ರೈತರು ನಡೆಸಿದ ಬೆಸ್ಕಾಂ ವಿರುದ್ಧ ಪತ್ರಿಭಟನೆಗೆ ಬೆಂಬಲ ಸೂಚಿಸಿ ತಿಮ್ಮನಹಳ್ಳಿಯಲ್ಲಿ ಅವಮಾನಕ್ಕೀಡಾದ ಶಾಸಕ ಸಿ.ಬಿ.ಸುರೇಶ್ ಬಾಬು!
------------------------------------------------------------------------------------
@ ಅವಾಚ್ಯ ಶಬ್ಧಗಳ ಬಳಕೆ @ ಬೆಸ್ಕಾಂ ಕಾಂಪೌಂಡಿನಲ್ಲಿ ದಿಗ್ಬಂಧನ @ ಕಾರಿಗೆ ಅಡ್ಡ ಮಲಗಿ ಅಸಭ್ಯ ವರ್ತನೆ
ಬೆಸ್ಕಾಂನ ಸೆಕ್ಷನ್ ಆಫೀಸರ್ ನ ಅನುಚಿತ ವರ್ತನೆ, ಆತನ ಲಂಚಗುಳಿತನ ಹಾಗೂ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಡೆ ಘಳಿಗೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶಾಸಕ ಸಿ.ಬಿ.ಸುರೇಶ್ ಬಾಭು ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ಧಗಳ ಬಳಕೆ ಹಾಗೂ ಕಾರಿಗೆ ಅಡ್ಡ ಮಲಗಿ ಅಸಭ್ಯ ರೀತಿಯಿಂದ ವರ್ತಿಸಿ ಅವಮಾನಿಸಿದ ಹೀನ ಘಟನೆ ಹುಳಿಯರು ಸಮೀಪದ ತಿಮ್ಮನಹಳ್ಳಿಯಲ್ಲಿ ಭಾನುವಾರ ಜರುಗಿದೆ.
ತಿಮ್ಮನಹಳ್ಳಿಯ ಬೆಸ್ಕಾಂ ಕಛೇರಿಯ ಸೆಕ್ಷನ್ ಆಫೀಸರ್ ಬಸವರಾಜು ಅವರು ಹಗಲಿನ ವೇಳೆಯಲ್ಲಿಯೇ ಮದ್ಯ ಸೇವಿಸಿ ಕೆಲಸ ನಿರ್ವಯಿಸುತ್ತಿದ್ದು ಗ್ರಾಹಕರ ಜೊತೆ ಅಶ್ಲೀಲ ಪದ ಬಳಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ಟಿ.ಸಿ ಅಳವಡಿಸಲು ಸಾವಿರಾರು ರು. ಹಣ ಪಡೆಯುತ್ತಿದ್ದಾರೆ ಹಾಗೂ ಸರ್ಕಾರ ನಿಗಧಿ ಮಾಡಿರುವ ಅನುಸಾರ 6 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯತ್ ನೀಡುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಭಾನುವಾರ ಭಾರಿ ಪ್ರತಿಭಟನೆ ಏರ್ಪಡಿಸಲಾಗಿತ್ತು.
ಚಿ.ನಾ.ಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ವಿಷಯ ತಿಳಿದು ತಮ್ಮ ಬೆಂಬಲಿಗರೊಂದಿಗೆ ಗ್ರಾಮಕ್ಕೆ ಆಗಮಿಸಿದರು. ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಪರೂಪಕ್ಕೆ ಹಸಿರು ಶಾಲು ಹೊದ್ದು ತಿಮ್ಮನಹಳ್ಳಿಯಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೆಸ್ಕಾಂ ಪವರ್ ಸ್ಟೇಷನ್ಗೆ ಪ್ರತಿಭಟನಕಾರರೊಂದಿಗೆ ಕಾಲ್ನೆಡಿಗೆಯಲ್ಲಿ ಆಗಮಿಸಿ ರಸ್ತೆಯಲ್ಲಿ ಸಾಮಾನ್ಯರಂತೆ ಧರಣಿ ಕುಳಿತರು. ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಸರ್ಕಾರದ ವಿದ್ಯುತ್ ನೀತಿಯ ವಿರುದ್ಧ ಹರಿಹಾಯ್ದರಲ್ಲದೆ ನಾಲಾಯಕ್ ಎಸ್ಒ ಬಸವರಾಜು ಅವರನ್ನು ವರ್ಗಾಯಿಸುವಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಯಾಗಿ ಸ್ಥಳಕ್ಕೆ ಆಗಮಿಸಿದ್ದ ಬೆಸ್ಕಾಂನ ಎಸ್ಇ ಚಂದ್ರಶೇಖರ್ ಅವರು ಎಸ್ಒ ಬಸವರಾಜು ಅವರನ್ನು ಇಂದೇ ವರ್ಗಾಯಿಸುವುದಾಗಿಯೂ, ರಾತ್ರಿ 3 ಗಂಟೆ ಹಾಗೂ ಹಗಲು 3 ಗಂಟೆ ತ್ರೀಫೇಸ್ ವಿದ್ಯುತ್ ನೀಡುವುದಾಗಿಯೂ ಸುಟ್ಟಿರುವ ಟಿಸಿಗಳನ್ನು ಕೂಡಲೇ ಬದಲಾಯಿಸುವುದಾಗಿಯೂ ಭರವಸೆ ನೀಡಿದರೂ ತೃಪ್ತರಾಗದ ಪ್ರತಿಭಟನಾಕಾರರು ಅಸಭ್ಯವಾಗಿ ವರ್ತಿಸುತ್ತಿರುವ ಎಸ್ಒ ಬಸವರಾಜು ಅವರನ್ನು ಸ್ಥಳಕ್ಕೆ ಕರೆಸಿಯೇ ತೀರಬೇಕು ಎಂದು ಬಿಗಿ ಪಟ್ಟು ಹಿಡಿದರು.
ಪಟ್ಟುಹಿಡಿದ ಪ್ರತಿಭಟನಾಕಾರರನ್ನು ಶಾಸಕರು ಹಾಗೂ ರೈತ ಮುಖಂಡರು ಎಸ್ಒ ವರ್ಗಾವಣೆಯಾಗಿರುವುದು ತಮ್ಮ ಹೋರಾಟಕ್ಕೆ ಸಂದ ಜಯ ಈ ರೀತಿ ಪಟ್ಟು ಹಿಡಿಯುವುದು ತರವಲ್ಲ ಎಂದು ಸಮಾಧಾನ ಪಡಿಸಿ ಕರೆಂಟ್ ಚಾರ್ಜ್ ಮಾಡಿಸಲು ಕಛೇರಿಗೆ ತೆರಳಿದರು. ಅವರು ಕರೆಂಟ್ ಚಾರ್ಜ್ ಮಾಡಿಸಿ ಹಿಂದಿರುಗುವ ವೇಳೆಗಾಗಲೇ ಹೋರಾಟಗಾರರ ಹೋರಾಟದ ಸ್ವರೂಪ ಬದಲಾಗಿ ತಮ್ಮ ಹೋರಾಟದ ಬೆಂಬಲಕ್ಕೆ ನಿಂತ ಶಾಸಕರ ವಿರುದ್ಧವೇ ತಿರುಗಿಬಿದ್ದರು.
ಪವರ್ ಸ್ಟೇಷನ್ಗೆ ಸುತ್ತುವರಿದು ಶಾಸಕರನ್ನು ಅಲ್ಲಿಂದ ಹೊರ ಬರದಂತೆ ಗೇಟ್ ಮುಂದೆ ಜಮಾಯಿಸಿ ಒಬ್ಬ ಸೆಕ್ಷನ್ ಆಫೀಸರ್ನನ್ನು ಸ್ಥಳಕ್ಕೆ ಕರೆಯಿಸಲು ಸಾಧ್ಯವಾಗದ ಅಸಮರ್ಥ ಶಾಸಕ ಎಂದು ದಿಕ್ಕಾರ ಕೂಗಿದರು. ಪೊಲೀಸರು ಹರಸಾಹಸ ಪಟ್ಟು ಶಾಸಕರನ್ನು ಬಂಧಮುಕ್ತರನ್ನಾಗಿಸಿದರಾದೂ ಶಾಸಕರು ಅಧಿಕಾರಿಗಳಿಗೆ ತೊಂದರೆಯಾಗಬಹುದೆಂದು ಮನಗಂಡು ತಮ್ಮೊಂದಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು.
ಇದರಿಂದ ರೊಚ್ಚಿಗೆದ್ದ ಜನತೆ ಶಾಸಕರು ರೈತರ ಪರವಿಲ್ಲದೆ ಅಧಿಕಾರಿಗಳ ಪರವಿದ್ದಾರೆ ಎಂದು ಆರೋಪಿಸಿ ಅವಾಚ್ಯ ಶಬ್ಧಗಳಿಂದ ಮೂದಲಿಸಿದರು. ಪದೇ ಪದೇ ಶಾಸಕರ ತಾಳ್ಮೆ ಕೆಣಕುವ ರೀತಿ ಬೈಗುಳಗಳ ಬಾಣ ಬೀಸುತ್ತಿದ್ದರು. ಇದರಿಂದ ಸೌಮ್ಯ ಸ್ವಭಾವಕ್ಕೆ ಹೆಸರಾದ ಎಂದೂ ತಾಳ್ಮೆ ಕಳೆದುಕೊಳ್ಳದ ಶಾಸಕರು ತಮ್ಮ ಮೇಲೆ ಟೀಕೆ ಮಾಡಿದರ ಮೇಲೆ ವಾಗ್ಯುದ್ಧಕ್ಕೆ ನಿಂತರು. ಸತತ ಮೂರು ಭಾರಿ ಕಾರಿನೊಳಗೆ ಕುಳಿತು ಇಳಿದು ಮಾತಿನ ಚಕಮಕಿ ನಡೆಸಿದರು.
ನಂತರ ಜನರ ಈ ವರ್ತನೆಯಿಂದ ಬೇಸತ್ತು ಅಲ್ಲಿಂದ ತೆರಳಲು ಪ್ರಯತ್ನಿಸಿದರಾದರೂ ಕೆಲವರು ಅವರ ಕಾರಿಗೆ ಅಡ್ಡಲಾಗಿ ಮಲಗಿ, ಕಾರಿಗೆ ಘೇರಾವ್ ಮಾಡಿ ಅಡ್ಡಿ ಪಡಿಸಿದರು. ಸರ್ಕಲ್ ಇನ್ಸ್ಫೆಕ್ಟರ್ ರವಿಪ್ರಸಾದ್ ಅವರ ನೇತೃತ್ವ ಪೊಲೀಸ್ ಸಿಬ್ಬಂಧಿ ಕಾರನ್ನು ಸುತ್ತುವರಿದು ಅಡ್ಡಲಾಗಿ ಮಲಗಿದ್ದವರನ್ನು ಪಕ್ಕಕ್ಕೆ ಎಳೆದು ಶಾಸಕರ ಕಾರಿನ ದಾರಿ ಸುಗಮವಾಗಿಸಿದರು.
ಈ ಸುದ್ಧಿಗೆ ಸಂಬಂಧಿಸಿದ ಪೋಟೊಗಳು ಹೀಗಿದೆ
1 : ಶಾಸಕ ಸಿಬಿಎಸ್ ಪ್ರತಿಭಟನಾಕಾರರೊಂದಿಗೆ ಕಾಲ್ನೆಡಿಗೆಯಲ್ಲಿ ಆಗಮಿಸುತ್ತಿರುವುದು.
2 & 2ಎ: ಹಸಿರು ಶಾಲು ಹೊದ್ದು ಭಾಷಣ ಮಾಡುತ್ತಿರುವ ಶಾಸಕ ಸಿಬಿಎಸ್
3: ಶಾಸಕರು ತಮ್ಮನ್ನು ನಿಂಧಿಸಿದವರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು.
4 : ಕಾರಿಗೆ ಅಡ್ಡಲಾಗಿ ಮಲಗಿದವರನ್ನು ಪೊಲೀಸರು ಎತ್ತುತ್ತಿರುವುದು
5 : ಪೊಲೀಸರ ಸರ್ಪಗಾವಲಿನಲ್ಲಿ ನಿರ್ಗಮಿಸುತ್ತಿರುವ ಶಾಸಕರು.
6 : ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುತ್ತಿರುವುದು
ಕನ್ನದಪ್ರಭ ಪತ್ರಿಕೆಯಲ್ಲಿ ದಿನಾಂಕ 15.02.2010 ಪ್ರಕಟವಾಗಿರುವುದು ಕಳಗಿನ ಕೊಂಡಿಯಲ್ಲಿ ವೀಕ್ಷಣೆ ಮಾಡಬಹುದು.
http://www.kannadaprabha.com/NewsItems.asp?ID=KPD20100215022708&Title=District+News&lTitle=%C1%DBd%C0+%C8%DB%7D%E6%25&Topic=0&ndate=2/15/2010&dName=%7D%DA%DF%C8%DA%DFO%DA%E0%C1%DA%DF&Dist=4
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ