ಮುಂಚೆಯಿದ್ದ ಕಲ್ಲುಚಪ್ಪಡಿ ಮಾರಿ ಲಕ್ಷಾಂತರ ರೂಪಾಯಿ ಗುಳುಂ:
ಮಾಜಿ ಉಪಾಧ್ಯಕ್ಷ ಸೈಯದ್ ಜಹೀರ್ ಸಾಬ್ ಆರೋಪ
ಹುಳಿಯಾರು:ಪಟ್ಟಣದ ಐದನೇ ಬ್ಲಾಕ್ ಸೇರಿದಂತೆ ಹಲವೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲು ಪಿಚ್ಚಿಂಗ್ ಆಗಿದ್ದ ರಸ್ತೆಯಲ್ಲಿ ಮಾತ್ರವೇ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು ಅಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಲ್ಲುಚಪ್ಪಡಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಈ ಕೂಡಲೆ ಕಲ್ಲುಚಪ್ಪಡಿಗಳನ್ನು ಪಂಚಾಯ್ತಿ ಆವರಣಕ್ಕೆ ತಂದಿಡಿಸಬೇಕೆಂದು ಮಾಜಿ ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಸೈಯದ್ ಜಹೀರ್ ಸಾಬ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಹತ್ತುಹಲವಾರು ಕಾಮಗಾರಿಗಳು ನಡೆದಿರುವುದಾಗಿ ಕೇವಲ ದಾಖಲೆಯಲ್ಲಿ ಇದೆಯೇ ಹೊರತು ಕಾಮಗಾರಿ ನಡೆದಿರುವ ಕುರುಹುಗಳೇ ಇಲ್ಲಾ.ಸ್ಕೇರ್ಸಿಟಿಯಲ್ಲಿ ಲಕ್ಷಾಂತರ ರೂಪಾಯಿ ಪಂಚಾಯ್ತಿಗೆ ಬಂದಿದೆ.ಅಲ್ಲದೆ ೨೦೧೫-೧೬,೧೬-೧೭ ನೇ ಸಾಲಿನಲ್ಲಿ ೫೦ಲಕ್ಷ ರೂಗಳಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು ಹಣ ಮಾತ್ರ ಪೂರಾ ಬಳಕೆಯಾಗಿದೆಯೇ ಹೊರತು ಕಾಮಗಾರಿ ಮಾತ್ರ ಕಾಣುತ್ತಿಲ್ಲ.ಹಣದಲ್ಲಿ ಯಾವ ಕಾಮಗಾರಿಗಳು ನಡೆದಿವೆ,ಏನಕ್ಕೆ ಬಳಕೆ ಮಾಡಿದ್ದಾರೆ ಎಂದು ಯಾವೊಬ್ಬ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ.ಈಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.
4, 5 ನೇ ವಾರ್ಡಿಗೆ ಸಂಬಂಧಿಸಿದಂತೆ ದುರ್ಗಮ್ಮನ ಗುಡಿಬೀದಿ,ಕೇಶವ ಸ್ಕೂಲ್ ಮುಂಭಾಗ,ಚಿಕ್ಕಬಿದರೆ ಕ್ವಾಟ್ರಸ್ ನಲ್ಲಿ ಈ ಹಿಂದೆ ಕಲ್ಲುಪಿಚ್ಚಿಂಗ್ ರಸ್ತೆಯಿದ್ದು ಅದನ್ನು ಕಾಂಕ್ರೀಟ್ ರಸ್ತೆ ಮಾಡಿದ್ದಾರೆ.ಕಲ್ಲುಪಿಚ್ಚಿಂಗ್ ರಸ್ತೆಯಲ್ಲಿ ಹಾಕಲಾಗಿದ್ದ ಚಪ್ಪಡಿಕಲ್ಲು ಅಡಿಗೆ ೫೦ ರೂ ನಂತೆಯಿದ್ದು ಲಕ್ಷಾಂತರ ರೂಪಾಯಿ ಬಾಳುವ ಕಲ್ಲು ಮಾಯವಾಗಿದೆ.ಕೆಲವರು ಸ್ವಂತದ್ದೆಂಬಂತೆ ಕಲ್ಲನ್ನು ಮಾರಾಟ ಮಾಡಿದ್ದು ಇದರ ಬಗ್ಗೆ ತನಿಖೆಯಾಗಬೇಕೆಂದರು.
ಕಾಮಗಾರಿ ಪರಿಶೀಲಿಸದೆ ಹಣ ಬಿಡುಗಡೆ ಮಾಡಿರುವ ಪಿಡಿಓ ಹಾಗೂ ಅಧ್ಯಕ್ಷರು ಇದಕ್ಕೆ ಹೊಣೆಯಾಗಿದ್ದು ಕೂಡಲೇ ಖಾತ್ರಿ ಯೋಜನೆಯ ಹಣ ತಡೆಹಿಡಿಯಬೇಕೆಂದರು.
ಪಿಡಿಓ ಕೇಳಿದರೆ ನನ್ನ ಗಮನಕ್ಕೆ ಬಂದಿಲ್ಲ,ಪರಿಶೀಲಿಸಿ ಆ ಕಲ್ಲುಗಳನ್ನು ತರಿಸುವೆ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ.ಸಂಬಂಧಪಟ್ಟ ಇಂಜಿನೀಯರ್ ಕೂಡ ಈ ಬಗ್ಗೆ ಮೌನವಹಿಸಿದ್ದು ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಈ ಬಗ್ಗೆ ದೂರು ಸಲ್ಲಿಸಿರುವುದಾಗಿ ಹೇಳಿದರು.
-----------------
ಪಂಚಾಯ್ತಿ ಸ್ವತ್ತು ಸಾರ್ವಜನಿಕರ ಸ್ವತ್ತಾಗಿದ್ದು ಪಂಚಾಯ್ತಿಯಲ್ಲಿ ಪ್ರತಿಯೊಂದು ಕಾಮಗಾರಿಯ ಬಗ್ಗೆ ವಿವರವಾದ ರೆಸಲ್ಯೂಷನ್ ಆಗಿರಬೇಕು.ಕಾಮಗಾರಿ ನಡೆದಿರುವ ಬಗ್ಗೆ ಇಂಜಿನೀಯರ್ ಸ್ಥಳ ತನಿಖೆ ಮಾಡಬೇಕು,ಕಾಮಗಾರಿಯ ಗುಣಮಟ್ಟ ಪರೀಕ್ಷಿಸಬೇಕು.ಆದರೆ ಇಲ್ಲಿ ಇಂಜಿನೀಯರ್ ಬಾರದೆ,ಪರಿಶೀಲನೆ ನಡೆಸದೆ,ಹಳೆಯ ವಸ್ತುಗಳು ಏನಾದವೆಂದು ನೋಡದೆ,ಹಣ ಬಿಡುಗಡೆ ಮಾಡಲಾಗಿದೆ.ಈ ಕೂಡಲೇ ಉದ್ಯೋಗ ಖಾತ್ರಿಯ ಕೂಲಿ ಹಣವನ್ನು ತಡೆಹಿಡಿಯಬೇಕು.ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.
------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ