ವಿಷಯಕ್ಕೆ ಹೋಗಿ

ಮಾಸ್ಟರ್ ಹಿರಣ್ಣಯ್ಯ ಹೀಗಿದ್ದಾರೆ ನೋಡಿ


ಮಾಸ್ಟರ್ ಹಿರಣ್ಣಯ್ಯ ನಮಗೆ ಇಷ್ಟವಾಗುವುದು ಅವರು ನಮ್ಮ ಪರವಾಗಿ ಪಟ್ಟಭದ್ರರನ್ನು, ಭ್ರಷ್ಟ ರಾಜಕಾರಣಿಗಳನ್ನು, ಲಂಚಾವತಾರಿ ಅಧಿಕಾರಿಗಳನ್ನು ಬೈಯ್ಯುತ್ತಾರೆ ಎನ್ನುವ ಕಾರಣಕ್ಕೆ. ಜನಸಾಮಾನ್ಯರು ಯಾರ್ಯಾರನ್ನೆಲ್ಲಾ ಬೈಯ್ಯುವುದಕ್ಕೆ ತುಂಬಾ ಸಮಯದಿಂದ ಕಾಯುತ್ತಿರುತ್ತಾರೋ ಅಂಥವರನ್ನೆಲ್ಲಾ ಬೈಯ್ಯುತ್ತಾ ಹೋಗುವ ಹಿರಣ್ಣಯ್ಯ ಎಷ್ಟೋ ಸಲ ನಮ್ಮೊಳಗಿನ ಕ್ರೋಧದ ದನಿಯಾಗಿಬಿಡುತ್ತಾರೆ, ಜನರೊಳಗಿನ ಜ್ವಾಲಾಮುಖಿಯ ಮುಖವಾಗಿಬಿಡುತ್ತಾರೆ.


ಇವರು ಭ್ರಷ್ಟರನ್ನು ಕೆಣಕಲು, ಚುಚ್ಚಲು ಆಯ್ದುಕೊಂಡದ್ದು ರಂಗಭೂಮಿಯನ್ನು. ತಮ್ಮ ಮನೋಜ್ಞ ಅಭಿನಯದಿಂದ ಅಪ್ರತಿಮ ಹಾಸ್ಯ ಪ್ರಜ್ಞೆಯಿಂದ ಜನರ ಮನಸ್ಸಿಗೆ ಹತ್ತಿರವಾದವರು. ಜನತಾ ದರ್ಬಾರಿನ ತೆನಾಲಿ ರಾಮನಾದರು. ಹಾಸ್ಯದ ರಸಾಯನದೊಂದಿಗೆ ವಾಸ್ತವದ ಕಹಿಗುಳಿಗೆಗಳನ್ನು ಉಣಬಡಿಸಿದರು. ಅದೊಂದೇ ಕಾರಣಕ್ಕಾಗಿ ಅವರು ಅಗ್ಗದ ಹಾಸ್ಯ ನಟರಾಗುವ ಅಪಾಯದಿಂದ ಪಾರಾದರು.


ಮಾಸ್ಟರ್ ಹಿರಣ್ಣಯ್ಯನವರ ಕುರಿತಂತೆ ourkarnataka.comನಲ್ಲಿ ಪ್ರಕಟಿತವಾಗಿರುವ ಲೇಖನ ಹಾಗಿ ಸಂವಾದಕ್ಕಾಗಿ ಈ ಕಳಗಿನ ಲಿಂಕ್ ಕ್ಲಿಕ್ ಮಾಡಿ

http://www.ourkarnataka.com/masterhiranniaha/hiranniaha_main.htm
http://www.ourkarnataka.com/masterhiranniaha/darabendre1.htm
http://www.ourkarnataka.com/masterhiranniaha/darabendre2.htm
ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಕುರಿತು ಮಾಸ್ಟರ್ ಹೇಳಿರುವುದು ಹೀಗೆ.

ಇದನ್ನು ಕ್ಲಿಕ್ ಮಾಡಿ http://www.ourkarnataka.com/masterhiranniaha/nijalingappa1.htm
ಮಾಸ್ಟರ್ ಅವರ ಪರಿಚಯ ಲೇಖನ www.ourkarnataka.com ನಲ್ಲಿ ಹೀಗಿದೆ.



------------------------------------------------------------------------------

ವಾಣಿ ರಾಮದಾಸ್‌, ಸಿಂಗಪೂರ್‌ ಇವರು ಮಾಸ್ಟರ್ ಬಗ್ಗೆ ಬರೆದಿರುವುದು ಹೀಗೆ.ದಯಮಾಡಿ ಓದಿ
ವಾಣಿ : ಕಭಿ ಖುಷಿ...ಕಭಿ ಗಮ್‌. ನಿಮ್ಮ ಜೀವನ ಯಾತ್ರೆಯಲ್ಲಿ ಅನೇಕ ಮರೆಯಲಾಗದ ಅನುಭವಗಳು ನಿಮಗೆ ಆಗಿದೆ. ಅಂಥಹುದರಲ್ಲಿ ಮನಸ್ಸಿಗೆ ಅತ್ಯಂತ ಖುಷಿ ನೀಡಿದ್ದು ಹಾಗೆಯೇ ಅತ್ಯಂತ ವ್ಯಥೆ ನೀಡಿದ ಅನುಭವವನ್ನು ಹಂಚುವಿರಾ?
ಮಾಸ್ಟರ್‌ : ಮೊದಲಿಗೆ ಖುಷಿ ನೀಡಿದ ಘಟನೆ ಹೇಳ್ತೀನಿ ಕೇಳಮ್ಮಾ. ನಾನು ಮರೆಯಲಾಗದ್ದು. 1959 ಡಿಸೆಂಬರ್‌ 31ರಂದು ಭಾನುವಾರ, ಲಂಚಾವತಾರ ಮೊದಲ ನಾಟಕ. ತುಂಬು ಜನಸಂದಣಿ. ಅಧ್ಯಕ್ಷತೆ ವಹಿಸಿದ್ದು ಪೋಲೀಸ್‌ ಡೆಪ್ಯುಟಿ ಕಮಿಷಿನರ್‌. ಬೈಯುವ ಪರಿಪಾಠ ಅಂದೇ ಶುರುವಾಗಿತ್ತು. ನಾಟಕ ಭರ್ಜರಿ ಯಶಸ್ವಿಯಾಯಿತು..ಜನರ ಚಪ್ಪಾಳೆ, ಶಿಳ್ಳು ಗಗನ ಮುಟ್ಟಿತ್ತು. ಆದ್ರೆ...ನಾಟಕದದ ಎರಡನೇ ಪ್ರೋಗ್ರಾಂ ಕ್ಯಾನ್ಸಲ್‌..ಏನು ಹೇಳಲಿ ನಾನು..
ಲಂಚಾವತಾರ ನಾಟಕ ನಡೆಯುವ ಹಿಂದಿನ ದಿನ ಒಬ್ಬರು ಬಂದು ಅಧಿಕಾರಿಗಳು ಒಂದು ಬಿಲ್‌ ಪಾಸ್‌ ಮಾಡಲು ತಮ್ಮ ಹೆಂಡತಿಗೆ ನೆಕ್ಲೇಸ್‌ ಮಾಡಿಸಿಕೊಡಿ ಎಂದು ಕೇಳಿದ್ದ ಸುದ್ಧಿ ಕಿವಿಗೆ ಬಿದ್ದಿತ್ತು. ನನ್ನ ಲಂಚಾವತಾರಕ್ಕೂ ಅದೇ ತರಹದ ವಿಷಯ ಬೇಕಾಗಿತ್ತು. ನನಗೂ ಚಿಕ್ಕ ವಯಸ್ಸು. ಹೆಸರು ಹೇಳಲಿಲ್ಲ. ಇದನ್ನು ಬಹಿರಂಗವಾಗಿ ಕೇಳೇ ಬಿಟ್ಟೆ. ಮುಂದೆ ಕುಳಿತಿದ್ದ ಒಬ್ಬ ಹೆಂಗಸು ಸರಕ್ಕನೆ ಸೆರಗನ್ನು ಮುಚ್ಚಿಕೊಂಡರು. ಈ ಪ್ರಸಂಗ ಶಿವಮೊಗ್ಗದಲ್ಲಿ ಎಲ್ಲರಿಗೂ ಗೊತ್ತಿತ್ತು. ಇದೀಗ ಬಟ್ಟ ಬಯಲಾಯ್ತು. ಕೊಟ್ಟವನೂ-ತೆಗೆದುಕೊಂಡವನೂ ಸಭೆಯಲ್ಲಿ ಹಾಜರಿದ್ದರು. ನೆಕ್ಲೇಸ್‌ ಕೇಳಿದ್ದು ಯಾರು ಎಂದು ತಿಳಿಯಿತೇ? ಎರಡನೇ ಪ್ರೋಗ್ರಾಂಗೆ ನನಗೆ ಲೈಸೆನ್ಸ್‌ ಕ್ಯಾನ್ಸಲ್‌ ಮಾಡಿದರು ಡೆಪ್ಯುಟಿ ಕಮಿಷಿನರ್‌.
ಲೈಸನ್ಸ್‌ ಕ್ಯಾನ್ಸಲ್‌ ಮಾಡಿದಾಗ ನಾನು ಅವರಿಗೆ ‘ನೀವು ಲೈಸನ್ಸ್‌ ಕ್ಯಾನ್ಸಲ್‌ ಮಾಡಿದಾಕ್ಷಣ ನಾನು ನಾಟಕ ನಿಲ್ಲಿಸಿ ಬಿಡ್ತೀನಿ ಎಂದು ತಿಳಿಯಬೇಡಿ, ನಾನು ಟಿಕೆಟ್‌ ಮಾಡಿದ್ರೆ ತಾನೇ ನಿಮ್ಮ ಪರ್ಮಿಶನ್‌ ಬೇಕು. ಪಾರ್ಕಿನಲ್ಲಿ, ಬಯಲಿನಲ್ಲಿ ನಾನು ನಾಟಕವಾಡ್ತೀನಿ. ಅದಕ್ಕೆ ನಿಮ್ಮ ಪರ್ಮಿಶನ್‌ ಬೇಕಿಲ್ಲ. ಜನ ಎಲ್ಲಿಯವರೆಗೆ ನನ್ನನ್ನು ‘ಹೋಗೋ’ ಅನ್ನೋಲ್ಲ ಅಲ್ಲಿ ತನಕ ನಾನು ಆಡ್ತೀನಿ ಎಂದೆ. ಅಷ್ಟರಲ್ಲಿ ಲಕ್ಷ್ಮಣರಾವ್‌ ಎನ್ನುವವರು ಹೋಂ ಸೆಕ್ರೆಟರಿ ಆಗಿದ್ದರು. ಅವರಿಂದ ಡೆಪ್ಯುಟಿ ಕಮಿಷನ್ನರಿಗೆ ಫೋನ್‌ ಬಂದಿತು.
‘ಹಿರಣ್ಣಯ್ಯನವರು ಅಶಾಂತಿ ಉಂಟು ಮಾಡಿದ್ದಾರಾ, ಕಾನೂನು ಉಲ್ಲಂಘನೆ ಮಾಡಿದ್ದಾರಾ’ ಎಂದರು. ಇಲ್ಲಾ ಸಾರ್‌ ಎಂದರು ಡೆಪ್ಯುಟಿಯವರು. ‘ದೆನ್‌ ವೈ ಡಿಡ್‌ ಯು ಕ್ಯಾನ್ಸಲ್‌ ದ ಶೋ, ಹೂ ಆರ್‌ ಯೂ ಟು ಡು ಇಟ್‌. ನಮ್ಮಲ್ಲಿ ವಾಕ್‌ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ, ಅಭಿಪ್ರಾಯ ಸ್ವಾತಂತ್ರ್ಯ ಇರೋ ದೇಶ ಇದು’ ಎಂದರು. ಇಮ್ಮೀಡಿಯಟ್‌ ಆಗಿ ಡೆಪ್ಯುಟಿಯವರು ನಾಟಕ ಮಾಡಿಕೊಳ್ಳಿ ಹೋಗಿ ಎಂದುಬಿಟ್ಟರು.
ಇದು ನನಗೆ ಅತ್ಯಂತ ಖುಷಿ ಕೊಟ್ಟದ್ದು..ಮರೆಯಲಾಗದ್ದು. ಸೋಲು ಸವಾಲಾಗಿ ಸ್ವೀಕರಿಸಿದೆ. ನನ್ನ ಮನಸ್ಸಾಕ್ಷಿಗೆ ಸರಿಯಾಗಿದ್ದೆ ತಾಯಿ. ನಮ್ಮಲ್ಲಿ ಮಾಡಿದ ತಪ್ಪಿಗೆ ರೀ-ಟೇಕ್‌ ಇಲ್ಲಮ್ಮಾ. ಕ್ಷಮಾಪಣೆ ಕೇಳಿ ನಮ್ಮ ತಪ್ಪನ್ನು ಸುಧಾರಿಸಿಕೊಳ್ಳಬೇಕಷ್ಟೆ? ಅದು ತಿದ್ದುಪಡಿ..ಬೇರೆ ದಾರಿ ಇಲ್ಲ.
ಈಗ ವ್ಯಥೆಯ ಕಥೆಗೆ ಬರೋಣ...
ಮಡಿಕೇರಿಯಲ್ಲಿ ಕ್ಯಾಂಪ್‌. ನನ್ನ ತಂದೆಯವರು ಜೊತೆಗಿದ್ದರು. ಅವರ ಆರೋಗ್ಯ ತೀರ ಹದೆಗೆಟ್ಟಿತ್ತು. ಮನೆಯಲ್ಲಿ ಮಲಗಿದ್ದರು. ಮಡಿಕೇರಿಯಲ್ಲಿ ಮಕಮಲ್‌ ಟೋಪಿ ನಾಟಕವಾಡುತ್ತಿದ್ದೆ. ನಾಣಿ ಪಾತ್ರದಲ್ಲಿ ಜನರನ್ನು ನಗಿಸುತ್ತಿದ್ದೆ. ಇನ್ನೂ ಎರಡು ಸೀನ್‌ ಇತ್ತು. ಆವಾಗ ಮನೆಯಿಂದ ಹಿರಣ್ಣಯ್ಯನವರು ತೀರಿಕೊಂಡರು ಎಂಬ ಸುದ್ಧಿ ಬಂತು. ಏನ್‌ ಮಾಡಲಿ, ನನ್ನ ಪಾತ್ರ ರೆಡಿಯಾಗಿದೆ. ಸೀನ್‌ಗೆ ಹೋಗಬೇಕು. ಮನಸ್ಸಿನಲ್ಲಿ ನೋವು. ಏನೂ ತೋಚಲಿಲ್ಲ.
ಎರಡು ನಿಮಿಷ ಕಣ್ಣುಮುಚ್ಚಿ ‘ಲಕ್ಷ್ಮೀ ನರಸಿಂಹಾ’ ಎಂದು ದೇವರಿಗೆ ಕೈ ಮುಗಿದೆ. ಸ್ಟೇಜಿನ ಮೇಲೆ ಹೋಗಿ ಡೈಲಾಗ್‌ ಶುರು ಮಾಡಿದೆ. ಸಭೆಯಲ್ಲಿ ತುಂಬಿದ್ದ ಜನರೆಲ್ಲಾ ಎದ್ದು ‘ಹಿರಣ್ಣಯ್ಯನವರೇ ನೀವು ಹೋಗಿ’ ಎಂದರು. ಮನೆಯ ಹತ್ತಿರ ಹೋದೆ. ನನ್ನ ತಂದೆಯ ಹೆಣ ಎತ್ತಲು ನನ್ನ ಕೈಯಲ್ಲಿ ಹಣವಿರಲಿಲ್ಲ. ಅಂದು ನೂರ ಐವತ್ತು ರೂ ಕಲೆಕ್ಷನ್‌ ಆಗಿತ್ತು. ನನ್ನ ಗ್ರಹಚಾರಕ್ಕೆ ಗಲ್ಲಾಪೆಟ್ಟಿಗೆ ಒಡೆದು ಅದನ್ನೂ ಯಾರೋ ಪುಣ್ಯಾತ್ಮ ಕದ್ದೊಯ್ದಿದ್ದ. ಕೈಯಲ್ಲಿ ಬಿಡಿಗಾಸಿಲ್ಲ.
ರಾತ್ರಿ ಹನ್ನೊಂದು ಗಂಟೆಗೆ ನಮ್ಮ ತಂದೆಯವರು ಸತ್ತಿದ್ದು. ನಾನು ಏನೂ ತೋಚದೆ ಕೂತೇ ಇದ್ದೆ. ನಮ್ಮ ಮನೆಯ ಎದುರಿಗೆ ಗಣೇಶ್‌ ಸಾವ್ಕಾರ್‌ ಎಂಬುವರಿದ್ದರು. ಅವರು ಬೆಳಿಗ್ಗೆ ಆರು ಗಂಟೆಗೆ ಏನ್‌ ಹಿರಣ್ಣಯ್ಯನವರೇ ಬಾಗಿಲು ಹಾರೆ ಹೊಡೆದಿದೆ ಎನ್ನುತ್ತಾ ಬಂದರು. ನಾನು, ಸಾರ್‌ ದುಡ್ದಿಲ್ಲ-ನಮ್ಮ ತಂದೆಯ ಹೆಣ ಎತ್ತೋಕೆ ಎಂದು ಅತ್ತೆ. ತಕ್ಷಣ ಹಿಂದು ಮುಂದು ನೋಡದೆ ಎಷ್ಟು ಬೇಕಾಗಿತ್ತು ಎಂದು ಕೇಳಿ ನೂರು ರೂ ತಂದುಕೊಟ್ಟರು. ನನ್ನ ತಂದೆಯ ಹೆಣ ಎತ್ತಲು ಏರ್ಪಾಡು ಮಾಡಿದರು. ಅಂದು ಮಡಿಕೇರಿಯ ಜನ ನನ್ನ ಬೆನ್ನೆಲುಬಾಗಿ ನಿಂತರು.
------------------------------------------------------------------------------------------

ಕೆಳಗಿನ ಲೇಖನ ಎ.ಆರ್‌. ಮಣಿಕಾಂತ್‌(ಸ್ನೇಹಸೇತು: ವಿಜಯಕರ್ನಾಟಕ) ದಲ್ಲಿ ಬರೆದಿರುವುದು
ಮಾಸ್ಟರ್‌ ಹಿರಣ್ಣಯ್ಯನವರಿಗೊಂದು ಓಲೆ
ಜೀವನವೇ ಒಂದು ನಾಟಕ ಅನ್ನುತ್ತಾರೆ. ಆದರೆ, ನಾಟಕವನ್ನೇ ಜೀವನವನ್ನಾಗಿಸಿಕೊಂಡಿರುವ ನರಸಿಂಹ ಮೂರ್ತಿ ಅಲಿಯಾಸ್‌ ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಸಪ್ರೇಮ ವಂದನೆಗಳು. ಪ್ರೀತಿಯ ನೆನಪುಗಳು.
ಅದಾಗಿ, ನಾವು ಕ್ಷೇಮ. ನೀವೂ ಆರೋಗ್ಯವಾಗಿರುತ್ತೀರಿ ಎಂಬ ನಂಬಿಕೆ, ನೀವು ಎಂದೆಂದೂ ಸಂತೋಷದಿಂದ, ನೆಮ್ಮದಿಯಿಂದ ಇರಬೇಕು ಎಂಬ ಹಾರೈಕೆ ನಮ್ಮದು. ಅಂದಹಾಗೆ ಸ್ವಾಮೀ, ನಾಡಿದ್ದು ನಡೆಯಲಿರುವ ಹುಟ್ಟುಹಬ್ಬದ ಸಂಭ್ರಮಕ್ಕೆ ನೀವು ಈಗಾಗಲೇ ಮೇಕಪ್‌ ಮಾಡ್ಕೊಂಡೇ ಸಿದ್ಧವಾಗಿ ಬಿಟ್ಟಿದೀರಾ ಎಂಬ ತುಂಟ ಪ್ರಶ್ನೆಯಾಂದಿಗೇ ನಿಮಗೆ ಈ ಪತ್ರ.....
‘... ಬಿಳಿಯ ಪಾಯಿಜಾಮ, ಮೇಲೊಂದು ಶುಭ್ರವಾದ ಜುಬ್ಬ, ಹೆಗಲ ಮೇಲೊಂದು ಸಣ್ಣ ಟವಲ್ಲು, ಸದಾ ಮಿನುಗುವ ಮಂದಹಾಸ, ಕಂಚಿನಕಂಠ, ಎಲ್ಲರನ್ನೂ ತನ್ನತ್ತ ಸೆಳೆಯುವ ಅದ್ಭುತ ವಾಕ್ಚಾತುರ್ಯ = ಮಾಸ್ಟರ್‌ ಹಿರಣ್ಣಯ್ಯ ಅನ್ನುತ್ತಾರೆ. ಅಷ್ಟು ಹೇಳಿದವರು, ಮರುಕ್ಷಣವೇ- ಮಾಸ್ಟರ್‌ ಹಿರಣ್ಣಯ್ಯಅಂದರೆ- ‘ದೇವದಾಸಿ’ಯ ನಾಜೂಕಯ್ಯ, ‘ಸದಾರಮೆ’ಯ ಕಳ್ಳ! ಹಿರಣ್ಣಯ್ಯ ಅಂದರೆ ಲಂಚಾವತಾರದ ‘ದತ್ತು’; ‘ಮಕ್ಮಲ್‌ ಟೋಪಿ’ಯ ‘ನಾಣಿ ’; ಭ್ರಷ್ಟಾಚಾರದ ‘ದಫೇದಾರ್‌’; ನಡುಬೀದಿಯ ‘ನಾರಾಯಣ’ ಎಂದೆಲ್ಲ ಹೇಳಿಬಿಡುತ್ತಾರೆ. ಅಲ್ಲಿಗೆ -ಒನ್ಸ್‌ ಎಗೇಯ್ನ್‌- ನಾಟಕದ ವೇದಿಕೆಗೇ ಬಂದ ಹಾಗಾಗಿ ಬಿಡುತ್ತೆ. ಹೇಳಿ ಸಾರ್‌, ನಾಟಕ ಬಿಟ್ಟು- ಬೇರೊಂದು ಥರದ ಐಡೆಂಟಿಟಿ ನಿಮ್ಗೆ ನಿಜಕ್ಕೂ ಇಲ್ವಾ?
ಸರ್‌, ಇವತ್ತಿಗೂ ಸಹ ಕನ್ನಡದ ನಿಮ್ಮನ್ನ ಗುರುತಿಸೋದು ‘ಲಂಚಾವತಾರ’ದ ‘ದತ್ತು’ ಅಂತಾನೇ. ನೀವು ನಾಟಕ ಮಾಡಿದಾಗಲೆಲ್ಲ ರಾಜಕಾರಣಿಗಳನ್ನು ಕರೆದು, ಅವರನ್ನು ಮೊದಲ ಸಾಲಿನಲ್ಲೇ ಕೂರಿಸಿ, ಒಮ್ಮೊಮ್ಮೆ ಅವರಿಗೆ ಸನ್ಮಾನವನ್ನೂ ಮಾಡಿ, ಕಡೆಗೆ ರಂಗದ ಮೇಲೆ ನಿಂತು ಅವರ ಜನ್ಮ ಜಾಲಾಡ್ತಾ ಇದ್ರಲ್ಲ- ಆಗೆಲ್ಲ ಜನ ಖುಷಿ ಪಡ್ತಿದ್ರು. ನಿಮ್ಮ ಫಡಫಡಾ ಬೈಗುಳ ಕೇಳಿ- ಆಹಾಹಾ, ಎಷ್ಟು ಚೆನ್ನಾಗಿ ಬೈತಾನಯ್ಯಾ ನನ್ಮಗಾ..... ಅಂತ ಕುಣೀತಿದ್ರು. ಅದೇ ಸಂದರ್ಭದಲ್ಲಿ ನಿಮ್ಮಿಂದ ಯಕ್ಕಾ ಮಕ್ಕಾ ಉಗಿಸಿಕೊಂಡವರು - ಅಬ್ಬಬ್ಬಬ್ಬಬ್ಬಾ , ಏನ್‌ ಮಾತುಗಾರ ಈ ಹಿರಣ್ಣಯ್ಯ ? ಸಖತ್ತಾಗಿ ಉಗೀತಾನೆ ! ಬಲೇ ಸೊಗಸಾಗಿ ಮಾತಾಡ್ತಾನೆ ಎಂದು ಹೊಗಳಿ, ಮತ್ತೆ ಮತ್ತೆ ನಾಟಕಕ್ಕೆ ಬರ್ತಾ ಇದ್ರು ! ಇವತ್ತು ಇದನ್ನೆಲ್ಲ ನೆನಪು ಮಾಡಿಕೊಂಡಾಗ- ಎಲ್ಲವೂ ವಿಚಿತ್ರಮತ್ತು ವಿಪರ್ಯಾಸ ಅನ್ನೋ ಭಾವ ನಿಮ್ಮನ್ನ ಕಾಡಲ್ವಾ? ಹೇಳಿ ಸಾರ್‌...
ಸರ್‌, ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ, ಆಕಸ್ಮಿಕವಾಗಿ ರಂಗಕ್ಕೆ ಬಂದವರು ನೀವು. ಅಂಥ ನಿಮ್ಮಿಂದ ರಂಗಭೂಮಿ ಮಹತ್ವದ ಸಾಧನೆಯನ್ನು ದೇವ್ರಾಣೆಗೂ ನಿರೀಕ್ಷಿಸಿರಲಿಲ್ಲ. ಅಷ್ಟೇ ಏಕೆ ? ಮುಂದೊಂದು ದಿನ ರಂಗಭೂಮಿಯ ಮಿನುಗುತಾರೆಯಾಗಿ ನಿಲ್ತೀನಿ ಅನ್ನೋ ನಂಬಿಕೆ ನಿಮಗೂ ಇರಲಿಲ್ಲವೇನೋ? ಹಾಗಿರೋವಾಗ ಹೃದ್ಯ, ಆಪ್ತ, ಅಂತರಂಗವನ್ನು ಕಲಕಿ ಬಿಡುವ ಮಾತುಗಳಿಂದಲೇ ಸಮಾಜದ ಕೊಳೆ ತೊಳೆಯುವ ಕೆಲಸ ಮಾಡಿದ್ದಿರಲ್ಲ- ಈ ಬಗ್ಗೆ ನಿಮಗೆ ಸಮಾಧಾನ ಇದೆಯಾ? ಛೆ,ಛೆ, ನಾನು ಎಷ್ಟು ಪ್ರಯತ್ನಪಟ್ರೂ ಸಣ್ಣದೊಂದು ಬದಲಾವಣೆಯೂ ಆಗಲಿಲ್ವಲ್ಲ ಅನ್ನೋ ಯಾತನೆ ಕಾಡ್ತಾ ಇದೆಯಾ?
ಎಲ್ಲರಿಗೂ ಗೊತ್ತಿರೋ ಹಾಗೆ- ನಾಟಕ ಅಂದ್ರೆ ಅದಕ್ಕೊಂದು ಚೌಕಟ್ಟಿರುತ್ತೆ, ನಾಟಕಕ್ಕೆ ಒಂದು ‘ಸ್ಕಿೃಪ್ಟ್‌’ ಇರುತ್ತೆ. ಆದ್ರೆ ನಿಮ್ಮ ನಾಟಕದ ಸ್ಕಿೃಪ್ಟು, ಡೈಲಾಗ್‌ ದಿನಕ್ಕೊಂದು ಥರದಲ್ಲಿ ಬದಲಾಗ್ತಾ ಇತ್ತಲ್ಲ? ಹಾಗೆ ದಿನಕ್ಕೊಂದು, ಕ್ಷಣಕ್ಕೊಂದು ಬದಲಾವಣೆ ಆದಾಗಲೆಲ್ಲ ನಿಮಗೆ ಕನ್‌ಫ್ಯೂಸ್‌ ಆಗ್ತಾ ಇರಲಿಲ್ವ? ಡೈಲಾಗ್‌ ಮರೆತು ಹೋಗ್ತಿರಿಲಿಲ್ವ ? ಬರಾಬರ್‌ ಮೂರು ಗಂಟೆಗಳ ಕಾಲ ವೇದಿಕೆಯ ಮೇಲೆ ಮಾತಾಡ್ತಾ ವ ಇರ್ತಿದ್ರಲ್ಲ- ಆ ಕ್ಷಣದಲ್ಲೇ-‘ಛೇ, ಎಂಥ ಬುದ್ಧಿವಂತ ನಾನು! ಇಂಥ ನಾನು ಪಿ.ಯು.ಸಿ ಗೇ ಓದು ನಿಲ್ಸಿದ್ದು ಯಾಕೆ’ ಅನ್ನೋ ಪ್ರಶ್ನೆ ಮತ್ತೆ ಮತ್ತೆ ಕಾಡಲಿಲ್ವ?
‘ರಾಜಕೀಯ ಅನ್ನೋದು ಕೊಳಚೆ ಸಮುದ್ರ. ರಾಜಕಾರಣಿಗಳು ಹುಟ್ಟಾ ಕೊಳಕರು’ ಅಂತ ಹೇಳ್ತಿದ್ರಿ ನೀವು. ಆಗೆಲ್ಲ ಯಾರಾದ್ರೂ ಹೊಡೆದು ಬಿಟ್ರೆ ಅಂತ ಭಯ ಆಗ್ತಿರಲಿಲ್ವ? ‘ಲಂಚಾವತಾರ ’ದ ಬಗ್ಗೆ ದಿನಕ್ಕೊಂದು ಥರದ ನಾಟಕ ಆಡಿದ ನಿಮಗೇ, ಒಂದಲ್ಲ ಒಂದು ಸಂದರ್ಭದಲ್ಲಿ ‘ಲಂಚ’ ಕೊಡಬೇಕಾದ ಸಂದರ್ಭ ಎದುರಾಗಲಿಲ್ವ? ‘ಸದಾರಮೆ’ ಯಲ್ಲಿ ಕಳ್ಳನ ವೇಷ ಹಾಕ್ಕೊಂಡು ಮನೆಗೆ ಹೋಗಿ- ಹೆಂಡತಿಯ ಮುಂದೆ ಹಾಡಿ ಕುಣೀಬೇಕು ಅನ್ನಿಸಲಿಲ್ವ? ವೇದಿಕೆಯ ಮೇಲೆ ರಾಜಕಾರಣಿಗಳ ಮೇಲೆ ಯದ್ವಾತದ್ವಾ ಮಾತಿನ ‘ಗುಂಡು’ ಹಾರಿಸುತ್ತಿದ್ದ ನೀವೇ ಮುಂದೆ ಅವರೊಂದಿಗೆ ಕುಳಿತು ‘ಗುಂಡು’ ಹಾಕುವಾಗ ‘ಒಂಥರಾ ಆಗಲಿಲ್ವ’ ? ‘ಕಪಿಮುಷ್ಠಿ ’ ನಾಟಕ ಬ್ಯಾನ್‌ ಮಾಡಲು ಮುಂದಾಗಿದ್ದ ಇಂದಿರಾಗಾಂಧಿಯವರನ್ನೇ ಮೆಚ್ಚಿಕೊಂಡು- ಮಗಳಿಗೆ ‘ ಪ್ರಿಯದರ್ಶಿಸಿ’ ಅಂತ ಹೆಸರಿಟ್ರಲ್ಲ- ಅದು ವಿಪರ್ಯಾಸ ಅಲ್ವ? ನಿಮ್ಮ ಹಲವು ನಾಟಕದ ಒಂದೊಂದೇ ಪಾತ್ರಗಳು ಏಕಕಾಲಕ್ಕೆ ಕಣ್ಮುಂದೆ ಬಂದು- ನಾನು ನರಸಿಂಹಮೂರ್ತಿಯಲ್ಲ , ಮಾಸ್ಚರ್‌ ಹಿರಣ್ಣಯ್ಯನೂ ಅಲ್ಲ. ನಾನು ದತ್ತು. ನಾನು ನಾರಾಯಣ, ನಾನು ಆದಿಮೂರ್ತಿ, ನಾನು ಕಳ್ಳ, ನಾನು ನಾಣಿ ಎಂದೆಲ್ಲ ಅನಿಸಿಬಿಡಲ್ವ? ಚಿತ್ರರಂಗ ಕಡೆಗೂ ನಿಮಗೆ ಒಲಿಯಲಿಲ್ವಲ್ಲಾ, ಅದನ್ನ ನೆನೆದು ಬೇಜಾರಾಗಲ್ವ? ಹೇಳಿ ಸಾರ್‌....
ಸರ್‌, ವಿಶ್ವ ಇರುವಷ್ಟೂ ದಿನ ರಂಗಭೂಮಿ ಇರುತ್ತದೆ. ರಂಗಭೂಮಿ ಇರುವಷ್ಟೂ ದಿನ ನೀವು ನಮ್ಮೊಂದಿಗಿರುತ್ತೀರಿ- ಎಚ್ಚರದ ದನಿಯಾಗಿ! ಸಾಕಲ್ಲವೇ? ನೀವೀಗ 70 ರ ಹೊಸ್ತಿಲಲ್ಲಿ ನಿಂತಿದ್ದೀರಲ್ಲ- ದೊಡ್ಡ ಖುಷಿಯಿಂದ ಹೇಳ್ತಿದೀನಿ. ಹ್ಯಾಪಿ ಬರ್ತ್‌ಡೇ ಟು ಯೂ. ಎಪ್ಪತ್ತು ನೂರಾಗಲಿ. ಮುಂದೆ, ನೂರು ವರ್ಷದ ಸಂಭ್ರಮ ನಿಮ್ಮದಾಗಲಿ. ನಿಮ್ಮ ಪಾಲಿನ ದೇವತೆ, ಭಾಗ್ಯಲಕ್ಷ್ಮಿಎರಡೂ ಆದ ನಿಮ್ಮಾಕೆ ಆಗಲೂ ನಿಮ್ಮ ಜತೆಗಿರಲಿ. ಮತ್ತೆ ಆಗ ನಾಲ್ಕು ಮಾತು ಬರೆವ ಸರದಿ ನನ್ನದಾಗಲಿ.
- ಎ.ಆರ್‌. ಮಣಿಕಾಂತ್‌
(ಸ್ನೇಹಸೇತು: ವಿಜಯಕರ್ನಾಟಕ)
-----------------------------------------------------------------------------------------------
ಮಾಸ್ಟರ್ ಹಿರಣ್ನಯ್ಯನವರ ಅಭಿಮಾನಿಗಳಿಗೆ ಅವರ ಪತ್ರವೊಂದರ ಸ್ಯಾಂಪಲ್ ಓದುವ ಅವಕಾಶ
ಶ್ರೀಮಾತಾ
01 ಜೂನ್ 2009 ಬೆಂಗಳೂರು.
ಆತ್ಮೀಯ ಬಂಧು, ಶ್ರೀಯುತ ಶ್ರೀವತ್ಸಜೋಶಿಯವರಿಗೆ, ನಿಮ್ಮ ಮಾಸ್ಟರ್ ಹಿರಣ್ಣಯ್ಯನ ಅನಂತಾನಂತ ಅಭಿವಂದನೆಗಳು.
ಎಲ್ಲಿಂದ ಹೇಗೆ ಆರಂಭಿಸಲಿ? ಸರಿ-ಸಾಂಪ್ರದಾಯಕವಾಗಿಯೇ ಪ್ರಾರಂಭಿಸೋಣ.
ಸ್ವಾಮಿ, ನಾನೊಬ್ಬ ಅಚ್ಚ ಕನ್ನಡಿಗ. ರಂಗ ಕಲಾವಿದ. ನನ್ನ ನಾಮಧೇಯ, ವಂದನೆಗಳಿಗೆ ಹಿಂದೆಯೇ ತಿಳಿಸಿದ್ದೇನೆ. ಇನ್ನು ನಿಮ್ಮ ಪರಿಚಯ ನನಗಾದದ್ದು, ನೆನ್ನೆಯ "ವಿಜಯ ಕರ್ನಾಟಕ"ದಲ್ಲಿ, ತಮ್ಮ ಅನಿಸಿಕೆ ಹಾಗೂ ನಮ್ಮ ನಾಡ ನುಡಿಯ ಬಗೆಗಿನ ತಮ್ಮ ಅಗಾಧ ಅಭಿಮಾನ, ಕಳಕಳಿ ಮತ್ತು ಆಶಾಭಾವನೆಯ ಅನಿಸಿಕೆಯ ಲೇಖನ ಓದಿ, ಹೆಮ್ಮೆಯೆನಿಸಿ ಕೃತಜ್ಞತಾ ಭಾವದಿಂದ- "ಶಿರಸಾ ನಮಾಮಿ, ಮನಸಾ ಸ್ಮರಾಮಿ" ಅಂದೆ.
ಇಲ್ಲಿಯ ಕನ್ನಡ ನಾಡಲ್ಲೇ ಜನಿಸಿ, ಕನ್ನಡದ ಭಾಷೆಯಲ್ಲೇ ಉಂಡುಡುತ್ತಾ ಇದ್ದರೂ, ಅವುಗಳ ಬಗ್ಗೆ ಕಿಂಚಿತ್ತೂ ಅಭಿಮಾನವನ್ನಾಗಲೀ, ಆಶಾಭಾವನೆಯನ್ನಾಗಲೀ, ಕೃತಜ್ಞತಾ ಭಾವವನ್ನಾಗಲೀ, ಯಾವುದನ್ನೂ ಕಾಯಾವಾಚಾಮನಸಾ ಇಟ್ಟುಕೊಳ್ಳದೇ, ಅದರ ಬುಡಕ್ಕೇ ಕೊಡಲಿಯನ್ನು ಹಾಕುತ್ತಿರುವ ಜನ ನಾಯಕರನ್ನೂ, ಬುದ್ಧಿಜೀವಿಗಳನ್ನೂ, ನಾಗರಿಕರೆಂದು ತೋರಿಸಿಕೊಳ್ಳಲು, ಮಹಾ ಅನಾಗರೀಕರಂತೆ ವರ್ತಿಸುತ್ತಾ, ಇಲ್ಲಿ ಬಿಟ್ಟರೆ ಬೇರೆ ಕಡೆ, ಕವಡೆಯ ಕಿಮ್ಮತ್ತಿಗೂ ಬಾಳಲಾರದ, ಅಚ್ಚ ಕನ್ನಡಿಗರನ್ನು, ಅರವತ್ತು ವರ್ಷಗಳಿಂದ ನೋಡುತ್ತಾ, ಅವರ ಜೊತೆಜೊತೆಯಲ್ಲೇ ಬೆರೆಯುತ್ತಾ, ಅವರಿತ್ತ-ಈಯುತ್ತಿರವ ಕೃಪಾನ್ನದಲ್ಲೇ ಉಳಿದಿರುವ ನಾನು, ಅವರನ್ನು ಅತ್ತ ಹಳಿಯಲೂ ಆಗದೇ, ಇತ್ತ ಅವರನ್ನು ಸತ್ಯನ್ಯಾಯಗಳ ಹಳಿಯ ಮೇಲೆ ಎಳೆಯಲೂ ಆಗದೇ, ಉಳಿದಿರುವ ನಾನು, ನಿಮ್ಮ ಅಮೂಲ್ಯ ಅನುಭವಾಮೃತದ ಅಮೃತಬಿಂದುಪೂರಿತ ಮಾತುಗಳಿಂದ ಅಭಿಷಿಕ್ತನಾದೆ-ಅದಕ್ಕಾಗಿಯೇ ಈ ಅಭಿವಂದನಾ ಪತ್ರ.
ಸರ್ಕಾರದ ಭಾಷಾಂಧತೆಗೆ ಇಲ್ಲಿ ಒಂದೆರಡು ಉದಾಹರಣೆ-ಪಕ್ಕದ ತಮಿಳ್ ನಾಡಿನವರು ನಮ್ಮ ಭಾಷೆಗಿಂತ ಕಿರಿಯ ಚಾರಿತ್ರೆಯ ಒಡೆಯರವರಾದರೂ, ತಮ್ಮ ಅನನ್ಯ ಭಾಷಾಭಿಮಾನದ ಕುರುಹಾಗಿ ಕೇಂದ್ರ ಸರ್ಕಾರದಿಂದ ತಮಿಳನ್ನು "ಶಾಸ್ತ್ರೀಯ ಭಾಷೆ"ಯನ್ನಾಗಿ ಗುರುತಿಸಿಸಿ ಕೊಂಡು ಬೀಗುತ್ತಿದ್ದರೂ, ನಮ್ಮ ಪವಿತ್ರ ೨೮ ಸಂಸದ ಜನನಾಯಕರಿಗೆ ಅದರ ಪರಿವೆಯೇ ಇಲ್ಲದೇ, ಕನ್ನಡಿಗರ ತೆರಿಗೆಯ ಹಣವನ್ನು ಬ್ಯಾಟಾ-ಕೋಟಾ ರೂಪದಲ್ಲಿ ತಿಂದು ತೇಗಿದರು ಕಳೆದೈದು ವರ್ಷಗಳು. ಇಲ್ಲಿನ ಅನೇಕ ಸಂಘ ಸಂಸ್ಥೆಗಳು, ನಾಡನುಡಿಯ ಅಭಿಮಾನಿಗಳೂ ಗದ್ದಲ ಎಬ್ಬಿಸಿದ ಮೇಲೆ, ಕಾಟಾಚಾರಕ್ಕೆ ಮತ್ತು ಮುಂದಿನ ಚುನಾವಣೆಯಲ್ಲಿನ ಮತದಾಸೆಗೆ, ನೆಪಕ್ಕೆ ಕನ್ನಡವನ್ನು ಶಾಸ್ತ್ರಿಯ ಭಾಷೆಯೆಂದು ಕೇಂದ್ರದಿಂದ ಹೇಳಿಸಿದರೂ, ಇನ್ನೂ ಅದು ಅಧಿಕೃತವಾಗಿಲ್ಲ. ಕಾರಣ ತಮಿಳು ನಾಡಿನ ನ್ಯಾಯವಾದಿಯೊಬ್ಬರು(ಶ್ರೀಗಾಂಧಿ ಎಂಬುವವರು) ಚನ್ನೈನ ಉಚ್ಚನ್ಯಾಯಾಲಯದಲ್ಲಿ, ಕನ್ನಡದ ಶಾಸ್ತ್ರೀಯ ಭಾಷಾ ಸ್ಥಾನಕ್ಕೆ ಕೊಟ್ಟಿರುವ ಮನ್ನಣೆಯನ್ನು ರದ್ದು ಪಡಿಸುವಂತೆ ಕೋರಿದ್ದಾರೆ. ಅದಕ್ಕೆ ಆಕ್ಷೇಪಣಾ ಅರ್ಜಿಯನ್ನು ಹಾಕುವಲ್ಲಿಯೂ ಸಹ ನಮ್ಮ ಘನ ಸರ್ಕಾರದವರು ಅನಗತ್ಯ ಆಲಸ್ಯವನ್ನೂ, ವಿಳಂಬ ನೀತಿಯನ್ನೂ ಅನುಸರಿಸುತ್ತಾ ಇರುವುದು, ಸರ್ಕಾರದ ಅಜ್ಞಾನಕ್ಕೆ ಹಾಗೂ ನಮ್ಮ ದೌರ್ಭಾಗ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇನ್ನು ಅದು ಇತ್ಯರ್ಥವಾಗುವವರೆಗೂ ನಮ್ಮ ಸ್ಥಿತಿ ಅಧೋಗತಿ. ಇನ್ನೊಂದು ಉದಾಹರಣೆ-ಸರ್ಕಾರದ ನಾಮ ಫಲಕಗಳು. "ಹೆಂಗಸರ ಹೆರಿಗೆ ಆಸ್ಪತ್ರೆ". "ಸರ್ಕಾರದ ಬೀಜ ನಿಗಮ", ವಿದ್ಯುತ್ ಚಿತಾಗಾರದ ದುರಸ್ತೆಗೆ ಮುನ್ನ ಫಲಕ "ವಿದ್ಯುತ್ ಚಿತಾಗಾರ ದುರಸ್ಥಿ ಮಾಡಲ್ಪಡುತ್ತಿದೆ, ಸರ್ವರೂ ಸಹಕರಿಸಿ" ಆನಂತರ "ವಿದ್ಯುತ್ ಚಿತಾಗಾರ ಸಿದ್ಧವಾಗಿದೆ, ಸರ್ವರೂ ಸಹಕರಿಸಿ". ಇದಲ್ಲದೆ ನಮ್ಮ ಶಿಕ್ಷಣದಲ್ಲಿ ಆಗಲೀ, ನ್ಯಾಯಾಂಗದಲ್ಲಾಗಲೀ ಅಥವಾ ಸರ್ಕಾರದಲ್ಲಾಗಲೀ ಕನ್ನಡವನ್ನು ಇನ್ನೂ ಅಧಿಕೃತ ಭಾಷೆಯನ್ನಾಗಿ ಘೋಷಿಸಿಯೂ ಇಲ್ಲಾ, ಆಚರಣೆಗಂತೂ ತಂದೇ ಇಲ್ಲಾ. ತಮ್ಮ ಗಮನಕ್ಕೆ ತರಲು ಅಪೇಕ್ಷಿಸುತ್ತೇನೆ-ನಮ್ಮ ಸರ್ಕಾರದ ಚುನಾಯಿತ ಪ್ರತಿ ನಿಧಿಗಳಿಗೆ, ಮಂತ್ರಿಮಹೋದಯರನೇಕರಿಗೆ ಸರಿಯಾದ ಕನ್ನಡವೇ ಬರೋಲ್ಲಾ. ಒಬ್ಬ ಕಾಡುಮಂತ್ರಿಗಳು(ಅರಣ್ಯ ಖಾತಾ ಮಂತ್ರಿ) ರಾಜ್ಯೋತ್ಸವ ಅನ್ನುವ ಬದಲು "ರಾಜ್ಯೋಶವ" ಎಂದೇ ಹೇಳುವುದು. ಇನ್ನು ಸರ್ಕಾರದ ಅಧಿಕಾರಿಗಳಿಗಂತೂ, ಮೇಲಿಂದ ಹಿಡಿದು ಮಧ್ಯದವರವರೆಗೂ ಕನ್ನಡ ಗಂಧವೇ ಇಲ್ಲ ಹಾಗೂ ಅದರ ಮೇಲೆ ಅಭಿಮಾನಕ್ಕಿಂತಾ ದ್ವೇಷವೇ ಹೆಚ್ಚು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಾವಿರುವುದು ಎಲ್ಲಿ ಎಂಬ ಪ್ರಶ್ನೆ ಕಾಡುತ್ತೆ. ನಮ್ಮ ಗ್ರಾಮಾಂತರದತ್ತ ಹೋದಾಗ ಮಾತ್ರಾವೇ ನಾವು ಶುದ್ಧ ಗ್ರಾಮೀಣ ಕನ್ನಡವನ್ನು ಕೇಳಲು ಸಾಧ್ಯ.
ನನ್ನ ಮಗ ಅಮೆರಿಕಾದ ವರ್ಜೀನಿಯಾದ ವಿಡಾಟ್-(ವರ್ಜೀನಿಯಾ ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸ್‌ಪ್ರೊಟೇಷನ್)ನಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ನಾನು ನಮ್ಮ ಪವಿತ್ರ ಮಣ್ಣಿನ ಸಾಂಸ್ಕೃತಿಕ ಹರಿಕಾರನಾಗಿ, ಅಲ್ಲಿಗೆ ೧೯೮೩ ರಿಂದ ಈವರೆಗೆ ೯ ಬಾರಿ ಬಂದಿದ್ದೇನೆ. ಅಲ್ಲಿಯ ಎಲ್ಲಾ ಸ್ಥಳಗಳಲ್ಲೂ, ಎಲ್ಲೆಲ್ಲಿ ನಮ್ಮ ಕನ್ನಡಿಗರಿದ್ದಾರೆ ಅಲ್ಲೆಲ್ಲಾ ನಮ್ಮ ನಾಟಕಗಳನ್ನೂ ಮತ್ತು ನನ್ನ ಉಪನ್ಯಾಸಗಳನ್ನೂ ನೀಡಿ, ಅಲ್ಲಿಯ ಎಲ್ಲ ಅನ್ನದಾತರ ಆಶೀರ್ವಾದಕ್ಕೂ ಭಾಗಿಯಾಗಿದ್ದೇನೆ. ಅಲ್ಲಿ ನನಗೆ ಅತ್ಯಮೂಲ್ಯವಾದ ಅನೇಕಾನೇಕ ಪ್ರಾಣಮಿತ್ರರಿದ್ದಾರೆ. ಅಲ್ಲಿಯವರ ಭಾಷಾಭಿಮಾನಕ್ಕೆ ಮಾರುಹೋಗಿದ್ದೇನೆ. ಎಲ್ಲೋ ಒಂದೆರಡು ಕಡೆಯ ಈ ಕಾಕ್‌ಟೈಲ್ ಪಾರ್ಟಿಗಳಲ್ಲಿ, ಕೆಲವು ಭಾರತೀಯರು ಮಾತ್ರಾ ನಮ್ಮ ಪವಿತ್ರ ಭಾರತವನ್ನು ಹೀಗಳೆಯುವದನ್ನೂ ಸಹ ಕೇಳಿ, ಅವರ ಅಜ್ಞಾನ-ಕೃತಘ್ನತೆ ಕಂಡು ಸಿಟ್ಟು ಬಂದು ನುಂಗಿಯೂ ಇದ್ದೇನೆ. ನಾವು ಯಾವ ದೇಶದವರೇ ಆಗಿರಲಿ, ಎಲ್ಲಿ ನಮ್ಮ ಜೀವನ ನಿರ್ಭಾಧಿತವಾಗಿ ನಡೆಯುತ್ತಾ, ನಮಗೆ ಅನ್ನ, ಜ್ಞಾನಗಳನ್ನು ನೀಡುತ್ತಾ ಇರುತ್ತೋ,ಅದನ್ನು ನಮ್ಮ ತಾಯಿನಾಡಿನಷ್ಟೇ ಪ್ರೀತಿ ಗೌರವಗಳಿಂದ ಪೂಜಿಸಬೇಕಲ್ಲವೇ? ನಮ್ಮಮ್ಮನಂತೆಯೇ ಅನ್ಯರಮ್ಮನವರನ್ನೂ ಸಹ ಗೌರವಿಸುವುದಲ್ಲವೇ ಮಾನವ ಸಂಸ್ಕೃತಿಯ ಸಂಕೇತ. ಅದನ್ನೇ ಪಂಪ ಮಹಾಕವಿಯಿಂದ ಹಿಡಿದು ಕುವೆಂಪು ವರೆಗೂ ಸಾರಿಸಾರಿ ಹೇಳಿರುವುದು. "ಮಾನವಕುಲಂ ಒಂದೆ ಒಲಂ" ಮತ್ತು "ಮನುಜಮತ ವಿಶ್ವಪಥ" ಎಂದು.
ಎನೇ ಆದರೂ ಒಟ್ಟಿನಲ್ಲಿ ಕನ್ನಡಿಗರಾದ ನಮ್ಮ ಸಹನೆ, ಔದಾರ್ಯ, ಹೊಂದಾಣಿಕೆ ಮತ್ತು ವಿಶ್ವಾಸ ನಂಬಿಕೆಗಳು ಸ್ವಲ್ಪ ಹೆಚ್ಚೆನ್ನುವಷ್ಟನ್ನೇ ಬೆಳೆಸಿಕೊಂಡಿದ್ದವೇ ಅಲ್ಲವೆ ಜೋಶಿಯವರೆ? "ಆಲಸ್ಯಂ ಅಮೃತಂ ವಿಷಂ" ಎಂದವರೇ "ಅತಿಯಾದರೆ ಅನ್ನವೂ ಸಹ ವಿಷವಾದೀತು" ಎಂದಿದ್ದಾರೆ. ನಾನಂತೂ ಆಶಾವಾದಿ. ಆದರ್ಶವಾದಿಯೂ ಆಗಬೇಕೆಂದೇ ಆಸೆ. ನಮ್ಮ ಬಳ್ಳಾರಿ ಬೀಚಿ ಉವಾಚದಂತೆ-"ಜಗದಲ್ಲಿ ಎರಡೇ ಜಾತಿ. ಒಂದು ಸತ್ತಂತೆ ಬದುಕಿರುವವರು, ಇನ್ನೊಂದು ಸತ್ತ ಮೇಲೂ ಬದುಕಿರುವವರು". ನನಗೆ ಎರಡನೆಯ ಜಾತಿಯವನಾಗುವ ಆಸೆ.
ಶುಭಮಸ್ತು. ವಂದನೆಗಳು.,
ಎಂದೂ ನಿಮ್ಮವ,.
ಡಾ ಮಾಸ್ಟರ್ ಹಿರಣ್ಣಯ್ಯ.
-----------------------------------------------------------------------------------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.