ಹುಳಿಯಾರು:ಬೆಲೆ ಏರಿಕೆ ನಡುವೆಯೂ ಪಟ್ಟಣದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆದಿದ್ದು ಹಬ್ಬದ ಗೌಜು, ಗದ್ದಲದ ಮಧ್ಯೆ ಮಂಗಳವಾರ ನಡೆದ ಹಬ್ಬದ ಸಂತೆಯಲ್ಲಿ ಅಗತ್ಯ ವಸ್ತುಗಳಖರೀದಿ ಭರಾಟೆ ಜೋರಾಗಿ ಸಾಗಿತ್ತು.
ಹುಳಿಯಾರಿನಲ್ಲಿ ನಡೆದ ಹಬ್ಬದ ಸಂತೆಯಲ್ಲಿ ಯುಗಾದಿ ಹಬ್ಬಕ್ಕೆ ಬೇಕಾದ ದಿನಸಿ ಕೊಳ್ಳಲು ಮುಗಿಬಿದ್ದ ಜನತೆ |
ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸಹ ಹಬ್ಬಕ್ಕೆ ಬೇಕಾದ ದಿನಸಿ,ತರಕಾರಿ,ಹೂವು,ಹಣ್ಣು ಮೊದಲಾದವುಗಳನ್ನು ಕೊಳ್ಳಲು ಸಾಕಷ್ಟು ಜನ ಜಮಾಯಿಸಿದ್ದು ಸಂತೆ ಜನರಿಂದ ಗಿಜಗುಡುತಿತ್ತು.
ಪಟ್ಟಣದ ಗಾಂಧಿಪೇಟೆ, ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಸಂತೆ ಸೇರಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನರೇ ಕಾಣಿಸುತ್ತಿದ್ದರು. ಸಂತೆಯಲ್ಲಿನ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳ ಬಳಿ ಹೆಚ್ಚು ಜನ ಜಮಾಯಿಸಿದ್ದರಲ್ಲದೆ, ತರಕಾರಿ ಅಂಗಡಿ, ಹಣ್ಣು, ಹೂ ಅಂಗಡಿಗಳಲ್ಲೂ ಸಹ ಮಾರಾಟ ಜೋರಾಗಿತ್ತು. ಯುಗಾದಿ ಹಬ್ಬದಂದು ಹೊಸಬಟ್ಟೆ ತೊಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿದ್ದು ಕಡೇಪಕ್ಷ ಹಬ್ಬದ ದಿನ ಉಡುದಾರವನ್ನಾದರೂ ತೊಡಬೇಕೆನ್ನುವ ಆಚರಣಿಯಿಂದಾಗಿ ಉಡುದಾರ ಮಾರುವವರಿಗೂ ಬೇಡಿಕೆ ಹೆಚ್ಚಾಗಿತ್ತು.
ಯುಗಾದಿ ಉಡುದಾರ : ಹಬ್ಬದ ಅಂಗವಾಗಿ ಉಡುದಾರದ ವ್ಯಾಪಾರ ತಕ್ಕಮಟ್ಟಿಗಿದ್ದು, ಕೆಂಪು ಹಾಗೂ ಕಪ್ಪು ಬಣ್ಣದ ಉಡುದಾರ ಮಾರಿಗೆ ೫ ರೂ ನಂತೆ ಮಾರಾಟ ಮಾಡುತ್ತಿದ್ದರು. ಸಂತೆ ಸೇರಿದಂತೆ ಪಟ್ಟಣದ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಯುಗಾದಿ ಉಡುದಾರ ಎಂದು ಕೂಗುತ್ತಾ ವ್ಯಾಪಾರ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಯುಗಾದಿಗೆ ಹೊಸಬಟ್ಟೆ ತರುವ ಪರಿಪಾಠವಿರುವುದರಿಂದ ಬಟ್ಟೆ ಅಂಗಡಿಗಳಲ್ಲಿ ಜನ ಜಂಗುಳಿ ಕಂಡುಬಂತು. ರಸ್ತೆಗಳಲ್ಲಿಯೇ ರಾಶಿ ರಾಶಿ ಬಟ್ಟೆಗಳ ಖರೀದಿ ಸಹ ಭರ್ಜರಿಯಾಗಿ ನಡೆಯುತ್ತಿತ್ತು. ರಂಗನಾಥಸ್ವಾಮಿ ದೇವಾಲಯ ರಸ್ತೆ,ಬಸ್ ನಿಲ್ದಾಣದಲ್ಲಿ,ಆಸ್ಪತ್ರೆ ರಸ್ತೆಯಲ್ಲಿ ಭರ್ಜರಿ ಬಟ್ಟೆ ವ್ಯಾಪಾರ ನಡೆಯುತ್ತಿದ್ದು ಬಟ್ಟೆ ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು.
ಯುಗಾದಿಯೆಂದರೆ ಒಬ್ಬಟ್ಟಿನ ಹಬ್ಬವಾಗಿದ್ದು ಬೆಲ್ಲ, ಬೇಳೆಗಳ ಬೆಲೆ ದುಪ್ಪಟ್ಟಾಗಿದ್ದರೂ ಸಹ ದಿನಸಿಅಂಗಡಿಗಳಲ್ಲಿ ಜನ ಸಾಲುಗಟ್ಟಿನಿಂತಿದ್ದರು.ಸಂತೆಯಲ್ಲಿ ಹೂವಿನ ವ್ಯಾಪಾರ ಜೋರಾಗಿದ್ದು ಮಾರು ಹೂವಿಗೆ ೫೦ ರಿಂದ ೬೦ ರೂ ಬೆಲೆಯಿತ್ತು. ಹಣ್ಣು ತರಕಾರಿ ಖರೀದಿ ಸುಮಾರಿಗಿತ್ತು.
ಪ್ರತಿವರ್ಷವೂ ಹಬ್ಬದ ಹಿಂದಿನ ದಿನ ಬೆಂಗಳೂರಿನಲ್ಲಿ ಕೆಲಸದಲ್ಲಿ ತೊಡಗಿಕೊಂಡಿರುವವರು ಹಬ್ಬಕ್ಕೆ ಎರಡುಮೂರು ದಿನ ರಜಾ ಹಾಕಿ ಬರುವುದಿದ್ದು ಆದರೆ ಈ ಬಾರಿ ಹಬ್ಬ ಬುಧವಾರ ಬಂದಿರುವುದರಿಂದ ಪಟ್ಟಣದಲ್ಲಿ ಉದ್ಯೋಗದಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಿರುವುದರಿಂದ ಬಸ್ ಗಳಲ್ಲಿ ಅಂತಹ ರಶ್ ಕಂಡುಬರಲಿಲ್ಲ.
ಹುಳಿಯಾರಿನಲ್ಲಿ ಯುಗಾದಿ ಹಬ್ಬಕ್ಕಾಗಿ ನಡೆದಿರುವ ಹೂವಿನ ಭರ್ಜರಿ ವ್ಯಾಪಾರ. |
ಯುಗಾದಿ ಎಂದರೆ ಎಣ್ಣೆ ಸ್ನಾನಮಾಡುವುದು ಸಂಪ್ರದಾಯವಾಗಿದ್ದು ಈ ಬಾರಿ ಹಬ್ಬಕ್ಕೆಂದೆ ಎಲ್ಲಾ ರಾಜಕೀಯ ಪಕ್ಷಗಳವರು ಕಳೆದ ಎರಡುಮೂರು ದಿನಗಳಿಂದಲೂ ಟ್ಯಾಂಕರ್ ಗಳಲ್ಲಿ ನೀರು ಪೂರೈಸುತ್ತಿದಿದ್ದು ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸಲಿಲ್ಲ.
---------------------------
ದಿನೆದಿನೇ ಉಡುದಾರದ ವ್ಯಾಪಾರ ಇಳಿಮುಖವಾಗುತ್ತಿದ್ದು ಹಬ್ಬದ ದಿನದಲ್ಲಿ ದಿನಕ್ಕೆ ಮೂರ್ನಾಲ್ಕು ಸಾವಿರ ವ್ಯಾಪಾರ ಮಾಡುತ್ತಿದ್ದವರು ಇಂದು ಸಾವಿರ ರೂಪಾಯಿ ಮಾಡುವುದು ಕಷ್ಟಕರವಾಗಿದೆ. ಲಾಭವೋ, ಲುಕ್ಸಾನೋ ಹಿಂದಿನಿಂದ ಮಾಡಿಕೊಂಡು ಬಂದಿರುವ ಪದ್ದತಿ ಬಿಡಬಾರದೆಂದು ಉಡುದಾರದ ವ್ಯಾಪಾರ ಮುಂದುವರಿಸಿಕೊಂಡು ಬರುತ್ತಿದ್ದೆವೆ:ಕಂಚೀಪುರದ ರಾಜಣ್ಣ,ಉಡುದಾರ ವ್ಯಾಪಾರಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ