ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ
ಹುಳಿಯಾರು, ಅ.21: ಹುಳಿಯಾರಿನಲ್ಲಿ ಮೂಲಭೂತ ಸೌಕರ್ಯಗಳ ಬೇಡಿಕೆಯೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ (ಚಂದ್ರಪ್ಪ ಬಣ) ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಇಂದು (ಮಂಗಳವಾರ) 13ನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಈ ಹೋರಾಟದಲ್ಲಿ ರೈತರು ಹಾಗೂ ಸಾಮಾಜಿಕ ಹೋರಾಟಗಾರರು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿ, ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿದ್ದಾರೆ. ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಮುಂದಿನ ಮೂರು ದಿನಗಳಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಬ್ಬೇನಹಳ್ಳಿ ಕಿಡಿ : ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸಬ್ಬೇನಹಳ್ಳಿ ಶ್ರೀನಿವಾಸ್ ರೈತರು 13 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ಕ್ರಮ ಕೈಗೊಂಡಿಲ್ಲ. ರೈತರು ಬೆನ್ನೆಲುಬು ಅಂತ ಹೇಳೋದು ಚುನಾವಣೆ ಬಂದಾಗ ಮಾತ್ರ! ಈಗ ರೈತರು ಹಗಲು ರಾತ್ರಿ ಎನ್ನದೆ ಹೋರಾಡುತ್ತಿದ್ದಾಗ ಯಾರಿಗೂ ಕಾಣ್ತಿಲ್ಲವೇಕೆ ಎಂದು ಪ್ರಶ್ನಿಸಿದರು.ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ನಿಷ್ಕ್ರಿಯತೆಯನ್ನು ತೀವ್ರವಾಗಿ ಖಂಡಿಸಿದ ಅವರು ಬೆಳೆಗಳಿಗೆ ಮಾರುಕಟ್ಟೆ ಕೊಡಲು ಸಾಧ್ಯವಿಲ್ಲದವರು, ಹುಳಿಯಾರನ್ನು ತಾಲೂಕು ಕೇಂದ್ರ ಮಾಡಿದರೆ ಯಾವ ಸೌಲಭ್ಯ ಕೊಡುತ್ತಾರೆ ಎಂದು ಕಿಡಿ ಕಾರಿದರು
ಉದ್ಯಮಿ ಎಲ್.ಆರ್. ಚಂದ್ರಶೇಖರ್ ಮಾತನಾಡಿ ಹುಳಿಯಾರು ಎಪಿಎಂಸಿ ಆವರಣವು ರೈತ ಸಂತೆ ನಡೆಸಲು ಸೂಕ್ತವಾಗಿದ್ದು ಸಾಕಷ್ಟು ಸ್ಥಳಾವಕಾಶವಿದೆ ಎಂದು ತಹಸೀಲ್ದಾರ್ ಹೇಳಿದ್ದಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಕೈಚೆಲ್ಲಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಪಿಎಂಸಿಯ ಖಾಲಿ ಜಾಗವನ್ನು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮೀಸಲಾಗಿದೆ ಎಂಬ ಉಪನಿರ್ದೇಶಕರ ಹೇಳಿಕೆ ರೈತರನ್ನು ದಾರಿತಪ್ಪಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಕೋಲ್ಡ್ ಸ್ಟೋರೇಜ್ ನಿಜವಾಗಿಯೂ ನಿರ್ಮಿಸಲು ಉದ್ದೇಶವಿದ್ದರೆ ಮೊದಲು ನೋಟಿಫಿಕೇಶನ್ ಹೊರಡಿಸಲಿ ಎಂದರು.
ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ ಚಂದ್ರಶೇಖರ್ ರೈತರ ಹೋರಾಟವನ್ನು ನಿರ್ಲಕ್ಷಿಸಿದರೆ ಮುಂದಿನ ಮೂರು ದಿನಗಳಲ್ಲಿ ಹುಳಿಯಾರಿನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗುತ್ತದೆ. ಇದರ ಪರಿಣಾಮಗಳಿಗೆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಘೋಷಿಸಿದರು.
ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲಿ: ಮುಂದುವರೆದು ಮಾತನಾಡಿದ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಅಹವಾಲು ಆಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ತುಮಕೂರು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಮನವಿ ಮಾಡಿದರು.ಸುರಿಯುತ್ತಿರುವ ಮಳೆಯಲ್ಲೂ ಹಗಲು-ರಾತ್ರಿ 50ಕ್ಕೂ ಹೆಚ್ಚು ರೈತರು ಹೋರಾಟ ಮುಂದುವರೆಸುತ್ತಿದ್ದಾರೆ. ಸರ್ಕಾರ ಮತ್ತು ಗುಪ್ತಚರ ಇಲಾಖೆ ಈ ಹೋರಾಟವನ್ನು ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಪ್ಪ , ತಾಲೂಕು ಅಧ್ಯಕ್ಷ ಕರಿಯಪ್ಪ, ನಂದಿಹಳ್ಳಿ ರೇವಣ್ಣ, ಕಾರ್ಪೆಂಟರ್ ಶ್ರೀನಿವಾಸ್ ,ಹೊನ್ನ ಶೆಟ್ಟಿಹಳ್ಳಿ ಮಂಜುನಾಥ್ ,ಸೋಮಜ್ಜನಪಾಳ್ಯದ ಪುಟ್ಟಯ್ಯ ,ಹುಳಿಯಾರು ದುರ್ಗರಾಜು ,ಓಂಕಾರಮ್ಮ, ಕಾಫಿಪುಡಿ ಹನುಮಂತರಾಜು, ಸೀಗೆಬಾಗಿ ಮಂಜುನಾಥ, ಲಕ್ಷ್ಮಿ, ಪ್ರಶಾಂತ್, ಕಲ್ಲಹಳ್ಳಿ ಮಲ್ಲೇಶಯ್ಯ,ಚಿಕ್ಕಬಿದರೆ ಚಂದ್ರಶೇಖರ್, ತಿಮ್ಮನಹಳ್ಳಿ ಶ್ರೀನಿವಾಸ್, ಸಿದ್ದನಕಟ್ಟೆ ಶ್ರೀಧರ್ ಮತ್ತಿತರರು ಪಾಲ್ಗೊಂಡಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ