ಹುಳಿಯಾರು:ಪಟ್ಟಣದ ಟಿ.ಆರ್.ಎಸ್.ಆರ್ ಪ್ರೌಢಶಾಲೆ , ಕನಕದಾಸ ಪ್ರೌಢಶಾಲೆ ಹಾಗೂ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಸೇರಿದಂತೆ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು ೬೨೮ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆದರು.ಪ್ರಾರಂಭಿಕ ಹಂತದ ಕೆಲವೊಂದು ಗೊಂದಲಗಳನ್ನು ಬಿಟ್ಟರೆ ಪರೀಕ್ಷೆ ಯಾವುದೇ ಸಮಸ್ಯೆಯಿಲ್ಲದಂತೆ ಸುಗಮವಾಗಿ ನಡೆಯಿತು.
ಹುಳಿಯಾರಿನ ಟಿ.ಆರ್.ಎಸ್.ಆರ್ ಪ್ರೌಢಶಾಲೆಗೆ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು. |
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರುಗಳೊಂದಿಗೆ ಮುಂಚಿತವಾಗಿಯೇ ಆಗಮಿಸಿ ತಮ್ಮ ಕೊಠಡಿ ಸಂಖ್ಯೆಯನ್ನು ಗಮನ ಮಾಡುತ್ತಿದ್ದ ದೃಶ್ಯ ಎಲ್ಲಾ ಕೇಂದ್ರಗಳಲ್ಲೂ ಕಂಡುಬಂತು.
ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಬೆ.9.೦೦ರಿಂದ 9.30 ಸಮಯದೊಳಗೆ ಕೊಠಡಿಗೆ ಹಾಜರಾಗಬೇಕಾಗಿತ್ತು.ಆದರೆ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇದರ ಅರಿವಿಲ್ಲದೆ ಎಂಟುಗಂಟೆಯಿಂದಲೇ ವಿದ್ಯಾರ್ಥಿಗಳಿಗೆ ಕೊಠಡಿಪ್ರವೇಶಕ್ಕೆ ಅವಕಾಶ ಮಾಡಲಾಗಿತ್ತು.ಈ ಬಗ್ಗೆ ಬಿಇಓ ಗಮನಕ್ಕೆ ತರುತ್ತಿದ್ದಂತೆ ಕೊಠಡಿಯನ್ನು ಬಂದ್ ಮಾಡಲಾಯಿತು.ಕೊಠಡಿಗಳ ಸಂಖ್ಯೆ ಹಾಗೂ ಅಲ್ಲಿ ಬರೆಯಬೇಕಾಗಿರುವ ವಿದ್ಯಾರ್ಥಿಗಳ ರಿಜಿಸ್ಟರ್ ಸಂಖ್ಯೆಯನ್ನು ಸ್ವಚ್ಚವಾದ ನೋಟೀಸ್ ಬೋರ್ಡಿನಲ್ಲಿ ಬರೆಯದೆ ಎ೪ ಶೀಟಿನಲ್ಲಿ ಚಿಕ್ಕದಾಗಿ ಬರೆದು ಅಂಟುಹಾಕಿದ್ದು ಅದರ ಮೇಲೆಯೇ ನವೋದಯ ಪರೀಕ್ಷೆಯ ಕೊಠಡಿ ಎಂದು ಬರೆದಿದ್ದು ಇವರುಗಳ ಬೇಜವ್ದಾರಿತನ ಎದ್ದು ಕಾಣುವಂತೆ ಮಾಡಿತ್ತು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ನೋಟೀಸ್ ಬೋರ್ಡ್ ಸ್ವಚ್ಚಗೊಳಿಸದೆ ಕಾಟಾಚಾರಕ್ಕೆಂಬಂತೆ ಕೊಠಡಿ ಸಂಖ್ಯೆ ಹಾಗೂ ರಿಜಿಸ್ಟರ್ ಸಂಖ್ಯೆ ಬರೆದು ಅಂಟಿಸಿದ್ದು ಗೊಂದಲ ಮೂಡಿಸಿತು |
ವಿದ್ಯಾರ್ಥಿಗಳಲ್ಲಿ ಕಾಪಿ ಹೊಡೆಯುವದನ್ನು ತಪ್ಪಿಸುವ ಉದ್ದೇಶದಿಂದ ತಾವು ಓದಿದ ಶಾಲೆಯ ಬದಲು ಬೇರೊಂದು ಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು.ಪರೀಕ್ಷೆ ವೇಳೆಯಲ್ಲಿನ ಅಕ್ರಮ ತಡೆಗೆ ಕೊಠಡಿಗಳಲ್ಲಿ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿ ಎಂದು ಹೇಳುತ್ತಾ ಬಂದಿದ್ದರೂ ಸಹ ಇಲ್ಲಿನ ಯಾವುದೇ ಶಾಲೆಯ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಕಂಡುಬರಲಿಲ್ಲ. ಆದರೂ ಕೂಡ ಯಾವುದೇ ನಕಲಿಗೆ ಅವಕಾಶವಿಲ್ಲದಂತೆ ಬಿಗಿಭದ್ರತೆಯಿಂದ ಪರೀಕ್ಷೆ ನಡೆಸಲಾಯಿತು.ಇಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಜಾಗೃತ ದಳದವರು ಆಗಮಿಸಿ ಪರಿಶೀಲಿಸಿದರು.
15 ನಿಮಿಷ ವಿನಾಯಿತಿ:ಈ ಮೊದಲು ವಿದ್ಯಾರ್ಥಿಗಳು ಬೆಳಿಗ್ಗೆ 9.15ರಿಂದ 9.30ರೊಳಗೆ ಪರೀಕ್ಷಾ ಕೊಠಡಿಗೆ ಹಾಜರಾಗಲು ಸಮಯಾವಕಾಶ ನಿಗದಿ ಮಾಡಿ ನಂತರ ಬಂದವರಿಗೆ ಪ್ರವೇಶ ನಿಷೇಧಿಸಲಾಗುತ್ತಿತ್ತು.ಆದರೆ, ಇದೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 15 ನಿಮಿಷ ವಿನಾಯಿತಿ ನೀಡಿದ್ದು 9.45ರೊಳಗೆ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 9 :30 ರಿಂದ ಮಧ್ಯಹ್ನಾ 12 :30 ರವರೆಗೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ