ಪ್ರಭುತ್ವಕ್ಕೆ ಬೇಡ ಭಾಷೆ-ಸಂಸ್ಕೃತಿ ಹೊಣೆ: ಕಣವಿ
ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆ(ಗದಗ) 19- ಭಾಷೆ-ಸಂಸ್ಕೃತಿ ರೂಪಿಸುವ ಇಲ್ಲವೇ ನಿರ್ವಹಿಸುವ ಅಥವಾ ನಿರ್ಧರಿಸುವ ಕಾರ್ಯವನ್ನು ನಾವೆಂದಿಗೂ ಪ್ರಭುತ್ವಕ್ಕೆ ಒಪ್ಪಿಸಬಾರದು. ಅದು ಪ್ರಜಾಸತ್ತಾತ್ಮಕವಾದ ಚೌಕಟ್ಟಿನಲ್ಲಿಯೇ ನಡೆಯಬೇಕು ಎಂದು ಚೆಂಬೆಳಕಿನ ಕವಿ ನಾಡೋಜ ಡಾ. ಚನ್ನವೀರ ಕಣವಿ ಹೇಳಿದರು.
ಶುಕ್ರವಾರ ಇಲ್ಲಿ ಆರಂಭವಾದ 76ನೇ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಇಂದು ರಾಜಕೀಯ ಭ್ರಷ್ಟತೆ, ಭಂಡತನ ಅತಿಯಾಗಿದೆ. ಸಂಸ್ಕೃತಿ ಬಗೆಗಿನ ರಾಜಕಾರಣಿಗಳ ಅಜ್ಞಾನ ಹೆಚ್ಚಿದೆ. ಅಲ್ಲದೇ ಸಂಸ್ಕೃತಿ ಮೇಲೆ ನಾಗರಿಕತೆಯ ದಾಳಿ ನಡೆದಿದೆ. ಕನ್ನಡನಾಡು ಇಂದು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕೆಲವೊಂದು ತಾನೇ ತನ್ನ ಮೈಮೇಲೆ ಎಳೆದುಕೊಂಡ ಬಿಕ್ಕಟ್ಟುಗಳು. ರಾಜಕೀಯ ಎಲ್ಲರನ್ನೂ ಹೆಡೆಮುರಿಗೆ ಕಟ್ಟಿ ಉಸಿರುಗಟ್ಟಿಸುವಂತ ಸ್ಥಿತಿಗೆ ತಲುಪಿಸಿದೆ. ಶಾಂತಿ, ಸಹಿಷ್ಣುತೆ, ಸಹಬಾಳ್ವೆಗೆ ಹೆಸರಾಗಿದ್ದ ನಮ್ಮ ನಾಡಿನಲ್ಲಿ ಇಂದು ಸೇಡು, ಹಿಂಸೆ, ದ್ವೇಷ, ಕ್ರೌರ್ಯ ತಾಂಡವವಾಡುತ್ತಿರುವುದು ದೊಡ್ಡ ವಿರೋಧಾಭಾಸ ಎಂದು ವಿಷಾದಿಸಿದರು.
ಪರವಿಚಾರ, ಪರಧರ್ಮವನ್ನು ಸೈರಿಸುವುದೇ ಬದುಕಿನ ಬಂಗಾರ ಎಂದು ಹೇಳಿದ ಕವಿರಾಜ ಮಾರ್ಗದ ಚಕ್ರವರ್ತಿ ನೃಪತಂಗನ ಮುತ್ತಿನಂಥ ಮಾತನ್ನು ನಾವು ಮರೆತಿದ್ದೇವೆ ಎಂದ ಕಣವಿಯವರು ಈ ಪರಿಸ್ಥಿತಿಗೆ ರಾಜಕೀಯ ಭ್ರಷ್ಟತೆ ಹಾಗೂ ಭಂಡತನ, ಸಂಸ್ಕೃತಿಯ ಬಗೆಗಿರುವ ಅಜ್ಞಾನ ಅಥವಾ ತಪ್ಪು ತಿಳಿವಳಿಕೆ, ಸಂಸ್ಕೃತಿಯ ಮೇಲಿನ ದಾಳಿ ಅಥವಾ ತಾನೇ ಸಂಸ್ಕೃತಿಯೆಂಬ ಭ್ರಮೆ ಹುಟ್ಟಿಸುವ ನಾಗರಿಕತೆಯ ವಿಕಾರ ಈ ಮೂರು ಮುಖ್ಯ ಕಾರಣಗಳು ಎಂದು ಹೇಳಬಹುದು. ಈ ಸಂಘರ್ಷವನ್ನು ನಿವಾರಿಸಿ ಸರಿಯಾದ ತಿಳಿವಳಿಕೆಯನ್ನು ಜನತೆಗೆ ಮಾಡಿಕೊಡುವುದು ಅವಶ್ಯ. ಸಾಹಿತ್ಯ ಮತ್ತು ಕಲೆಗಳ ಮೂಲಕ ಈ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ ಎಂದು ಹೇಳಿದರು.
``ಹಿಂದೆ ಕನ್ನಡಿಗರು ಜಾಗೃತವಾಗದ ಕಾಲದಲ್ಲಿ ಅವರನ್ನು ಬಡಿದೆಬ್ಬಿಸುವ ಮಹತ್ಕಾರ್ಯವನ್ನು ಸಾಹಿತ್ಯ ಸಮ್ಮೇಳನಗಳು ಮಾಡುತ್ತಿದ್ದವು. ಉತ್ಸಾಹಿ ಯುಗದಲ್ಲಿ ಸಂಭ್ರಮ, ಸಡಗರ ಮೆರವಣಿಗೆ ಮುಂತಾದವು ನಡೆದವು. ಆದರೆ ಇದು ಬುದ್ಧಿಮತ್ತೆ ಯುಗ, ಭಾವಪ್ರಧಾನವಾದ ಉತ್ಸವ ಯುಗ ನಿಂತುಹೋಗಿದೆ. ಇನ್ನು ಮುಂದೆ ಸಮ್ಮೇಳನಗಳ ಬೌದ್ಧಿಕ ಮಟ್ಟ ಹೆಚ್ಚಬೇಕು. ಅದರಂತೆ ನಮ್ಮ ನಾಡಿನಲ್ಲಿ ಸಂಶೋಧನೆ, ಲಲಿತ ವಾಙ್ಮಯ ಮೊದಲಾದವು ಯಾವ ದಿಸೆಯಲ್ಲಿ ನಡೆದಿವೆ ಎಂಬುದರ ಮಾಪನವಾಗಿ, ಅವುಗಳಿಗೆ ಸರಿಯಾದ ಮಾರ್ಗವನ್ನು ರೂಪಿಸುವ ಯೋಜನೆ, ಸಮ್ಮೇಳನಗಳ ಕಾಲದಲ್ಲಿ ನಡೆಯಬೇಕು. ಸಂಶೋಧಕರು, ಲೇಖಕರು ಸುಸಂಘಟಿತರಾಗಿ ನಮ್ಮ ಜ್ಞಾನದ ಪ್ರತಿಯೊಂದು ಕ್ಷೇತ್ರದ ಸಮೀಕ್ಷೆಯನ್ನು ಮಾಡಿಕೊಳ್ಳಬೇಕು. ಎರಡು ವರ್ಷಕ್ಕೊಮ್ಮೆ ನಡೆಯುತ್ತಿರುವ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಮಾದರಿಯಲ್ಲಿ ನಮ್ಮ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು''.
ಐವತ್ತು ವರ್ಷಗಳ ಹಿಂದೆ ಗದುಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪ್ರೊ. ಕೆ. ಜಿ. ಕುಂದಣಗಾರ ಅವರು ಅಧ್ಯಕ್ಷರಾಗಿದ್ದಾಗ ಹೇಳಿದ ಈ ಮಾತುಗಳು ಇಂದಿಗೂ ಪ್ರಸ್ತುತ ಎಂದು ಡಾ. ಚನ್ನವೀರ ಕಣವಿ ಹೇಳಿದರು.
1961ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ತಾವು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದನ್ನು ಸ್ಮರಿಸಿಕೊಂಡ ಕಣವಿ ಅವರು ಅಂದಿಗೂ-ಇಂದಿಗೂ ಕನ್ನಡ ಕಟ್ಟುವಲ್ಲಿ ಶ್ರಮಿಸಿದ ಮಹನೀಯರು ನಾಡಿನ ತುಂಬೆಲ್ಲ ಆಗಿ ಹೋಗಿದ್ದಾರೆ ಎಂದು ಹೇಳಿದರು.
ಕನ್ನಡ ಎನ್ನುವುದು ಭಾಷೆಯೂ ಹೌದು. ದೇಶವೂ ಹೌದು. ಆಗಿನಿಂದ ಈಗಿನವರೆಗೆ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯ ಶ್ಲಾಘನೀಯ. ಕನ್ನಡದ ಆಶೋತ್ತರಗಳನ್ನು ಹೆಚ್ಚಿಸುತ್ತ ಬಂದಿದೆ. ಇನ್ನು ಮುಂದೆ ರಾಜಕೀಯ ಒತ್ತಡಗಳಿಗೆ ಪರಿಷತ್ ಮಣಿಯಬಾರದು ಎಂದು ಹೇಳಿದರು.
ಈಗ ನಾವು ಇಂಗ್ಲಿಷ್ ವ್ಯಾಮೋಹದಲ್ಲಿ ಸಿಲುಕಿದ್ದೇವೆ. ಕನ್ನಡದ ಬಗ್ಗೆ ದುರಾಭಿಮಾನ ಬೇಡ. ಕನ್ನಡಿಗರು ಭಾಷಾಂಧರಾಗಬೇಕಿಲ್ಲ. ಎಲ್ಲ ಭಾಷೆಗಳು ಸರಸ್ವತಿಯ ಅಂಗವಾದರೂ ಮಾತೃ ಭಾಷೆಗೆ ಮೊದಲ ಪೂಜೆ ಸಲ್ಲಬೇಕು. ಸಾಹಿತ್ಯ ಸಮ್ಮೇಳನಗಳು ಜಾತ್ರೆಯಂತಿದ್ದರೂ ಆಂತರ್ಯದಲ್ಲಿ ಇದು ಸಾಹಿತ್ಯಯಾತ್ರೆ. ಅನೇಕ ಶತಮಾನಗಳಿಂದಲೂ ಕನ್ನಡ ಭಾಷೆ ಅನೇಕ ಸವಾಲುಗಳನ್ನು ಎದುರಿಸುತ್ತ ಬಂದಿದೆ. ಇನ್ನು ಮುಂದೆ ನಾವೆಲ್ಲ ಕನ್ನಡವನ್ನು ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಇದಕ್ಕೆ ಇಂತಹ ಸಮ್ಮೇಳನಗಳು ಮತ್ತಷ್ಟು ಇಂಬು ಕೊಡುತ್ತವೆ ಎಂದು ಕಣವಿ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ