ಹುಳಿಯಾರು:ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೆಎಸ್ಸಾರ್ಟಿಸಿ ಬಸ್ ಹುಳಿಯಾರು ನಿಲ್ದಾಣದಿಂದ ಹೊರಡುತ್ತಿದ್ದರಿಂದ ಪರಊರಿನ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ,ಬಸ್ಸನ್ನು ಪೂರ್ವ ನಿಗದಿತ ಸಮಯಕ್ಕೆ ಸರಿಯಾಗಿ ಸಂಚರಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಗ್ರಾಮಪಂಚಾಯ್ತಿ ಸದಸ್ಯರಾದ ಎಲ್.ಆರ್.ಚಂದ್ರಶೇಖರ್ ಹಾಗೂ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಹುಳಿಯಾರಿನಿಂದ ತಿಪಟೂರಿಗೆ ಕೆಎಸ್ಸಾರ್ಟಿಸಿ ಬಸ್ ಮುಂಜಾನೆ ೬.೩೦ ಹಾಗೂ ೭ ಗಂಟೆಗೆ ಹುಳಿಯಾರು ಬಸ್ ನಿಲ್ದಾಣದಿಂದ ಹೊರಡುತ್ತಿದ್ದು ಇದರಲ್ಲಿ ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮದ ನೂರಾರು ವಿದ್ಯಾರ್ಥಿಗಳು ತಿಪಟೂರಿನ ಶಾಲಾಕಾಲೇಜುಗಳಿಗೆ ತೆರಳುತ್ತಿದ್ದರು.ಕಳೆದೆರಡು ದಿನಗಳಿಂದ ಬಸ್ ಸಮಯದಲ್ಲಿ ಏಕಾಏಕಿ ಬದಲಾವಣೆಯಾಗಿದ್ದು ಎರಡು ಬಸ್ಸುಗಳು ಅರ್ಧಗಂಟೆ ಮುಂಚಿತವಾಗಿಯೇ ಹುಳಿಯಾರಿನಿಂದ ತೆರಳುತ್ತಿದ್ದರಿಂದ ಬಸ್ ಸಿಗದೆ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಸಮಸ್ಯೆಯುಂಟಾಗಿತ್ತು.ಈಗಾಗಲೇ ಪರೀಕ್ಷಾ ಸಮಯವಾಗಿದ್ದು ಬಸ್ ಸಿಗದಿದ್ದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಎರವಾಗುವುದರಿಂದ ಹಾಗೂ ಆ ಸಮಯದಲ್ಲಿ ಮತ್ತೊಂದು ಬಸ್ಸಿನ ಪರ್ಯಾಯ ವ್ಯವಸ್ಥೆಯಿಲ್ಲದೆರುವುದರಿಂದ ತೀವ್ರ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಈ ಬಗ್ಗೆ ಘಟಕ ವ್ಯವಸ್ಥಾಪಕರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ ಎಲ್.ಆರ್.ಚಂದ್ರಶೇಖರ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಸ್ಸ್ ಹೊರಡುವುದರಿಂದ ಸಾರ್ವಜನಿಕರ ಹಾಗು ವಿದ್ಯಾರ್ಥಿಗಳಿಗಾಗುತ್ತಿರುವ ಅನುಕೂಲದ ಬಗ್ಗೆ ವಿವರಿಸಿದರು.ಸಮಸ್ಯೆ ಮತ್ತೆ ಮರುಕಳಿಸಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಗದಿತ ಸಮಯಕ್ಕೆ ಬಸ್ ಸೌಲಭ್ಯಕಲ್ಪಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
-----------------
ತಿಪಟೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್ ಡಿಪೋ ಇದ್ದರೂ ಕೂಡ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ.ಆ ಡಿಪೋದಿಂದ ಹುಳಿಯಾರಿನಿಂದ ಮುಂದಕ್ಕೆ ಹಿರಿಯೂರು,ಚಿತ್ರದುರ್ಗ ಮುಂತಾದ ಭಾಗಕ್ಕೆ ಸೌಲಭ್ಯ ಕಲ್ಪಿಸಿಲ್ಲ.ಉತ್ತರ ಕರ್ನಾಟಕ ಭಾಗಕ್ಕಂತೂ ಒಂದೂ ಬಸ್ ಬಿಟ್ಟಿಲ್ಲ:ಎಲ್.ಆರ್.ಚಂದ್ರಶೇಖರ್ ,ಗ್ರಾಪಂ ಸದಸ್ಯ
-----------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ