ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಐ.ಕ್ಯೂ.ಎ.ಸಿ., ಎನ್.ಎಸ್.ಎಸ್., ಸಾಂಸ್ಕೃತಿಕ ಹಾಗೂ ಕನ್ನಡ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ಮಾತೃಭಾಷೆ ಎಂದರೇನು? ಎಂಬ ಪ್ರಶ್ನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು.ಮಾತೃಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಪ್ರಶ್ನೆ ಬಂದಾಗ ನಾವು ಆ ಜವಾಬ್ದಾರಿಯನ್ನು ಸರ್ಕಾರದ ಕಡೆಗೆ ಬೆಟ್ಟು ಮಾಡಿ ತೋರಿಸುವುದನ್ನು ಬಿಟ್ಟು, ವ್ಯಕ್ತಿಯಾಗಿ ನಮ್ಮ ಜವಾಬ್ದಾರಿಗಳೇನು? ಮಾತೃ ಭಾಷೆಯನ್ನು ಬೆಳೆಸುವಲ್ಲಿ ನಮ್ಮ ಪಾಲು ಏನು? ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಾತೃಭಾಷೆಯನ್ನು ಹೆಚ್ಚು ಬಳಸುವ ಮೂಲಕ, ಸ್ಪಷ್ಟವಾಗಿ ಬರೆಯುವ ಮೂಲಕ, ಮಾತೃಭಾಷೆಯಲ್ಲಿ ಜ್ಞಾನವನ್ನು ಸೃಷ್ಟಿಸುವ ಮೂಲಕ ಹಾಗೂ ನಮ್ಮ ಭಾಷೆಯ ಸಾಹಿತ್ಯವನ್ನು ಜಗತ್ತಿನ ಭಾಷೆಗಳಿಗೆ ಅನುವಾದಿಸುವ ಮೂಲಕವೂ ಮಾತೃಭಾಷೆಯನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಸಂಚಾಲಕರಾದ ಕನ್ನಡ ಪ್ರಾಧ್ಯಾಪಕ ಡಾ. ಮೋಹನ್ ಕುಮಾರ್ ಎಂ. ಜೆ. ಅವರು "ಮಾತೃಭಾಷಾ ದಿನ"ದ ಹಿನ್ನೆಲೆ ಹಾಗೂ ಮಹತ್ವವನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಕನ್ನಡ ಕರ್ನಾಟಕದ ಆಡಳಿತ ಭಾಷೆ ಹಾಗೂ ಕನ್ನಡಿಗರ ಮಾತೃಭಾಷೆ, ಇದೇ ರೀತಿ ಕರ್ನಾಟಕದಲ್ಲಿ ಹಲವು ಮಾತೃಭಾಷೆಗಳಿದ್ದು, ಎಲ್ಲ ಭಾಷೆಗಳ ಬೆಳವಣಿಗೆಗೂ ಒತ್ತುಕೊಡಬೇಕು. ಜಗತ್ತಿನಲ್ಲಿ ಹಲವು ಭಾಷೆಗಳು ಈಗಾಗಲೇ ನಶಿಸಿಹೋಗಿದ್ದು, ಮತ್ತೆ ಕೆಲವು ಅಳಿವಿನ ಅಂಚಿನಲ್ಲಿವೆ. ಈ ಕಾರಣದಿಂದಲೇ ಯುನೆಸ್ಕೋ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಫೆಬ್ರವರಿ 21ನೆಯ ದಿನಾಂಕವನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಎಂದು ಘೋಷಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ "ಮಾತೃಭಾಷೆಯನ್ನು ಶ್ರೀಮಂತಗೊಳಿಸುವುದು ಹೇಗೆ?" ಎಂಬ ವಿಷಯವನ್ನು ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಕೂಡ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಸಂವಾದದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ತಿಳಿಸಿದರು. ಅರ್ಥಶಾಸ್ತ್ರದ ಅಧ್ಯಾಪಕ ಶ್ರೀ ಜಯಪ್ರಕಾಶ್ ಸ್ವಾಗತಿಸಿದರು. ಡಾ. ಮೋಹನ್ ಕುಮಾರ್ ಎಂ.ಜೆ. ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಅಶೋಕ್, ದ್ವಿತೀಯ ಬಿ.ಕಾಂ. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ