ಹುಳಿಯಾರು: ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯುವ ಸಂತೆ,ಬಸ್ಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ ಗಳ ಸುಂಕ ಹಾಗೂ ಪುಟ್ ಪಾತ್ ನಲ್ಲಿರುವ ಅಂಗಡಿಗಳಿಂದ ೨೦೧೭-೧೮ನೇ ಸಾಲಿನ ಸುಂಕ ವಸೂಲಾತಿಗಾಗಿ ಪಂಚಾಯ್ತಿ ಆವರಣದಲ್ಲಿ ಬಹಿರಂಗ ಹರಾಜು ಗ್ರಾ.ಪಂ.ಅಧ್ಯಕ್ಷೆ ಗೀತಾಪ್ರದೀಪ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಹರಾಜಿನಲ್ಲಿ ಒಟ್ಟು ೧೭ ಜನ ಭಾಗವಹಿಸಿದ್ದು ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ಹಾಕುವ ಅಂಗಡಿಗಳಿಂದ ಸುಂಕ ವಸೂಲಾತಿ ಮಾಡಲು ಕುಮಾರ್ ನಾಯ್ಕ ಎಂಬುವವರಿಗೆ ೨,೯೪,೦೦೦ರೂಗೆ ಹರಾಜು ನಿಂತರೆ, ಹುಳಿಯಾರಿನ ಬಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ ಗಳಿಂದ ನಿತ್ಯ ಸುಂಕ ವಸೂಲಿ ಮಾಡಲು ೧,೬೮,೦೦೦ ರೂ. ಗೆ ಸೈಯದ್ ಮುನಾವರ್ ಹರಾಜು ಕೂಗಿದರು.ಪಂಚಾಯ್ತಿ ಜಾಗದಲ್ಲಿ, ಪುಟ್ ಪಾತ್ ನಲ್ಲಿ ಹಾಕಿಕೊಂಡಿರುವ ಅಂಗಡಿಗಳಿಂದ ನಿತ್ಯ ಸುಂಕ ವಸೂಲಾತಿ ಮಾಡಲು ನಡೆದ ಹರಾಜು ತೀವ್ರಏರಿಕೆ ಕಂಡು ಚನ್ನಕೇಶವ ಎಂಬಾತ ೩,೫೨,೦೦೦ ರೂಗೆ ಹರಾಜು ಕೂಗಿ ತಮ್ಮದಾಗಿಸಿಕೊಂಡರು. ಈ ಸುಂಕ ವಸೂಲಾತಿ ಒಂದು ವರ್ಷ ಅವಧಿಯದ್ದಾಗಿದ್ದು ಮಾರ್ಚ್ ೨೦೧೮ರ ವರೆಗೆ ಜಾರಿಯಲ್ಲಿರುತ್ತದೆ.
ಅಲ್ಲದೆ ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿರುವ ಶಿಥಿಲಗೊಂಡಿರುವ ನೀರು ಸರಬರಾಜಿನ ನೀರಿನ ಟ್ಯಾಂಕನ್ನು ಡೆಮಾಲಿಶ್ ಮಾಡಲು ಗುಜರಿ ನಾಗಣ್ಣ ೧೦ಸಾವಿರಕ್ಕೆ ಹರಾಜು ಕೂಗಿದ್ದು ಒಟ್ಟಾರೆ ಹರಾಜು ಪ್ರಕ್ರಿಯೆಯಿಂದ ೮,೨೪,೦೦೦ ರೂ ಹಣ ಜಮಾವಣೆಗೊಂಡಿದೆ.
ಸದ್ಯ ತೀವ್ರ ಬರಗಾಲವಿದ್ದು ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದ್ದು ಹರಾಜಿನಿಂದ ಬರುವ ಹಣವನ್ನು ಗ್ರಾಮದ ವಿವಿಧ ವಾರ್ಡುಗಳ ನೀರಿನ ಸಮಸ್ಯೆ ಬಗೆಹರಿಸಲು ವಿನಿಯೋಗಿಸಲಾಗುವುದು ಎಂದ ಉಪಾಧ್ಯಕ್ಷ ಗಣೇಶ್ ಈ ನಿಮಿತ್ತ ಸದಸ್ಯರುಗಳ ತುರ್ತುಸಭೆಯನ್ನು ಗುರುವಾರ ಕರೆದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೃಷ್ಣಾಬಾಯಿವಿಠ್ಠಲ್ ಬಂಡಾರಿ , ಉಪಾಧ್ಯಕ್ಷ ಗಣೇಶ್,ಕಾರ್ಯದರ್ಶಿ ಉಮಾಮಹೇಶ್, ಸದಸ್ಯರುಗಳಾದ ಹೇಮಂತ್,ಜಬೀಉಲ್ಲಾ,ಗೀತಾಬಾಬು, ಬಿಂಧುಬಾಬು,ಪುಟ್ಟಮ್ಮ,ಡಿಶ್ ಬಾಬು,ಡಾಬಾ ಸೂರಪ್ಪ,ಕೆಂಪಮ್ಮ,ಮಾಮಾಜಿಗ್ನಿ,ಜಯಮ್ಮ ,ಕೋಳಿ ಶ್ರೀನಿವಾಸ್, ಚಂದ್ರಶೇಖರ್ ಸೇರಿದಂತೆ ಇತರ ಸದಸ್ಯರುಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ