ನೋಟು ಅಮಾನ್ಯೀಕರಣದಿಂದ ನಿಯಂತ್ರಣವಾಗದ ಕಪ್ಪುಹಣ
ಹುಳಿಯಾರು: ನೋಟು ಅಮಾನ್ಯೀಕರಣದಿಂದ ಕಪ್ಪುಹಣ ಇನ್ನಿಲ್ಲದಂತಾಗಿ ಜನಸಾಮಾನ್ಯರ ಬದುಕು ಬದಲಾಗುತ್ತದೆಂದು ದೇಶದ ಜನ ತಿಳಿದು ಇದರ ಸಮಸ್ಯೆಯನ್ನು ಸಹಿಸಿಕೊಂಡಿದ್ದರು. ಆದರೆ ಇದರಿಂದ ಯಾವುದೇ ಅನುಕೂಲ ಸಾಮಾನ್ಯ ಜನರಿಗಾಗದೆ, ರೈತರ,ಮಧ್ಯಮ ವರ್ಗದವರ,ಸಣ್ಣಪುಟ್ಟ ವ್ಯಾಪಾರಸ್ಥರ ಬದುಕು ಇನ್ನಷ್ಟು ದುಸ್ತರವಾಗಿದೆ ಎಂದು ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ದೂರಿದರು.
ಹುಳಿಯಾರಿನಲ್ಲಿ ಮಂಗಳವಾರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜನವೇದನ ಸಭೆಯಲ್ಲಿ ಮಾತನಾಡಿದ ಅವರು ನೋಟು ಅಮಾನ್ಯೀಕರಣದಿಂದ ಆರ್ಥಿಕ ಸುಧಾರಣೆ ಆಗುವ ಬದಲು ಬಡವರ ಹೊಟ್ಟೆಗೆ ಭಾರಿ ಹೊಡೆತ ಬಿದಿದ್ದು ಕಾರ್ಪೊರೇಟ್ ವಲಯದ ಹಿತ ಕಾಪಾಡಿದಂತಾಗಿದೆ ಎಂದರು.ಚುನಾವಣೆಗೂ ಮುಂಚೆ ಘೋಷಣೆ ಮಾಡಿದ್ದ ಕಪ್ಪುಹಣ ನಿಯಂತ್ರಣ,ಅಚ್ಚೆದಿನ್,ಉದ್ಯೋಗ ಸೃಷ್ಠಿ ಎಂಬ ಮಾತುಗಳು ಸುಳ್ಳಾಗಿದೆ ಎಂದರು.
ಅಮಾನ್ಯೀಕರಣದಿಂದ ಬಾರಿ ಬದಲಾವಣೆಯಾಗಲಿದೆ, ಕಪ್ಪು ಹಣ ನಿಯಂತ್ರಣ, ಭಯೋತ್ಪಾದನೆ ನಿರ್ಮೂಲನೆ ಆಗಲಿದೆ ಎಂದು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಆದರೆ ನೋಟು ಅಮಾನ್ಯೀಕರಣದಿಂದ ಆದ ಅನುಕೂಲವೇನು ಹಾಗೂ ಕ್ಯಾಶ್ ಲೆಸ್ ವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಯೇನೆಂದು ಈಗ ಪ್ರತಿಯೊಬ್ಬರಿಗೂ ಮನವರಿಕೆಯಾಗಿದ್ದು ಮೋದಿಯವರ ಸರ್ವಾಧಿಕಾರಿ ಧೋರಣೆ ಬಗ್ಗೆ ಜನ ಕಿಡಿಕಾರುತ್ತಿದ್ದು ಸ್ವಚ್ಛ ಭಾರತ ಹೆಸರಿನಲ್ಲಿ ಪೊರಕೆ ಹಿಡಿದುಕೊಂಡು ಬೀದಿಯಲ್ಲಿ ಕಸ ಗುಡಿಸಿ ಕೇವಲ ಪ್ರಚಾರಕ್ಕಾಗಿ ಭಾಷಣ ಮಾಡಿದ್ದಷ್ಟೆ ಮೋದಿಯವರ ಸಾಧನೆ ಎಂದು ಟೀಕಿಸಿದರು.
ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಕೇಂದ್ರ ಸರ್ಕಾರ ನಾನಾ ತೆರಿಗೆ ವಿಧಿಸುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದೆ. ಜನರಿಗೆ ಇದನ್ನು ತಿಳಿಸಲು,ಜನರ ಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಜನವೇದನಾ ಸಭೆ ಹಮ್ಮಿಕೊಂಡಿದೆ.ದೇಶದ ಉತ್ತಮ ಮುಖ್ಯಮಂತ್ರಿ ಎಂಬ ಪ್ರಶಾಸ್ತಿಗೆ ಭಾಜನರಾಗಿರುವ ಸಿದ್ದರಾಮಯ್ಯ ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು..
ಮೋದಿ ಅವರ ಡಿಜಿಟಲೀಕರಣ, ನಗದು ರಹಿತ ವ್ಯವಹಾರ ಯಶಸ್ಸು ಕಂಡಿಲ್ಲ.ಪ್ರಧಾನಿ ಮೋದಿ ಏಕಾಏಕಿ ನೋಟು ಅಮಾನ್ಯ ಮಾಡಿದ್ದರಿಂದ ಗ್ರಾಮೀಣ ಜನರ ಪರದಾಟ ಇನ್ನೂ ತಪ್ಪಿಲ್ಲ.ಬ್ಯಾಂಕ್‌ನಲ್ಲಿ ನಮ್ಮ ಹಣ ಪಡೆಯಲೂ ಸಾಕಷ್ಟು ಕಷ್ಟಪಡುವ ಪರಿಸ್ಥಿತಿ ಈಗಲೂ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಹಿರಿಯ ಕಾಂಗ್ರೆಸ್ ಮುಖಂಡ ಮಹ್ಮದ್ ಜಾಫರ್ ಸಾಬ್,ಗ್ರಾಪಂ ಸದಸ್ಯರುಗಳಾದ ಎಲ್.ಆರ್.ಚಂದ್ರಶೇಖರ್, ವೆಂಕಟೇಶ್ ಹಾಗೂ ದಯಾನಂದ್,ಕೆಂಕೆರೆ ಶಿವಕುಮಾರ್,ಪ್ರದೀಪ್,ಕುಮಾರ್,ರಹಮತ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ