ನವರಾತ್ರಿ ಎಂದರೆ ಶರನ್ನವರಾತ್ರಿ ಹಾಗೂ ಮೈಸೂರು ದಸರ ನೆನಪಿಗೆ ಬರುತ್ತದೆ. ಆದರೆ ಮತ್ತೊಂದು ನವರಾತ್ರಿಯ ಆಚರಣೆ ಇಲ್ಲಿ ನಡೆದುಕೊಂಡು ಬರುತ್ತಿದೆ. ಶರನ್ನವರಾತ್ರಿ ದುರ್ಗಾಪೂಜೆಗೆ ಮೀಸಲಾದರೆ ಇಲ್ಲಿ ಆಚರಣೆಯಲ್ಲಿರುವ ವಸಂತ ನವರಾತ್ರಿ ಶ್ರೀರಾಮನಿಗೆ ಮೀಸಲು. ಹೊಸ ಸಂವತ್ಸರದ ನಂತರ ಅಂದರೆ ಯುಗಾದಿ ಹಬ್ಬದ ಮೊದಲ ದಿನದಿಂದ ಪ್ರಾರಂಭಿಸಿ ರಾಮನು ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು,ಅಂದರೆ ಯುಗಾದಿಯಾದ 9ನೇದಿನದಂದು ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಅಂತ್ಯಗೊಳ್ಳುತ್ತದೆ. ಯುಗಾದಿ ಕಳೆದು ಒಂಬತ್ತನೆ ದಿನವೇ ಶ್ರೀ ರಾಮ ನವಮಿ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನನ ಸಂಭ್ರಮ. ರಾಮನವಮಿಯೆ ಬಂತೆಂದರೆ ಹುಳಿಯಾರು ಸಮೀಪದ ಸುಮಾರು 2೦೦ಕ್ಕೂ ಹೆಚ್ಚು ಮನೆಗಳ ಗ್ರಾಮವಾದ ಲಿಂಗಪ್ಪನಪಾಳ್ಯದಲ್ಲಿ ಸಡಗರ ಮನೆ ಮಾಡಿ ಬಿಡುತ್ತದೆ. ಎಲ್ಲ ಹಬ್ಬಗಳನ್ನು ಇಲ್ಲಿ ಆಚರಿಸುತ್ತಾರಾದರೂ ರಾಮನವಮಿಯನ್ನು ಆಚರಿಸುವುದು ಮಾತ್ರ ವಿಶೇಷ. ಇಡೀ ಗ್ರಾಮದ ಮಂದಿಯೆಲ್ಲ ಇಲ್ಲಿ ಶ್ರೀರಾಮನ ಭಕ್ತರಾಗಿದ್ದು ಶ್ರೀರಾಮನ ಆರಾಧನೆಗಾಗಿ ಗುಡಿಯೊಂದನ್ನು ಕೂಡ ನಿರ್ಮಿಸಿಕೊಂಡಿದ್ದಾರೆ. ಶ್ರೀರಾಮನವಮಿಯ ಹಿಂದಿನ ದಿನದಿಂದಲೆ ದೇವಸ್ಥಾನ ಪ್ರಾಂಗಣದಲ್ಲಿ ಚಪ್ಪರ ಹಾಕಿ ಮಾವಿನ ತೋರಣ ಕಟ್ಟಲು ಹಿರಿಯರು ಕಿರಿಯರೆನ್ನದೆ ಊರಿನ ಸಮಸ್ತರು ಸೇರುತ್ತಾರೆ.ಅಂದು ಗ್ರಾಮದ ಮನೆ ಮನೆಗಳು ತಳಿರು ತೋರಣದಿಂದ ಬಣ್ಣ ಬಣ್ಣದ ರಂಗೋಲಿಯಿಂದ ಸಿಂಗರಿಸಲ್ಪಡುತ್ತದೆ. ಊರಿನಲ್ಲಿ ಒಬ್ಬಟ್ಟಿನ ವಾಸನೆ ಘಮ್ಮೆಂದು ಅಡರುತ್ತದೆ. ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಜನ ದೂರದೂರುಗಳಿಂದ ನೆಂಟರಿಷ್ಟರನ್ನು ಕರೆಸಿಕೊಳ್ಳುತ್ತಾರೆ. ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುತ್ತಾರೆ.
ಹೊಸ ಸಂವತ್ಸರದ ಮೊದಲ ಹಬ್ಬವಾದ ಯುಗಾದಿಯ 8 ನೇ ದಿನದ ನಂತರ ಆಚರಿಸುವ ರಾಮ ನವಮಿಯವರೆಗೆ ಗ್ರಾಮದಲ್ಲಿ ಎಲ್ಲರೂ ಮಡಿಯಾಗಿರುತ್ತಾರೆ. ಗ್ರಾಮದವರೆಲ್ಲ ಬಹುಪಾಲು ಮಂದಿ ತಿಂದುಣ್ಣುವವರಾದರೂ 9 ದಿನದ ವರೆವಿಗೆ ಮಾಂಸಹಾರ ಗ್ರಾಮದಲ್ಲಿ ಕಡ್ಡಾಯ ನಿಷಿದ್ಧ. ಗ್ರಾಮದಲ್ಲಿ ಆಚರಿಸುವ ಶ್ರೀರಾಮನವಮಿಗೆ 50-60 ವರ್ಷಗಳ ಇತಿಹಾಸವಿದೆ.ಗ್ರಾಮದ ಹಿರಿಯರು ಹೇಳುವಂತೆ ಗ್ರಾಮದಲ್ಲಿ 60 ವರ್ಷಗಳ ಹಿಂದೆ ಯಾವುದೇ ದೇವಾಲಯ ಇರಲಿಲ್ಲ. ಗ್ರಾಮದ ಜನ ತಮ್ಮಷ್ಟಕ್ಕೆ ತಾವೇ ಜೀವಿಸುತ್ತಿದ್ದ ಕಾಲವದು. ತಮ್ಮ ಊರಿನ ಕಷ್ಟ ಕಾರ್ಪಣ್ಯಗಳಿಗೆ ಬೇರೆ ಊರಿನ ಗ್ರಾಮದೇವತೆಗಳನ್ನು ಆಶ್ರಯಿಸುತ್ತಿದ್ದರು
ಅದೊಂದು ದಿನ ಹುಳಿಯಾರಿನ ಗಾರೆ ಗಿರಿಯಪ್ಪನವರು ರಾಮ ಮಹಿಮೆಯನ್ನು ತಿಳಿಸಿ ಗ್ರಾಮದಲ್ಲಿ ರಾಮನವಮಿಯಂದು ಊರ ಮಧ್ಯೆ ಚಪ್ಪರ ಹಾಕಿಸಿ ಶ್ರೀರಾಮ ಪೋಟೊ ಇಟ್ಟು ಭಜನೆ ಮಾಡಿಸುವಲ್ಲಿ ಸಫಲರಾದರು.ಸೋಮಸಂದ್ರದ ಬಾಲಪ್ಪನವರು ರಾಮ ಭಜನೆ ಹೇಳಿಕೊಟ್ಟು ಗ್ರಾಮದ ಜನರಲ್ಲಿ ಭಕ್ತಿ, ಶ್ರದ್ಧೆ, ಸಂಸ್ಕಾರಗಳನ್ನು ಬೆಳೆಯುವಂತೆ ಮಾಡಿದರು. ಅಂದಿನಿಂದ ಗ್ರಾಮದ ಸಮಸ್ಯೆಗಳು ಮಂಜಿನಂತೆ ಕರಗಿದಲ್ಲದೆ ಊರು ಸುಭಿಕ್ಷೆವಾಯಿತು. ಹೀಗಾಗಿ ರಾಮನವಮಿಯನ್ನು ಕಟ್ಟು ನಿಟ್ಟಿನಿಂದ, ಭಯಭಕ್ತಿಯಿಂದ ಆಚರಿಸುವ ಪದ್ದತಿ ಆರಂಭವಾಯಿತು.
ಹುಳಿಯಾರಿನ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಸಮ್ಮಖದಲ್ಲಿ ಶ್ರೀರಾಮದೇವರು ಸೇರಿದಂತೆ ಈ ಬಾರಿಯೂ ರಾಮನವಮಿಯ ಉತ್ಸವವನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಯಿತು. ರಾಮ ಮಂದಿರಗಳಲ್ಲಿ ಮುಂಜಾನೆಯಿಂದಲೇ ರಾಮನಿಗೆ ವಿಶೇಷ ಅಲಂಕಾರ, ಅಭಿಷೇಕ ಮಾಡಲಾಗಿತ್ತು. ಬಿಸಿಲಿನ ಝಳವನ್ನು ಲೆಕ್ಕಿಸದೆ ವಾಡಿಕೆಯಂತೆ ರಾಮನ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಹೊತ್ತುಕೊಂಡು ಗ್ರಾಮ ದೇವತೆಗಳೊಂದಿಗೆ ಡೊಳ್ಳುಕುಣಿತ ಹಾಗೂ ಭಜನೆ ಮಾಡುತ್ತ ಹುಳಿಯಾರಿನ ಆಂಜನೇಯ ದೇವಸ್ಥಾನ ಹಾಗೂ ಶನಿದೇವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಅಲ್ಲಿ ಮಹಾಮಂಗಳಾರತಿ ನಂತರ ಪಾನಕ ಕೋಸಂಬರಿ ಹಂಚಿ ಮಂಗಳ ವಾದ್ಯದೊಂದಿಗೆ ಪುನಃ ಗ್ರಾಮಕ್ಕೆ ಆಗಮಿಸಲಾಯಿತು. ಗ್ರಾಮದಲ್ಲಿನ ಎಲ್ಲಮ್ಮ,ಹೊಸೂರಮ್ಮ,ಗರುಡನಗುಡಿ, ಬಸವನ ಗುಡ್ಡೆ, ಮಾರುತಿ ಗುಡ್ಡೆಗಳಿಗೆ ಪೂಜೆ ಸಲ್ಲಿಸಿ ನಂತರ ಶ್ರೀಸ್ವಾಮಿಯವರ ಮೂಲಗುಡಿಗೆ ತೆರಳಲಾಯಿತು. ಅಲ್ಲಿ ನೆರೆದಿದ್ದ ಸಮಸ್ತ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಭಜನೆ ಮಾಡಿ ರಾಮರಸದ ತೀರ್ಥ ಹಾಗೂ ಕೋಸಂಬರಿ ಪಾನಕ ಹಂಚಲಾಯಿತುಸಂಜೆ ನೂರೊಂದು ಎಡೆ ಸೇವೆ,ಬಿಲ್ಲುಗೂಡೂ ಸೇವೆ ಸಲ್ಲಿಸಿ ದಾಸಯ್ಯಗಳಿಗೆ ಎಡೆ ಇಡಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆವಿಗೂ ನಡೆದ ಧಾರ್ಮಿಕ ಕೈಂಕರ್ಯಗಳಲ್ಲಿ ಗ್ರಾಮದ ಜನರೆಲ್ಲ ಒಟ್ಟಾಗಿ ಸಂಭ್ರಮದಿಂದ ಪಾಲ್ಗೊಂಡು ರಾಮಭಜನೆ ಮಾಡಿ ಭಕ್ತಿಭಾವದಲ್ಲಿ ಮಿಂದರು.
ಒಟ್ಟಾರೆ ಲಿಂಗಪ್ಪನಪಾಳ್ಯದ ಗ್ರಾಮಸ್ಥರು ಹಲವು ಹಬ್ಬಗಳ ಜೊತೆ ರಾಮನವಮಿಯನ್ನು ವಿಶಿಷ್ಟವಾಗಿ ಆಚರಿಸುತ್ತ ಬಂದಿರುವುದು ಈ ಭಾಗದ ವಿಶೇಷ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ