ವಿಷಯಕ್ಕೆ ಹೋಗಿ

ಹುಳಿಯಾರು ರೈತ ಸಂಘದ ಧರಣಿ 12ನೇ ದಿನಕ್ಕೆ: ಕರ್ನಾಟಕ ರಕ್ಷಣಾ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯಿಂದ ಸಂಪೂರ್ಣ ಬೆಂಬಲ- ಪ್ರತಿಭಟನೆಯ ಕಾವು ಹೆಚ್ಚಳ

ಹುಳಿಯಾರು ರೈತ ಸಂಘದ ಧರಣಿ 12ನೇ ದಿನಕ್ಕೆ: ಕರ್ನಾಟಕ ರಕ್ಷಣಾ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯಿಂದ ಸಂಪೂರ್ಣ ಬೆಂಬಲ- ಪ್ರತಿಭಟನೆಯ ಕಾವು ಹೆಚ್ಚಳ

ಹುಳಿಯಾರು: ಹುಳಿಯಾರಿನ ಪಟ್ಟಣ ಪಂಚಾಯತಿ ಎದುರು ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದು (ಸೋಮವಾರ) 12ನೇ ದಿನಕ್ಕೆ ಕಾಲಿಟ್ಟಿದ್ದು, ಕಂದಾಯ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಪ್ರತಿಭಟನೆ ಮುಂದುವರೆದಿದೆ. ಕಳೆದ 12 ದಿನಗಳಿಂದ ರೈತರು ಮಳೆ, ಚಳಿ, ಗಾಳಿ ಲೆಕ್ಕಿಸದೆ ಧರಣಿ ನಡೆಸುತ್ತಿದ್ದು, ಸ್ಥಳೀಯ ಆಡಳಿತದ ಪ್ರತಿಕ್ರಿಯೆ ಶೂನ್ಯವಾಗಿದೆ.ರೈತರ ಬೇಡಿಕೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ:

ಹುಳಿಯಾರನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಗ್ರಾಮದ ಕಸ ವಿಲೇವಾರಿ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೈತ ಸಂಘದ ಅಧ್ಯಕ್ಷ ಚಂದ್ರಣ್ಣನವರ ನೇತೃತ್ವದಲ್ಲಿ ರೈತರು ಸ್ವಚ್ಛತೆ ಹಾಗೂ ಕಸ ವಿಲೇವಾರಿಗೆ ಸೂಕ್ತ ಜಾಗ ಒದಗಿಸುವಂತೆ ಹಾಗೂ  ವಾರಕ್ಕೊಮ್ಮೆ ನಡೆಯುವ ಸಂತೆ ಎಪಿಎಂಸಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಧರಣಿ ಕೈಗೊಂಡಿದ್ದಾರೆ.


ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷ ಗವಿರಂಗನಾಥ ಗೌಡಿ ಅವರು ಸುಮಾರು 5-10 ಕಿಲೋಮೀಟರ್ ವ್ಯಾಪ್ತಿಯೊಳಗೆ ಕಸ ವಿಲೇವಾರಿಗೆ ಜಾಗ ಲಭ್ಯವಿದೆ. ಆದರೆ ಅಧಿಕಾರಿಗಳು 'ಇದು ಅರಣ್ಯ ಇಲಾಖೆಗೆ ಸಂಬಂಧಿಸಿದೆ' ಎಂದು ಹೇಳುತ್ತಾ ನಿಷ್ಕಾಳಜಿ ತೋರುತ್ತಿದ್ದಾರೆ. ಅಧಿಕಾರಿಗಳು ಈ ರೀತಿ ತಪ್ಪು ಮಾಹಿತಿ ನೀಡುವುದೇಕೆ ಎಂದು ಪ್ರಶ್ನಿಸಿದರು. ರೈತರ ಧರಣಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಅವರು ರೈತ ಸಂಘದವರ ಈ ಹೋರಾಟ ಯಶಸ್ವಿಯಾಗುವವರೆಗೆ ತಾವು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನಿಮ್ಮಗಳ ಜೊತೆ ಇರುವುದಾಗಿ ಭರವಸೆ ನೀಡಿದರು. ಈ ದೀಪಾವಳಿಯನ್ನು ಕೂಡ ರೈತರ ಜೊತೆ ಧರಣಿ ಸ್ಥಳದಲ್ಲೇ ಆಚರಿಸಿದ್ದಾಗಿ ಅವರು ತಿಳಿಸಿದರು.


ಆಡಳಿತಕ್ಕೆ ತೀವ್ರ ತರಾಟೆ:

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬೇಕರಿ ಪ್ರಕಾಶ್ ಮಾತನಾಡಿ ಕಳೆದ 12 ದಿನಗಳಿಂದ ಜಿಲ್ಲಾಡಳಿತವಾಗಲೀ, ತಾಲ್ಲೂಕು ಆಡಳಿತವಾಗಲೀ, ಯಾವುದೇ ಅಧಿಕಾರಿಗಳಾಗಲೀ ಸ್ಥಳಕ್ಕೆ ಬಂದು ಸ್ಪಂದಿಸಿಲ್ಲ. ಚಳಿ, ಮಳೆ, ಗಾಳಿ, ಮನೆ, ಮಠ ಎಲ್ಲವನ್ನೂ ಬಿಟ್ಟು ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೆಚ್ಚಗೆ ಊಟ ಮಾಡಿ ಮಲಗುವ ಅಧಿಕಾರಿಗಳಿಗೆ ರೈತರ ಕಷ್ಟ ಅರ್ಥವಾಗುವುದಿಲ್ಲವೇ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಸದ ಸಮಸ್ಯೆಯನ್ನು ಬಗೆಹರಿಸಲಾಗದ ನೀವು ಏನನ್ನು ಮಾಡಲು ಸಾಧ್ಯ.ಇಕ್ಕಟ್ಟಾಗಿರುವ ಸಂತೆ ಸ್ಥಳವನ್ನು ಎಪಿಎಂಸಿಗೆ ವರ್ಗಾಯಿಸಿ ಎಂದು  ರೈತರು ಕೇಳುತ್ತಿದ್ದಾರೆ. ಇದನ್ನು ಬಗೆಹರಿಸಲು ಇವರಿಗೆ 12 ದಿನವಾದರೂ ಸಾಧ್ಯವಾಗುತ್ತಿಲ್ಲ ಏಕೆ? ಎಂದು ಪ್ರಕಾಶ್  ಅಸಮಾಧಾನ ವ್ಯಕ್ತಪಡಿಸಿದರು.


ಸ್ಥಳೀಯ ಶಾಸಕರಿಗೆ ಮನವಿ :

ಸ್ಥಳೀಯ ಶಾಸಕರು ಕೂಡ 12 ದಿನಗಳಿಂದ ನಡೆಯುತ್ತಿರುವ ಈ ಸತ್ಯಾಗ್ರಹಕ್ಕೆ ಗಮನ ಹರಿಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಪ್ರಕಾಶ್ ನಿಮಗೆ ಮತ ಒಂದೇ ಸಾಕಾ? ಜನರ ಕಷ್ಟ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.


ನೀವು ಆದಷ್ಟು ಬೇಗ ಕಸ ವಿಲೇವಾರಿಗೆ ಒಂದು ಜಾಗ ಮಾಡಿಕೊಡದಿದ್ದರೆ, ಮುಂದೆ ದೊಡ್ಡ ಹೋರಾಟಗಳನ್ನು ಮಾಡಬೇಕಾಗುತ್ತದೆ. ಹುಳಿಯಾರನ್ನು ಬಂದ್ ಮಾಡುವ ಪರಿಸ್ಥಿತಿ ಬರಬಹುದು. ಅದರ ಎಲ್ಲ ಜವಾಬ್ದಾರಿಯೂ ನೀವೇ ಹೊರಬೇಕಾಗುತ್ತದೆ ಎಂದು ಅವರು ಆಡಳಿತಕ್ಕೆ ಎಚ್ಚರಿಕೆ ನೀಡಿದರು. 


ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ಘೋಷಿಸಿದ್ದು, ಫಲಿತಾಂಶ ಸಿಗುವವರೆಗೂ ರೈತ ಸಂಘದೊಂದಿಗೆ ನಿಲ್ಲುವುದಾಗಿ ಸಂಘಟನೆಗಳ ಮುಖಂಡರು ಪ್ರಕಟಿಸಿದರು.


ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಘಟಕದ ಸಂಚಾಲಕ ತಮ್ಮಡಿಹಳ್ಳಿ ನಾಗರಾಜು ಮಾತನಾಡಿ ರೈತ ಸಂಘದ ವತಿಯಿಂದ ಹುಳಿಯಾರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.

​ ವಿಶಾಲವಾದ ಜಾಗದಲ್ಲಿ ಮಾರುಕಟ್ಟೆ ನಡೆದರೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ ಮತ್ತು ರೈತರು ವ್ಯಾಪಾರ ಮಾಡಲು ವ್ಯವಸ್ಥಿತ ಜಾಗ ಲಭ್ಯವಾಗುತ್ತದೆ, ಅಧಿಕಾರಿಗಳು ಈ ಕೂಡಲೇ ರೈತರ ಬೇಡಿಕೆಗೆ ಸ್ಪಂದಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.


ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮೆಡಿಕಲ್ ಚನ್ನಬಸವಯ್ಯ, ನಂದಾವಡಗಿ ಮಾತನಾಡಿದರು.


ಇಂದಿನ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಂದ್ರಪ್ಪ, ತಾಲೂಕು ಅಧ್ಯಕ್ಷ ಕರಿಯಪ್ಪ, ದಲಿತ ಸಂಘರ್ಷ ಸಮಿತಿಯ ಹುಳಿಯಾರಿನ ಸಂಚಾಲಕ ತಮ್ಮಡಿಹಳ್ಳಿ ನಾಗರಾಜು ,ಕಾರ್ಯದರ್ಶಿ ಪುಟ್ಟಯ್ಯ, ಓಂಕಾರಮ್ಮ, ಕೆಂಕೆರೆ ಗೊಲ್ಲರಹಟ್ಟಿಯ ಪೆದ್ದಾ ಭೋವಿ, ವಳಗೆರೆಹಳ್ಳಿ ಚಂದ್ರಶೇಖರ್, ಹೂವಿನ ತಿಮ್ಮಯ್ಯ,ನೀರಾ ಈರಣ್ಣ ,ಸಾಹಿತಿ ರಘು ತಿಮ್ಮರಾಜು ಮೊದಲಾದವರಿದ್ದರು.






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...