ಹುಳಿಯಾರು ಪಪಂ:ನಾಪತ್ತೆಯಾಗಿದ್ದ MR ಕಡತ ಹಿಂದಿರುಗಿಸಿದ ಬಿಲ್ ಕಲೆಕ್ಟರ್
ಪೊಲೀಸ್ ಠಾಣೆಗೆ ದೂರು ನೀಡುವ ಮೊದಲೇ ಪತ್ತೆಯಾದ MR ಪುಸ್ತಕ
ಕಚೇರಿಯಿಂದ ನಾಪತ್ತೆಯಾಗಿದ್ದ MR ಕಡತವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಹಿಂತಿರುಗಿಸುತ್ತಿರುವ ಪಟ್ಟಣ ಪಂಚಾಯಿತಿ ಸಿಬ್ಬಂದಿ |
ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಎಂಆರ್ ಪುಸ್ತಕ ನಾಪತ್ತೆಯಾಗಿದ್ದು, ಇದೇ ಪುಸ್ತಕದಿಂದ ಹಲವಾರು ಅಕ್ರಮ ಖಾತೆಗಳನ್ನು ಲಕ್ಷಾಂತರ ರೂಪಾಯಿ ರೂಪಾಯಿ ಹಣ ಪಡೆದು ಮಾಡಲಾಗಿದೆ ಎಂಬ ಆರೋಪ ಪಂಚಾಯತಿಯ ಪ್ರಥಮ ಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿ, ಕಡತ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿ ಇನ್ನೇನು ಹೊರಡಬೇಕು ಎನ್ನುವ ಸಮಯದಲ್ಲಿ ಕಡತದ ಸುಳಿವು ಪತ್ತೆಯಾಗಿ,ಇದಕ್ಕೆ ಕಾರಣರಾದವರು ಸಭೆಯಲ್ಲಿ ಕೈಮುಗಿದು ಕ್ಷಮೆ ಕೇಳಿದ ಪ್ರಕರಣ ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಜರುಗಿದೆ.
ನಡೆದಿದ್ದೇನು : ರಂಗಯ್ಯ ಬಿನ್ ಲೇಟ್ ನರಸಿಂಹಯ್ಯ ಎಂಬವರಿಗೆ ಸೇರಿದ ಆರ್‌ಸಿಸಿ ಮನೆಗೆ ಮಾಡಿರುವ ಖಾತೆ ಅಕ್ರಮವಾಗಿದೆ ಎಂದು ಹಾಗೂ ಇದನ್ನು 2018 -19 ನೇ ಸಾಲಿನಲ್ಲಿ ವಿತರಿಸಲಾಗಿದ್ದು ಆಗ ಪಟ್ಟಣ ಪಂಚಾಯಿತಿ ಅಸ್ತಿತ್ವದಲ್ಲಿತ್ತು. ಸದ್ಯ ವಿತರಿಸಲಾಗಿರುವ ನಮೂನೆ 11ರಲ್ಲಿ ಇರುವ ಸಹಿಯು ಈ ಹಿಂದೆ 2016 ನೇ ಸಾಲಿನಲ್ಲಿ ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ PDO ಆಗಿ ಕಾರ್ಯನಿರ್ವಹಿಸಿದ್ದ ಸಿದ್ದರಾಮಯ್ಯನವರದಾಗಿದ್ದು ಇದು ಹೇಗೆ ಸಾಧ್ಯ, PDO ಸಿದ್ದರಾಮಯ್ಯನವರ ಸಹಿ ನಕಲು ಮಾಡಿರುವವರು ಯಾರು, ಸದರಿ MR ಪುಸ್ತಕ ಎಲ್ಲಿದೆ, ಖಾತೆ ಮಾಡಿಕೊಟ್ಟಿರುವವರು ಯಾರು, ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಹುಳಿಯಾರು ಪಟ್ಟಣ ಪಂಚಾಯಿತಿ ಪ್ರಥಮ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು ಇದೇ ಕಾರಣಕ್ಕಾಗಿಯೇ ಸಭೆ ಮುಂದೂಡಲ್ಪಟ್ಟಿತ್ತು.
ಅಂದು ನಡೆದ ಚರ್ಚೆಯಲ್ಲಿ ಒಟ್ಟು ಸರಿಸುಮಾರು 60 ಖಾತೆಗಳು ನಕಲಿ ಆಗಿರಬಹುದು ಎಂಬುದು ವಿವಾದಕ್ಕೆ ಕಾರಣವಾಗಿ, ಸದರಿ ಎಂಆರ್ ಪುಸ್ತಕ ಪಟ್ಟಣ ಪಂಚಾಯಿತಿಯ ಕಡತಗಳ ದಾಖಲೆಯಲ್ಲಿ ಇಲ್ಲದಿರುವುದು, ಹಾಗೂ ಅದೇ ಎಂಆರ್ ಪುಸ್ತಕದಿಂದ ಪಟ್ಟಣ ಪಂಚಾಯಿತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿತ್ತು.
ಈ ಹಿಂದೆ ಹುಳಿಯಾರು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿ, ಕಡತಗಳ ಹಸ್ತಾಂತರ ಸಮಯದಲ್ಲಿ ಈ ಕಡತ ನಮಗೆ ಒಪ್ಪಿಸಿಲ್ಲ ಎಂಬುದು ಮುಖ್ಯಾಧಿಕಾರಿಗಳ ವಾದವಾಗಿದ್ದು, ಹಾಗಾಗಿ ನಕಲಿ ಖಾತೆಗೂ ನನಗೂ ಸಂಬಂಧವಿಲ್ಲ ಎಂದು ಮೌನಕ್ಕೆ ಶರಣಾಗಿದ್ದರು. ಅಲ್ಲದೆ ಆ ಸಮಯದಲ್ಲಿ PDO ಆಗಿದ್ದ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಈ ಬಗ್ಗೆ ವಾಸ್ತವಾಂಶ ಏನು ಎಂಬುದರ ಬಗ್ಗೆ ಸ್ಪಷ್ಟನೆ ಸಹ ಕೇಳಿರುವುದರಿಂದ, ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ಮೌನವಹಿಸಿ ಕುಳಿತಿದ್ದರು.
ಮಹತ್ವದ ಕಡತ ನಾಪತ್ತೆಯಾಗಿರುವುದು ಒಂದೆಡೆಯಾದರೆ, ಇದೇ ಸೀರಿಯಲ್ ನಂಬರ್ ನಲ್ಲಿ ಹಣ ಪಡೆದು ಅಕ್ರಮ ಖಾತೆ ಮಾಡಿಕೊಟ್ಟಿರುವುದು ಕೂಡ ಬಯಲಿಗೆ ಬಂದ ಹಿನ್ನೆಲೆಯಲ್ಲಿ , ನಾಪತ್ತೆಯಾದ ಕಡತದ ಹಿಂದಿರುವ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆ ಮಾಡಬೇಕು ಹಾಗೂ ಅವರು ಮಾಡಿಕೊಟ್ಟಿರುವ ಅಕ್ರಮ ಖಾತೆಗಳನ್ನು ರದ್ದು ಮಾಡಬೇಕು ಎಂಬುದು ಚರ್ಚಿತವಾಗಿ, ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಪ್ರಕರಣವನ್ನು ಮೇಲಾಧಿಕಾರಿಗಳಿಗೆ ವರ್ಗಾವಣೆ ಮಾಡಲು ನಿರ್ಧರಿಸಲಾಯಿತು.
ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಎಂಆರ್ ಪುಸ್ತಕ ಕಚೇರಿಯಲ್ಲಿಯೇ ಇದೆ,ಬೀರುವಿನಲ್ಲಿ ನಾವು ನೋಡಿ ಇಂತಹವರಿಗೆ ಕೊಟ್ಟಿದ್ದೇವೆ ಎಂದು ತಿಳಿಸಲಾಗಿ, ಕಡೆಗೆ MR ಪುಸ್ತಕ ನಮ್ಮ ಮನೆಯಲ್ಲಿದೆ, ದಾಖಲೆ ಪರಿಶೀಲಿಸಲು ಅದನ್ನು ಮನೆಗೆ ಕೊಂಡೊಯ್ದಿದ್ದೆ ಎಂದು ಬಿಲ್ ಕಲೆಕ್ಟರ್ ವೆಂಕಟೇಶ್ ಅವರು ತಮ್ಮ ಮನೆಗೆ ತೆರಳಿ ಎಂಆರ್ ಪುಸ್ತಕವನ್ನು ಸಭೆಯಲ್ಲಿ ಎಲ್ಲರೆದುರಿಗೂ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಬಗ್ಗೆ ನಡೆದ ಸುದೀರ್ಘ ಚರ್ಚೆಯಲ್ಲಿ ನಾನು ಹಾಗೂ ಮತ್ತೋರ್ವ ಬಿಲ್ ಕಲೆಕ್ಟರ್ ಕೃಷ್ಣಮೂರ್ತಿ ಇದನ್ನು ಬಳಸಿದ್ದು,ನಾವು ಕೇವಲ ನಮೂನೆ-11 ಮಾತ್ರ ನೀಡಿದ್ದು, ಖಾತೆ ಮಾಗಿಲ್ಲ, ದಯವಿಟ್ಟು ನಮ್ಮ ತಪ್ಪನ್ನು ಮನ್ನಿಸಿ ಎಂದು ಎಲ್ಲರಿಗೂ ಕೈಮುಗಿದು ಕ್ಷಮೆ ಯಾಚಿಸಿದರು. |
ಮಾತೆತ್ತಿದರೆ ಕಾನೂನು ಪಾಠಮಾಡುವ ಮುಖ್ಯಾಧಿಕಾರಿಗಳು ಪಂಚಾಯಿತಿಯಲ್ಲಿ ಸಮರ್ಪಕವಾಗಿ ಲೆಕ್ಕ ನಿರ್ವಹಣೆ ಹಾಗೂ ಕಡತ ನಿರ್ವಹಣೆ ಮಾಡಲು ವಿಫಲರಾಗಿದ್ದು, ಪಂಚಾಯಿತಿಯ ಯಾವೊಬ್ಬ ಸದಸ್ಯರಿಗೂ ಗೌರವ ಕೊಡದೆ,ಯಾರ ಪ್ರಶ್ನೆಗೆ ಉತ್ತರಿಸದೆ ಉಡಾಫೆ ಮನೋಭಾವ ತೋರಿಸುತ್ತಾ,ತಾವು ಮಾಡಿದ್ದೇ ಸರಿ ಎಂಬ ಧೋರಣೆ ಹೊಂದಿದ್ದು ಇವರನ್ನು ವರ್ಗಾವಣೆ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು. ಅಲ್ಲದೆ ಅಕ್ರಮ ಖಾತೆ ಮಾಡಿಕೊಟ್ಟಿರುವ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇವರಿಗೆ ಕುಮ್ಮಕ್ಕು ಕೊಟ್ಟವರು ಯಾರು ಎಂಬುದು ತಿಳಿಯಬೇಕು ಹಾಗೂ ಮಾಡಿಕೊಟ್ಟಿರುವ ಖಾತೆಯನ್ನು ರದ್ದುಪಡಿಸಬೇಕು ಎಂದು ನಡಾವಳಿ ಬರೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ