹಿಸಿ ಕ್ರಿಯಾಶೀಲರಾಗಿದ್ದರಿಂದ ಜಿಲ್ಲಾ ಅಧ್ಯಕ್ಷ ಸ್ಥಾನ ಸೋಮುಭಾಸ್ಕರಾಚಾರ್ ಅವರಿಗೆ ಈ ಭಾಗದಿಂದ ಹೆಚ್ಚಿನ ಮತಗಳು ಒಲಿಯುವಂತಾಯಿತು.ಹಾಗಾಗಿ ಹಾಲಿ ಅಭ್ಯರ್ಥಿಗಳು ಹುಳಿಯಾರನ್ನು ಹೆಚ್ಚು ಕೇಂದ್ರಿಕರಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪರವಾಗಿ ತಿಂಗಳಿಂದಲೂ ಪ್ರಚಾರ ನಡೆಸಿದ್ದು ಕಸಾಪ ಸಂಘಟಕರ ಮೂಲಕ ಹೆಚ್ಚಿನವರು ಶಾಲೆಗಳಿಗೆ ತೆರಳಿ ಶಿಕ್ಷಕರುಗಳ ಮತಯಾಚಿಸಿದ್ದಾರೆ. ನಿನ್ನೆಮೊನ್ನೆಯಿಂದ ಪ್ರತಿಯೊಬ್ಬ ಮತದಾರರಿಗೂ ಫೋನ್ ಮುಖಾಂತರ ಕೂಡ ತಲುಪಿದ್ದು ಪ್ರಚಾರ ಜೋರು ಪಡೆದಿದೆ.
ಬಾ.ಹ.ರಮಾಕುಮಾರಿ, ಉಮಾಮಹೇಶ್, ಡಿ.ಚಂದ್ರಪ್ಪ, ಗರುಗದೊಡ್ಡಿ ನಟರಾಜ್, ಪುರುಷೋತ್ತಮ್, ಮಹಾದೇವಪ್ಪ ಕಣದಲ್ಲಿ ಉಳಿದಿದ್ದು ಚಿಕ್ಕನಾಯಕನಹಳ್ಳಿ ಕಸಾಪ ಅಧ್ಯಕ್ಷ ರವಿಕುಮಾರ್ ಕಣದಿಂದ ನಿವೃತ್ತಿಯಾಗಿದ್ದಾರೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ಅಭ್ಯರ್ಥಿಯಾಗಿ ಬಾ.ಹ.ರಮಾಕುಮಾರಿ ಕಣದಲ್ಲಿರುವುದು ವಿಶೇಷವಾಗಿದ್ದು ಇವರ ಪರವಾಗಿ ಸೃಜನಾ ಮಹಿಳಾ ಸಂಘಟನೆ ಸದಸ್ಯರು ಹಾಗೂ ಬಸ್ ಏಜೆಂಟ್ ಗಂಗಾಧರ್ ಹೆಚ್ಚಿನ ಪ್ರಚಾರದಲ್ಲಿ ತೊಡಗಿರುವುದು ಅವರ ಹೆಸರು ಚಾಲ್ತಿಯಲ್ಲಿರುವಂತೆ ಮಾಡಿದೆ.
ಡಿ.ಚಂದ್ರಪ್ಪ ಹಾಗೂ ಉಮಾ ಮಹೇಶ್ ಕೂಡ ಇಲ್ಲಿನ ಸದಸ್ಯರುಗಳನ್ನು ಭೇಟಿಯಾಗಿ ಮತಯಾಚಿಸಿದ್ದಾರೆ.ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪ್ರಚಾರ ಕಂಡುಬಂದಿದ್ದು ಕೇಂದ್ರ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಂಗನೇಶ ಬಾದವಾಡಗಿ ಖುದ್ದಾಗಿ ಬಂದಿದ್ದು ಬಿಟ್ಟರೆ ಮತ್ಯಾವ ಕೇಂದ್ರ ಅಭ್ಯರ್ಥಿಗಳ ಪ್ರಚಾರ ಅಷ್ಟಾಗಿ ಕಂಡುಬಂದಿಲ್ಲ.
-------------------------------
ತಾಲ್ಲೂಕ್ ಕೇಂದ್ರಗಳಲ್ಲಿ ನಡೆಯುತ್ತಿದ್ದ ಪರಿಷತ್ ಚುನಾವಣೆ ಹೋಬಳಿ ಮತದಾರರ ಅನುಕೂಲ ದೃಷ್ಟಿಯಿಂದ ಹುಳಿಯಾರಿನ ನಾಡ ಕಚೇರಿಯಲ್ಲಿ ಹೆಚ್ಚುವರಿ ಮತಗಟ್ಟೆಯ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೂ ಮತದಾನ ನಡೆಯಲಿದೆ.
------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ