ಹುಳಿಯಾರು ಪಟ್ಟಣ ಪಂಚಾಯಿತಿಗೆ ಸೇರಿದ 52 ಮಳಿಗೆಗಗಳಿಗೂ ಕೋರ್ಟ್ ತಡೆಯಾಜ್ಞೆ ಇದೆ ಎಂದು ಅಧಿಕಾರಿಗಳು ಕಳೆದ ಮೂರು ವರ್ಷದಿಂದಲೂ ಹೇಳುತ್ತಾ ಬಂದಿದ್ದು, ಇದರಿಂದಾಗಿ ಪಂಚಾಯ್ತಿಗೆ ಬರಬೇಕಿದ್ದ ಲಕ್ಷಾಂತರ ರೂಪಾಯಿ ಆದಾಯದ ಮೂಲಕ್ಕೆ ಕುತ್ತಾಗಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಕೂಡಲೇ ಸಂಬಂಧಿಸಿದ ವಕೀಲರನ್ನು ಸಂಪರ್ಕಿಸಿ ತಡೆಯಾಜ್ಞೆ ತೆರವು ಮಾಡಿಸಲು ಕ್ರಮಕೈಗೊಳ್ಳಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಎಸ್ಆರ್‌ಎಸ್ ದಯಾನಂದ್ ಸೇರಿದಂತೆ ಹಲವು ಸದಸ್ಯರು ಆಗ್ರಹಿಸಿದರು.ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಮಳಿಗೆಗಳ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹುಳಿಯಾರು ಪಟ್ಟಣ ಪಂಚಾಯಿತಿ ಮಳಿಗೆಯ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ
ಹುಳಿಯಾರು ಪಟ್ಟಣ ಪಂಚಾಯಿತಿಗೆ ಸೇರಿದ 52 ಮಳಿಗೆಗಳಿದ್ದು, ಕಳೆದ ಹಲವು ದಶಕಗಳಿಂದಲೂ ಹರಾಜು ಪ್ರಕ್ರಿಯೆ ನಡೆಯದೆ, ಆಗ ಹರಾಜಿನಲ್ಲಿ ಕೊಂಡಿದ್ದ ವರ್ತಕರುಗಳೇ ಈಗಲೂ ಮುಂದುವರೆದಿದ್ದು, ಪಂಚಾಯಿತಿ ಕರಾರಿನ ಅವಧಿ ಮುಗಿದಿದ್ದ ಇವರನ್ನು ತೆರವುಗೊಳಿಸಿ ಮರು ಹರಾಜು ಪ್ರಕ್ರಿಯೆ ಮಾಡುವ ಸಂದರ್ಭದಲ್ಲಿ ಇವರುಗಳು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದ ಸಂಬಂಧ ಇದುವರೆಗೂ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕುತ್ತು ಬಂದಿದೆ. ಅಧಿಕಾರಿಗಳು ಹರಾಜು ಪ್ರಕ್ರಿಯೆ ತೆರವು ಮಾಡಿಸುವಲ್ಲಿ ನಿರಾಸಕ್ತಿ ತಾಳಿದ್ದು, ಕಳೆದ ಮೂರು ವರ್ಷಗಳಿಂದಲೂ ತಡೆಯಾಜ್ಞೆ ತೆರವುಗೊಳಿಸಲು ಮುಂದಾಗದ ಪರಿಣಾಮ ಅದೇ ವ್ಯಾಪಾರಿಗಳು ಇದುವರೆಗೂ ಮುಂದುವರೆದಿದ್ದು ಈಗಲಾದರೂ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಮುಂದಾಗಿ ಮಳಿಗೆದಾರರನ್ನು ತೆರವುಗೊಳಿಸಬೇಕೆಂದು ದಯಾನಂದ್, ಫ್ರೂಟ್ ಸಿದ್ದಿಕ್, ಗೀತಾ ಅಶೋಕ್ ಬಾಬು, ರಾಜು ಬಡಗಿ, ದಸ್ತಗೀರ್ ಸಾಬ, ಜಹೀರ್ ಸಾಬ್ ,ಮಹಮದ್ ಜುಬೇರ್ ಮತ್ತಿತರರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರನ್ನು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಯಾವಾಗ ಈ ಬಗ್ಗೆ ಪ್ರಶ್ನಿಸಿದರೂ ಸಹ ಕೋರ್ಟ್ ನಲ್ಲಿ ತಡೆಯಾಜ್ಞೆ ಇರುವ ವಿಚಾರವಾಗಿರುವುದರಿಂದ ನಾನು ಪ್ರತಿಕ್ರಿಯೆ ನೀಡಲಾರೆ ಎನ್ನುವ ಸಬೂಬು ಹೇಳುತ್ತಲೇ ಬಂದಿದ್ದಾರೆ.ಆದರೆ ಬಾಡಿಗೆಯನ್ನು ಯಾರ ಗಮನಕ್ಕೂ ಬಾರದಂತೆ ಮೂರು ಸಾವಿರ ರೂಪಾಯಿಗೆ ಏರಿಕೆ ಮಾಡಿ ಪಟ್ಟಣ ಪಂಚಾಯಿತಿ ಖಾತೆಗೆ ಬ್ಯಾಂಕ್ ಮೂಲಕ ಜಮಾವಣೆ ಮಾಡಿಸಿಕೊಳ್ಳುತ್ತಾ ಬಂದಿದ್ದು ಇದು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.ಮಳಿಗೆ ವಿಚಾರ ಪ್ರಸ್ತಾಪ ಮಾಡಿದಾಗಲೆಲ್ಲಾ ಸದಸ್ಯರುಗಳಿಗೆ ತಪ್ಪು ಮಾಹಿತಿ ನೀಡುತ್ತ ಬಂದಿರುವ ಮುಖ್ಯಾಧಿಕಾರಿಗಳು ಒಟ್ಟು 52 ಮಳೆಗೆಗಳ ಪೈಕಿ ಕೇವಲ 22 ಮಳಿಗೆಗೆ ತಡೆಯಾಜ್ಞೆ ಇದ್ದರೂ ಸಹ ಉಳಿದ ಮಳಿಗೆಗಳನ್ನು ಹರಾಜು ಮಾಡಲು ಮುಂದಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.ಅಲ್ಲದೆ ₹1000 ಇದ್ದ ಬಾಡಿಗೆಯನ್ನು ₹3000ಕ್ಕೆ ಯಾರ ಗಮನಕ್ಕೂ ಬಾರದಂತೆ ಏರಿಕೆ ಮಾಡಿದ್ದು ಇದನ್ನು ಪ್ರಶ್ನಿಸಿದರೆ ಮೌನವಾಗಿರುತ್ತಾರೆ. ದಿನ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದರು ಸಹ ಈ ಬಗ್ಗೆ ನನಗೇನು ತಿಳಿದಿಲ್ಲ ಎನ್ನುತ್ತಾರೆ. ಪಟ್ಟಣ ಪಂಚಾಯಿತಿ ಖಾತೆ ಆನ್ಲೈನಿನಲ್ಲಿ ಇದ್ದು ಮಳಿಗೆದಾರರು ಅದರ ಮೂಲಕ ಹಣ ಕಟ್ಟಿದ್ದಾರೆ ಎಂದು ತಿಳಿಸುವ ಇವರು, ಕೋರ್ಟ್ ನಲ್ಲಿ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಮಳಿಗೆ ಬಾಡಿಗೆಯನ್ನು ಪ್ರತ್ಯೇಕವಾಗಿ ಇಡಬೇಕಾಗಿತ್ತು. ಅಂಗಡಿಗಳನ್ನು ಮರು ಹರಾಜು ಮಾಡುವ ನಿಟ್ಟಿನಲ್ಲಿ ಈ ಕೂಡಲೇ ಸಂಬಂಧಪಟ್ಟ ವಕೀಲರುಗಳನ್ನು ಸಂಪರ್ಕಿಸಿ ಮುಂದಿನ ಮಂಗಳವಾರದ ಸಭೆಯಲ್ಲಿ ಪೂರಮಾಹಿತಿಯನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.ರಾಜು ಬಡಗಿ ಮಾತನಾಡಿ ಪಂಚಾಯಿತಿಗೆ ಸೇರಿದ ಹಲವು ವಾಣಿಜ್ಯ ಮಳಿಗೆಗಳು ಕಳೆದ ಮೂವತ್ತು ನಲವತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದು ಇದೀಗ ಕೆಲವೊಂದು ಮಳಿಗೆಗಳು ಶಿಥಿಲಾವಸ್ಥೆ ತಲುಪಿದೆ.ಅಲ್ಲಿನ ವ್ಯಾಪಾರಿಗಳು ಜೀವಭಯದಿಂದ ವ್ಯಾಪಾರ ಮಾಡುವ ಸ್ಥಿತಿ ಇದೆ.ಹಾಗಾಗಿ ಪಿಡಬ್ಲ್ಯೂಡಿ ಇಂಜಿನಿಯರ್ ಮೂಲಕ ಕಟ್ಟಡದ ಗುಣಮಟ್ಟವನ್ನು ಪರೀಕ್ಷೆ ಮಾಡಿಸಿ ಶಿಥಿಲವಾಗಿದ್ದ ಅವುಗಳನ್ನು ಕೆಡವಿಸಿ ಹೊಸದಾಗಿ ವಾಣಿಜ್ಯ ಮಳಿಗೆ ನಿರ್ಮಿಸಲು ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು.ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳ ವಿಚಾರವಾಗಿ ಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡುವಂತೆ ಅಧ್ಯಕ್ಷ ಕಿರಣ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ