ಹುಳಿಯಾರು:ಹುಳಿಯಾರು ಪಟ್ಟಣ ಪಂಚಾಯಿತಿಯ ಬಹುನಿರೀಕ್ಷಿತ ಇಂದಿನ ಪ್ರಥಮ ಸಭೆಯ ಆರಂಭದಿಂದಲೂ ಸದಸ್ಯರುಗಳಿಂದ ಪ್ರಶ್ನೆಗಳ ಸುರಿಮಳೆ, ಅದಕ್ಕೆ ಸಮರ್ಪಕ ಉತ್ತರ ನೀಡಬೇಕಾಗಿದ್ದ ಅಧಿಕಾರಿಗಳ ನಿರುತ್ತರ, ಹಾಗೂ ಸದಸ್ಯರುಗಳು ಕೇಳಿದ ಪ್ರಶ್ನೆಗಳಿಗೆ ದಾಖಲೆಗಳ ಕೊರತೆಯಿಂದ ತೀವ್ರ ಅಸಮಾಧಾನಗೊಂಡ ಅಧ್ಯಕ್ಷ ಕಿರಣ್ ಕುಮಾರ್ ಸಭೆಯನ್ನು ಏಕಾಏಕಿ ಮಂಗಳವಾರಕ್ಕೆ ಮುಂದೂಡಿದರು.
ಸಭೆಯ ಆರಂಭದ ಪ್ರಥಮದಲ್ಲಿಯೇ ಹಲವರು ಸದಸ್ಯರುಗಳು ಯಾವುದೇ ಸದಸ್ಯರುಗಳಿಗೆ ಪ್ರಮಾಣ ವಚನ ಪ್ರಮಾಣವಚನ ಭೋದಿಸದೆ ಸಭೆ ನಡೆಸುವ ಹಾಗಿಲ್ಲವೆಂದು ಸ್ಪಷ್ಟವಾದ ನಿರ್ದೇಶನ ಇದ್ದರೂ ಸಹ ನೀವು ಪ್ರಮಾಣ ವಚನ ಬೋಧಿಸಿದೆ ಸಭೆ ಹೇಗೆ ಕರೆಯುತ್ತೀರಿ, ಇದು ಕಾನೂನಿನ ಉಲ್ಲಂಘನೆ ಆಗುವುದಿಲ್ಲವೇ ಎಂದು ಆರಂಭಗೊಂಡ ಪ್ರಶ್ನೆಗಳ ಸುರಿಮಳೆ, ಸಂಜೆ 5:00 ರವರೆಗೂ ನಡೆದ ಸಭೆಯಲ್ಲಿ ಪ್ರತಿಧ್ವನಿಸುತ್ತಲೇ ಇತ್ತು.
ನಂತರ ಮುಂದುವರೆದ ಸಭೆಯಲ್ಲಿ ಖರ್ಚಿನ ಲೆಕ್ಕಾಚಾರದಲ್ಲಿ ಬಿಲ್ ನೀಡಲು ವಿಫಲರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪ್ರಶ್ನೆ ಕೇಳಿದ ಸದಸ್ಯರಿಗೆ ಬಿಲ್ ಹುಡುಕುವ ನೆಪದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಸಭೆಯಿಂದ ಆಚೆಗುಳಿದರು. ಇದರಿಂದ ಸಿಟ್ಟಿಗೆದ್ದ ಸದಸ್ಯರು ಅಧಿಕಾರಿಗಳು ನಿಮ್ಮ ಮಾತು ಕೇಳದಿದ್ದರೆ ಹೇಗೆ ಎಂದು ಅಧ್ಯಕ್ಷರ ವಿರುದ್ಧ ಹರಿಹಾಯ್ದರು.ನಂತರ ಹಾಗೂಹೀಗೂ ಆರಂಭವಾದ ಸಭೆಯಲ್ಲಿ ನಕಲಿ ಸಹಿ ಹಾಕಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ಆರೋಪಗಳ ಸುರಿಮಳೆಯೇ ನಡೆಯಿತು. ತಮ್ಮ ಸಹಿಯನ್ನು ಪೋರ್ಜರಿ ಮಾಡಿರುವ ಬಗ್ಗೆ ಮಾಹಿತಿ ನೀಡಲು ಖುದ್ದು ಹಿಂದಿನ ಪಿಡಿಓ ಸಿದ್ದರಾಮಯ್ಯನವರೇ ಸಭೆಗೆ ಆಗಮಿಸಿದ್ದರು.ಆಗ ಉತ್ತರಿಸಬೇಕಿದ್ದ ಇಬ್ಬರು ಸಿಬ್ಬಂದಿಗಳು ಸ್ಥಳದಿಂದಲೇ ಪರಾರಿಯಾಗಿದ್ದು ಮತ್ತಷ್ಟು ಗೊಂದಲ ಸೃಷ್ಟಿಸಲು ಕಾರಣವಾಯಿತು. ಪಿಡಿಓ ಅವರ ಸ್ಪಷ್ಟನೆಗೆ ನೌಕರರ ಉತ್ತರ ಕೇಳಬೇಕಾಗಿದ್ದ ಮುಖ್ಯಾಧಿಕಾರಿ ಇದು ನಮ್ಮ ಸಮಯದಲ್ಲಿ ಆಗಿರುವ ದಾಖಲೆಗಳಲ್ಲ,ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ ಮಾತು ಸಭೆಯಲ್ಲಿ ಮತ್ತಷ್ಟು ಗೋಜಲು ಸೃಷ್ಟಿಸಿತು.ತದನಂತರ ನವಂಬರ್ ಮಾಹೆಯ ಜಮಾ ಖರ್ಚಿನ ಲೆಕ್ಕದಲ್ಲಿ ಹತ್ತು ಸಾವಿರ ರೂಪಾಯಿ ಬಾಡಿಗೆ ಎಂದು ಬರೆದಿರುವ ವಿಚಾರಕ್ಕೆ ಸ್ಪಷ್ಟೀಕರಣ ಕೇಳಿದ ಸದಸ್ಯರುಗಳು, ಈ ಬಗ್ಗೆ ಗಂಟೆಗಟ್ಟಲೆ ಪ್ರಶ್ನೆಗಳ ಸುರಿಮಳೆಗೈದರು. ಮಳಿಗೆ ಹರಾಜು ಪ್ರಕ್ರಿಯೆ ಕೋರ್ಟ್ನಲ್ಲಿ ಇರುವುದರಿಂದ ಇದಕ್ಕೆ ಉತ್ತರಿಸಿದಲ್ಲಿ ಕೋರ್ಟ್ ನಿಂದನೆ ಎದುರಿಸಬೇಕಾಗುತ್ತದೆ, ಹಾಗಾಗಿ ಇದಕ್ಕೆ ಯಾವುದೇ ಉತ್ತರ ನೀಡಲು ನಾನು ಸಿದ್ಧನಿಲ್ಲ ಎಂದು ಮುಖ್ಯಾಧಿಕಾರಿಗಳು ಮೌನ ವಹಿಸಿದ್ದರಿಂದ ಮತ್ತಷ್ಟು ಉದ್ವಿಗ್ನಗೊಂಡ ಸದಸ್ಯರು ಹೃದಯ ವಿಚಾರಕ್ಕೆ ಗಂಟೆಗಟ್ಟಲೆ ಜಟಾಪಟಿ ನಡೆಸಿದರು. ಅಧ್ಯಕ್ಷ ಕಿರಣ್ ಕುಮಾರ್ ಸಹ ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮರ್ಪಕ ಉತ್ತರ ನೀಡಲು ಆಗ್ರಹಿಸಿದ್ದಾಗ್ಯೂ ಸಹ ಗೋಜಲು ಬಗೆಹರಿಯದೆ, ಬೇಸತ್ತ ಅಧ್ಯಕ್ಷರು ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದರು.ನನಗೆ ಅವಮಾನ ಮಾಡಲೆಂದೇ ಇಂತಹ ವರ್ತನೆ ತೋರುತ್ತಿದೀರಾ ಎಂದು ರೊಚ್ಚಿಗೆದ್ದ ಅಧ್ಯಕ್ಷರು ಮಂಗಳವಾರದ ಸಭೆಯಲ್ಲಿ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಷ್ಟರೊಳಗೆ ನೀವು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನೇ ಖುದ್ದಾಗಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಸಮರ್ಪಕ ಮಾಹಿತಿ ನೀಡುವುದಾಗಿ ಸದಸ್ಯರುಗಳಿಗೆ ಭರವಸೆ ನೀಡಿ ಇಂದಿನ ಸಭೆಯನ್ನು ಮುಂದೂಡಿದರು.ಸಭೆಯಲ್ಲಿ ಉಪಾಧ್ಯಕ್ಷೆ ಶೃತಿ ಸನತ್ ಸೇರಿದಂತೆ ಒಟ್ಟು 16ಜನ ಸದಸ್ಯರುಗಳು ಹಾಗೂ ಮೂರು ಜನ ನಾಮಿನಿ ಸದಸ್ಯರುಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ