ಜಿಲ್ಲೆಯಲ್ಲಿಯೇ ಅತಿದೊಡ್ದ ಪಂಚಾಯ್ತಿಯೆಂಬ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸಂಬಳ ಕೊಟ್ಟು ಮೂರು ತಿಂಗಳಾಗಿದ್ದು ವರ್ಷಾವಧಿ ಹಬ್ಬ ಯುಗಾದಿ ಕೆಲವೇದಿನ ಉಳಿದಿದ್ದು ಪಗಾರವಿಲ್ಲದೆ ಹಬ್ಬ ಆಚರಣೆ ಹೇಗೆಂಬ ಆತಂಕ ಅವರಲ್ಲಿ ಮನೆಮಾಡಿದೆ.
ಹುಳಿಯಾರು ಗ್ರಾಮ ಪಂಚಾಯ್ತಿ |
೩೯ ಮಂದಿ ಸದಸ್ಯರನ್ನು ಹೊಂದಿರುವ ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಸರಿಸುಮಾರು ೪೩ ಮಂದಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.ಬಿಲ್ ಕಲೆಕ್ಟರ್,ವಾಟರ್ ಮೆನ್ ,ಎಲೆಕ್ಟ್ರೀಷಿಯನ್, ಜವಾನರು,ಕಂಪ್ಯೂಟರ್ ಆಪರೇಟರ್,ಪೌರ ಕಾರ್ಮಿಕರು ಹೀಗೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಪ್ರತಿತಿಂಗಳು ಸಂಬಳ ಅನ್ನುವುದು ಮರೀಚಿಕೆಯಾಗಿದ್ದು ಮೂರ್ನಾಲ್ಕು ತಿಗಳಿಗೊಮ್ಮೆ ಸಂಬಳ ಪಾವತಿಸುವುದು ರೂಢಿಯಲ್ಲಿದೆ.
ಅದುಕೂಡ ಯಾವುದಾದರೂ ಅನುದಾನದಲ್ಲಿ ಹಣ ಬಿಡುಗಡೆಯಾದಲ್ಲಿ ಮಾತ್ರ.ಇಲ್ಲದಿದ್ದಲ್ಲಿ ಇವರುಗಳು ಕರ ವಸೂಲಿ ಮಾಡಿಕೊಂಡೆ ಸಂಬಳ ಪಡೆಯಬೇಕಾಗಿದ್ದು ಸಂಗ್ರಹವಾಗುವ ವಸೂಲಾತಿಗೂ ಪಾವತಿಸಬೇಕಾದ ಸಂಬಳಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಕೆಲವರಿಗಷ್ಟೆ ಸಂಬಳ ಸಿಕ್ಕರೆ ಇನ್ನುಳಿದವರಿಗೆ ಮತ್ತೆ ಮುಂದಿನ ತಿಂಗಳೆ ಗಟ್ಟಿ ಎನ್ನುವ ಪರಿಸ್ಥಿತಿ ಇದೆ.
ಸದ್ಯ ಅಲ್ಪ ಸಂಬಳಕ್ಕೆ ಕೆಲಸ ಮಾಡುತ್ತಿರುವ ಇವರುಗಳಿಗೆ ನಿಗದಿತ ದಿನದಂದು ಹಣ ಪಾವತಿಯಾಗದೆ ಸಂಸಾರ ನಿರ್ವಹಿಸುವುದೇ ದುಸ್ತರವಾಗಿದೆ.ತಿಂಗಳಿಗೊಮ್ಮೆ ರೇಷನ್,ಹಾಲಿಗೆ, ಪೇಪರಿಗೆ,ಓಡಾಡಲು ಪೆಟ್ರೋಲಿಗೆ ಹೀಗೆ ಅವಶ್ಯ ಖರ್ಚುಗಳಿಗೂ ಹಣವಿಲ್ಲದೆ ಕೊಡುವವರಿಗೆ ಸಬೂಬು ಹೇಳುವಂತಾಗಿದೆ.ಗಟ್ಟಿಯಾಗಿ ಕೇಳಿದಲ್ಲಿ ನೌಕರಿಗೆಲ್ಲಿ ಕುತ್ತು ಬರುತ್ತದೋ ಎಂಬ ಭಯದ ವಾತವರಣದಿಂದ ಮೌನವಾಗಿ ಅನುಭವಿಸುತ್ತಿದ್ದಾರೆ.
ಸಧ್ಯ ಬರಗಾಲ ಪರಿಸ್ಥಿತಿಯಲ್ಲಿ ಎಲ್ಲರಿಗೂ ಹಣಹೊಂಚುವುದೆ ದುಸ್ತರವಾಗಿದ್ದು ಇದೀಗ ಕರ ವಸೂಲಾತಿ ಮಾಡಿಯೇ ಸಂಬಳ ಪಡೆದುಕೊಳ್ಳಿ ಎಂದು ಅಧ್ಯಕ್ಷರು ಸೂಚಿಸಿರುವುದು ಇವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬೆಳಗ್ಗಿನಿಂದ ಕಚೇರಿ ಕೆಲಸ ಮಾಡಿ ನಂತರ ವಸೂಲಾತಿಗೆ ಹೊರಟಲ್ಲಿ ಮನೆಗಳಲ್ಲಿ ಯಾರು ಸಿಗುವುದಿಲ್ಲ.ಸಿಕ್ಕರೂ ಸಹ ಸರಿಯಾಗಿ ನೀರೇ ಬಿಡುವುದಿಲ್ಲ,ವಸೂಲಿಗೆ ಬಂದಿದ್ದೀರಾ ಎಂದು ಹರಿಹಾಯ್ದು ವಾಪಸ್ಸು ಕಳುಹಿಸುತ್ತಾರೆ.ತಿಂಗಳೆಲ್ಲಾ ಕಷ್ಟಬಿದ್ದು ವಸೂಲಿ ಮಾಡಿದರೂ ಇಂದಿನ ಸ್ಥಿತಿಯಲ್ಲಿ ವಸೂಲಾತಿ ಒಂದು ಲಕ್ಷವೂ ಮೀರುವುದಿಲ್ಲ.ಪಾವತಿಸಬೇಕಾದ ಸಂಬಳ ತಿಂಗಳಿಗೆ ಎರಡೂವರೆ ಲಕ್ಷ .ಉಳಿಕೆ ಹಣಕ್ಕೇನು ಮಾಡುವುದು ಎನ್ನುತ್ತಾರೆ ಬಿಲ್ ಕಲೆಕ್ಟರ್ ಗಳು.
ಸದ್ಯ ಮೂರು ತಿಂಗಳ ಸಂಬಳ ಕೊಡಬೇಕಿದ್ದು ಯುಗಾದಿ ಬೋನಸ್ ಎಂದು ಇದುವರೆಗೂ ಕೊಡುತ್ತಿದ್ದ ಬಟ್ಟೆಯೂ ಸೇರಿ ಸುಮಾರು ಎಳೆಂಟು ಲಕ್ಷ ಹಣದ ಅವಶ್ಯಕತೆಯಿದೆ.ಗ್ರಾಮಪಂಚಾಯ್ತಿಯಲ್ಲಿ ನೀರಿನ ಸಮಸ್ಯೆ ನಿವಾರಿಸಲು ಹೆಣಗಾಡುತ್ತಿದ್ದು ಅದಕ್ಕೆ ಹಣದ ಕೊರತೆ ಎದುರಾಗಿರುವಾಗ ಇವರ ಸಮಸ್ಯೆ ಪರಿಹರಿಸುವುದು ಕಷ್ಟ ಸಾಧ್ಯ ಎನ್ನುವಂತಾಗಿದೆ.
ಒಟ್ಟಾರೆ ಹಬ್ಬದ ಹಿನ್ನಲೆಯಲ್ಲಿ ನೌಕರರಿಗೆ ಪಗಾರವಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದ್ದು ಹಬ್ಬ ಮಾಡುವುದು ಹೇಗೆಂಬ ಚಿಂತೆ ಮನೆ ಮಾಡುವಂತೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ