(ಸುದ್ದಿ ಮಾಹಿತಿ:ಹೆಚ್.ಬಿ.ಕಿರಣ್ ಕುಮಾರ್,ಹುಳಿಯಾರು)
ಹುಳಿಯಾರು :ಇಂದು ಗ್ರಾಮೀಣ ಜನರ ಅದರಲ್ಲೂ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಸ್ವಉದ್ಯೋಗ ಯೋಜನೆಗಳನ್ನು ರೂಪಿಸಲಾಗಿದ್ದು ಅವುಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಹುಳಿಯಾರು ರೋಟರಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಗುಪ್ತಾ ತಿಳಿಸಿದರು.
ಹುಳಿಯಾರು ರೋಟರಿ ಬಾಲಭವನದಲ್ಲಿ ರೋಟರಿ ಸಂಸ್ಥೆ, ಸ್ಪೂರ್ತಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ದಿಶಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಸ್ವಉದ್ಯೋಗ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಬಳಕೆ ವಸ್ತುಗಳು ಗಗನಕ್ಕೇರಿರುವ ಈ ದಿನಗಳಲ್ಲಿ ಮಳೆ, ಬೆಳೆಯೂ ಸಹ ಇಲ್ಲದಾಗಿ ಸಂಸಾರ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ಸಂಕಷ್ಟದ ದಿನಗಳಲ್ಲಿ ಗಂಡಸರೊಬ್ಬರೇ ದುಡಿದರೆ ಸಂಸಾರ ನಿರ್ವಹಣೆ ಮಾಡಲಾಗುವುದಿಲ್ಲ. ಹಾಗಾಗಿ ಮಹಿಳೆಯರೂ ಸ್ವಉದ್ಯೋಗ ಮಾಡುವ ಮೂಲಕ ಸಂಸಾರ ಬಂಡಿ ಸಾಗಿಸಲು ನೆರವಾಗಬೇಕು ಎಂದರು.
ಸ್ವಉದ್ಯೋಗ ಎಂದರೆ ಬೀಡಿ ಕಟ್ಟುವುದು, ಊದುಬತ್ತಿ ಹೊಸೆಯುವುದು, ಬಟ್ಟೆ ಹೊಲೆಯುವುದು, ಹಸು ಸಾಕುವುದಷ್ಟೆ ಎನ್ನುವಂತಾಗಿದೆ. ಇವುಗಳನ್ನು ಬಿಟ್ಟು ಅನೇಕ ಸ್ವಉದ್ಯೋಗವಕಾಶಗಳಿದ್ದು ಇವುಗಳಿಂದಲೂ ಆರ್ಥಿಕ ಸಬಲತೆ ಸಾಧಿಸಬಹುದೆಂಬುದನ್ನು ತೋರಿಸಿಕೊಡಬೇಕಿದೆ. ಹಾಗಾಗಿ ಮೊಬೈಲ್ ರಿಪೇರಿ, ಬ್ಯೂಟಿ ಪಾರ್ಲರ್, ಸೀರೆಗೆ ಕುಚ್ಚು ಕಟ್ಟುವುದು, ಫ್ಯಾಬ್ರಿಕ್ ಪೇಂಟಿಂಗ್, ನಿಟ್ಟಿಂಗ್ ಹಾಗೂ ಪಾಟ್ ಪೇಂಟಿಂಗ್ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ರವೀಶ್, ಕಾರ್ಯದರ್ಶಿ ದುರ್ಗರಾಜ್, ನಿರುದ್ಯೋಗ ನಿವಾರಣಾ ಸಂಸ್ಥೆಯ ಅಮೀನಾಕೌಸರ್ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ