ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ 'ಕರ ನಿರಾಕರಣೆ ಚಳುವಳಿ' ಉಗ್ರರೂಪಕ್ಕೆ-
-------
✍️ ವರದಿ : ನರೇಂದ್ರಬಾಬು-ಹುಳಿಯಾರು
9448760070
---------
ಹುಳಿಯಾರು : ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ, ರಾಜ್ಯ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ಅವರ ನೇತೃತ್ವದಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆ ಇಂದು (ಮಂಗಳವಾರ) ಆರನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಆರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡದಿರುವ ಬಗ್ಗೆ ಚಂದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸ್ವರೂಪ ಮತ್ತು ಬೇಡಿಕೆ:
ರೈತ ಸಂಘವು ಪಟ್ಟಣ ಪಂಚಾಯಿತಿ ಸಂತೆ ಸುಂಕ ವಸೂಲಿ ಮಾಡುತ್ತದೆ, ಆದರೆ ಮಾರಾಟಕ್ಕೆ ಬರುವ ರೈತರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ 'ಕರ ನಿರಾಕರಣೆ ಚಳುವಳಿ' ಆರಂಭಿಸಿದೆ. ಪ್ರತಿಭಟನೆಯ ಆರು ದಿನಗಳ ನಂತರವೂ ಅಧಿಕಾರಿಗಳು ಸ್ಪಂದಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಚಂದ್ರಪ್ಪ ಅವರು ಪ್ರತಿಭಟನೆ ಪಟ್ಟಣ ಪಂಚಾಯಿತಿ ಕಚೇರಿಯ ಮುಂದೆಯೇ ನಡೆಯುತ್ತಿದ್ದು ಆರು ದಿನವಾದರೂ, ಕನಿಷ್ಠ ರೈತರಿಗೆ ಕುಡಿಯಲು ಒಂದು ಲೋಟ ನೀರು ಕೊಡಲು ಸಹ ಪಟ್ಟಣ ಪಂಚಾಯಿತಿಗೆ ಯೋಗ್ಯತೆ ಇಲ್ಲದಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಶಾಸಕರು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ: ಪ್ರತಿಭಟನಾ ಸ್ಥಳಕ್ಕೆ ಬಾರದ ಶಾಸಕರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿಯನ್ನು ಚಂದ್ರಪ್ಪ ಕಟುವಾಗಿ ಟೀಕಿಸಿದರು. ಇವರು ಅಧಿಕಾರ ಸೂತ್ರವನ್ನು ಹಿಡಿಯಲಿಕ್ಕೆ ಲಾಯಕ್ಕೇ ಇಲ್ಲ ಎಂದು ಕಟುವಾಗಿ ನುಡಿದ ಅವರು, ಪಟ್ಟಣ ಪಂಚಾಯಿತಿಯು ಜೀವಂತವಾಗಿಲ್ಲ, ಕೇವಲ 'ಕಲ್ಕಟ್ಟಡ' ಮತ್ತು ನಾಮಕಾವಸ್ಥೆ ಕಚೇರಿ ಎಂದು ದೂರಿದರು.ಒಬ್ಬ ರೈತ ಹೋರಾಟಕ್ಕೆ ಕುಳಿತಾಗ ಜಿಲ್ಲಾಡಳಿತ, ಶಾಸಕರು ಮತ್ತು ತಹಶೀಲ್ದಾರರು ತಕ್ಷಣ ಬಂದು ಸಮಸ್ಯೆ ಆಲಿಸಬೇಕಿತ್ತು. ಆದರೆ ತಹಶೀಲ್ದಾರರು ರಾಜಕಾರಣ ಮಾಡುತ್ತಾ ಶಾಸಕರ ಹಿಂದೆ ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು. ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸ್ಪಂದಿಸದಿರುವ ಇವರೆಲ್ಲರೂ ನಿಷ್ಪ್ರಯೋಜಕರು ಎಂದು ಲೇವಡಿ ಮಾಡಿದರು.
ಉಪವಾಸ ಸತ್ಯಾಗ್ರಹದ ಎಚ್ಚರಿಕೆ : ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಮೊಟಕುಗೊಳಿಸುವುದಿಲ್ಲ ಎಂದು ಗಟ್ಟಿ ನಿಲುವನ್ನು ವ್ಯಕ್ತಪಡಿಸಿದ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ಅಧಿಕಾರಿಗಳಿಗೆ ಇನ್ನೂ ನಾಲ್ಕು ದಿನಗಳ ಗಡುವು ನೀಡಿ,ಇನ್ನೂ ನಾಲ್ಕು ದಿನಗಳಲ್ಲಿ ಯಾರೊಬ್ಬರೂ ಸ್ಪಂದಿಸದಿದ್ದಲ್ಲಿ, ಪ್ರತಿಭಟನೆಯ 11ನೇ ದಿನದಿಂದ ಉಪವಾಸ ಸತ್ಯಾಗ್ರಹ ಕೂರುವ ಮೂಲಕ ಚಳುವಳಿಯನ್ನು ಉಗ್ರರೂಪಕ್ಕೆ ಕೊಂಡೊಯ್ಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಆಗ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ 108 ವಾಹನ ಮತ್ತು ಡಾಕ್ಟರ್‌ಗಳು ಧರಣಿ ಸ್ಥಳದಲ್ಲಿ ಸಿದ್ಧವಿರಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತಕ್ಕೆ ಎಚ್ಚರಿಕೆ:
ನಾವು ತೆರಿಗೆದಾರರು, ನಮ್ಮ ಹಣದಲ್ಲಿ ಪಟ್ಟಣ ಪಂಚಾಯಿತಿಯನ್ನು ನಿಭಾಯಿಸುತ್ತಿದ್ದೇವೆ. ನಮ್ಮ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದು ಉಚ್ಚರಿಸಿದ ಚಂದ್ರಪ್ಪ ತಾಲೂಕು ಮತ್ತು ಜಿಲ್ಲಾಡಳಿತವು ತಕ್ಷಣವೇ ಮನಸ್ಸು ಮಾಡಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಮುಂದೆ ನಡೆಯಬಹುದಾದ ಚಳುವಳಿಯ ಸ್ವರೂಪವನ್ನು ತಡೆದ ಸಂದರ್ಭದಲ್ಲಿ ಹೋರಾಟಗಾರರಿಗೆ ಏನಾದರೂ ತೊಂದರೆಯಾದರೆ, ಅದಕ್ಕೆ ಮಾನಗೆಟ್ಟ, ಭ್ರಷ್ಟ ತಾಲೂಕು ಮತ್ತು ಜಿಲ್ಲಾಡಳಿತವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಕಡಕ್ ಎಚ್ಚರಿಕೆ ನೀಡಿದರು.
ಪ್ರತಿಭಟನಾ ನಿರತ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ರೈತರು ಬೆಳಗ್ಗೆಯಿಂದ ಪಟ್ಟಣ ಪಂಚಾಯಿತಿ ಮುಂದೆ ಭಜನಾ ತಂಡದೊಂದಿಗೆ ತಾಳಮೇಳದೊಂದಿಗೆ ತತ್ವಪದ ಹಾಗೂ ಭಜನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕರಿಯಪ್ಪ, ಸೋಮಜ್ಜನ ಪಾಳ್ಯದ ಬೀರಲಿಂಗಯ್ಯ, ಕಲ್ಲಹಳ್ಳಿ ಮಲ್ಲೇಶಯ್ಯ, ನೀರಾ ಈರಣ್ಣ, ಜಗದೀಶ್, ಪ್ರಶಾಂತ್, ಸೀಗೆಬಾಗಿ ಮಂಜುನಾಥ್, ಆಶಾ, ಲಕ್ಷ್ಮಿ ಸೇರಿದಂತೆ ಮತ್ತಿತರ ಹಳ್ಳಿಗಳ ರೈತರು ಜಮಾಯಿಸಿದ್ದರು.
ರೈತ ಸಂಘವು ಮುಂದಿನ ದಿನಗಳಲ್ಲಿ ಹೊಸ ಸ್ವರೂಪವನ್ನು ತಾಳಲು ಸಿದ್ಧವಾಗಿದ್ದು, ಹೋರಾಟ ಮುಂದುವರಿಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ