ಗ್ರಾಮ ಸಭೆ ರದ್ದು ಮಾಡಿ ಮತ್ತೊಂದು ಸಭೆ ಕರೆಯಲು ನೋಡಲ್ ಅಧಿಕಾರಿ ಸೂಚನೆ
--------------------------------
ಹುಳಿಯಾರು : ಗ್ರಾಮಸಭೆಯ ನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ನಡೆಯುತ್ತಿದ್ದ ಗ್ರಾಮ ಸಭೆಗೆ ಲಂಚಮುಕ್ತ ವೇದಿಕೆಯ ಕಾರ್ಯಕರ್ತರ ಪ್ರವೇಶಿಸಿ ಪ್ರಶ್ನೆಮಾಡಿದ್ದರಿಂದ ತಬ್ಬಿಬ್ಬಾದ ಅಧಿಕಾರಿಗಳು ಸಭೆಯನ್ನೆ ರದ್ದು ಮಾಡಿ ಮತ್ತೊಂದು ದಿನಕ್ಕೆ ಮುಂದೂಡಿದ ಘಟನೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂನಲ್ಲಿ ಜರುಗಿದೆ.
ಹುಳಿಯಾರು ಹೋಬಳಿಯ ಯಳನಾಡುವಿನಲ್ಲಿ ನಿಯಮ ಪಾಲಿಸದೆ ನಡೆಯುತ್ತಿದ್ದ ಗ್ರಾಮಸಭೆ ಬಗ್ಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರು ಪ್ರಶ್ನಿಸಿದ್ದರಿಂದ ಗ್ರಾಮಸಭೆಯನ್ನು ಅರ್ಧಕ್ಕೆ ರದ್ದುಪಡಿಸಿ ಮುಂದೂಡಲಾಯಿತು. |
ಯಳನಾಡು ಗ್ರಾಮ ಪಂಚಾಯ್ತಿಯಿಂದ ಉದ್ಯೋಗಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯನ್ನು ಕಛೇರಿ ಆವರಣದಲ್ಲಿ ಕರೆಯಲಾಗಿತ್ತು. ಆದರೆ ಗ್ರಾಮ ಸಭೆಯ ಕನಿಷ್ಠ ನಿಯಮಗಳನ್ನು ಪಾಲಿಸಲು ಮುಂದಾಗದೆ ಕೇವಲ ದಾಖಲೆಗಷ್ಟೆ ಎನ್ನುವಂತೆ ಸಭೆ ನಡೆಸುತ್ತಿದ್ದರು. ನೆರೆದಿದ್ದ ಸಾರ್ವಜನಿಕರೂ ಸಹ ಮರುಪ್ರಶ್ನೆ ಕೇಳದೆ ಅಧಿಕಾರಿಗಳು ಹೇಳಿದ್ದನ್ನೇ ಕೇಳುತ್ತ ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು. ಇದಕ್ಕೂ ಮೀರಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮುಂಚೆಯೇ ಅನುಮೋದನೆ ಪುಸ್ತಕಕ್ಕೆ ಸಾರ್ವಜನಿಕರ ಸಹಿ ಸಂಗ್ರಹಿಸುತ್ತಿದ್ದರು.
ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಅರಿತಿದ್ದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾ ಸಂಘಟಕ ತಮ್ಮಡಿಹಳ್ಳಿ ಮಲ್ಲಿಕಾರ್ಜುನ್ ನೇತೃತ್ವದ ಲಂಚ ಮುಕ್ತ ವೇದಿಕೆಯ ಕಾರ್ಯಕರ್ತರು ಗ್ರಾಮ ಸಭೆ ಪ್ರವೇಶಿಸಿ ಅಲ್ಲಿನ ಆಗುಹೋಗುಗಳ ಬಗ್ಗೆ ಪ್ರಶ್ನಿಸಿದರು.ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡದೆ ಗ್ರಾಮ ಸಭೆ ನಡೆಸುತ್ತಿದ್ದರ ಔಚಿತ್ಯದ ಬಗ್ಗೆ ಪ್ರಶ್ನಿಸಿದರು.ಇದೇ ವಿಚಾರವಾಗಿ ಈ ಹಿಂದೆಯೇ ಸಾಕಷ್ಠು ವಿವಾದಳಿಗೆ ಕಾರಣವಾಗಿದ್ದ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಖ್ಖ ಪರಿಶೋದನಾ ವರದಿಯನ್ನು ಗ್ರಾಮ ಸಭೆಯಲ್ಲಿ ನಿಯಮಾನುಸಾರ 7 ದಿನಗಳ ಮುಂಚೆ ಮಾಹಿತಿ ನೀಡದೇ ,ಸಂಬಧಿಸಿದ ಯಾವುದೇ ಇಲಾಖೆಗಳ ಅಧಿಕಾರಿಗಳಿಗೂ ಮಾಹಿತಿಯನ್ನೂ ನೀಡದೇ ಆರಂಭಿಸಿರುವುದನ್ನು ವೇದಿಕೆಯ ಸದಸ್ಯರು ತೀವ್ರವಾಗಿ ಖಂಡಿಸಿದರು. ಯೋಜನೆಯ ಮಾಹಿತಿ ಬಗ್ಗೆ ಸಾರ್ವಜನಿಕರನ್ನು ಕತ್ತಲಲ್ಲಿಟ್ಟು ಗ್ರಾಮ ಸಭೆ ನಡೆಸ ಹೊರಟಿರುವುದು ಸರಿಯಲ್ಲವೆಂದು ಖಂಡಿಸಿದರು.
. ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ತಾವೇ ಸರ್ಕಾರಿ ಅಧಿಕಾರಿಗಳು ಎನ್ನುವುದಕ್ಕೆ ಗುರುತಿನ ಪತ್ರ ತೋರಿಸಿ ಎಂದು ಅಧಿಕಾರಿಗಳ ಲೋಪದೋಷಗಳನ್ನು ಎತ್ತಿಹಿಡಿದು ಅಧಿಕಾರಿಗಳಿಗೆ ಬೆವರಿಳಿಸಿದರು.ಗ್ರಾಮ ಸಭೆಯ ವಿಚಾರವಾಗಿ ಸಾರ್ವಜನಿಕರಿಗೆ ಪ್ರಚಾರ ಮಾಡಲೋಸುಗ ಹೊರಡಿಸಿರುವ ಕರಪತ್ರ ಕೊಡಿ ಎಂದರು.
ಇದು ಎನ್‌ಆರ್‌ಇಜಿ ಗ್ರಾಮ ಸಭೆ ಆಗಿರುವುದರಿಂದ ತೋಟಗಾರಿಕೆ, ಅರಣ್ಯ, ಕೃಷಿ ಹೀಗೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕಿದ್ದು ಯಾರೊಬ್ಬರೂ ಬಾರದಿದ್ದ ಮೇಲೆ ಗ್ರಾಮಸ್ಥರಿಗೆ ಮಾಹಿತಿ ಕೊಡುವವರು ಯಾರು ಪ್ರಶ್ನಿಸಿದರು. ಒಂದು ವಾರದ ಮುಂಚೆ ನೋಟೀಸ್ ನೀಡಬೇಕಿದ್ದರೂ ಸದಸ್ಯರಿಗೆ ಎರಡು ದಿನಗಳ ಹಿಂದಷ್ಟೆ ನೀಡಿದ್ದೀರಿ. ಇನ್ನೂ ಶುದ್ಧ ಕುಡಿಯುವ ನೀರು, ಕೂಲಿಕಾರರಿಗೆ ಆಹ್ವಾನ ಪತ್ರಿಕೆ, ಕಾಮಗಾರಿಯ ಲೋಪದೋಷ, ದಂಡ ವಸೂಲಿ ವಿವರ ಹೀಗೆ ಯಾವುದೂ ಇಲ್ಲದೆ ಗ್ರಾಮ ಸಭೆ ಮಾಡುವುದು ಸರಿಯೆ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕೊನೆಗೆ ಗ್ರಾಮ ಸಭೆಯನ್ನು ರದ್ದು ಮಾಡಿ ಮುಂದಿನ ಗ್ರಾಮ ಸಭೆಯನ್ನು ಮಾ.೯ ಕ್ಕೆ ನಿಗದಿಮಾಡಿ ಅಷ್ಟರಲ್ಲಿ ಎಲ್ಲಾ ಅಧಿಕಾರಿಗಳನ್ನೂ ಆಹ್ವಾನಿಸಿ, ಕರಪತ್ರ ಹಾಗೂ ಪತ್ರಿಕಾ ಪ್ರಕಟಣೆ ಮೂಲಕ ಒಂದು ವಾರದ ಮುಂಚೆ ಮಾಹಿತಿ ಕೊಟ್ಟು ಎಲ್ಲಾ ದಾಖಲಾತಿ ಸಹಿತ ಸಭೆ ಮಾಡತಕ್ಕದೆಂದು ನೋಡಲ್ ಅಧಿಕಾರಿಗಳಾಗಿ ಆಗಮಿಸಿದ್ದ ಸಿಡಿಪಿಓ ತಿಮ್ಮಯ್ಯ ಆದೇಶಿಸಿದರು.
ಗ್ರಾ.ಪಂ. ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಶ್ವೇತಾ, ಪಿಡಿಓ ರೇವಣ್ಣ, ಉದ್ಯೋಗಖಾತ್ರಿ ಯೋಜನೆಯ ಸಂಯೋಜಕಿ ಹೇಮಾವತಿ ಹಾಗೂ ಗ್ರಾಪಂ ಸದಸ್ಯರುಗಳು ಸೇರಿದಂತೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಹಿರಿಯೂರು ತಾಲ್ಲೋಕು ಘಟಕ ಉಮೇಶ್, ಮೈಸೂರು ಜಿಲ್ಲಾ ಘಟಕದ ರಾಮೇಗೌಡರು ಹಾಗೂ ರಾಜ್ಯಸಮಿತಿ ಸದಸ್ಯರಾದ ಉದಯಸಿಂಹ ಮತ್ತು ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ