ಮನೆ ಮನೆ ಪ್ರಚಾರ : ಕೊನೆಗಳಿಗೆ ಕಾರ್ಯಾಚರಣೆ
-----------------------------------
ಹುಳಿಯಾರು:ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕ್ಷಣಗಣನೆ ನಡೆದಿದ್ದು ಶನಿವಾರದ ಮತದಾನದಲ್ಲಿ ಹಣಾಹಣಿ ನಡೆಸಿದ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.
೪೮ ಗಂಟೆಗಳ ಮೊದಲೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದು,ಗುರುವಾರದಿಂದ ಶುರುವಾದ ಮನೆಮನೆ ಪ್ರಚಾರ ರಾತ್ರಿ ಹಗಲ್ಲೆನ್ನದೆ ಭರದಿಂದ ನಡೆದಿದೆ.ಇಷ್ಟು ದಿನ ಮಾಡಿದ ಪ್ರಚಾರ ಒಂದು ರೀತಿಯಾದಾದ್ದರೆ ಕಡೆಕ್ಷಣದಲ್ಲಿ ನಡೆಯುವ ಕಸರತ್ತು ಮತದಾರರ ಮನಬದಲಾಯಿಸಿ ಫಲಿತಾಂಶದಲ್ಲಿ ಬದಲಾವಣೆ ತರಲಿದೆ.
ಅಭ್ಯರ್ಥಿಗಳಿಗೆ ಕಡೆಯ ಎರಡು ದಿನಗಳು ಮುಖ್ಯವಾಗಿದ್ದು ಎಲ್ಲಾ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಹಳ್ಳಿ ಪಟ್ಟಣವೆನ್ನದೆ ರಾತ್ರಿಯೆಲ್ಲಾ ತಮ್ಮ ಹಿಂಬಾಲಕರೊಂದಿಗೆ ಕಡೆಕ್ಷಣದ ಕಾರ್ಯಾಚರಣೆಗೆ ಇಳಿದಿದ್ದು ಎಲ್ಲೆಡೆ ಬಿರುಸಿನ ಚಟುವಟಿಕೆ ಕಂಡುಬಂತು. ಆಯಾ ಜಾತಿ ಜನಾಂಗದ ಮುಖಂಡರುಗಳನ್ನು ,ಸಂಘಸಂಸ್ಥಗಳ ಪ್ರತಿನಿಧಿಗಳನ್ನು ಆಯಾ ಮುಖಂಡರುಗಳಿಗೆ ಹತ್ತಿರವಾದವರ ಮೂಲಕ ಗುಪ್ತಸ್ಥಳಗಳಲ್ಲಿ ಭೇಟಿಯಾಗಿ ಮಾತುಕಥೆಯಾಡುವುದು ನಡೆದಿತ್ತು.
ಸಮಯದ ಪರಿವೆಯಿಲ್ಲದಂತೆ ರಾತ್ರಿಯೆಲ್ಲಾ ಗುಪ್ತ ಸಭೆಗಳು ನಡೆದು ಕೊನೆಗಳಿಗೆಯ ಕಾರ್ಯಾಚರಣೆಯಲ್ಲಿ ಹಂಚಿಕೆ ವ್ಯವಸ್ಥೆ ಎಗ್ಗಿಲ್ಲದೆ ನಡೆದಿದೆ.ಎಲ್ಲಾ ಪಕ್ಷದವರು ಅಲ್ಪಸಂಖ್ಯಾತರ ಮನವೊಲಿಕೆಗಾಗಿ ಮಸೀದಿಗಳಿಗೆ ತೆರಳಿ ಮತಹಾಕಲು ಮನವಿ ಮಾಡಿದ್ದು ವಿಶೇಷವಾಗಿತ್ತು.ಪ್ರತಿಯೊಬ್ಬ ಮತದಾರರ ಭೇಟಿಯಾಗುವ ಬದಲಿಗೆ ಆಯಾ ಜಾನಾಂಗದ, ಏರಿಯಾದ ಮುಖಂಡರುಗಳನ್ನು ಭೇಟಿಯಾಗಿ ಮನವೊಲಿಕೆಯಲ್ಲಿ ತೊಡಗಿದ್ದರು.ಇನ್ನು ಕೆಲವಡೆ ದೇವಾಲಯಗಳಲ್ಲೂ ಗ್ರಾಮಸ್ಥರ ಸಮ್ಮುಖ ಸಭೆ ನಡೆಸಿದ್ದು ಕಂಡುಬಂತು.
ಗ್ರಾಮಗಳ ಮುಖಂಡರುಗಳು ಹೇಳುವ ,ಕೇಳುವ ಬೇಡಿಕೆಗಳನ್ನು ಈಡೇರಿಸಿದರೆ ಫಲಿತಾಂಶ ನಮ್ಮಂತೆ ಆಗುತ್ತದೆಂಬ ನಂಬಿಕೆಯಿಂದಾಗಿ ಅವರುಗಳನ್ನು ಗುಪ್ತವಾಗಿ ಭೇಟಿಯಾಗಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ನಾಯಕರುಗಳನ್ನು ಓಲೈಸುತ್ತಿದ್ದರು.ಎಲ್ಲಾ ಅಭ್ಯರ್ಥಿಗಳು ಸಿಕ್ಕಸಿಕ್ಕವರಿಗೆಲ್ಲಾ ಕೈ ಮುಗಿದು ಈ ಬಾರಿ ನಮ್ಮ ಕೈಹಿಡಿಯಿರಿ ಎನ್ನುವುದು ಮಾಮೂಲಿಯಾಗಿತ್ತು.
ಚುನಾವಣೆ ಎಂದರೆ ಹಣ ಹೆಂಡ ಎನ್ನುವಷ್ಟರ ಮಟ್ಟಿಗೆ ಮಾಮೂಲು ವಿಚಾರವಾಗಿದ್ದು ಹಣವಿಲ್ಲದೆ ಚುನಾವಣೆ ನಡೆಸುವುದು ಅಸಾಧ್ಯವಾಗಿದ್ದು ಇದರಿಂದಲೇ ಅಭ್ಯರ್ಥಿಯ ಸೋಲುಗೆಲುವು ನಿರ್ಧರಿಸಬಹುದಾಗಿದೆ. ಹಣಹಂಚಿಕೆ ವಿಚಾರದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಕೈ ಬಿಚ್ಚಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಮತಕ್ಕಿಷ್ಟು ಎಂದು ಮೊದಲೆ ನಿರ್ಧಾರ ಮಾಡಿದ್ದು ಹೆಚ್ಚು ಮತದಾರರು ಇರುವ ಕುಟುಂಬಗಳಿಗೆ ಹೆಚ್ಚು ಹಣ ನೀಡಿ ಎಲ್ಲಾ ಮತ ತಮಗೆ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಣಕೊಟ್ಟು ಆಣೆಪ್ರಮಾಣ ಮಾಡಿಸಿಕೊಂಡಿದ್ದು ನಡೆದಿದೆ.
ಮತದಾರರನ್ನು ಬೂತಿಗೆ ಕರೆತಂದು ಮತಹಾಕಿಸಿಕೊಂಡು ಕಳುಹಿಸಲು ಎಲ್ಲಾ ಅಭ್ಯರ್ಥಿಗಳು ವಾಹನದ ವ್ಯವಸ್ಥೆ ಮಾಡಿಕೊಂಡಿದ್ದು ಪಟ್ಟಣದ್ದಲ್ಲಿ ವಾಹನೆಗಳೆ ಇಲ್ಲದಂತಾಗಿದೆ.ಪರಊರಿನಲ್ಲಿರುವ ಮತದಾರರನ್ನು ಖರ್ಚುಕೊಟ್ಟು ಕರೆಯಿಸಿಕೊಳ್ಳುವ ವ್ಯವಸ್ಥೆ ಕೂಡ ಮಾಡಲಾಗಿದೆ.
ಒಟ್ಟಾರೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಹುಳಿಯಾರು ಕ್ಷೇತ್ರದ ಆರು ಜನ ಜಿಲ್ಲಾಪಂಚಾಯ್ತಿ ಅಭ್ಯರ್ಥಿಗಳು ಹಾಗೂ ಮೂರು ಜನ ತಾಲ್ಲೂಕ್ ಪಂಚಾಯ್ತಿ ಅಭ್ಯರ್ಥಿಗಳಲ್ಲಿ ಗೆಲ್ಲುವ ಅಭ್ಯರ್ಥಿ ಯಾರೆಂದು ನಿರ್ಧಾರವಾಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ