ಹುಳಿಯಾರು ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳ ಮರು ಹರಾಜಿಗೆ ತಡೆಯಾಜ್ಞೆ ಇರುವುದನ್ನೇ ನೆಪಮಾಡಿಕೊಂಡು ಕಳೆದ ಮೂರು ವರ್ಷಗಳಿಂದಲೂ ಹಾಲಿ ಮಳಿಗೆದಾರರನ್ನೇ ಮುಂದುವರಿಸಿಕೊಂಡು ಬರುತ್ತಿರುವ ಬಗ್ಗೆ ಹುಳಿಯಾರು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಸದಸ್ಯರುಗಳ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಮುಖ್ಯಾಧಿಕಾರಿಗಳು ಹರಾಜು ಪ್ರಕ್ರಿಯೆಗೆ ಮುಂದಾಗದೆ,ಕೋರ್ಟ್ ತಡೆಯಾಜ್ಞೆಯನ್ನು ಸಹ ತೆರವು ಮಾಡಿಸದೆ ಕಾಲಹರಣ ಮಾಡುತ್ತಿದ್ದು ಇದರಿಂದ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಹುಳಿಯಾರು ಪಟ್ಟಣ ಪಂಚಾಯಿತಿಯ ಮೊದಲನೆಯ ಸಭೆಯ ಮುಂದುವರೆದ ಇಂದಿನ ಸಭೆಯಲ್ಲಿಯೂ ಮರುಕಳಿಸಿತು.
ಸಭೆಯ ಆರಂಭದಲ್ಲೇ ಪಟ್ಟಣ ಪಂಚಾಯಿತಿ ನಾಮಿನಿ ಸದಸ್ಯೆ ಗೀತಾ ಅಶೋಕ್ ಬಾಬು ಮಳಿಗೆ ವಿಚಾರವಾಗಿ ಪಟ್ಟಣ ಪಂಚಾಯಿತಿಯ ಕ್ರಮದ ಬಗ್ಗೆ ತಮ್ಮ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ಮಳಿಗೆಯ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ಎಲ್ಲಾ ಸದಸ್ಯರಿಗೂ ಸಂಪೂರ್ಣ ಕಡತ ತೋರಿಸುವಂತೆಯೂ, ಹಾಗೂ ಮಳಿಗೆಯ ಕೋರ್ಟ್ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ವಕೀಲರ ಮಾಹಿತಿಯನ್ನು ಒದಗಿಸುವಂತೆಯೂ ಪಟ್ಟುಹಿಡಿದರು. ಸರ್ಕಾರಿ ವಕೀಲರನ್ನು ನೇಮಿಸಿಕೊಳ್ಳುವುದರ ಬದಲು ಖಾಸಗಿ ವಕೀಲರನ್ನು ನೇಮಿಸಿಕೊಂಡಿರುವುದರ ಬಗ್ಗೆ ವಿವರಣೆ ಕೇಳಿದರು.ತೀವ್ರ ಗದ್ದಲ ಏರ್ಪಟ್ಟ ನಂತರ ಮೌನ ಮುರಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರಿ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶವಿಲ್ಲ ಎಂದಿದ್ದಕ್ಕೆ, ಸಭೆಗೆ ನೀವು ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಸದಸ್ಯರುಗಳಾದ ದಯಾನಂದ್, ಸಿದ್ದಿಕ್ ,ದಸ್ತಗೀರ್, ಜಹೀರ್ ಸಾಬ್,ಬಿ.ಬಿ.ಫಾತೀಮಾ, ಬಡಗಿ ರಾಜು, ಚಂದ್ರಶೇಖರ್, ಜುಬೇರ್ ಮೊದಲಾದ ಸದಸ್ಯರು ಮುಖ್ಯಾಧಿಕಾರಿಗಳ ಮೇಲೆ ಗರಂ ಆಗಿ ಸದ್ಯ ಮಳಿಗೆಗಳ ಕಡತವನ್ನು ನಿರ್ವಹಿಸುತ್ತಿರುವ ವಕೀಲರ ಬದಲಿಗೆ ತಾವು ಬೇರೊಬ್ಬ ವಕೀಲರನ್ನು ನೇಮಿಸುವುದಾಗಿ ತಿಳಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಳಿಗೆ ಕಟ್ಟಿದಾಗಿನಿಂದ ಇದುವರೆಗೂ ಮರು ಹರಾಜು ಮಾಡದಿರುವ ಬಗ್ಗೆ ವಾಗ್ವಾದ ನಡೆಯಿತು.ಮುಖ್ಯಾಧಿಕಾರಿಯಾದ ಮಂಜುನಾಥ್ ಮಳಿಗೆಗಳ ವಿಚಾರ ಪ್ರಸ್ತಾಪ ಮಾಡಿದಾಗಲೆಲ್ಲ ವಿಚಾರ ಕೋರ್ಟಿನಲ್ಲಿದ್ದು ನಾನು ಮಾತನಾಡುವ ಹಾಗಿಲ್ಲ ಎನ್ನುತ್ತಿದ್ದವರು, ಇದೀಗ ಕೋರ್ಟಲ್ಲಿ ತಡೆಯಾಜ್ಞೆ ಇದ್ದಾಗ್ಯೂ ಸಹ ಯಾರ ಗಮನಕ್ಕೂ ತರದೇ ಏಕಾಏಕಿ ಬಾಡಿಗೆಯನ್ನು ಹೆಚ್ಚಳ ಮಾಡಿ ಕಟ್ಟಿಸಿಕೊಳ್ಳುತ್ತಿರುವುದು ಬಗ್ಗೆ ಸದಸ್ಯ ದಯಾನಂದ್ ಆಕ್ಷೇಪ ವ್ಯಕ್ತಪಡಿಸಿ ಈ ಬಗ್ಗೆ ಸಭೆಗೆ ಉತ್ತರ ನೀಡುವಂತೆ ಒತ್ತಾಯಿಸಿದರು.ಈ ವೇಳೆ ಮುಖ್ಯಾಧಿಕಾರಿ ಮಂಜುನಾಥ್ ಮಳಿಗೆದಾರರು ಪಂಚಾಯಿತಿಗೆ ನೇರವಾಗಿ ಬಂದು ಬಾಡಿಗೆ ಪಾವತಿ ಮಾಡುತ್ತಿಲ್ಲ.ಆನ್ಲೈನ್ನಲ್ಲಿ ಬಾಡಿಗೆ ಪಾವತಿ ಮಾಡಲು ಅವಕಾಶವಿರುವುದರಿಂದ ಅವರುಗಳು ಆನ್ಲೈನ್ನಲ್ಲಿ ಬಾಡಿಗೆ ಪಾವತಿಸುತ್ತಿದ್ದು ನಮಗೂ ಅದಕ್ಕೂ ಸಂಬಂಧವಿಲ್ಲ, ನಾವ್ಯಾರೂ ಬಾಡಿಗೆ ಪಾವತಿ ಮಾಡುವಂತೆ ಅವರನ್ನು ಕೇಳಲಿಲ್ಲ ಎಂದು ಸಮಜಾಯಿಷಿ ನೀಡಿದ್ದು ಸಭೆಯಲ್ಲಿ ಕೋಲಾಹಲ ಸೃಷ್ಠಿಸಲು ಕಾರಣವಾಯಿತು.ಮಳಿಗೆ ಕೇಸ್ ಹೈಕೋರ್ಟಿನಲ್ಲಿ ಇದ್ದು ಇದರ ಬಗ್ಗೆ ಪರಿಶೀಲನೆ ಮಾಡಿದಾಗ ಪೆಂಡಿಂಗ್ ಎಂದೇ ಕಳೆದ ಹಲವಾರು ತಿಂಗಳಲ್ಲಿನಿಂದಲೂ ಬರುತ್ತಿದೆ, ಇದು ನಿಜಾನಾ ಎಂದು ಗೀತಾ ಅಶೋಕ್ ಬಾಬು ಪ್ರಶ್ನಿಸಿದಾಗ ಸದ್ಯ ಕರೋನ ಪರಿಸ್ಥಿತಿ ಇರುವುದರಿಂದ ಕೋರ್ಟಿನಲ್ಲಿ ಹೆಚ್ಚಿನ ಕೇಸ್‌ಗಳು ನಡೆಯುತ್ತಿಲ್ಲ, ಹಾಗಾಗಿ ಈ ಪರಿಸ್ಥಿತಿ ಇದೆ ಕಂದಾಯಾಧಿಕಾರಿ ಪ್ರದೀಪ್ ಮಾಹಿತಿ ನೀಡಿದರು.
ಸಭೆಯಲ್ಲಿ ಗಂಟೆಗಟ್ಟಲೆ ಮಳಿಗೆಯ ವಿಚಾರವಾಗಿ ವಾದ-ವಿವಾದ ನಡೆದು ಕಡೆಗೆ ಮತ್ತೊಬ್ಬ ಸದಸ್ಯ ಹೇಮಂತ್ ಮಳಿಗೆ ವಿಚಾರವಾಗಿಯೇ ಮತ್ತೊಂದು ವಿಶೇಷ ಸಭೆ ಕರೆದು,ಅಂದು ಎಲ್ಲವನ್ನು ತೀರ್ಮಾನ ಮಾಡೋಣ, ಬೇರೆ ವಕೀಲರನ್ನು ನೇಮಿಸಿ ಕೊಳ್ಳೋಣ ಎಂದು ಸಮಾಧಾನಪಡಿಸಿ ವಿವಾದಕ್ಕೆ ತೆರೆ ಎಳೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ