ವಿಷಯಕ್ಕೆ ಹೋಗಿ

ಕುಮಾರವ್ಯಾಸನ ನಾಡಲ್ಲಿ ಆರಂಭವಾಯ್ತು ಕನ್ನಡಾಂಬೆಯ ಉಘೇ.... ಉಘೇ....

ಕುಮಾರವ್ಯಾಸನ ನಾಡಲ್ಲಿ ಆರಂಭವಾಯ್ತು ಕನ್ನಡಾಂಬೆಯ ಉಘೇ.... ಉಘೇ....
ಗದಗ, 19- ಜಾತ್ರೆ ಎನ್ನಿ. ಪರಿಷೆ ಎನ್ನಿ. ತೇರು ಎನ್ನಿ. ರಥೋತ್ಸವ ಎನ್ನಿ. ಹಬ್ಬ ಎನ್ನಿ. ಅವರವರ ಭಾವಕ್ಕೆ ತಕ್ಕಂತೆ ಏನೇ ಹೆಸರಿಟ್ಟು ಕರೆಯಬಹುದು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕನ್ನಡ ತಾಯಿಯ ಉಘೇ.... ಉಘೇ....
ಅಲ್ಲಿ ಉತ್ತರದ ಆತಿಥೇಯರಿದ್ದರು. ದಕ್ಷಿಣದ ಜನರಿದ್ದರು. ಪಶ್ಚಿಮದ ನಾಗರಿಕರಿದ್ದರು. ಪೂರ್ವದ ಮಂದಿಯಿದ್ದರು. ಎಲ್ಲರೂ ಕನ್ನಡಾಂಬೆಯ ಮಡಿಲ ಮಕ್ಕಳಾಗಿದ್ದರು. ಎಲ್ಲರಿಗೂ ಇದ್ದುದು ಕನ್ನಡ ನುಡಿನಮನದ ತುಡಿತ. ಕನ್ನಡಕ್ಕಾಗಿ ಕೊರಳೆತ್ತು ಎನ್ನುವ ತವಕ.
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಹಾಡಿದ ಕುಮಾರವ್ಯಾಸನ ನಾಡಿನವರು ನಾವು ಎಂಬ ಹೆಮ್ಮೆ ಅಲ್ಲಿ ನೆರೆದಿದ್ದ ಆತಿಥೇಯರ ಕಣ್ಣುಗಳಲ್ಲಿ ತುಂಬಿತುಳುಕುತ್ತಿತ್ತು.
ಪೂರ್ಣಕುಂಭದ ಮೆರವಣಿಗೆ ಬಿರುಬಿಸಿಲಿನಲ್ಲಿ ನಡೆದರೂ, ಬೆವರು ದಳದಳನೆ ಇಳಿಯುತ್ತಿದ್ದರೂ, ಉತ್ಸಾಹ ಮಾತ್ರ ಕೊಂಚವೂ ಕುಗ್ಗದೇ ಇದ್ದುದು ಇಲ್ಲಿನ ಕನ್ನಡಿಗರೆಷ್ಟು ಉತ್ಸಾಹದ ಬುಗ್ಗೆಗಳು ಎಂಬುದನ್ನು ತೆರೆದಿಡುವಂತಿತ್ತು.
ಕನ್ನಡಾಂಬೆಯ ಮಕ್ಕಳ ಉತ್ಸಾಹಕ್ಕೆ ನೀನೇಕೆ ಕುಂದು ತರುತ್ತಿರುವೇ ಎಂಬಂತೆ ಸೂರ್ಯದೇವನ ಪ್ರಖರತೆಗೆ ಛತ್ರಿ ಹಿಡಿದ ಹಾಗೆ ಮೇಘರಾಜ ಆಗಾಗ ಮೋಡಗಳ ಮೆರವಣಿಗೆಯನ್ನು ಹೊರಡಿಸುತ್ತಿದ್ದ.
ನುಡಿ ಹಬ್ಬದ ಕೇಂದ್ರಬಿಂದು ನಾಡೋಜ ಡಾ. ಗೀತಾ ನಾಗಭೂಷಣ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಪೂರ್ಣ ಕುಂಭ ಮೆರವಣೆಗೆಯಲ್ಲಿ ಕರೆತರಲಾಯಿತು. ಸಮ್ಮೇಳನದ ಪ್ರಧಾನ ವೇದಿಕೆಗೆ ಗಣ್ಯರು ಆಗಮಿಸುತ್ತಿದ್ದಂತೆಯೇ ಸಭಾಂಗಣದಲ್ಲಿ ಕ್ಷಣಕಾಲ ಮಿಂಚಿನ ಸಂಚಾರ. ಕಾರ್ಯಕ್ರಮದ ಆರಂಭಕ್ಕೆ ಮುಂಡರಗಿ ತಾಲೂಕಿನ ನವೋದಯ ಶಾಲೆಯ ಮಕ್ಕಳು ವೇದಿಕೆಯಲ್ಲಿ ಘೇರಾಯಿಸಿದರು. 76ನೇ ಸಮ್ಮೇಳನದ ದ್ಯೋತಕವೆಂಬಂತೆ 76 ಮಕ್ಕಳು ಏಕಧ್ವನಿಯಲ್ಲಿ ನಾಡಗೀತೆ ಹಾಡಿದಾಗ ಸಭಾಂಗಣದಲ್ಲಿ ನೆರೆದ ಶ್ರೋತೃಗಳೆಲ್ಲರಲ್ಲಿ ರೋಮಾಂಚನ.
ಸಮ್ಮೇಳನದ ಸವರ್ಾಧ್ಯಕ್ಷೆ ಡಾ. ಗೀತಾ ನಾಗಭೂಷಣ ಲಿಖಿತ ಭಾಷಣವನ್ನು ಓದಿದರೂ ಅಲ್ಲಲ್ಲಿ ತಮ್ಮ ಮನದಾಳದ ಮಾತು ಆಡುವುದನ್ನು ಮಾತ್ರ ಮರೆಯಲಿಲ್ಲ. ಅವರು ತಮ್ಮನ್ನು ತಾವು ತವರಿನ ಮಗಳೆಂದು ಕರೆದುಕೊಂಡರು. ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದನ್ನು, ಬಿರುಬಿಸಿಲ ನಾಡಿನಿಂದ ಬಿಸಿಲ ನಾಡಿಗೆ ಪ್ರವೇಶಿಸುವ ಮಾರ್ಗದಲ್ಲಿ ದಾರಿಯ ಉದ್ದಕ್ಕೂ ಜನತೆ ನೀಡಿದ ಸ್ವಾಗತವನ್ನು, ತೋರಿದ ಅಭಿಮಾನವನ್ನು ಪ್ರಾಂಜಲ ಮನಸ್ಸಿನಿಂದ ತೆರೆದಿಟ್ಟರು.
ನನಗೆ ಮೊದಲ ಪ್ರಶಸ್ತಿ ಸಿಕ್ಕ ನೆಲ ಗದಗ. ಇಲ್ಲಿ ಭಾರತ ಕಥಾ ಮಂಜರಿ ರಚಿಸಿದ ನಾರಣಪ್ಪ ಓಡಾಡಿದ್ದಾನೆ. ಇಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ಸಂಚರಿಸಿದ್ದಾಳೆ. ಅಂತಹ ನೆಲದಲ್ಲಿ ಓರ್ವ ಸ್ತ್ರೀಯಾಗಿ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಗೌರವ ಸಿಕ್ಕಿರುವುದು ನನ್ನ ಸುಕೃತ ಎಂದು ಎದೆತುಂಬಿ ಹೇಳಿದರು.
ಈಗ ದೊರೆಯುತ್ತಿರುವುದು ಎರಡನೇ ಗೌರವ. ಮೂರಕ್ಕೆ ಮುಕ್ತಿ ಎಂಬುದು ಆಡುನುಡಿ. ಇಲ್ಲಿನ ನೆಲದಲ್ಲಿಯೇ ನನಗೆ ಮೂರನೇ ಗೌರವವೂ ಸಿಕ್ಕುವ ಭರವಸೆ ಇದೆ ಎಂದು ಹೇಳುವಾಗ ತವರಿನಲ್ಲಿ ಸತ್ಕರಿಸಿಕೊಳ್ಳುವುದರ ಹೆಮ್ಮೆಯ ಭಾವ ಅವರಲ್ಲಿ ತುಂಬಿತುಳುಕುತ್ತಿತ್ತು.
ತಾವು ಬರೆದಿದ್ದೆಲ್ಲ ಸಾಮಾನ್ಯರ ಬದುಕಿಗೆ ಸಂಬಂಧಿಸಿದ್ದನ್ನು, ಹೆಣ್ಣುಮಕ್ಕಳ ಗೋಳು, ಅವರ ಯಾತನೆ, ಜೋಪಡಪಟ್ಟಿಗಳಲ್ಲಿನ ಜನರ ಜೀವನವನ್ನು. ಅವರೇ ನನ್ನ ಕೃತಿಗಳ ಜೀವಧಾತು. ಅವರ ಜೀವನವನ್ನು ತೆರೆದಿಟ್ಟು ನಾಡಿನ ಜನರ ಗಮನ ಸೆಳೆಯುವುದೇ ನನ್ನ ಕಾಯಕ ಎಂದು ಹೇಳುವಾಗ ಧ್ವನಿ ಆದ್ರ್ರವಾಯಿತು.
ಬರದ ನಾಡಲ್ಲಿ ಇದ್ದರೆ ಸಾಯುತ್ತೇವೆ ಎಂದು ನನ್ನ ಜಿಲ್ಲೆಯ ಜನ ಪಕ್ಕದ ಮಹಾರಾಷ್ಟ್ರಕ್ಕೆ ವಲಸೆ ಹೋಗುವಾಗ ಇತ್ತೀಚೆಗಷ್ಟೇ ರಸ್ತೆಯಲ್ಲಿಯೇ ಹೆಣವಾದರು. ಬದುಕು ಕಟ್ಟಿಕೊಳ್ಳಲು ಹೊರಟು ಹೆಣಗಳಾಗಿ ಬಂದರು. ಇಂತಹ ದಯನೀಯ ಸ್ಥಿತಿ ಇಂದಿಗೂ ನಾಡಿನಲ್ಲಿದೆ. ಇದನ್ನು ಅಕ್ಷರ ಮಿತ್ರರಾದ ಸಾಹಿತಿಗಳು ಗಂಭೀರವಾಗಿ ಪರಿಗಣಿಸಿ ಕೃತಿಗಳನ್ನು ರಚಿಸಬೇಕಾಗಿದೆ ಎಂದು ಹೇಳುವಾಗ ಮನುಕುಲದ ಮಾತುಗಾರಳಂತೆ ಗೋಚರಿಸಿದರು.
ಹೆಣ್ಣು ಭ್ರೂಣ ಹತ್ಯೆಯನ್ನು ಪ್ರಸ್ತಾಪಿಸಿದ ಡಾ. ಗೀತಾ ನಾಗಭೂಸಣ, ಗಾಂಧಿ ರಾಮರಾಜ್ಯದ ಕನಸನ್ನು ಕಂಡಿದ್ದರು. ಆದರೆ ಇಂದು ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪಾಂಡವರ ರಾಜ್ಯ ಬಂದರೂ ಬರಬಹುದು. ಆಗ ಒಂದು ಹೆಣ್ಣನ್ನು ಐವರು ವರಿಸುವ ಕಾಲ ಬಂದರೂ ಬರಬಹುದು. ರಾಮರಾಜ್ಯದಲ್ಲಿ ಇದ್ದುದೂ ಸ್ತ್ರೀಶೋಷಣೆ, ಪಾಂಡವರ ರಾಜ್ಯದಲ್ಲಿ ಇರುವುದೂ ಸ್ತ್ರೀ ಶೋಷಣೆಯೇ ಎನ್ನುವಾಗ ಹೆಣ್ಣುಮಕ್ಕಳ ಸ್ಥಿತಿ ಅವರ ಮನದ ಮೇಲೆ ಮಾಡಿರುವ ಅಗಾಧವಾದ ದುಷ್ಪರಿಣಾಮದ ಛಾಯೆ ಢಾಳುಢಾಳಾಗಿ ಗೋಚರಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...