ವಿಷಯಕ್ಕೆ ಹೋಗಿ

ಹುಳಿಯಾರು ಸಂತೆ ಸ್ಥಳಾಂತರ ವಿವಾದ: ಕಸ ವಿಲೇವಾರಿ, ಮೂಲಸೌಕರ್ಯದ ಕೊರತೆ; ವಿವಿಧ ಸಂಘಟನೆಗಳ ಮಧ್ಯೆ ಭಿನ್ನಮತ

ಹುಳಿಯಾರು ಸಂತೆ ಸ್ಥಳಾಂತರ ವಿವಾದ: ಕಸ ವಿಲೇವಾರಿ, ಮೂಲಸೌಕರ್ಯದ ಕೊರತೆ; ವಿವಿಧ ಸಂಘಟನೆಗಳ ಮಧ್ಯೆ ಭಿನ್ನಮತ


ಎಪಿಎಂಸಿ ಸ್ಥಳದಲ್ಲಿ ಸಂತೆ ಜಾಗಕ್ಕೆ ನಿರಾಕರಣೆ, ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲು ಒತ್ತಾಯ

------------

✍ ವರದಿ :   ನರೇಂದ್ರಬಾಬು-9448760070

ಹುಳಿಯಾರು:ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ವಿರೋಧಿಸಿ ರೈತ ಸಂಘವು ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಹುಳಿಯಾರಿನ ಬಸವೇಶ್ವರನಗರ ಕಲ್ಯಾಣ ಮಂಟಪದಲ್ಲಿ  ಮಂಗಳವಾರದಂದು ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ನಡುವೆ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಹಾಲಿ ಇರುವ ಸಂತೆ ಸ್ಥಳಾಂತರ ಮತ್ತು ಪಟ್ಟಣದ ಕಸ ವಿಲೇವಾರಿಗೆ ಸೂಕ್ತ ಜಾಗದ ವಿಚಾರವಾಗಿ ತೀವ್ರ ಚರ್ಚೆ ನಡೆದು, ರೈತ ಸಂಘದ ಬೇಡಿಕೆ ಮತ್ತು ಉಳಿದ ಸಂಘಟನೆಗಳ ನಿಲುವುಗಳ ಮಧ್ಯೆ ಭಿನ್ನಮತ ಉಂಟಾಯಿತು.

ಮೂಲಭೂತ ಸೌಕರ್ಯದ ಕೊರತೆ: ತೆರಿಗೆ ಕಟ್ಟುವುದಿಲ್ಲ ಎಂದು ರೈತ ಸಂಘ ಪಟ್ಟು : ಹಾಲಿ ನಡೆಯುತ್ತಿರುವ ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಾದ ನೆರಳು, ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ಕೊರತೆ ಇದೆ. ಹೀಗಾಗಿ ಪಟ್ಟಣ ಪಂಚಾಯಿತಿ ಮೂಲಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅಲ್ಲಿ ತರಕಾರಿ ಸೊಪ್ಪು ಮಾರಾಟ ಮಾಡಲು ಬರುವ ರೈತರು ಸಂತೆಸುಂಕ ಕಟ್ಟಲು ತಯಾರಿಲ್ಲ ಎಂದು ರೈತ ಸಂಘದ ಮುಖಂಡರು ಸ್ಪಷ್ಟಪಡಿಸಿದರು.

ರೈತ ಸಂಘದ ರಾಜ್ಯಾದ್ಯಕ್ಷ ಚಂದ್ರಪ್ಪ ಮಾತನಾಡಿ ಸಂತೆ ಸ್ಥಳವನ್ನು ಕೂಡಲೇ ಬದಲಿಸಿರಿ, ಅಲ್ಲಿ ಸೂಕ್ತ ಸೌಕರ್ಯ ಕಲ್ಪಿಸಿರಿ. ಅಲ್ಲಿಯವರೆಗೂ ನಾವು ತೆರಿಗೆ ಕಟ್ಟುವುದಿಲ್ಲ.ಇದೇ ಗುರುವಾರದಿಂದ ನಾವು ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ಮುಂದುವರೆಸುತ್ತಿದ್ದು ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ,ಬುಧವಾರ ಕರಪತ್ರ ಮುದ್ರಿಸಿ ಪಟ್ಟಣದಲ್ಲಿ ಎಲ್ಲಾ ಹಂಚುತ್ತೇವೆ, ಯಾರು ಸುಂಕ ಕಟ್ಟಬಾರದು ಎಂದು ಪ್ರಚಾರ ಮಾಡುತ್ತೇವೆ ಎಂದು ಘೋಷಿಸಿದರು.

ರೈತ ಸಂಘದ ಅಧ್ಯಕ್ಷ ಹುಳಿಯಾರು ಹೋಬಳಿ ಕೆಂಕೆರೆ ಬಸವರಾಜು ಅವರು ಮಾತನಾಡಿ ಹಾಲಿ ಸ್ಥಳದಲ್ಲಿ ಸೌಕರ್ಯಗಳಿಲ್ಲ. ಎಪಿಎಂಸಿಗೆ ಸ್ಥಳಾಂತರಿಸಲು ಬೇಡಿಕೆಯಿರುವ ಜಾಗ ಕೇವಲ ಅರ್ಧ ಕಿ.ಮೀ. ದೂರವಿದೆ. ಹಾಗಾಗಿ ಅಲ್ಲಿಗೆ ಬರುವ ಜನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೆ ಇಲ್ಲಿ ಸಂತೆ ನಡೆಯುವ ದಿವಸ ಸಾಕಷ್ಟು ಕಾರುಗಳು ಭಾರಿ ವಾಹನಗಳು ಓಡಾಡುತ್ತವೆ. ಕಾರಣ ಏನೆಂದರೆ ಹಿರಿಯೂರಿಗೆ ಹೋಗುವ ಮಾರ್ಗ ಗೂಗಲ್ ಆಪ್ ಹಾಕಿಕೊಂಡಲ್ಲಿ ಇದೆ ಸ್ಥಳವನ್ನು ತೋರಿಸುತ್ತದೆ. ಸಂತೆಯ ಕಿಷ್ಕಿಂದೆ ಜಾಗದಲ್ಲಿ ವಾಹನಗಳು ಕೂಡ ಬರುವುದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಯಾವುದೇ ಸೌಕರ್ಯಗಳು ಇಲ್ಲದೆ ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯ ಜಾಗವನ್ನು ಈ ಕೂಡಲೇ  ಎಪಿಎಂಸಿಗೆ ಬದಲಾವಣೆ ಮಾಡಲೇಬೇಕು ಎಂದು ಆಗ್ರಹಿಸಿದರು.

ಕಲ್ಲಹಳ್ಳಿ ರೈತ ಮಲ್ಲೇಶಯ್ಯ ಮಾತನಾಡಿ ಎಪಿಎಂಸಿಗೆ ಶಿಫ್ಟ್ ಮಾಡಿದರೆ ದೂರ ಆಗುತ್ತದೆ ಎಂದು ಹೇಳುತ್ತಿದ್ದೀರಿ. ಸಂತೆಗೆ ಕೇವಲ ಹುಳಿಯಾರಿನವರು ಮಾತ್ರ ಬರುವುದಿಲ್ಲ,ದೂರದಿಂದ ಹಳ್ಳಿ ಜನ ಬರುತ್ತಾರೆ. ವಾಹನದಲ್ಲಿ ಬರುವವರ ಸಂಖ್ಯೆ ಜಾಸ್ತಿ ಇದ್ದು, ಅರ್ಧ ಕಿಲೋಮೀಟರ್ ದೂರ ಇರುವ ಎಪಿಎಂಸಿಗೆ ಶಿಫ್ಟ್ ಮಾಡಿದರೆ ನೀವು ತಿಳಿಸುವಂತೆ ಯಾವುದೇ ತೊಂದರೆ ರೈತರಿಗಾಗುವುದಿಲ್ಲ. ಖಂಡಿತವಾಗಿಯೂ ಎಪಿಎಂಸಿಗೆ ಸ್ಥಳಾಂತರಿಸಿದರೆ ಅನುಕೂಲವಾಗುತ್ತದೆ ಎಂದು ರೈತ ಸಂಘದ ಬೇಡಿಕೆಯನ್ನು ಬೆಂಬಲಿಸಿದರು.

ಸ್ಥಳ ಬದಲಾವಣೆ ಬೇಡ: ಹಾಲಿ ಸ್ಥಳದಲ್ಲೇ ಸೌಲಭ್ಯ ಒದಗಿಸಲು ಆಗ್ರಹ: ಸಂತೆ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳು, ಬದಲಿಗೆ ಹಾಲಿ ಇರುವ ಗಾಂಧಿಪೇಟೆ ಸ್ಥಳದಲ್ಲಿಯೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಹುಳಿಯಾರು ಹೋಬಳಿ ಅಧ್ಯಕ್ಷ ಗೌಡಿ ಮಾತನಾಡಿ ಗಾಂಧಿಪೇಟೆ ಸ್ಥಳದಲ್ಲಿ ಎಷ್ಟೋ ವರ್ಷಗಳಿಂದ ಸಂತೆ ನಡೆಯುತ್ತಿದ್ದು ಗ್ರಾಹಕರಿಗೆ ಅನುಕೂಲವಾಗಿದೆ. ಸ್ಥಳ ಬದಲಾಯಿಸಿದರೆ ಬಡ ವ್ಯಾಪಾರಿಗಳು ಆಟೋದಲ್ಲಿ ಹೋಗಿ ಬರಲು ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಸಂತೆ ಸ್ಥಳ ಇಲ್ಲೇ ಇರಲಿ, ಇಲ್ಲಿಯೇ ಅಗತ್ಯ ಸೌಕರ್ಯ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.

ಕಾಮನಬಿಲ್ಲು ಫೌಂಡೇಷನ್‌ ಅಧ್ಯಕ್ಷ ಚನ್ನಕೇಶವ ಮಾತನಾಡಿ ಯಾವ ವ್ಯಾಪಾರಿಗಳಾಗಲಿ, ಸಾರ್ವಜನಿಕರಾಗಲಿ ಸಂತೆ ಬದಲಾಯಿಸಿ ಎಂದು ಅರ್ಜಿ ಕೊಟ್ಟಿಲ್ಲ. ಎಪಿಎಂಸಿಗೆ ಸ್ಥಳಾಂತರಿಸಿದರೆ ಆಟೋ ಖರ್ಚು ₹120-130 ಆಗಿ, ವ್ಯಾಪಾರಸ್ಥರಿಗೆ ಒತ್ತಡ ಹೆಚ್ಚುತ್ತದೆ. ಮೂಲಸೌಕರ್ಯ (ನೀರು, ಶೌಚಾಲಯ) ಮಾತ್ರ ಒದಗಿಸಲಿ.ಇಲ್ಲವಾದರೆ ಮಾರ್ಕೆಟ್ ಯಶಸ್ವಿಯಾಗುವುದಿಲ್ಲ. ಸ್ಥಳಾಂತರದ ನಿರ್ಧಾರದ ಮೊದಲು ಅಧಿಕಾರಿಗಳು ತಂಡ ಮಾಡಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ಅಭಿಪ್ರಾಯ ಕೇಳಬೇಕು ಎಂದು ಒತ್ತಾಯಿಸಿದರು.

ಕ.ರ.ವೇ ತಾಲ್ಲೂಕ್‌ ಅಧ್ಯಕ್ಷ ಬೇಕರಿ ಪ್ರಕಾಶ್ ಮಾತನಾಡಿ ಪಟ್ಟಣ ಪಂಚಾಯ್ತಿ ₹8 ರಿಂದ ₹10 ಲಕ್ಷ ತೆರಿಗೆ ವಸೂಲಿ ಮಾಡುತ್ತಿದ್ದರೂ, ಶೌಚಾಲಯದ ವ್ಯವಸ್ಥೆ ಇಲ್ಲದೆ ಮಹಿಳಾ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಪಂಚಾಯಿತಿ ಅಪ್‌ಗ್ರೇಡ್ ಆಗಿದ್ದರೂ ಜನರಿಗೆ ಸೌಕರ್ಯ ಡೌನ್‌ಗ್ರೇಡ್ ಆಗಿದೆ. ಕೂಡಲೇ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸದಸ್ಯ ರಾಘವೇಂದ್ರ ಮಾತನಾಡಿ ತಾಲೂಕು ಆಡಳಿತ ಎಲ್ಲರ ಅಭಿಪ್ರಾಯ ಗ್ರಹಿಸಿರುವುದು ಉತ್ತಮ. ಆದರೆ, ಎಲ್ಲರೂ ಹಠ ಬಿಟ್ಟು ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ಪಟ್ಟಣ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸೌಕರ್ಯಗಳಿರುವ ಮಾರುಕಟ್ಟೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಎಯಲ್ಲಿ ಯೌುದೇ ತೀತಗಮಾನ ತೆಗೆದುಕೊಳ್ಳಲು ಶಾಸಕರ ಅನುಪಸ್ಥಿತಿ ಇದೆ. ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆದು ಅವರ ಸಹಕಾರದಿಂದಲೇ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದರು.

ಎಪಿಎಂಸಿ ಮತ್ತು ಕಸ ವಿಲೇವಾರಿ ಜಾಗದ ಬಗ್ಗೆ ಅಧಿಕಾರಗಳ ಸ್ಪಷ್ಟನೆ : ಸಭೆಯಲ್ಲಿ ಅಧಿಕಾರಿಗಳು ಸಂತೆ ಸ್ಥಳಾಂತರ ಮತ್ತು ಕಸ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸುವಲ್ಲಿ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಎಪಿಎಂಸಿ ಉಪನಿರ್ದೇಶಕ ಡಾ.ಬಿ.ರಾಜಣ್ಣ  ಅವರು ಮಾತನಾಡಿ ಹುಳಿಯಾರು ಎಪಿಎಂಸಿಯಲ್ಲಿ ರೈತರ ಕೃಷಿ ಉತ್ಮನ್ನಗಳ ಮಾರಾಟ್ ಉದ್ದೇಶಕ್ಕೆ ವರ್ತಕರಿಗೆ ಈಗಾಗಲೇ ಮಳಿಗೆಗಳನ್ನು ಹಂಚಿಕೆ ಮಾಡಿದ್ದು, ತರಕಾರಿ ಸಂತೆ ನಡೆಸಲು ಸಾಕಷ್ಟು ಜಾಗ ಲಭ್ಯವಿಲ್ಲ. ಅಲ್ಲದೆ, ಎಪಿಎಂಸಿ ಕಾನೂನಿನಡಿ ತರಕಾರಿ ಸಂತೆ ನಡೆಸಲು ಅವಕಾಶವಿರುವುದಿಲ್ಲ. ಹೀಗಾಗಿ ಸಂತೆ ನಡೆಸಲು ಸ್ಥಳಾವಕಾಶ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಹಸೀಲ್ದಾರ್ ಕೆ.ಪುರಂದರ ಅವರು ಮಾತನಾಡಿ, ಪಟ್ಟಣ ಪಂಚಾಯಿತಿಯಿಂದ ಕಸ ವಿಲೇವಾರಿಗೆ ಜಾಗ ಗುರುತಿಸುವಂತೆ ಮೂರ್ನಾಲ್ಕು ಬಾರಿ ಅರ್ಜಿ ಬಂದಿತ್ತು. ಗುರುತಿಸಿ ಕೊಟ್ಟ ಜಾಗಗಳೂ ಸಹ ಗ್ರಾಮ ಅರಣ್ಯಕ್ಕೆ ಸೇರಿರುವುದು, ಅಥವಾ ಸಾರ್ವಜನಿಕರ ಪ್ರತಿರೋಧ ಎದುರಿಸಿದೆ. ಒಟ್ಟಾರೆ ಇದೀಗ ಸರ್ಕಾರಿ ಜಾಗ ಇಲ್ಲ. ಬದಲಿಗೆ ಪಟ್ಟಣ ಪಂಚಾಯಿತಿಯವರು ಖಾಸಗಿ ಜಾಗ ಕೊಟ್ಟಲ್ಲಿ ಅದನ್ನು ಖರೀದಿಸಲು ಮುಂದಾಗಬೇಕು ಎಂದು ತಿಳಿಸಿದರು.

ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ : ಅಧಿಕಾರಿಗಳ ನಿಲುವಿನ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಮ್ರಾಜ್ ಮಾತನಾಡಿ ಪಟ್ಟಣ ಪಂಚಾಯಿತಿಯಿಂದ ವ್ಯಾಪಾರಸ್ಥರಿಗೆ ಮೂಲಭೂತ ಸೌಲಭ್ಯ ಕೊಡ್ಲೇಬೇಕು, ಇದು ರೈತರ ಹಕ್ಕು. ಇಡೀ ಜಿಲ್ಲೆಗೆ ಒಂದೇ ಇರುವ ಉರ್ದು ಹೈಸ್ಕೂಲ್ ಪಕ್ಕದಲ್ಲಿ ಕೊಳೆತ ಈರುಳ್ಳಿ ಮತ್ತು ಕಸ ಹಾಕುತ್ತಿದ್ದರೂ ಸ್ವಚ್ಛತೆ ಬಗ್ಗೆ ಪರಿಜ್ಞಾನ ಇಲ್ಲ. ಸೂಟಬಲ್ ಜಾಗ ಎಲ್ಲಿದೆ ಅನ್ನೋದನ್ನ ಪರಿಗಣಿಸಿ, ರೈತರಿಗೂ, ನಾಗರಿಕರಿಗೂ ಅನುಕೂಲವಾಗುವ ದೃಢ ನಿರ್ಧಾರ ತಗೊಳ್ಳಿ ಎಂದು ಒತ್ತಾಯಿಸಿದರು. 

ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದಿಕ್ ಮಾತನಾಡಿ ಎಪಿಎಂಸಿಯಲ್ಲಿ ಜಾಗವಿದ್ದರೂ ಅಭ್ಯಂತರ ಮಾಡುತ್ತಿದ್ದೀರಿ.ಎಪಿಎಂಸಿಯವರು ರಸ್ತೆ ಬದಿಯ ಜಾಗವನ್ನೂ ಅತಿಕ್ರಮಣ ಮಾಡಿಕೊಂಡಿದ್ದು, ಇಲ್ಲದ ತಕರಾರು ಮಾಡಬೇಡಿ ಎಂದು ಎಪಿಎಂಸಿ ಉಪನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್‌ ಅವರನ್ನು ಉದ್ದೇಶಿಸಿ, ಕಸ ವಿಲೇವಾರಿಗೆ ಸರಿಯಾದ ಸರ್ಕಾರಿ ಜಾಗ ಗುರುತಿಸುವಲ್ಲಿ ವಿಫಲರಾಗಿದ್ದೀರಿ.ಸನಿಹದಲ್ಲೇ ಸರ್ಕಾರಿ ಜಾಗ ಲಭ್ಯ ಇದ್ದರೂ ಸಹ ಅದನ್ನು ಹಸ್ತಾಂತರ ಮಾಡಲು ಇಚ್ಛಾಶಕ್ತಿ ತೋರಿಸದೆ , ಹಣ ಕೊಟ್ಟು ಖರೀದಿ ಮಾಡಿ ಎಂದು ಪಟ್ಟಣ ಪಂಚಾಯತಿಗೆ ತಿಳಿಸುವ ಮೂಲಕ ಕೋಟ್ಯಂತರ ರೂಪಾಯಿ ಪಟ್ಟಣ ಪಂಚಾಯಿತಿಗೆ ಪೋಲಾಗಲು ಕಾರಣರಾಗುತ್ತಿದ್ದೀರಿ. ಖಾಸಗಿ ಜಾಗ ಕೊಂಡುಕೊಳ್ಳಿ ಎಂದು ಹೇಳುವುದು ಸರಿಯಲ್ಲ. ಶಾಶ್ವತವಾದ ಜಾಗ ಗುರುತಿಸಿಕೊಡಲು ಮುಂದಾಗಿ ಎಂದು ಒತ್ತಾಯಿಸಿದರು.

ಮುಂದಿನ ನಡೆ: ಗುರುವಾರದಿಂದ ಅಹೋರಾತ್ರಿ ಧರಣಿ : ಸಭೆಯ ಮಧ್ಯೆದಲ್ಲೇ ಹೊರನಡೆದ ರೈತ ಸಂಘದ ಮುಖಂಡರು, ತಮ್ಮ ಬೇಡಿಕೆ ಈಡೇರುವವರೆಗೂ ಪಟ್ಟಣ ಪಂಚಾಯಿತಿ ಮುಂದೆ ಗುರುವಾರದಿಂದ ಅಹೋರಾತ್ರಿ ಧರಣಿ ಮುಂದುವರೆಸುವುದಾಗಿ ಪ್ರಕಟಿಸಿದರು. ಅಲ್ಲದೆ, ಬುಧವಾರ ಪಟ್ಟಣದಲ್ಲಿ ಕರಪತ್ರಗಳನ್ನು ಹಂಚಿ ಯಾರೂ ಸಹ ಸಂತೆ ಸುಂಕ ಕಟ್ಟಬಾರದು ಎಂದು ಪ್ರಚಾರ ಮಾಡುವುದಾಗಿ ತಿಳಿಸಿದರು. 

ಆದರೆ ಇತರ ಸಂಘ ಸಂಸ್ಥೆಗಳು ಸಂತೆ ಸ್ಥಳಾಂತರದ ಬದಲಿಗೆ ಹಾಲಿ ಸ್ಥಳದಲ್ಲೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದವು.

ಸಭೆಯಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಕಾವ್ಯರಾಣಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್,ಪಪಂ ಸದಸ್ಯರುಗಳಾದ ಅಬೂಬಕರ್ ಸಿದ್ದಿಕ್‌, ಮಹಮ್ಮದ್ ಜುಬೇರ್ ಮಂಜನಾಯ್ಕ್‌, ಸೈಯದ್ ಜಹೀರ್ ಸಾಬ್‌, ವೆಂಕಟೇಶ್ ಮತ್ತತರರು ಸೇರಿದಂತೆ ಹುಳಿಯಾರು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಕಾಮಧೇನು ಫೌಂಡೇಶನ್ ಸದಸ್ಯರು, ಇಮ್ರಾಜ್ ಗೆಳೆಯರ ಬಳಗ, ರೈತ ಸಂಘದ ತಾಲೂಕು ಅಧ್ಯಕ್ಷ ಕರಿಯಪ್ಪ, ನೀರಾ ಈರಣ್ಣ, ಪ್ರಶಾಂತ್, ಜಗದೀಶ್,ಲಕ್ಷ್ಮಿ, ಪುಷ್ಪಾವತಿ ,ಬಸವೇಶ್ವರ ನಗರದ ಶಂಕರೇಶ್‌,ಮಿಲ್‌ ಶಿವಣ್ಣ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು

ಒಂದೆಡೆ ಎಪಿಎಂಸಿ ಅಧಿಕಾರಿಗಳು ಕಾನೂನು ಮತ್ತು ಸ್ಥಳಾವಕಾಶದ ಕೊರತೆಯ ಕಾರಣ ಸ್ಥಳಾಂತರ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ರೈತ ಸಂಘದ ಪಟ್ಟು ಸಡಿಲವಾಗಿಲ್ಲ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...